ಎ. ಎಸ್. ಮೂರ್ತಿ ಮಹಾನ್ ಕ್ರಿಯಾಶೀಲ ಕಲಾವಿದ

 

 

ಆಕಾಶವಾಣಿ ಈರಣ್ಣ’ನೆಂದೇ ಪ್ರಸಿದ್ಧರಾಗಿದ್ದ ಸಾಹಿತಿ, ನಾಟಕಕಾರ, ಪತ್ರಿಕೋದ್ಯಮಿ, ಅಂಕಣಕಾರ ಹೀಗೆ ಎಲ್ಲವೂ ಆಗಿದ್ದ ಮಹಾನ್ ಕ್ರಿಯಾಶೀಲ ಕಲಾವಿದರಾಗಿದ್ದವರು ಎ. ಎಸ್. ಮೂರ್ತಿ. ಇಂದು ಈ ಅಪ್ರತಿಮ ಪ್ರತಿಭಾ ಚೇತನದ ಸಂಸ್ಮರಣೆ ದಿನ.
ಎ.ಎಸ್. ಮೂರ್ತಿಯವರು 1929ರ ಆಗಸ್ಟ್ 16ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಕಲಾಮಂದಿರದ ಸ್ಥಾಪಕರಾದ ಅ.ನ. ಸುಬ್ಬರಾಯರು. ತಾಯಿ ಗೌರಮ್ಮ. ಮೂರ್ತಿಯವರ ಪ್ರಾರಂಭಿಕ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ನೆರವೇರಿತು. ಎಸ್.ಎಸ್.ಎಲ್.ಸಿ. ಮುಗಿಸಿದ ನಂತರ ‘ಕ್ಯಾಲಿಕೊ ಮಿಲ್ಸ್’ನಲ್ಲಿ ಕೆಲಕಾಲ ಉದ್ಯೋಗ ಮಾಡಿದರು. ಅವರಿಗೆ ಕಲೆ, ಸಾಹಿತ್ಯ, ನಾಟಕ ಮುಂತಾದವು ತಂದೆಯಿಂದ ಬಂದ ಬಳುವಳಿಯಾಗಿತ್ತು. ಹೀಗಾಗಿ ಅವರು ಆಯ್ದುಕೊಂಡ ಕ್ಷೇತ್ರ ನಾಟಕರಂಗ.
ಮುಂದೆ ಆಕಾಶವಾಣಿ ಸೇರಿದ ಎ. ಎಸ್. ಮೂರ್ತಿಯವರು ಆಕಾಶವಾಣಿಯಲ್ಲಿ ನಾಟಕಗಳನ್ನು ಬರೆದು ನಿರ್ದೇಶಿಸುತ್ತಾ ನಡೆಸಿದ ಕಾರ್ಯಕ್ರಮಗಳು ಅಸಂಖ್ಯವಾದವು. ವೆಂಕಣ್ಣನ ಸಾಹಸಗಳು ಮತ್ತು ಮನೆಮಾತು ಕಾರ್ಯಕ್ರಮಗಳು ಅವರ ಜನಪ್ರಿಯತೆಯನ್ನು ಮನೆಮನೆಗೂ ಕೊಂಡೊಯ್ದಿತ್ತು. ಪ್ರತಿದಿನ ಬೆಳಿಗ್ಗೆ ಅವರು ಈರಣ್ಣನಾಗಿ ನಡೆಸಿಕೊಡುತ್ತಿದ್ದ ‘ಒಂದು ಮಾತು’ ಕಾರ್ಯಕ್ರಮ ಸಮಾಜದ ಪ್ರಸ್ತುತ ಸಮಸ್ಯೆಗಳಿಗೆ ಅತ್ಯಂತ ಸಮರ್ಥವಾಗಿ ಕನ್ನಡಿ ಹಿಡಿಯುವಂತಿದ್ದವು. ಜನಪರ ಕಾಳಜಿಯ ಈ ಕಾರ್ಯಕ್ರಮಕ್ಕೆ ನಾಡಿನಾದ್ಯಂತ ಸಂದ ಪ್ರತಿಸ್ಪಂದನ ಅಪರಿಮಿತವಾದದ್ದು. ‘ಕಾಫೀನೇ ಕುಡೀಲಿಲ್ಲ’ ಎಂಬ ಮಾತಿಗೆ ‘ಅಯ್ಯೋs… ಮರ್ತೇ ಬಿಟ್ಟೆ’ ಎಂಬ ಅವರ ಮಾತು ಇಂದಿಗೂ ನಮ್ಮ ಕಿವಿಗಳಲ್ಲಿ ಅಣುರಣಿಸುವಂತಿದೆ.
ಚಿತ್ರನಾಟಕ ತಂಡ ಕಟ್ಟಿದ ಎ. ಎಸ್. ಮೂರ್ತಿಯವರು ಹಲವಾರು ನಾಟಕಗಳ ಪ್ರಯೋಗ ಮಾಡಿದರು. ತಿ.ತಾ.ಶರ್ಮ, ವೈಎನ್ಕೆ, ಶ್ರೀರಂಗ, ಲಂಕೇಶ್, ದಾರರಥಿ ದೀಕ್ಷಿತ್ ಮುಂತಾದವರೆಲ್ಲರ ನಾಟಕಗಳಿಗೆ ಮೂರ್ತಿ ರಂಗರೂಪ ಕೊಟ್ಟರು. ಅವರು 1964ರಲ್ಲಿ ಹುಟ್ಟುಹಾಕಿದ ‘ಅಭಿನಯತರಂಗ’ದ ಮೂಲಕ ಸಾಹಿತ್ಯ – ಸಂಸ್ಕೃತಿ ಅಧ್ಯಯನ, ರಂಗಶಾಲೆ ಮುಂತಾದವುಗಳ ಪ್ರಾರಂಭ ಮಾಡಿದರು. ಈ ಸಂಸ್ಥೆಯಿಂದ ನಾಟಕರಂಗ, ದೂರದರ್ಶನ, ಸಿನಿಮಾಗಳಿಗೆ ಅಸಂಖ್ಯಾತ ಕೊಡುಗೆಗಳು ಲಭ್ಯವಾದವು.
ಮುಂದೆ ‘ಬಿಂಬ’ ಸಂಸ್ಥೆಯನ್ನು ಪ್ರಾರಂಭಿಸಿದ ಎ.ಎಸ್. ಮೂರ್ತಿಯವರು ಹನುಮಂತನಗರ ಮತ್ತು ವಿಜಯನಗರದಲ್ಲಿ ಮಕ್ಕಳಿಗಾಗಿ ಕಲೆ, ರಂಗಾಸಕ್ತಿ ಶಿಬಿರಗಳನ್ನು ಮೂಡಿಸತೊಡಗಿದರು. ‘ಅಭಿನಯ ತರಂಗ’ದಿಂದ ಭಾನುವಾರದ ರಂಗಶಾಲೆಯ ಪ್ರಾಂಶುಪಾಲರಾಗಿ ಅಶೋಕಬಾದರದಿನ್ನಿ, ಬಿ. ಚಂದ್ರಶೇಖರ್, ಎಚ್.ಜಿ. ಸೋಮಶೇಖರ್‌ರಾವ್, ಗೌರಿದತ್ತು ಮುಂತಾದವರ ಸೇವೆ ಹೊರಹೊಮ್ಮುವಂತಾಯ್ತು.
ನಾಟಕಗಳನ್ನು ಜನರೆಡೆಗೆ ಕೊಂಡೊಯ್ಯಲು ಎ. ಎಸ್. ಮೂರ್ತಿಯವರು ಕಟ್ಟಿದ ಬೀದಿನಾಟಕ ತಂಡ ‘ಗೆಳೆಯರ ಗುಂಪು’. ಈ ತಂಡದ ಮೂಲಕ ರಾಜಾಜಿನಗರದ ರಾಮಮಂದಿರದ ಬಳಿ ಅವರು ಪ್ರದರ್ಶಿಸಿದ ಮೊದಲ ನಾಟಕ ‘ಕಟ್ಟು’. ಮುಂದೆ ಅವರು ಇದೇ ಮಾದರಿಯಲ್ಲಿ ಅಸಂಖ್ಯಾತ ನಾಟಕಗಳನ್ನು ಮೂಡಿಸಿದರು. ಬೊಂಬೆ ನಾಟಕ ಪ್ರದರ್ಶನಗಳನ್ನೂ ಪ್ರಾರಂಭಿಸಿದರು. ಲೇಖಕಿಯರ ಸಂಘಟನೆಗೆ ಒತ್ತಾಸೆ ನೀಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಟಿ. ಎಸ್. ಸತ್ಯನ್ ಅಂತರರಾಷ್ಟ್ರೀಯ ಮಟ್ಟದ ಶ್ರೇಷ್ಠ ಛಾಯಾಗ್ರಾಹಕ

