ಗೋವಾದ ಮಹಾ ದಾಯಿ ವನ್ಯಜೀವಿ ಅಭಯಾರಣ್ಯದಲ್ಲಿ ಈಚೆಗೆ ನಿಗೂಢವಾಗಿ ಸಾವನ್ನಪ್ಪಿದ ಒಂದೇ ಕುಟುಂಬದ ನಾಲ್ಕು ಹುಲಿಗಳ ಪೈಕಿ ಎರಡರ ದೇಹಗಳಲ್ಲಿ ವಿಷದ ಅಂಶ ಪರೀಕ್ಷೆಯಿಂದ ದೃಢ ಪಟ್ಟಿದೆ. ಇವು ರ‍್ನಾಟಕದ ಅರಣ್ಯ ಪ್ರದೇಶಕ್ಕೆ ಸೇರಿದ ಹುಲಿಗಳು ಎಂದು ಹೇಳಲಾಗುತ್ತಿದೆ. ಕೀಟನಾಶಕಗಳಲ್ಲಿ ಬಳಸಲಾಗುವ ಪೈರೆಥಾಯ್ಡ್ ಎಂಬ ರಾಸಾಯನಿಕ ಮೃತ ಹುಲಿಗಳ ದೇಹಗಳಲ್ಲಿ ಪತ್ತೆಯಾಗಿದೆ. ಅತೀ ಹೆಚ್ಚು ಕೊಳೆತ ಹುಲಿಯ ಮೃತದೇಹದ ಮಾದರಿಗಳಲ್ಲಿ ಅತ್ಯಾಧುನಿಕ ಎಲಿಸಾ ಕಿಟ್ ಬಳಸಿ ಪ್ರಪ್ರಥಮ ಬಾರಿಗೆ ಇದನ್ನು ಕಂಡುಹಿಡಿಯುವಲ್ಲಿ ಬೆಂಗಳೂರಿನ ವಿಷ ವೈದ್ಯ ಶಾಸ್ತ್ರ ಮತ್ತು ವಿಧಿವಿಜ್ಞಾನ ತಂಡ ಯಶಸ್ವಿಯಾಗಿದೆ. ಒಂದು ಮೃತ ಹುಲಿಯ ಮೇದೋಜೀರಕ ಗ್ರಂಥಿಯಲ್ಲಿ ಈ ವಿಷ ಅಂಶ ಪತ್ತೆಯಾಗಿದ್ದು, ಇದು ಕೂಡ ಇದೇ ಮೊದಲು ಎಂದು ವಿಶ್ಲೇಷಿಸಲಾಗುತ್ತಿದೆ.
ವರದಿಯು ಹುಲಿಗಳ ಅಸ್ವಾಭಾವಿಕ ಸಾವು ಮತ್ತು ಅದಕ್ಕೆ ಕಾರಣವಾಗುವ ಅಪರಾಧಿಗಳಿಗೆ ಶಿಕ್ಷೆ ವಿಧಿಸುವಲ್ಲಿ ಮೈಲುಗಲ್ಲಾಗಿದೆ ಎಂದು ವಿಷ ವೈದ್ಯಶಾಸ್ತ್ರ ಮತ್ತು ವಿಧಿವಿಜ್ಞಾನ ತಂಡದ ನೇತೃತ್ವ ವಹಿಸಿದ್ದ ವನ್ಯಜೀವಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮಣ್ಣಿನ ಮಾದರಿಯೂ ಪರೀಕ್ಷೆ ಮೃತ ಹುಲಿಗಳು ಭಕ್ಷಿಸಿದ್ದ ಎಮ್ಮೆಯನ್ನು ಸಮಾಧಿ ಮಾಡಲಾದ ಸ್ಥಳದ ಮಣ್ಣಿನ ಮಾದರಿಯನ್ನು ಬೆಂಗಳೂರಿನ ರಾಷ್ಟ್ರೀಯ ತೋಟಗಾರಿಕೆ ಸಂಶೋಧನ ಕೇಂದ್ರದಲ್ಲಿ ಪರೀಕ್ಷಿಸಲಾಗಿದ್ದು, ಆ ಮಣ್ಣಿನಲ್ಲೂ ಕೀಟನಾಶಕದ ಅಂಶ ದೃಢಪಟ್ಟಿದೆ. ಇದೆಲ್ಲದರಿಂದ ಹುಲಿಯನ್ನು ವಿಷಪ್ರಾಶನ ಮಾಡಿಸಿ ಕೊಲೆಗೈದಿರುವುದು ಸಾಬೀತಾಗುತ್ತದೆ ಎಂದು ಮಹಾದಾಯಿ ವನ್ಯಜೀವಿ ಅಭಯಾರಣ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಪ್ರಕರಣದ ತನಿಖಾಧಿಕಾರಿ ನಂದನ್ ಪರಬ್ ಸ್ಪಷ್ಟಪಡಿಸಿದ್ದಾರೆ.
ಮಹಾದಾಯಿ ಹುಲಿಗಳ ಸಾವಿಗೆ ವಿಷ ಕಾರಣ!

Please follow and like us: