ಯಶವಂತ ಚಿತ್ತಾಲ

 
ಯಶವಂತ ಚಿತ್ತಾಲರು ಕನ್ನಡದ ಶ್ರೇಷ್ಠ ಕಥೆಗಾರರಲ್ಲಿ ಒಬ್ಬರು. ಇಂದು ಅವರ ಸಂಸ್ಮರಣೆ ದಿನ.
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಬಳಿ ಇರುವ ಒಂದು ಸಣ್ಣ ಊರು ಹನೇಹಳ್ಳಿ. ಇಲ್ಲಿ ಹುಟ್ಟಿ ಬೆಳೆದವರು ಯಶವಂತ ವಿಠೋಬಾ ಚಿತ್ತಾಲ. ಅವರು ಹುಟ್ಟಿದ ದಿನ ಆಗಸ್ಟ್ 3, 1928. ಯಶವಂತ ಚಿತ್ತಾಲರ ಅಣ್ಣ ಗಂಗಾಧರ ಚಿತ್ತಾಲ. ಅಣ್ಣ ಕವಿಯಾದರೆ ತಮ್ಮ ಯಶವಂತ ನಮ್ಮ ಒಬ್ಬ ಶ್ರೇಷ್ಠ ಕಥೆಗಾರ, ಕಾದಂಬರಿಕಾರ.
ವಿಠೋಬಾ – ರುಕ್ಮಿಣಿ ದಂಪತಿಗಳ ಏಳು ಮಕ್ಕಳಲ್ಲಿ ಯಶವಂತರು ಐದನೆಯವರು. ಮನೆ ತುಂಬಾ ಮಕ್ಕಳು. ಮುಜುಗರ. ಕಾಯಿಲೆ. ತಂದೆ ವಾಸಿಯಾಗದ ವ್ಯಾಧಿಯಿಂದ ನರಳಿ ನೋವು ತಡೆಯಲಾರದೆ ಬಾವಿಗೆ ಬಿದ್ದು ಬಾಳು ಮುಗಿಸಿಕೊಂಡರು. ಒಬ್ಬ ಅಣ್ಣನ ಬಾಳೂ ನಡುವಿನಲ್ಲೇ ಕಳಚಿ ಬಿತ್ತು. ಪತ್ನಿಯೂ ತೀವ್ರ ವ್ಯಾಧಿಯಿಂದದ ನರಳಿದರು. ಇನ್ನೊಬ್ಬ ಅಣ್ಣ ಗಂಗಾಧರ ಚಿತ್ತಾಲ ಪಾರ್ಕಿನ್ಸನ್ಸ್ ವ್ಯಾಧಿಯಿಂದ ತೀರಿಕೊಂಡರು. ನೋವು – ಸಾವು – ನಲಿವು – ನಿರಾಶೆಗಳ ತೂಗುಯ್ಯಾಲೆಯಲ್ಲಿ ಸಾಗಿದ ಬದುಕು. ಕುಮಟಾ, ಧಾರವಾಡ, ಮುಂಬಯಿ, ನ್ಯೂಜರ್ಸಿ (ಅಮೆರಿಕಾ) ಗಳಲ್ಲಿ ಓದು. ರಸಾಯನ ವಿಜ್ಞಾನದ ಶಾಖೆಯಾದ ಪಾಲಿಮಾರ್ ತಂತ್ರಜ್ಞಾನದಲ್ಲಿ ತಜ್ಞತೆಯ ಸಂಪಾದನೆ. ಮುಂಬಯಿ ವಿಶ್ವವಿದ್ಯಾನಿಲಯದ ಪ್ಲ್ಯಾಸ್ಟಿಕ್ ವಿಭಾಗದಲ್ಲಿ ಪ್ರಥಮ ಪದವಿ. ಸ್ಟೀಫನ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸ್ನಾತಕೋತ್ತರ ಪದವಿ. ಬೇಕ್‌ಲೈಟ್ ಹೈಲಾಂ ಸಂಸ್ಥೆಯಲ್ಲಿ ಉದ್ಯೋಗ ಮಾಡಿ, ಉನ್ನತ ಸ್ಥಾನಕ್ಕೇರಿ ವಿದೇಶಿ ಪ್ರವಾಸ ಮಾಡಿ ಬಂದು ಪಡೆದ ವೃತ್ತಿ ನೈಪುಣ್ಯ, ಅನುಭವ. ಅವಧಿ ಪೂರ್ಣ ದುಡಿದು ನಿವೃತ್ತಿ (1985).
ಚಿಕ್ಕವರಿದ್ದಾಗ ಜಲವರ್ಣ ಚಿತ್ರ ರಚನೆಯಲ್ಲಿ ಗಾಢವಾದ ಆಸಕ್ತಿ. ಅದನ್ನೇ ತಮ್ಮ ಅಭಿವ್ಯಕ್ತಿ ಮಾಧ್ಯಮವಾಗಿ ಮಾಡಿಕೊಳ್ಳಬೇಕೆಂಬ ಆಕಾಂಕ್ಷೆ. ಅದಕ್ಕಾಗೆಂದೇ ಅವರು ಮುಂಬೈಗೆ ಹೋದದ್ದು; ಅಲ್ಲಿ “ಕಲಾನಿಕೇತನ”ದ ಸಂಜೆಯ ವರ್ಗಗಳಿಗೆ ಸೇರಿದ್ದು. ಆದರೆ ಅದೇ ಜೀವನದ ಮುಖ್ಯ ತಿರುವಾಗಿ ಪರಿಣಮಿಸಿತು. ಆಗಲೇ ಅವರು ಎಂ. ಎನ್. ರಾಯರ ಪ್ರಭಾವಕ್ಕೆ ಒಳಗಾದದ್ದು. ಕಲಾನಿಕೇತನವನ್ನು ಬಿಟ್ಟು ರಾಯರ ಪಕ್ಷಕ್ಕೆ ಸೇರಿದ್ದು. ವಿಚಾರದ ಹಾದಿಯಲ್ಲಿ ಅದೊಂದು ದೊಡ್ಡ ಮೈಲುಗಲ್ಲು. ಎಂ. ಎನ್. ರಾಯ್ ಅಲ್ಲದೇ ಡಾರ್ವಿನ್, ಐನ್‌ಸ್ಟೈನ್, ಯೂಂಗ್, ಮಾರ್ಕ್ಸ್, ಮಾಸ್ತಿ, ಕಾರಂತ, ಪುಟ್ಟಪ್ಪ, ಮೊಪಾಸಾ, ಟಾಲ್ಸ್‌ ಟಾಯ್, ಚೆಕಾಫ್, ಹೆಮ್ಮಿಂಗ್ವೇ, ಸ್ಟೀಫನ್ ಝ್ವೀಗ್, ಸ್ಟೆಟ್‌ಬೆಕ್, ದಾಸ್ತೋವ್ಸ್‌ಕಿ, ಕಾಫ್ಕಾ ಕಾಮೂ ಮುಂತಾದ ಮಹಾ ಮನಸ್ಸುಗಳ ಪ್ರಭಾವ. ಜೊತೆಗೆ ವೃತ್ತಿ ಸಂಬಂಧವಾದ ತಂತ್ರಜ್ಞಾನದ ಪರಿಚಯ.
ಮನಸ್ಸಿನಲ್ಲೇ ಊರಿ ನಿಂತದ್ದು ಹುಟ್ಟೂರಾದ ಹನೇಹಳ್ಳಿಯ ನೆನಪಿನ ಬುತ್ತಿ. ಈ ಮಹಾ ಪರಿವರ್ತನೆಯಾಗುವುದಕ್ಕೂ ಮುಂಚಿನಿಂದಲೇ ಒಳಗೊಳಗೇ ಮೊಳೆತು ಕುಡಿಯೊಡೆದು ಬೆಳೆಯತೊಡಗಿದ್ದು ಕಥನ ಪ್ರಕ್ರಿಯೆ. ಆಗ ಅವರ ವಯಸ್ಸು ಇಪ್ಪತ್ತೆರಡು. ಮೊದಲ ಟಿಸಿಲೇ ‘ಆಕಸ್ಮಿಕ’ ಸಂಕಲನ. ಆಗ ಅವರು ಕಾರವಾರದ ಸಮೀಪದ ಬಾಡಾ ಎಂಬ ಹಳ್ಳಿಯಲ್ಲಿ ಶಾಲಾ ಮಾಸ್ತರರಾಗಿದ್ದರು. ಹತ್ತಿರದ ಸಂಬಂಧಿಗಳಲ್ಲೊಬ್ಬರಲ್ಲಿ ವಸತಿ ಊಟ. ತಮ್ಮ ಊರಿನ ನೆನಪು ತರುವಂಥ ಪರಿಸರ. ಕಿವಿಗೆ ಬಿದ್ದ ಧ್ವನಿಯೊಂದರ ಬೆನ್ನು ಹಿಡಿದು ನಡೆದಾಗ ಬೆಳೆದು ಮೂಡಿದ್ದು ‘ಬೊಮ್ಮಿಯ ಹುಲ್ಲು ಹೊರೆ’. ಇದು ಚಿತ್ತಾಲರ ಮೊದಲ ಕಥೆ. ಮುಹೂರ್ತ, ಮೂಡು, ಮಾತುಗಳ ತ್ರಿವೇಣಿ ಸಂಗಮ. ರಾಸಾಯನಿಕ ಕ್ರಿಯೆ ದಿಗ್ಗನೆ ಪ್ರಕಾಶ ಹೀಗೆ ಕಥೆ ಹುಟ್ಟಿದ ಮೇಲೆಯೇ ಕಥೆಗಾರನಾಗಬೇಕೆಂಬ ಕನಸು, ಧ್ವನಿಯಾಗಿ ಬಂದದ್ದು ಕಥೆಯಾಗಿ ತಳೆದಿತ್ತು. ಆ ಕಥೆಯ ವಸ್ತು ಕೆಳಗಿನ ವರ್ಗದವರ ಶೋಷಣೆ. ನೆಲದ ಕತ್ತಲೆಯಲ್ಲಿ ಹುದುಗಿದ್ದ ಬೀಜ ಮಣ್ಣಿನ ಆರ್ದ್ರ ಸ್ಪರ್ಶಕ್ಕೆ ಜಮ್ಮುಗಟ್ಟಿದೊಡನೆ ಮೊಳಕೆಯೊಡೆದ ಆ ಕ್ಷಣದ ನಂತರ ಸುಮಾರು ಇಪ್ಪತ್ತೈದು ವರ್ಷಕ್ಕೆ ಇನ್ನೊಂದು ಮಹತ್ವದ ಕ್ಷಣ ‘ಕಥೆಯಾದವಳು ಹುಡುಗಿ’. ಮೊದಲಿನ ಕಥೆ ಧ್ವನಿಯೊಂದನ್ನು ಹಿಡಿದು ಸಾಗಿದ್ದರ ಫಲ. ಇದೂ ಒಂದು ಒಳ್ಳೆಯ ಕಥೆಯಾಯಿತು. ಇತರ ಕಥೆಗಳೊಂದಿಗೆ ಸೇರಿಕೊಂಡು ಇನ್ನೊಂದು ಸಂಕಲನಕ್ಕೆ ತನ್ನ ಹೆಸರನ್ನೇ ನೀಡಿದ್ದು. ಅಂತೂ ಬರೆಯುವುದೊಂದು ಆಕಸ್ಮಿಕ ಎನಿಸುವಂಥದು.
ಹಾಗಾದರೆ ಅವರೇಕೆ ಬರೆಯುತ್ತಾರೆ? “ನಾನು ಏಕೆ ಬರೆಯುತ್ತೇನೆ?” ಎಂಬ ಪ್ರಶ್ನೆಗೆ ಅವರು ಕೊಟ್ಟಿರುವ ಉತ್ತರ ಇದು: “ಒಟ್ಟಿನಲ್ಲಿ ನಾನು ಬರೆಯುತ್ತಿದ್ದದ್ದು ನಾನು ನಾನೇ ಆಗಲು. ನಾನು ನಾನಾಗಿಯೇ ಉಳಿದು ಉಳಿದವರೊಂದಿಗೆ ಬೆರೆಯಲು, ಪ್ರೀತಿಸುವುದನ್ನು ಕಲಿಯಲು, ಪ್ರೀತಿಸುವುದರ ಮೂಲಕ ಜೀವಂತ ಸಂಬಂಧಗಳನ್ನು ಹುಟ್ಟಿಸಿಕೊಳ್ಳಲು. ಉಳಿದವರನ್ನು ತಿದ್ದುವುದಕ್ಕಲ್ಲ. ಆ ಯೋಗ್ಯತೆಯಾಗಲಿ ಅಧಿಕಾರವಾಗಲಿ ನನಗಿಲ್ಲ”. ಅಷ್ಟೇ ಅಲ್ಲ, “ಇಂದಿನ ಸಮಾಜದಲ್ಲಿ ನಾನು ಮನುಷ್ಯನಾಗಿ ಬಿಚ್ಚಿಕೊಳ್ಳಲು ಆರಿಸಿಕೊಳ್ಳಬಹುದಾದ ಜೀವಂತ ಮಾಧ್ಯಮಗಳಲ್ಲಿ ಸಾಹಿತ್ಯವೂ ಒಂದು ಮಾತ್ರವಲ್ಲ, ಮನುಷ್ಯ ತನ್ನ ಬದುಕಿನ ನಕಾಶೆಯಲ್ಲಿ ಮೂಡಿಸಿಕೊಳ್ಳಲೇಬೇಕಾದ ಅತ್ಯಂತ ಮೌಲಿಕ ಸಂಗತಿಗಳಲ್ಲಿ ಕೆಲವು ಸಂಗತಿಗಳು ಸಾಹಿತ್ಯದಿಂದ ಮಾತ್ರ ಒದಗಬಲ್ಲಂಥವು”.
ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಲ್ಲವರಿಗೆ ಈ ಮಾತು ನೆರವಾದೀತು. ಆಗಲೆಂದು ಅವರೇನೂ ಬಯಸಿದ್ದಿಲ್ಲ. ತಮ್ಮ ಸಾಹಿತ್ಯ ಕಾರ್ಯದಲ್ಲಿ ಬಹು ದೂರ ಸಾಗಿ ಬಂದ ಮೇಲೆ ಅವರಿಗೆ ಅನಿಸಿದ್ದು ಹೀಗೆ: “ಈ ಕಥೆಗಳ ಗ್ರಹಿಕೆಯ ಜಗತ್ತು ಮಾತಿನಲ್ಲಿ ಹಿಡಿಯಬಹುದಾದ ಅಂತರಿಕ ಒತ್ತಡಗಳಿಂದದ, ಸಾಮಾಜಿಕ ಕಾಳಜಿಗಳಿಂದ ಮಾತ್ರವಲ್ಲದೇ, ಮಾತಿನಿಂದ ಕೇವಲ ಬೆರಳು ಮಾಡಬಹುದಾದ ಶ್ರದ್ಧೆಯಿಂದಲೂ ರೂಪಿತವಾಗಿರಬಹುದು”. “ಮನೆಯ ಅಂಗಳದಲ್ಲಿ ಹುಲುಸಾಗಿ ಬೆಳೆದ ಮರವೊಂದನ್ನು – ಅದರ ಬಗೆಗೆ ಯಾವ ಭಾವನೆಯನ್ನೂ ಪ್ರಕಟಿಸದೇ ಅದು ಹುಟ್ಟಿ ಬೆಳೆದದ್ದೇ ತನ್ನ ಉಪಯೋಗಕ್ಕಾಗಿ ಎಂಬ ಸ್ವಾರ್ಥದ ಮತ್ತಿನಲ್ಲಿ ಕಡಿದು ಹಾಕುವ ಮನುಷ್ಯ ತನ್ನ ಅಣ್ಣ ತಮ್ಮಂದಿರನ್ನಾಗಲೀ ಹೊಟ್ಟೆಯ ಮಕ್ಕಳನ್ನಾಗಲೀ ಪ್ರೀತಿಸುತ್ತಾನೆ ಎನ್ನುವುದು ಸುಳ್ಳು! ಯಾಕೆಂದರೆ ಕಡಿಯುವ ನಿಶ್ಚಯದಲ್ಲೇ ಆತ ಪ್ರೀತಿಸುವ ಸಾಮರ್ಥ್ಯವನ್ನೂ ಕಳೆದುಕೊಳ್ಳುತ್ತಾನೆ.”
