ನವದೆಹಲಿ: ದೆಹಲಿಯ ಅತ್ಯಾಧುನಿಕ ಹಾಗೂ ಸುಸಜ್ಜಿತ ಆಸ್ಪತ್ರೆಗಳಲ್ಲಿ ಲೋಕ ನಾಯಕ ಜಯಪ್ರಕಾಶ ನಾರಾಯಣ್ (ಎಲ್ಎನ್ಜೆಪಿ) ಆಸ್ಪತ್ರೆಯು ಒಂದಾಗಿದೆ. ಇಲ್ಲಿನ ಶವಾಗಾರದಲ್ಲಿ ಕರೊನಾ ಸೋಂಕು ಹಾಗೂ ಶಂಕೆಯಿಂದ ಮೃತಪಟ್ಟವರ 108 ಶವಗಳಿವೆ. ಶೀತಲೀಕೃತ ಘಟಕದಲ್ಲಿ 80 ಶವಗಳನ್ನಿಡಲಷ್ಟೇ ವ್ಯವಸ್ಥೆ ಇದೆ. ಇನ್ನುಳಿದ 28 ಶವಗಳನ್ನು ನೆಲದ ಮೇಲೆ ಅಲ್ಲಲ್ಲಿ ಇಡಲಾಗಿದೆ. ದುರಂತವೆಂದರೆ ಅದಕ್ಕೂ ಜಾಗ ಸಾಕಾಗದೆ, ಒಂದರ ಮೇಲೊಂದರಂತೆ ಸೇರಿಸಲಾಗಿದೆ. ಇದಷ್ಟೇ ಅಲ್ಲ, ಈ ಗಾಯದ ಮೇಲೆ ಬರೆ ಎಳೆಯುವಂಥ ಸ್ಥಿತಿಯೂ ಅಲ್ಲಿ ಉದ್ಭವವಾಗಿದೆ. ಬುಧವಾರ ದಹಿಸಲೆಂದು ಚಿತಾಗಾರಕ್ಕೆ ಕಳುಹಿಸಲಾಗಿದ್ದ ಎಂಟು ಶವಗಳನ್ನು ಅಲ್ಲಿನ ಸಿಬ್ಬಂದಿ ವಾಪಸ್ ಕಳುಹಿಸಿದ್ದಾರೆ. ಅಲ್ಲಿಗೆ ಆಸ್ಪತ್ರೆಯೇ ಶವಾಗಾರವಾಗಿ ಮಾರ್ಪಟ್ಟಿದೆ. ಈ ಎಲ್ಲ ಸಂಗತಿಗಳು ದೆಹಲಿಯಲ್ಲಿ ಕರೊನಾದಿಂದಾಗಿ ಉಂಟಾಗಿರುವ ಅವ್ಯವಸ್ಥೆಗೆ ನಿದರ್ಶನವಾಗಿವೆ. ಕೋವಿಡ್ ಸೋಂಕಿತ ಶವಗಳ ಅಂತ್ಯಕ್ರಿಯೆ ನಡೆಸಲಾಗುವ ನಿಗಮ್ಬೋಧ್ನ ಅನಿಲ ಆಧಾರಿತ ಚಿತಾಗಾರದಲ್ಲಿ ಹೆಣ ಸುಡುವ ಆರು ಫರ್ನೆಸ್ಗಳ ಪೈಕಿ ಎರಡು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿಗೆ ಆಸ್ಪತ್ರೆಯಿಂದ ಶವ ತಂದು ಸುಡುವ ತನಕವೂ ಸಿಬ್ಬಂದಿ ಕಾಯಲೇಬೇಕು. ಸಂಜೆ ಬಳಿಕ ಉಳಿದ ಶವಗಳನ್ನು ಆಸ್ಪತ್ರೆಗೆ ಒಯ್ಯಬೇಕು. ಏಕೆಂದರೆ, ಹೆಚ್ಚುವರಿ ಕೆಲಸ ಮಾಡಿದರೂ ಒಂದು ದಿನಕ್ಕೆ 15 ಶವಗಳನ್ನು ಸುಡಲಷ್ಟೇ ಅಲ್ಲಿ ಸಾಧ್ಯವಾಗುತ್ತಿದೆ. ಎನ್ಎಲ್ಜೆಪಿ ಆಸ್ಪತ್ರೆ ಮಾತ್ರವಲ್ಲದೇ, ದೆಹಲಿಯ ಇತರ ಕೋವಿಡ್ ಶವಗಳನ್ನು ಇಲ್ಲಿಯೇ ದಹಿಸಲಾಗುತ್ತಿದೆ. ಈವರೆಗೆ ಕೋವಿಡ್ನಿಂದ ಹಾಗೂ ಶಂಕಿತ ಕೋವಿಡ್ ಕಾರಣದಿಂದ ಮೃತಪಟ್ಟ 244 ಜನರನ್ನು ಇಲ್ಲಿ ದಹಿಸಲಾಗಿದೆ.
ಕೊರೊನಾದಿಂದ ಸತ್ತವರ ಹೆಣ ಇಡಲು ಜಾಗವಿಲ್ಲ

Please follow and like us: