BIGG NEWS:ಸಮಸ್ಯೆ ಇದ್ದಲ್ಲಿ ಮನೆಯ ಅಡುಗೆಯವರನ್ನೇ ಬದಲಿಸಲು ಯೋಚಿಸುತ್ತೇವೆ, ಇನ್ನು ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಅಷ್ಟು ಸುಲಭವೇ?

ಹೌದಲ್ಲವ? ಒಮ್ಮೆ ಯೋಚಿಸಿ ಸಮಸ್ಯೆ ಬಂದಲ್ಲಿ ಮನೆಯ ನಳ-ನಳಿಯರನ್ನು ಬದಲಿಸಬೇಕೆಂದರೆ ಅಷ್ಟೆಲ್ಲ ಯೋಚಿಸುವ ನಾವು ಇನ್ನು ರಾಜ್ಯದ ಮುಖ್ಯಮಂತ್ರಿಯನ್ನು ಯಾರು ಬೇಕಾದರೂ ಅವರು, ಯಾರು ಹೇಳಿದರೆ ಅವರಿಂದ, ಯಾವಾಗ ಬೇಡ ಎಂದರೆ ಅವಾಗ ಬದಲಿಸಲು ಇದೇನು ಸಂಗೀತ ಖುರ್ಚಿ ಆಟವೇ?

ಅಥವಾ ಕರ್ನಾಟಕ, ಉತ್ತರಾಖಂಡದಷ್ಟು ರಾಜಕೀಯವಾಗಿ ಬಲಹೀನವೇ?

ಒಂದೇ ವರ್ಷದ ಒಳಗೆ ಇಬ್ಬರು ಮುಖ್ಯಮಂತ್ರಿಗಳನ್ನು ಬದಲಿಸಿ, ಮೂರನೆಯವರನ್ನು ಪ್ರತಿಷ್ಠಾಪಿಸಿ ನಾಲ್ಕನೆಯವರನ್ನು ಹುಡುಕಿ ಚುನಾವಣೆಗೆ ಹೊರಟರೆ ನೋಡಿ ಆಗ ಈ ರಾಜ್ಯ ರಾಜಕಾರಣದಲ್ಲಿ ಬಿಜೆಪಿಗೆ ಒಂದು ಬೆಲೆ ಬಂದೀತು. ಉತ್ತರಾಖಂಡದಲ್ಲಿ ಹೆಚ್ಚು ಕಡಿಮೆ ಹೀಗೆ ಆಗಿರೋದು.

ಆದರೆ ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯೋಚಿಸುತ್ತಿರುವವರು ಯಾರು ಎಂಬುದೇ ಪ್ರಶ್ನೆ?

ಹೈ ಕಮಾಂಡ್? ಆರ್ ಎಸ್ ಎಸ್? ಸಚಿವ ಸಂಪುಟ? ಪಕ್ಷದ ವರಿಷ್ಠರು? ರಾಜ್ಯದ ಜನತೆ? ಅಥವಾ ಖುದ್ದು ಮುಖ್ಯಮಂತ್ರಿಗಳೂ ಉಹೂಂ ಇವರಾರು ಅಲ್ಲವಂತೆ, ಮತ್ತೆ ಇನ್ಯಾರು? .

ಇದನ್ನು ಕೊಂಚ ಸಡಿಲಗೊಳಿಸೋಣ, ಮುಖ್ಯಮಂತ್ರಿ ಬದಲಾವಣೆಯಿಂದ ಯಾರಿಗೆ ಲಾಭ?, ಮುಖ್ಯಮಂತ್ರಿ ಆಗಲು ಹೊರಟು ಕೈ-ತಪ್ಪಿದವರು, ಅಥವಾ ಮುಂದಿನ 2023ರ ಚುನಾವಣೆಗೆ ತಮ್ಮನ್ನ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳಲು ಹೊರಟಿರುವವರು. ಇನ್ನು ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದರಿಂದ ಅಸಮಾಧಾನಗೊಂಡವರು.

ಅರಸನಿಲ್ಲದ ಕೋಟೆಯಲ್ಲಿ ಪ್ರತೀ ಸೈನಿಕನು ರಾಜನಂತೆ ವರ್ತಿಸುವುದು ಸಹಜವೇ ಆದರೂ, ಈಗ ಅರಸನಿದ್ದು ಕೋಟೆ ಮೇಲೆ ಕಣ್ಣಿಟ್ಟಿರುವ ಮಂತ್ರಿಯನ್ನು ಸೇನಾಧಿಪತಿಯನ್ನು ಹುಡುಕುವುದು ಕಷ್ಟವೇನಲ್ಲ.