ಹಾಗಾದರೆ ಚಿತ್ತಾಲರ ಸಾಹಿತ್ಯ ರಚನೆಯ ಮುಖ್ಯ ಬೇರುಗಳು ಇರುವುದೆಲ್ಲಿ?
“ಉತ್ತರ ಕನ್ನಡ ಜಿಲ್ಲೆ, ಅದರಲ್ಲೂ ನನ್ನ ಹುಟ್ಟೂರಾದ ಹನೇಹಳ್ಳಿ. ಇವು ನನ್ನ ಮಟ್ಟಿಗೆ ಬರೇ ನೆಲದ ಹೆಸರುಗಳಲ್ಲ. ಬದಲಾಗಿ ನನ್ನ ಸಾಹಿತ್ಯದ ಹುಟ್ಟಿಗೆ ಕಾರಣವಾಗಿ ಅದರ ಚೈತನ್ಯಕ್ಕೆ ನಿರಂತರವಾದ ಜೀವಸೆಲೆ” ಎನ್ನುತ್ತಿದ್ದರು ಅವರು. ಹನೇಹಳ್ಳಿಯ ಭೂತವನ್ನು ವರ್ತಮಾನದೊಂದಿಗೆ ಹೋಲಿಸುತ್ತಾ, ಅದನ್ನು ಇಡೀ ಮನುಕುಲದಲ್ಲಿ ಸಂಭವಿಸಿರುವ ಅಸ್ತಿತ್ವದ ಬಿಕ್ಕಟ್ಟಿಗೆ ಪ್ರತಿಮೆಯಾಗಿ ಅದನ್ನು ಪರಿವರ್ತಿಸುತ್ತಾರೆ. ಅವರ ‘ಪುರುಷೋತ್ತಮ’ ಕಾದಂಬರಿಯ ನಾಯಕ ತನ್ನ ಹನೇಹಳ್ಳಿಗೆ ಮತ್ತೆ ಬರುತ್ತಾನೆ. ಹೀಗೆ ವಾಸ್ತವತೆ ಮತ್ತು ಕಲ್ಪನೆಗಳ ಗಡಿಗೆರೆಗಳನ್ನು ಅವರು ತಮ್ಮ ಕೃತಿಗಳಲ್ಲಿ ಅಳಿಸಿ ಬಿಡುತ್ತಾರೆ. ಚಿತ್ತಾಲರು ವಿಜ್ಞಾನದ ವಿದ್ಯಾರ್ಥಿ, ತಂತ್ರಜ್ಞಾನ ಪರಿಣಿತ. ಸಾಹಿತ್ಯದ ಭಾವ ಪ್ರಪಂಚದೊಂದಿಗೆ ವಿಜ್ಞಾನದ ವೈಚಾರಿಕ ಪ್ರಪಂಚವು ಸೇರಿಕೊಂಡಿದ್ದರೂ ಅವರ ವೈಚಾರಿಕತೆಯೆಂದೂ ತನ್ನ ಮಿತಿಯನ್ನು ಉಲ್ಲಂಘಿಸಿಲ್ಲ. ಇದು ಅವರ ಕಥೆಗಳ ಮೌಲ್ಯವನ್ನು ವಿಶಿಷ್ಠವಾಗಿಸಿದೆ.
