ಆದಿಚುಂಚನಗಿರಿ : ಫೆಬ್ರವರಿ 28ರಿಂದ ಮಾರ್ಚ್‌ 8ರ ವರೆಗೆ ಒಂಬತ್ತು ದಿನಗಳ ಕಾಲ ಜಾತ್ರಾ ಮಹೋತ್ಸವ ̧ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ

ನಾಗಮಂಗಲ, ಫೆಬ್ರವರಿ, 26: ಪರಶಿವನ ತಪೋಭೂಮಿ, ದೇವಾನು ದೇವತೆಗಳು ನೆಲೆಸಿರುವ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರವಾದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ. ಫೆಬ್ರವರಿ 28ರಿಂದ ಮಾರ್ಚ್‌ 8ರ ವರೆಗೆ ಒಂಬತ್ತು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ.

ಈ ಪ್ರಯುಕ್ತ ಶ್ರೀಕ್ಷೇತ್ರದಲ್ಲಿ ವಿವಿಧ ಪೂಜಾ ಕೈಂಕರ್ಯ ಸೇರಿದಂತೆ ಹಲವು ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಫೆಬ್ರವರಿ 28ರ ಬೆಳಗ್ಗೆ 6ಗಂಟೆಗೆ ಶ್ರೀ ಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ಮಹಾ ಪೂಜೆ ಆರಂಭವಾಗಲಿದೆ. ಬಳಿಕ ಬೆಳಗ್ಗೆ 8 ಗಂಟೆಗೆ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ನಂದಿ ಪೂಜೆ ಹಾಗೂ ಧರ್ಮಧ್ವಜಾರೋಹಣ ಮಾಡಲಿದ್ದಾರೆ. ಈ ಮೂಲಕ 9 ದಿನಗಳ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡುವರು. ಅದೇ ದಿನ ಬೆಳಗ್ಗೆ 10ಗಕ್ಕೆ ಸಭಾ ಕಾರ್ಯಕ್ರಮವೂ ನಡೆಯಲಿದೆ.

ಮಾರ್ಚ್‌ 1ರ ಮಧ್ಯಾಹ್ನ 3ಗಂಟೆಗೆ ಕಬ್ಬಡಿ ಪಂದ್ಯಾವಳಿಯ ಉದ್ಘಾಟನೆ ಆಗಲಿದೆ. ಸಂಜೆ6 ಗಂಟೆಗೆ ಸರ್ವಾಲಂಕೃತ ಶ್ರೀ ಚಂದ್ರಮೌಳೇಶ್ವರಸ್ವಾಮಿ ಉತ್ಸವ ನಡೆಯಲಿದೆ. ಇನ್ನು ಮಾರ್ಚ್ 2ರ ಮಧ್ಯಾಹ್ನ 3ಕ್ಕೆ ಕಬ್ಬಡಿ ಪಂದ್ಯಾವಳಿಯ ಸಮಾರೋಪ ಸಮಾರಂಭ ಹಾಗೂ ಸಂಜೆ 6ಕ್ಕೆ ಸರ್ವಾಲಂಕೃತ ಶ್ರೀ ಮಲ್ಲೇಶ್ವರಸ್ವಾಮಿಯ ಉತ್ಸವ ನಡೆಯಲಿದೆ.

ಯಾವೆಲ್ಲ ಕಾರ್ಯಕ್ರಮಗಳು ನಡೆಯಲಿವೆ?

ಮಾರ್ಚ್‌ 3ರ ಬೆಳಗ್ಗೆ 9:30ಕ್ಕೆ ಸರಳ ಸಾಮೂಹಿಕ ವಿವಾಹ ಹಾಗೂ ವಿವಾಹವಾಗಿ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡ ಹಿರಿಯ ದಂಪತಿಗಳಿಂದ ಆಶೀರ್ವಾದದ ವ್ಯವಸ್ಥೆಯನ್ನು ಮಾಡಲಾಗಿದೆ. 50 ವರ್ಷಗಳ ಕಾಲ ಜೀವನ ನಡೆಸಿ ಸತಿಪತಿಗಳಾಗಿ ಧನ್ಯೋಗೃಹಸ್ಥಾಶ್ರಮಃ ಎಂಬಂತೆ ಬದುಕಿದ ಆ ಎಲ್ಲ ಹಿರಿಯ ದಂಪತಿಗಳನ್ನೂ ಶ್ರೀಮಠದ ಪರವಾಗಿ ಸನ್ಮಾನಿಸಲಾಗುವುದು.