ಮುರುಗೇಶ್ ನಿರಾಣಿ, ಅರವಿಂದ್ ಬೆಲ್ಲದ್, ಲಕ್ಷ್ಮಣ ಸವದಿ, ಪ್ರಹಲ್ಲಾದ್ ಜೋಶಿ, ಅಶ್ವಥ್ ನಾರಾಯಣ್ ಹೀಗೆ ಹಲವರಲ್ಲಿ ಕೆಲವರು ರಾಜ್ಯದ ಮುಖ್ಯಮಂತ್ರಿ ಗದ್ದುಗೆಗೆ ಸಮನಾಗಿ ನಿಂತವರು, ಆದರೆ ಅವರೆಲ್ಲರನ್ನೂ ಮೀರಿ ಬೊಮ್ಮಾಯಿ, ಬಿಎಸ್ ವೈ ಮತ್ತು ದಿಲ್ಲಿ ಕಾರುವಾಯಿ ಚೆನ್ನಾಗಿ ಸಂಭಾಳಿಸಿದರಿಂದ ಅವರು ಎಲ್ಲರನ್ನು ಸರಿಸಿ ಮುಖ್ಯಮಂತ್ರಿ ಆದರು. ಈಗ ಸದ್ಯ ಮೇಲ್ಕಂಡ ಪಟ್ಟಿಯಲ್ಲಿ ಬಹುಪಾಲು ಎಲ್ಲರೂ ತಣ್ಣಗಿದ್ದಾರೆ.

ಆದರೆ ಅದರಲ್ಲಿ ಮುಂದಿನ ಪಂಚಮಸಾಲಿ ಲಿಂಗಾಯತ ನಾಯಕ ನಾನೇ ಎಂದು ಬಿಂಬಿಸಿಕೊಳ್ಳವ ಭರದಲ್ಲಿ ಹೀಗೆಲ್ಲ ಮಾಡುತ್ತಿದ್ದಾರೆ ಮತ್ತು ಇಬ್ಬರು ಮಾಜಿ ಮುಖ್ಯಮಂತ್ರಿಗಳು ಹಾಗೂ ಮನೆ ಸದಸ್ಯರಿಂದಲೂ ಇವರಿಗೆ ಸಾಥ್ ಇದೆ ಅನ್ನುವುದು ಮತ್ತೊಂದು ಸ್ವಾರಸ್ಯಕರವಾದ ಸಂಗತಿ.

2022 ರ ಜನವರಿ 28ಕ್ಕೆ ನಿರಾಣಿ ಪ್ರಮಾಣವಚನ ಸ್ವೀಕಾರ:

ಹೀಗೆ ಸದ್ಯ ವಿಧಾನಸೌಧದ ಅಂಗಳದಲ್ಲಿ ನಡೆಯುತ್ತಿರುವ ಬಿಸಿ ಬಿಸಿ ಚರ್ಚೆ. ಕೆಲವರು ಈ ಗುಮಾನಿಯನ್ನು ಖುದ್ದು ಸಚಿವರೇ ಹೇಳಿದ್ದಾರೆ ಎಂದರೆ ಇನ್ನು ಕೆಲವರು ಅವರ ಸುತ್ತಲಿರುವ ಜನರು ಈ ವಿಷಯವನ್ನು ಉತ್ತೇಜಿಸುತ್ತಿದ್ದಾರೆ ಎನ್ನುತ್ತಾರೆ.

ಇದು ಬೊಮ್ಮಾಯಿ ವಿರುದ್ಧದ ದಂಡಿನ ಸಂಚು ಎಂದರೆ ಇನ್ನು ಕೆಲವರು ಇವರು ಮಧ್ಯಮಗಳ ಮೂಲಕ ಕಿಡಿ ಹೊತ್ತಿಸಿದ್ದು ಅಷ್ಟೇ. ಇನ್ನು ಬೆಂಕಿ ಇಟ್ಟವರ ಪಟ್ಟಿಯೇ ಇದೆ ಎನ್ನುತ್ತಿದ್ದಾರೆ.

ಆದರೆ ಎಲ್ಲಾ ಅಧಿಕಾರಿ ವರ್ಗದವರು ಇವರೇ ಮುಂದಿನ ಮುಖ್ಯಮಂತ್ರಿ ಎಂದುಕೊಂಡು ಸಲಾಂ ಹೊಡೆಯುವುದರ ಹಿಂದೆ ಕೇವಲ ಬೆಂಬಲಿಗರ ಇಂಬು ಸಾಲುವುದು ಎನ್ನುತ್ತೀರಾ..? ಅಥವಾ ಖುದ್ದು ಮಹೋದಯರ ಅಶ್ವಾಸನೆಯು ಇದೇ ಎನ್ನುತ್ತೀರಾ ಯೋಚಿಸಿ.