ಮುಂಬಯಿಯಂಥ ನಗರದ ವಾತಾವರಣಗಳಲ್ಲಿ ಹೀನ ನಾಗರೀಕತೆಯ ವಿಷಮತೆಗಳ ನಡುವೆ ಮಾನವತೆ ಮರೆಯಾಗುವ ಅಪಾಯವಿದೆ. ಇದನ್ನು ಚಿತ್ತಾಲರಂತೆ ಕಲಾತ್ಮಕವಾಗಿ ನಿರ್ವಹಿಸಿ ಯಶಸ್ಸು ಸಾಧಿಸಿರುವವರು ಯಶವಂತರೊಬ್ಬರೇ. ನಗರ ಜೀವನದ ಹಣಕೇಂದ್ರಿತ ಸಂಬಂಧಗಳು ‘ಶಿಕಾರಿ’ ಕಾದಂಬರಿಯಲ್ಲಿ ಶಕ್ತವಾಗಿ ನಿರೂಪಿತವಾಗಿದೆ. ಸುಲಭವಾಗಿ ಕಾಣೆಯಾಗುವುದೇ ಅಭ್ಯಾಸವಾಗಿಬಿಟ್ಟ ನಮ್ಮೊಳಗಿನ ಮನುಷ್ಯನನ್ನು ಪತ್ತೆ ಮಾಡುವ ರೋಮಾಂಚನಕಾರಿ ಸಾಹಸದ ವಿವಿಧ ಮಜಲುಗಳನ್ನು ಅವರ ಕೃತಿಗಳಲ್ಲಿ ನಾವು ಗುರುತಿಸಬಹುದು.
“ಹನೇಹಳ್ಳಿ, ಸಾವಿನ ನಿಗೂಢತೆ, ನಮ್ಮೊಳಗಿನ ಮನುಷ್ಯನನ್ನು ಹುಡುಕುವ ಪ್ರಯತ್ನ, ಇದು ನನ್ನ ಸಾಹಿತ್ಯದ ಆರಂಭದ ದಿನಗಳಿಂದಲೂ ನನ್ನ ಆಸ್ಥೆಗೆ ಒಳಪಟ್ಟ ವಿಷಯ, ಥೀಮ್” ಎಂದು ಅವರೇ ಹೇಳಿಕೊಂಡಿದ್ದಾರೆ. ಹೀಗೆಂದು ಹೊಳೆದದ್ದು ಅವರಿಗೇ ಆಶ್ಚರ್ಯ.
ಯಶವಂತ ಚಿತ್ತಾಲರ ಮೊದಮೊದಲ ಕಥೆಗಳು ಹಾಸ್ಯಪ್ರಜ್ಞೆ ಮತ್ತು ಭಾವನೆಗಳಿಂದ ಆರ್ದ್ರವಾದ ಮನಸ್ಸಿನ ಅಭಿವ್ಯಕ್ತಿಯಾಗಿವೆ. ಮುಂದೆ ಆತಂಕ ವಿಷಾದಗಳು ಅವರ ಮನಸ್ಸನ್ನು ತುಂಬಿರುವಾಗ ಬಂದ ಕಥೆಗಳು ಸರಳವಾಗಿರುವಂತೆ ಕಂಡರೂ ಸರಳವಲ್ಲದ, ಜನರಿಂದ ಬೇರೆಯಾಗಿಯೂ ಅವರಲ್ಲಿ ಬೆರೆಯಬೇಕೆನ್ನುವವನ ಅಭಿವ್ಯಕ್ತಿಯಾಗುತ್ತವೆ. ಮುಂದಿನ ಮಜಲಿನ ಕಥೆಗಳಲ್ಲಿ ನಗರವೇ ಕೇಂದ್ರವಾಗುತ್ತದೆ. ಅನುಭವದ ಸ್ವರೂಪದ ಬದಲಾವಣೆಯೊಂದಿಗೆ ಕಥಾಶಿಲ್ಪ ಹಾಗೂ ನಿರೂಪಣೆಯ ವಿಧಾನದಲ್ಲೂ ಬದಲಾವಣೆಯಾಗುತ್ತದೆ.