ವದು-ವರರಿಗೆ ವಸ್ತ್ರಗಳ ವ್ಯವಸ್ಥೆ

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 21 ವರ್ಷ ಮೇಲ್ಪಟ್ಟ ವರ ಹಾಗೂ 18 ವರ್ಷ ಮೇಲ್ಪಟ್ಟ ವಧುವಿಗೆ ಉಚಿತವಾಗಿ ತಾಳಿ, ಕಾಲುಂಗುರ, ಬಾಗಿನ ಮತ್ತು ವಧು-ವರರಿಗೆ ವಸ್ತ್ರಗಳನ್ನು ನೀಡಲಾಗುವುದು. ಜೊತೆಗೆ ಸಂಬಂಧಿಕರು ಹಾಗೂ ಹಿತೈಷಿಗಳಿಗೆ ಭೋಜನ ವ್ಯವಸ್ಥೆಯನ್ನು ಸಹ ಆಯೋಜಿಸಲಾಗಿದೆ. ಅಂದು ಸಂಜೆ 6ಕ್ಕೆ ಸರ್ವಾಲಂಕೃತ ಶ್ರೀ ಸಿದ್ದೇಶ್ವರ ಸ್ವಾಮಿಯ ಉತ್ಸವ ನಡೆಯಲಿದೆ.

ಕಾರ್ಯಕ್ರಮಗಳ ವಿವರ ಇಲ್ಲಿದೆ

ಮಾರ್ಚ್‌ 4ರ ಬೆಳಗ್ಗೆ 7:30ಕ್ಕೆ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ಸುವರ್ಣಕವಚಾಲಂಕಾರ ಪೂಜೆ ಮತ್ತು ಶ್ರೀ ಗಂಗಾಧರೇಶ್ವರಸ್ವಾಮಿಗೆ ರಜತ ನಾಗಾಭರಣ ಅಲಂಕಾರ ಪೂಜೆ ನಡೆಯಲಿದೆ. ಬೆಳಗ್ಗೆ 10ಕ್ಕೆ ಒಕ್ಕಲಿಗರ ಸಂಘಗಳ ಪದಾಧಿಕಾರಿಗಳ ಸಮ್ಮಿಲನ ಕಾರ್ಯಕ್ರಮ ನಡೆಯಲಿದೆ. ಸಂಜೆ 6ಕ್ಕೆ ಶ್ರೀ ಕಾಲಭೈರವೇಶ್ವರಸ್ವಾಮಿ ಹೂವಿನ ಪಲಕ್ಕಿ ಉತ್ಸವ ಮತ್ತು ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ.

ಮಾರ್ಚ್‌ 5ರ ಬೆಳಗ್ಗೆ 10ಕ್ಕೆ ಆದಿಚುಂಚನಗಿರಿ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನದ ಉದ್ಘಾಟನೆ ಆಗಲಿದೆ. ಈ ಕಾರ್ಯಕ್ರಮಕ್ಕೆ ನಾಡಿನ ಹಲವು ಭಾಗಗಳಿಂದ ರೈತರು, ಕೈಗಾರಿಕೋದ್ಯಮಿಗಳು, ಕೃಷಿ ತಜ್ಞರು ಆಗಮಿಸಲಿದ್ದಾರೆ. ವಸ್ತು ಪ್ರದರ್ಶನದಲ್ಲಿ ವಿವಿಧ ರೀತಿಯ ಕೃಷಿ ಹಾಗೂ ಕೈಗಾರಿಕೋದ್ಯಮಕ್ಕೆ ಸಂಬಂಧಿಸಿದ ನೂರಾರು ಮಳಿಗೆಗಳನ್ನು ತೆರೆಯಲಾಗುವುದು. ಸಂಜೆ 6ಕ್ಕೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಜ್ವಾಲಾಪೀಠಾರೋಹಣ ಮತ್ತು ಸಿದ್ಧ ಸಿಂಹಾಸನ ಪೂಜೆ ನಡೆಯಲಿದೆ. ಹಾಗೂ ರಾತ್ರಿ 8ಕ್ಕೆ ಚಂದ್ರಮಂಡಲೋತ್ಸವ ಪೂಜೆ ನಡೆಯಲಿದೆ.

