ಗಾಂಧಿ ನಡಿಗೆ ಕೃಷ್ಣೆಯ ಕಡೆಗೆ ಎಂಬ ಕಾಂಗ್ರೆಸ್ ನವರ ಪಾದಯಾತ್ರೆ ಒಂದು ಚುನಾವಣಾ ಗಿಮಿಕ್

ಗಾಂಧಿ ನಡಿಗೆ ಕೃಷ್ಣೆಯ ಕಡೆಗೆ ಎಂಬ ಕಾಂಗ್ರೆಸ್ ನವರ ಪಾದಯಾತ್ರೆ ಹಾನಗಲ್ ಮತ್ತು ಸಿಂಧಗಿ ಮತಕ್ಷೇತ್ರಗಳ ಉಪಚುನಾವಣೆಗಳ ಹಿನ್ನೆಲೆಯಲ್ಲಿ ಒಂದು ಚುನಾವಣಾ ಗಿಮಿಕ್, ಇಂತಹ ಚುನಾವಣಾ ಗಿಮಿಕ್ ಗಳಿಗೆ ಜನ ಮೋಸ ಹೋಗುವುದಿಲ್ಲತಂತ್ರಗಾರಿಕೆಗಳಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ ಯಾವಾಗಲೂ ಕೃಷ್ಣೆಯ ನಡಿಗೆ ಸತ್ಯದ ಕಡೆಗೆ ಎಂಬುದನ್ನು ಪರಿಪಾಲಿಸುತ್ತಾ ಬಂದಿದ್ದು ಉಪಚುನಾವಣೆ ಇರಲಿಲ್ಲ ಎಂದಿದ್ದರೆ ಕಾಂಗ್ರೆಸ್ ನವರ ಗಾಂಧಿ ನಡಿಗೆ ಕೃಷ್ಣೆಯ ಕಡೆಗೆ ಇರುತ್ತಿರಲಿಲ್ಲ. ಅದು ನಿರ್ಲಕ್ಷ್ಯದ ಕಡೆಗೆ ಇರುತ್ತಿತ್ತು ಎಂದು ಟೀಕಿಸಿದರು. ಮಾಜಿ ನೀರಾವರಿ ಸಚಿವ ಎಂ.ಬಿ. ಪಾಟೀಲರವರು ನಾನು ಕೃಷ್ಣೆ ಕಾಂಗ್ರೆಸ್ ನವರ ಪಾಪದ ಕೂಸು ಎಂದು ಹೇಳಿದ್ದೇನೆಂದು ಸುಳ್ಳು ಹೇಳಿದ್ದಾರೆ. ನಾನು ಯಾವತ್ತೂ ಹೇಳಿಲ್ಲ ಮತ್ತು ಹೇಳುವವನೂ ಅಲ್ಲ. ನಾನು ರೀತಿ ಹೇಳಿದ್ದೇನೆಂದು ಎಂ.ಬಿ.ಪಾಟೀಲರು ಸಾಬೀತು ಪಡಿಸಬೇಕು. ಇಲ್ಲದಿದ್ದರೆ ಅವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕೆಂದು ಸಚಿವರು ಒತ್ತಾಯಿಸಿದರು. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾನಂತರ ಕಾಂಗ್ರೆಸ್ ನವರು ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಯಾವುದೇ ರೀತಿಯ ಸಮರ್ಪಕ ಹಣಕಾಸು ಒದಗಿಸಲಿಲ್ಲ. ಆದ್ದರಿಂದಾಗಿ ಯೋಜನೆಗಳು ಕುಂಟುಂತ್ತಾ ತೆವಳುತ್ತಾ ಜನರಿಗೆ ಯಾವುದೇ ರೀತಿಯ ಸಹಾಯವಾಗದ ರೀತಿಯಲ್ಲಿ ಮುನ್ನಡೆದವು ಎಂದರು.

ಬಸವರಾಜ ಬೊಮ್ಮಾಯಿಯವರು ಜಲ ಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಸಿಂಧಗಿ ಮತಕ್ಷೇತ್ರಕ್ಕೆ ಅನುಕೂಲವಾಗುವ ಇಂಡಿ ಶಾಖಾ ಕಾಲುವೆ ಮತ್ತು ಗುತ್ತಿ ಬಸವಣ್ಣ ಏತ ನೀರಾವರಿ ಕಾಮಗಾರಿಗಳನ್ನು ಪೂರ್ಣಗೊಳಿಸಿದರು. ಎರಡೂ ಯೋಜನೆಗಳಿಗೆ 1000 ಕೋಟಿ ರೂಪಾಯಿಗಳು ಖರ್ಚಾಗಿದ್ದು 80 ಸಾವಿರ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಿ ರೈತರ ಬಾಳನ್ನು ಹಸನು ಮಾಡಲಾಗಿದೆ ಎಂದು ಸಚಿವರು ವಿವರಿಸಿದರು. ಸಿಂಧಗಿ ಮತಕ್ಷೇತ್ರದ ಜನತೆಗೆ ಭಾರತೀಯ ಜನತಾ ಪಕ್ಷ ಮಾಡಿದ ಅಭಿವೃದ್ಧಿಯ ಬಗ್ಗೆ ಸೂಕ್ತವಾದ ಕಲ್ಪನೆ ಇದ್ದು, ಕಾಂಗ್ರೆಸ್ ನವರ ಪಾದಯಾತ್ರೆಯಂತಹ ಹೊಸ ನಾಟಕದಿಂದ ಮೋಸ ಹೋಗುವುದಿಲ್ಲ. ಭಾರತೀಯ ಜನತಾ ಪಕ್ಷದ ಗೆಲುವು ನಿಶ್ಚಿತ ಎಂದು ಹೇಳಿದರು.