1959ರ ವೇಳೆಗೆ ಚಿತ್ತಾಲರ ಬೆಳೆವಣಿಗೆಯ ದಿಕ್ಕು ಬದಲಾಗುತ್ತದೆ (ಅಪರಿಚಿತರು). ವಾಸ್ತವಿಕತೆಯಿಂದ ಸಾಂಕೇತಿಕತೆಯೆಡೆಗೆ ಸಾಗುತ್ತದೆ.
“ಆಟ” (1969) ಕಥಾ ಸಂಕಲನ ಇನ್ನೊಂದು ದೃಷ್ಟಿಯಿಂದ ಮಹತ್ವದ್ದು, ನವ್ಯ ಸಾಹಿತ್ಯದ ಉತ್ಕರ್ಷೆಯ ಕಾಲದಲ್ಲಿ ಹಲವಾರು ಕಥಾ ಪ್ರಕಾರದಲ್ಲಿ ನವ್ಯ ಲೇಖಕರು ಪ್ರಯೋಗನಿರತರಾಗಿದ್ದರು. ಚಿತ್ತಾಲರು ಈ ಸುಳಿಯೊಳಕ್ಕೆ ಬೀಳದೆ ದೂರ ನಿಂತು ಈ ಪ್ರಕಾರಕ್ಕೆ ತಮ್ಮವೇ ಆದ ಕೆಲವು ಆಯಾಮಗಳನ್ನು ಸೇರಿಸಿದರು. ಬದುಕಿನೊಂದಿಗೆ ಮುಖಾಮುಖಿಯಾಗಿ ನೋವುಗಳ ಅನುಭವ ಪಡೆದ ವ್ಯಗ್ರವಾದ ಮನಸ್ಸು ಹೊಸ ಮಾಧ್ಯಮದ ಮೂಲಕ ಮೊದಲಿನ ಸ್ವಾಸ್ಥ್ಯವನ್ನು ಪುನಃ ಪಡೆಯುವ ಪ್ರಯತ್ನವಾಗಿ ಅದು ವಿಸ್ತಾರವಾಯಿತು. ಕಲಾತ್ಮಕತೆಯನ್ನೂ ಉಳಿಸಿಕೊಂಡಿತು.
‘ಕತೆಯಾದವಳು ಹುಡುಗಿ’ ಸಂಕಲನ ಪರಿಪೂರ್ಣತೆಯ ಗಡಿಯನ್ನೇ ಸ್ಪರ್ಶಿಸಿತೆನ್ನಬೇಕು. ಬೋನ್ಸಾ, ಸಿದ್ಧಾರ್ಥಗಳೂ ಇದೇ ರೀತಿಯವು. ಇವಲ್ಲದೆ ಅವರು ‘ಕುಮಟೆಗೆ ಬಂದ ಕಿಂದರಿ ಜೋಗಿ’ ಮತ್ತು ‘ಓಡಿ ಹೋದ ಮುಟ್ಟಿ ಬಂದು’ ಎಂಬ ಕಥಾ ಸಂಕಲಗಳನ್ನು ತಂದಿದ್ದಾರೆ. ಚಿತ್ತಾಲರು ಬರೆದ ಕಾದಂಬರಿಗಳು ‘ಮೂರು ದಾರಿಗಳು’, ‘ಶಿಕಾರಿ’, ‘ಛೇದ’, ‘ಪುರುಷೋತ್ತಮ’ ಮತ್ತು ‘ಕೇಂದ್ರದ ವೃತ್ತಾಂತ’. ಕನ್ನಡ ಸಾಹಿತ್ಯದ ಶ್ರೇಷ್ಠ ವಿಮರ್ಶಕ ವಿದ್ವಾಂಸರಾದ ಜಿ. ಎಸ್. ಅಮೂರರ ಮಾತಿನಲ್ಲೇ ಹೇಳುವುದಾದರೆ ” ಚಿತ್ತಾಲರ ‘ಶಿಕಾರಿ’ ಕನ್ನಡದ ಗತ್ತು. ಅತ್ಯುತ್ತಮ ಕಾದಂಬರಿಗಳಲ್ಲೊಂದು”.