ಮಾರ್ಚ್‌ 6ರ ಬೆಳಗ್ಗೆ ದೇವತೆಗಳಿಗೆ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ. ಸಂಜೆ 6:30ಕ್ಕೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ಬಳಿಕ ಶ್ರೀ ಕಾಲಭೈರವೇಶ್ವರ ಸ್ವಾಮಿಯ ತಿರುಗಣಿ ಉತ್ಸವ, ಪುಷ್ಕರಣಿಯಲ್ಲಿ ತೆಪ್ಪೋತ್ಸವ ಹಾಗೂ ಇಡೀ ರಾತ್ರಿ ನಾಟಕ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಕೊನೆಯ ದಿನದ ಕಾರ್ಯಕ್ರಮಗಳ ವಿವರ

ಇನ್ನು ಮಾರ್ಚ್‌ 7ರ ಮುಂಜಾನೆ ನಡೆಯಲಿರುವ ಬ್ರಾಹ್ಮಿ ಮೂಹೂರ್ತದಲ್ಲಿ ಶ್ರೀ ಗಂಗಾಧರೇಶ್ವರ ಸ್ವಾಮಿಯ ಮಹಾರಥೋತ್ಸವ ಹಾಗೂ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಅಡ್ಡ ಪಲ್ಲಕ್ಕಿ ಉತ್ಸವು ಬಹಳ ವಿಜೃಂಭಣೆಯಿಂದ ಜರುಗಲಿದ್ದು, ನಾಡಿನಾದ್ಯಂತ ಸಾವಿರಾರು ಭಕ್ತರು ಈ ರಥೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ. ಹಾಗೆಯೇ ಇದೇ ದಿನ ಸಂಜೆ 6ಕ್ಕೆ ವಿವಿಧ ಗ್ರಾಮಗಗಳ ನೂರಾರು ಗ್ರಾಮದೇವತೆಗಳ ಉತ್ಸವ ನಡೆಯಲಿದೆ. ಬಳಿಕ ಸಂಜೆ 6ಕ್ಕೆ ಶ್ರೀ ಸೋಮೇಶ್ವರ ಸ್ವಾಮಿಯ ಉತ್ಸವ ಜರುಗಲಿದೆ.

ಮಾರ್ಚ್‌ 8ರಂದು ಜಾತ್ರಾ ಮಹೋತ್ಸವದ ಕೊನೆಯ ದಿನವಾಗಿದೆ. ಅಂದು ಶ್ರೀಕ್ಷೇತ್ರದ ಬಿಂದು ಸರೋವರದಲ್ಲಿ ಗಂಗಾ ಪೂಜೆ, ಸ್ನಾನ ಇತ್ಯಾದಿ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದ ನಂತರ ಧರ್ಮಧ್ವಜಾವರೋಹಣ ಹಾಗೂ ಸಭಾ ಕಾರ್ಯಕ್ರಮದ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಈ ಬ್ಯಾಂಕ್‌ನಲ್ಲಿ 5 ಸಾವಿರ ವಿತ್‌ಡ್ರಾ ಮಿತಿ ಹೇರಿದ ಆರ್‌ಬಿಐ!

Sun Feb 26 , 2023
ಸಾಮಾನ್ಯವಾಗಿ ಬ್ಯಾಂಕ್‌ನಲ್ಲಿ ನಿರ್ದಿಷ್ಟವಾದ ವಿತ್‌ಡ್ರಾ ಮಿತಿಯು ಇರುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮಹಾರಾಷ್ಟ್ರದ ಅಕ್ಲೊಜ್‌ನಲ್ಲಿನ ಶಂಕರ್‌ರಾವ್ ಮೋಹಿತೆ ಪಾಟೀಲ್ ಸಹಕಾರಿ ಬ್ಯಾಂಕ್‌ ಮೇಲೆ ವಿತ್‌ಡ್ರಾ ಮಿತಿಯನ್ನು ಹೇರಿದೆ. ಹೌದು ಇನ್ನು ಮುಂದೆ ನೀವು ಈ ಬ್ಯಾಂಕ್‌ನಲ್ಲಿ ವಿತ್‌ಡ್ರಾ ಮಾಡಬೇಕಾದರೆ ಯೋಚನೆ ಮಾಡಬೇಕಾಗುತ್ತದೆ. ಯಾಕೆಂದರೆ ವಿತ್‌ಡ್ರಾ ಮಿತಿ ಬರೀ 5 ಸಾವಿರ ರೂಪಾಯಿ ಆಗಿದೆ. ಇದು ಮಾತ್ರವಲ್ಲದೆ ಬ್ಯಾಂಕ್‌ ಮೇಲೆ ಹಲವಾರು ನಿರ್ಬಂಧಗಳನ್ನು ಕೂಡಾ ವಿಧಿಸಿದೆ. ಪ್ರಸ್ತುತ ಬ್ಯಾಂಕ್‌ನ […]

Advertisement

Wordpress Social Share Plugin powered by Ultimatelysocial