 ಪ್ರತಿಯೊಂದು ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನವರು ಗಿಮಿಕ್ ಗಳನ್ನು ಮಾಡುತ್ತಾರೆ. ಈಗ ಸಿಂಧಗಿ ಹಾಗೂ ಹಾನಗಲ್ ಉಪಚುನಾವಣೆ ಮತ್ತು ಡಿಸೆಂಬರ್ ಹೊತ್ತಿಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿನ ಚುನಾವಣೆ ಬರುವುದರಿಂದ ಹೊಸ ನಾಟಕ ಪ್ರಾರಂಭಿಸಿದ್ದಾರೆ. ಗಾಂಧೀಜಿಯವರ ಹೆಸರನ್ನು ಯಾಕೆ ದುರುಪಯೋಗ ಮಾಡಿಕೊಳ್ಳುತ್ತಾರೆಂಬುದು ಗೊತ್ತಿಲ್ಲ ಕಾಂಗ್ರೆಸ್ ನವರಿಗೆ ಗಾಂಧೀಜಿಯವರ ಹೆಸರನ್ನು ಹೇಳುವಂತಹ ನೈತಿಕತೆಯೇ ಇಲ್ಲ ಎಂದು ಸಚಿವರು ಟೀಕಿಸಿದರು. ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಮತ್ತು ಭೂಸ್ವಾಧೀನ ಕಾಮಗಾರಿಗಳಿಗೆ ಹಣ ನೀಡದೇ 20 ಹಳ್ಳಿಗಳನ್ನು ಸ್ಥಳಾಂತರ ಮಾಡದೆ ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಲಿಲ್ಲ. ಇದರಿಂದಾಗಿ ನಮ್ಮ ಕೃಷ್ಣೆ ಕಣ್ಣೀರು ಸುರಿಸುವಂತಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

 

Please follow and like us:

Leave a Reply

Your email address will not be published. Required fields are marked *

Next Post

ಗಳ ಗಳನೆ ಕಣ್ನೀರು ಹಾಕಿದ ರಜನಿಕಾಂತ್‌ ಯಾಕೆ ಗೊತ್ತಾ..?

Tue Oct 5 , 2021
‘ಅಣ್ಣಾತೆ’ ಸಿನಿಮಾದ ಹಾಡು ಇಂದು ಬಿಡುಗಡೆ ಆಗಿದ್ದು, ಇದು ಎಸ್‌ಪಿಬಿ ರಜನಿಕಾಂತ್‌ಗೆ ಹಾಡಿರುವ ಕೊನೆಯ ಹಾಡಾಗಿದೆ. ರಜನಿಕಾಂತ್‌ಗಾಗಿ ಎಸ್‌ಪಿ ಬಾಲಸುಬ್ರಹ್ಮಣ್ಯಂ ಹಾಡಿರುವ ಕೊನೆಯ ಹಾಡು ಇಂದು ಬಿಡುಗಡೆ ಆಗಿದೆ. ಹಾಡು ಬಿಡುಗಡೆ ಆದ ಬಗ್ಗೆ ಭಾವುಕವಾಗಿ ಟ್ವೀಟ್ ಮಾಡಿರುವ ರಜನಿಕಾಂತ್, ”ಕಳೆದ 45 ವರ್ಷಗಳಿಂದ ಎಸ್‌ಪಿ ಬಾಲಸುಬ್ರಹ್ಮಣ್ಯಂ ಧ್ವನಿ ನನ್ನ ಪಾತ್ರಗಳಿಗೆ ಜೀವ ತುಂಬಿದೆ. ನನ್ನ ‘ಅಣ್ಣಾತೆ’ ಸಿನಿಮಾಕ್ಕಾಗಿ ಎಸ್‌ಪಿಬಿ ಹಾಡುವ ಹಾಡು ಅವರ ಜೀವನದ ಕೊನೆಯ ಹಾಡಾಗುತ್ತದೆ ಎಂದು […]

Advertisement

Wordpress Social Share Plugin powered by Ultimatelysocial