Thu Dec 22 , 2022
ಟಿ. ಎಸ್. ಸತ್ಯನ್ ಅಂತರರಾಷ್ಟ್ರೀಯ ಮಟ್ಟದ ಶ್ರೇಷ್ಠ ಛಾಯಾಗ್ರಾಹಕರಾಗಿ ಸುಪ್ರಸಿದ್ಧರು.ತಂಬ್ರಹಳ್ಳಿ ಸುಬ್ರಮಣ್ಯ ಸತ್ಯನಾರಾಯಣ ಅಯ್ಯರ್ 1923ರ ಡಿಸೆಂಬರ್ 18 ರಂದು ಮೈಸೂರಿನಲ್ಲಿ ಜನಿಸಿದರು. ಮೈಸೂರಿನ ಬನುಮಯ್ಯ ಪ್ರೌಢಶಾಲೆ ಹಾಗೂ ಮಹಾರಾಜ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿ 1944ರಲ್ಲಿ ಬಿ.ಎ. ಪದವಿ ಗಳಿಸಿದರು.ಛಾಯಾಚಿತ್ರಕಲೆಯಲ್ಲಿ ಆಸಕ್ತಿ ತಾಳಿದ ಸತ್ಯನ್ ಅತ್ಯಂತ ಯಶಸ್ವೀ ಛಾಯಾಗ್ರಾಹಕ-ಪತ್ರಕರ್ತರಾದರು. ಸತ್ಯನ್ ಜಗತ್ತಿನಾದ್ಯಂತ ಹಲವಾರು ವರ್ತಮಾನ ಪತ್ರಿಕೆಗಳಿಗೆ, ನಿಯತಕಾಲಿಕಗಳಿಗೆ ಛಾಯಾ ಚಿತ್ರಗಳನ್ನು ಮತ್ತು ಲೇಖನಗಳನ್ನು ನೀಡಿದರು. ಸಮಕಾಲೀನ ಭಾರತದ ಚಿತ್ರವನ್ನು ಸಾಗರಾಂತರ […]

Advertisement

Wordpress Social Share Plugin powered by Ultimatelysocial