ಮುಖ್ಯಮಂತ್ರಿ ಬದಲಿಸುತ್ತೇವೆ ಎನ್ನುವವರಿಗೆ ಸಂಪುಟದಿಂದ ಗೇಟ್ ಪಾಸ್:

ಹೀಗೆ ಕೆಲವು ಮಾಧ್ಯಮಗಳ ಮುಖೇನ, ಹೈ ಕಮಾಂಡ್ ಮುಖೇನ, ರಾಷ್ಟ್ರೀಯ ನಾಯಕರ ಮುಖೇನ ಹೇಳಿಸಲು ಮುಖ್ಯಮಂತ್ರಿಗಳು ಪ್ರಯತ್ನಪಡುತ್ತಿದ್ದಾರೆ ಆದರೂ ಅವರಲ್ಲೇ ಒಂದಿಷ್ಟು ಅಳುಕು ಇದ್ದಂತೆ ಕಾಣುತ್ತಿದೆ. ಒಂದು ಕಡೆ ಮಂಡಿ ನೋವು ಮತ್ತೊಂದು ಕಡೆ ಬಿಟ್ಟೂ ಬಿಡದ ಬಿಟ್ ಕಾಯಿನ್ ತಲೆ ನೋವು ಈ ಜಂಜಾಟದಲ್ಲಿ ಹೈ ಕಮಾಂಡ್ ಏನು ಮಾಡಿ ಬಿಡುತ್ತೋ ಎಂಬ ಆತಂಕದಲ್ಲೇ ದಿನ ಸಾಗಿಸುತ್ತಿರುವ ಮುಖ್ಯಮಂತ್ರಿಗಳು ಸಮಸ್ಯೆಗಳನ್ನ ಒಂದರಂತೆ ಒಂದನ್ನು ಬಗೆಹರಿಸಿಕೊಳ್ಳಲು ಮುಂದಾಗಿದ್ದಾರೆ. ಮಂಡಿನೋವಿಗೆ ಕೋಲಾರದ ನಾಟಿ ವೈದ್ಯನ ಆಸರೆ ಪಡೆದರೆ, ಬಂಡಾಯ ಶಮನಕ್ಕೆ ಕಾರ್ಯಕಾರಿಣಿ ಆಸರೆ ಪಡೆದಿದ್ದಾರೆ.

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ- ಕಾರ್ಯಕರಿಣಿಯಲ್ಲಿ ಘೋಷಣೆ:

ಅರುಣ್ ಸಿಂಗ್, ಕಟೀಲು, ಪ್ರಹಲ್ಲಾದ್ ಜೋಶಿ ಆದಿಯಾಗಿ ಎಲ್ಲರೂ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾರು ಮಾತಾಡಿದರೂ ಅವರ ಬಗ್ಗೆ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಬಂಡಾಯದ ಗುಂಪಿನ ಮುಂದೆಯೇ ಹೇಳಿದರು.

ಇಷ್ಟೆಲ್ಲ ಭಾಷಣದ ನಂತರವೂ ಅವರ ಜೊತೆಗೆ ನಗು ನಗುತ್ತಾ ಮಾತಾಡುತ್ತಾ ಭಾಷಣದ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಸೋಣ ಎಂದು ವರಿಷ್ಠರ ಜೊತೆಗೆ ಚರ್ಚೆ ನಡೆಸಿದರು ಎಂದು ಬಲ್ಲ ಮೂಲಗಳು ತಿಳಿಸುತ್ತಿವೆ. ಒಟ್ಟಿನಲ್ಲಿ ಸದ್ಯಕ್ಕೆ ಈ ಸುದ್ದಿ ಸಾಯುವಂತೆ ಕಾಣುತ್ತಿಲ್ಲ

ಬೆಳಗಾವಿ ಸೋಲಿಗೆ ಯಾರು ಹೊಣೆ?

“ಯಾರು ಯಾರಿಗೆ ಹೊಣೆ ಈ ಜಗದಲ್ಲಿ”:
ಹೀಗೆ ಹೇಳುತ್ತಾ ಬೆಳಗಾವಿಯ ಎಲ್ಲಾ ವರಿಷ್ಠ ಬಿಜೆಪಿ ನಾಯಕರು ತಮ್ಮ ತಮ್ಮ ಜವಾಬ್ದಾರಿಯಿಂದ ಕಳಚಿಕೊಳ್ಳುವವರು ಎಂದು ಒಂದು ತಿಂಗಳ ಹಿಂದೆಯೇ ಬಿಎಲ್ ಸಂತೋಷ್ ಭವಿಷ್ಯ ನುಡಿದಿದ್ದರಂತೆ. ಆದರೆ ಆಗ ಚುನಾವಣೆಯನ್ನು ಯಾರು ಗಂಭೀರವಾಗಿ ಸ್ವೀಕರಿಸಿರಲಿಲ್ಲ.

