ಜೈಲಿನಲ್ಲಿ ಚಂದ್ರಬಾಬು ನಾಯ್ಡು-ಪವನ್ ಕಲ್ಯಾಣ್ ಭೇಟಿ: ಟಿಡಿಪಿ, ಜನಸೇನೆ ಮೈತ್ರಿ ಘೋಷಿಸಿದ ಪವರ್‌ ಸ್ಟಾರ್‌

ಹೈದರಾಬಾದ್‌, ಸೆಪ್ಟೆಂಬರ್‌ 14: ಆಂಧ್ರ ರಾಜಕಾರಣ ಸ್ಪೋಟಕ ತಿರುವು ಪಡೆದುಕೊಳ್ಳುತ್ತಿದೆ. ಜೈಲಿನಲ್ಲಿರುವ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಖ್ಯಾತ ನಟ ಹಾಗೂ ಜನಸೇನೆ ನಾಯಕ ಪವನ್‌ ಕಲ್ಯಾಣ್‌ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ, ಟಿಡಿಪಿ ಜೊತೆ ಜನಸೇನೆಯ ಮೈತ್ರಿಯನ್ನು ಘೋಷಿಸಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಜನಸೇನೆ ಸ್ಪರ್ಧಿಸಲಿದೆ ಎಂದು ಪವರ್‌ ಸ್ಟಾರ್‌ ಪವನ್ ಕಲ್ಯಾಣ್ ಗುರುವಾರ ಹೇಳಿದ್ದಾರೆ.

ತೆಲುಗು ದೇಶಂ ಪಕ್ಷದ ಶಾಸಕ ಹಾಗೂ ನಟ ಬಾಲಕೃಷ್ಣ ಮತ್ತು ನಾರಾ ಲೋಕೇಶ್ ಅವರೊಂದಿಗೆ ರಾಜಮಹೇಂದ್ರವರಂ ಕೇಂದ್ರ ಕಾರಾಗೃಹದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ ನಂತರ ಪವನ್‌ ಕಲ್ಯಾಣ್‌ ಈ ಘೋಷಣೆ ಮಾಡಿದ್ದಾರೆ.

ಸುಮಾರು 40 ನಿಮಿಷಗಳ ಕಾಲ ಈ ನಾಯಕರ ಸಭೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪವನ್ ಕಲ್ಯಾಣ್, ‘ಆಂಧ್ರಪ್ರದೇಶವು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ದುರಾಡಳಿತವನ್ನು ಭರಿಸಲು ಸಾಧ್ಯವಿಲ್ಲ. ನಾನು ಇಲ್ಲಿಯ ವರೆಗೆ ಟಿಡಿಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದೆ. ಇಂದು ನಾನು ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ ನಂತರ ಮಹತ್ವದ ತೀರ್ಮಾನಕ್ಕೆ ಬಂದಿದ್ದೇನೆ. ಜನಸೇನೆ ಮತ್ತು ಟಿಡಿಪಿ ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ನಿರ್ಧರಿಸಿದ್ದೇನೆ’ ಎಂದು ತಿಳಿಸಿದರು.

‘ಕೆಲ ರಾಜಕೀಯ ನೀತಿಗೆ ಸಂಬಂಧಿಸಿದಂತೆ ನಾನು ಚಂದ್ರಬಾಬು ನಾಯ್ಡು ಅವರೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದೇನೆ. ನಾವು ಈ ವಿಚಾರಗಳ ಬಗ್ಗೆ ಚರ್ಚಿಸಿದ್ದೇವೆ. ಆದರೆ, ನಾನು ಅವರ ಅನುಭವವನ್ನು ಗೌರವಿಸುತ್ತೇನೆ. ನಾಯಕನಾಗಿ ಬೆಳೆದಿರುವ ಅವರ ಸಾಮರ್ಥ್ಯಕ್ಕೆ ನಾನು ಶಿರಬಾಗಿದ್ದೇನೆ. ಅವರು ಸೈಬರಾಬಾದ್ ಅನ್ನು ಸಾಧ್ಯವಾಗಿಸಿದ ವ್ಯಕ್ತಿಯಾಗಿದ್ದಾರೆ. ಹೈದರಾಬಾದ್‌ನಲ್ಲಿ ಐಟಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ ಹಿರಿಮೆ ಅವರ ಮೇಲಿದೆ’ ಎಂದು ಪವನ್‌ ಕಲ್ಯಾಣ್‌ ತಿಳಿಸಿದ್ದಾರೆ.