“ನಾವು ಅಸಮಗ್ರತೆಯಿಂದ ಸಮಗ್ರತೆಯೆಡೆಗೆ, ಅಪ್ರಬುದ್ಧತೆಯಿಂದ ಪ್ರಬುದ್ಧತೆಯೆಡೆಗೆ ಸಾಗುವ, ಸ್ವಲ್ಪದರಲ್ಲಿ, ಮನುಷ್ಯರಾಗಿ ಸಾಗುವ ಪ್ರಕ್ರಿಯೆಗೆ ‘ಶಿಕಾರಿ’ ರೂಪಕವಾಗಿದೆ” ಎಂದು ಯಶವಂತ ಚಿತ್ತಾಲರು ಹೇಳಿಕೊಂಡಿದ್ದಾರೆ.
ಚಿತ್ತಾಲರಿಗೆ ಕೆಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ಪಂಪ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವಗಳು ಅರಸಿ ಬಂದಿದ್ದವು.
ಈ ಮಹಾನ್ ಕಥೆಗಾರ, ಕಾದಂಬರಿಕಾರ ಯಶವಂತ ಚಿತ್ತಾಲರು 2014ರ ಮಾರ್ಚ್ 22ರಂದು ಈ ಲೋಕವನ್ನಗಲಿದರು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರೇಣುಕಾ ಮಂಜುನಾಥ್

Mon Mar 28 , 2022
  ನಮ್ಮ ರೇಣುಕಾ ಮಂಜುನಾಥ್ ಅಂದರೆ ಸರ್ವ ಸಮ ಭಾವತ್ವವನ್ನು ಎಲ್ಲೆಡೆ ಕಾಣುವ ಸಹೃದಯ ರೂಪ ಕಣ್ಮುಂದೆ ಬಂದು ನಿಲ್ಲುತ್ತದೆ. ಅವರು ಓರ್ವ ಅಪೂರ್ವ ಗುಣಗ್ರಾಹಿ. ಮಾರ್ಚ್ 22 ರೇಣುಕಾ ಅವರ ಜನ್ಮದಿನ. ಕೋಲಾರದಲ್ಲಿ ಶಾಲಾ ವಿದ್ಯಾಭ್ಯಾಸ ನಡೆಸಿ, ಮುಂದೆ ಶ್ರೀ ಸಿದ್ಧಗಂಗಾ ಕಲೆ ಮತ್ತು ವಿಜ್ಞಾನ ಕಾಲೇಜಿನಿಂದ ವಿಜ್ಞಾನ ಪದವಿ ಪಡೆದರು. ಬಾಲ್ಯದಿಂದಲೂ ಅವರಿಗೆ ಓದುವುದರಲ್ಲಿ ಅಪಾರ ಆಸಕ್ತಿ. ರೇಣುಕಾ ಅವರ ತಂದೆ ವಿಶ್ವದ ಶ್ರೇಷ್ಠ ಪುಸ್ತಕಗಳನ್ನೆಲ್ಲ ಮನೆಯಲ್ಲಿ […]

Advertisement

Wordpress Social Share Plugin powered by Ultimatelysocial