ಲಖನ್ ನನ್ನು ಸೋಲಿಸಬೇಕು ಎಂದು ಬಿಜೆಪಿ ನಾಯಕರು, ಲಕ್ಷ್ಮಿಯನ್ನು ಮಣಿಸುವೆ ಎಂದು ಜಾರಕಿಹೊಳಿ ತ್ರಿಮೂರ್ತಿಗಳು. ಒಬ್ಬರ ಮೇಲೆ ಮತ್ತೊಬ್ಬರು ಪೈಪೋಟಿ ನಡೆಸಿ ಹರಕೆ ಕುರಿ ಆಗಿಸಿದ್ದು ಮಾತ್ರ ಮಹಾಂತೇಶ್ ರನ್ನು.

  • ಕೇವಲ ಒಂದು ದಿನ ಆಗಮಿಸಿ ಪ್ರೆಸ್ ಮೀಟ್ ನಡೆಸಿದ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ.
  • ಎರಡನೇ ಮತವನ್ನು ನನಗೆ ಹಾಕಿಸುವರು ಎಂದು ನಂಬಿ ಇಡೀ ಚುನಾವಣೆಯನ್ನು ರಮೇಶ್ ಜಾರಕಿಹೊಳಿ ಕೈಗೆ ಕೊಟ್ಟ ಕವಟಗಿಮಠ
  • ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಡಿಕೆ ಶಿವಕುಮಾರ್ ಜೊತೆ ಒಪ್ಪಂದ ಮಾಡಿಕೊಂಡು ತಟಸ್ಥರಾದ ಬೆಳಗಾವಿ ಸಚಿವರು, ಮಾಜಿ ಉಪಮುಖ್ಯಮಂತ್ರಿಗಳು
  • ಇನ್ನು ಲಿಂಗಾಯತರನ್ನು ಬಡಿದೆಬ್ಬಿಸಲು ಇದೊಂದೇ ಅವಕಾಶವೆಂದು ಶತಾಯಗತಾಯ ಪ್ರಯತ್ನಿಸಿ ಗೆದ್ದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿ.
  • ಒಟ್ಟಿನಲ್ಲಿ ಇಷ್ಟೂ ವಿವರ ಪಡೆದು ಪಕ್ಷ ವಿರುದ್ಧದ ಚಟುವಟಿಕೆಯಲ್ಲಿ ಭಾಗಿಯಾದ ಎಲ್ಲ ಬಿಜೆಪಿ ನಾಯಕರ, ಜಾರಕಿಹೊಳಿ ಪರಿವಾರದ ವಿರುದ್ಧ ದೂರು ನೀಡುವ ಕೆಲಸ ರಾಜ್ಯಾಧ್ಯಕ್ಷರಿಂದ ನಡೆದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಚಳಿಗಾಲದಲ್ಲಿ ಬಿಸಿ ಆಹಾರ ಸೇವಿಸುವವರು ಎಚ್ಚರ!

Wed Dec 29 , 2021
  ಚಳಿಗಾಲದ ಋತು ಪ್ರಾರಂಭವಾಗಿದೆ. ಹೆಚ್ಚಿನ ಜನರು ಈ ಋತುವಿನಲ್ಲಿ ಬಿಸಿ ಆಹಾರವನ್ನು ಬಯಸುತ್ತಾರೆ. ಅನೇಕ ಜನರು ಯಾವಾಗಲೂ ಬಿಸಿ ಆಹಾರವನ್ನು ತಿನ್ನುತ್ತಾರೆ. ದೇಹದ ಪ್ರತಿಯೊಂದು ಭಾಗದಲ್ಲೂ ಬಿಸಿಯಾಗಿ ತಿನ್ನುವುದು ಅದರ ಪರಿಣಾಮವನ್ನು ತೋರಿಸಿದಾಗ, ಅದು ನಿಮ್ಮ ಆರೋಗ್ಯದ ಮೇಲೆ ವಿವಿಧ ಸಮಸ್ಯೆಗಳನ್ನು ಉಂಟುಮಾಡಬಹುದು. ಹೆಚ್ಚು ಬಿಸಿ ಬಿಸಿ ಆಹಾರ ಸೇವಿಸಿದಂತಹ ಪರಿಸ್ಥಿತಿಯಲ್ಲಿ ಬಿಸಿ ಆಹಾರವು ಆ ಮಾಂಸ ಮತ್ತು ದೇಹದ ಅನೇಕ ಭಾಗಗಳನ್ನು ಹಾನಿಗೊಳಿಸಬಹುದು. ದೇಹದ ಒಳಗಿನ ಸೂಕ್ಷ್ಮ […]

Advertisement

Wordpress Social Share Plugin powered by Ultimatelysocial