ಕಳೆದ 4 ವರ್ಷಗಳಿಂದ ಆಡಳಿತ ಪಕ್ಷವು ಹೇಗೆ ವರ್ತಿಸುತ್ತಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಚಂದ್ರಬಾಬು ನಾಯ್ಡು ಅವರನ್ನು ಅಕ್ರಮವಾಗಿ ಜೈಲಿಗೆ ಕಳುಹಿಸಲಾಗಿದೆ. ಇದು ತುಂಬಾ ದುಃಖಕರವಾಗಿದೆ. ಚಂದ್ರಬಾಬು ನಾಯ್ಡು ಅವರೊಂದಿಗೆ ನಾನಿದ್ದೇನೆ. ನಮ್ಮ ಒಗ್ಗಟ್ಟನ್ನು ತೋರಿಸಲು ನಾನು ಇಲ್ಲಿಗೆ ಬಂದಿದ್ದೇನೆ’ ಎಂದು ಹೇಳಿದರು.

ಜೈಲಿನಲ್ಲಿರುವ ನಾಯ್ಡು ಅವರನ್ನು ಭೇಟಿ ಮಾಡಲು ಪವನ್‌ ಕಲ್ಯಾಣ್‌ ಎರಡನೇ ಬಾರಿಗೆ ಪ್ರಯತ್ನಿಸಿದ್ದಾರೆ. ಭಾನುವಾರ ಅವರು ಮೊದಲ ಬಾರಿಗೆ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಲು ತೆರಳಿದ್ದರು. ಈ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದರು. ಹೈದರಾಬಾದ್‌ನ ಬೇಗಂಪೇಟ್ ವಿಮಾನ ನಿಲ್ದಾಣದಲ್ಲಿ ವಿಶೇಷ ವಿಮಾನ ಹತ್ತಲು ಅನುಮತಿ ನಿರಾಕರಿಸಲಾಯಿತು. ರಸ್ತೆ ಮಾರ್ಗವಾಗಿ ಹೋಗುತ್ತಿದ್ದಾಗಲೂ ಅವರನ್ನು ತಡೆಯಲಾಯಿತು.

ಪವನ್‌ ಕಲ್ಯಾಣ್ ಮತ್ತು ನಾಯ್ಡು ಇಬ್ಬರೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯನ್ನು ಸಾಮಾನ್ಯ ಶತ್ರುವಾಗಿ ನೋಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಡಿಪಿ ಮತ್ತು ಜನಸೇನಾ ನಡುವಿನ ಸಂಬಂಧ ಗಟ್ಟಿಯಾಗುತ್ತಿದೆ.

ಕೌಶಲ್ಯಾಭಿವೃದ್ಧಿ ಹಗರಣದ ಆರೋಪದಲ್ಲಿ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಕಳೆದ ವಾರ ಬಂಧಿಸಲಾಗಿದೆ.

Please follow and like us:

tmadmin

Leave a Reply

Your email address will not be published. Required fields are marked *

Next Post

ರೈಲು ಹಳಿಗೆ ಬಿದ್ದ ಶಿಕ್ಷಕ ಪವಾಡಸದೃಶ ಪಾರು..! ಅಷ್ಟಕ್ಕೂ ಆಗಿದ್ದೇನು..?

Thu Sep 14 , 2023
ದಾವಣಗೆರೆ, ಸೆಪ್ಟೆಂಬರ್‌ 14: ಸ್ವಲ್ಪ ಯಾಮಾರಿದ್ದರೂ ಜೀವ ಹೋಗುತಿತ್ತು. ರೈಲಿನ ಕೆಳಗೆ ಬಿದ್ದರೂ ಪ್ರಾಣಾಪಾಯದಿಂದ ಪಾರಾಗಿರುವುದು ನಿಜಕ್ಕೂ ರೋಚಕವೇ. ರೈಲ್ವೆ ಹಳಿಯೊಳಗೆ ಬಿದ್ದ ಶಿಕ್ಷಕರೊಬ್ಬರು ಪವಾಡಸದೃಶವಾಗಿ ಪಾರಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ನಗರದ ರೈಲ್ವೆ ನಿಲ್ದಾಣದಲ್ಲಿ ಬಿ.ದುರ್ಗಕ್ಕೆ ಹೊರಟಿದ್ದ ಮುಖ್ಯ ಶಿಕ್ಷಕ ಶಿವಕುಮಾರ್ ಪ್ರಾಣಾಪಾಯದಿಂದ ಪಾರಾದವರು. ದಾವಣಗೆರೆ ರೈಲ್ವೆ ನಿಲ್ದಾಣದ ಒಂದನೇ ಫ್ಲಾಟ್ ಫಾರಂನಿಂದ 2 ನೇ ಫ್ಲಾಟ್ ಫಾರಂ ಕಡೆಗೆ ರೈಲು ಹೊರಟಿತ್ತು. ಈ ವೇಳೆ ಏಕಾಏಕಿ […]

Advertisement

Wordpress Social Share Plugin powered by Ultimatelysocial