ಪಿಎಂ ಕಿಸಾನ್ ಸಮ್ಮಾನ್; 13ನೇ ಕಂತು ಸೋಮವಾರ ಬಿಡುಗಡೆ

ಬೆಳಗಾವಿ, ಫೆಬ್ರವರಿ 26; ಪ್ರಧಾನಿ ಫೆಬ್ರವರಿ 27ರ ಸೋಮವಾರ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ.

ಮೋದಿ ಶಿವಮೊಗ್ಗ ಮತ್ತು ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಬೆಳಗಾವಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮೋದಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ.

ಸೋಮವಾರ ಮಧ್ಯಾಹ್ನ ಬೆಳಗಾವಿಯ ಮಾಲಿನಿ ಸಿಟಿ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಹೃತ್ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಇದೇ ಸಮಾವೇಶದಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ 13ನೇ ಕಂತು ಬಿಡುಗಡೆ ಮಾಡಲಿದ್ದಾರೆ. ಸುಮಾರು 10 ಲಕ್ಷ ರೈತರಿಗೆ ಈ ಯೋಜನೆಯ ಅನ್ವಯ ಅನುಕೂಲವಾಗಲಿದೆ.

ಮೋದಿ ಸೋಮವಾರ ಬೆಳಗ್ಗೆ ಶಿವಮೊಗ್ಗಕ್ಕೂ ಭೇಟಿ ನೀಡಲಿದ್ದಾರೆ. ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಈ ಕುರಿತು ಫೇಸ್‌ಬುಕ್‌ ಪೋಸ್ಟ್‌ ಹಾಕಿದ್ದು, ‘ಸನ್ಯಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರು ಫೆ.27 ರಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತಿನ ಅನುದಾನ ದೇಶದ ಅಂದಾಜು 9 ಕೋಟಿ ಅರ್ಹ ರೈತರಿಗೆ ತಲಾ 2,000/- ದಂತೆ ಒಟ್ಟು ಸುಮಾರು 18000 ಕೋಟಿ ಮೊತ್ತವನ್ನು ಡಿ.ಬಿ.ಟಿ. ಮೂಲಕ ನೇರವಾಗಿ ಬಿಡುಗಡೆ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.

ಬೆಳಗಾವಿಯಲ್ಲಿ ಮೋದಿ ಕೃಷಿ ಸಮ್ಮಾನ್ ಯೋಜನೆಯ ನಿಧಿ ವರ್ಗಾವಣೆ, ರೈಲ್ವೆ ಅಭಿವೃದ್ಧಿ ಯೋಜನೆಗಳು ಹಾಗೂ ಜಲಜೀವನ ಮಿಷನ್ ಯೋಜನೆಯ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಲಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಲಕ್ಷಾಂತರ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಯೋಜನೆ ಕುರಿತು ಕೇಂದ್ರ ಸರ್ಕಾರ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು 24 ಫೆಬ್ರವರಿ 2019ರಂದು ಆರಂಭಿಸಿತು. ದೇಶಾದ್ಯಂತ ಎಲ್ಲಾ ಸಣ್ಣ ಮತ್ತು ಮಧ್ಯಮ ಗಾತ್ರದ ಭೂ ಹಿಡುವಳಿದಾರ ರೈತರ ಕುಟುಂಬಗಳಿಗೆ ಆದಾಯದ ನೆರವು ನೀಡುವುದು, ಆ ಮೂಲಕ ಅವರಿಗೆ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು ಹಾಗೂ ದೈನಂದಿನ ಕೌಟುಂಬಿಕ ಅಗತ್ಯಗಳ ಖರ್ಚು, ವೆಚ್ಚಗಳನ್ನು ಭರಿಸಲು ಸಹಾಯ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.

ಈ ಯೋಜನೆಯಡಿ 2 ಹೆಕ್ಟೇರ್‌ವರೆಗೆ ಸಾಗುವಳಿ ಯೋಗ್ಯ ಭೂಮಿ ಹೊಂದಿರುವ ರೈತ ಕುಟುಂಬಗಳಿಗೆ ಕೆಲವೊಂದು ವಿನಾಯಿತಿಗಳ ಹೊರತಾಗಿ ರೈತರಿಗೆ ವಾರ್ಷಿಕ 6000 ರೂ. ನೆರವು ನೀಡಲಾಗುತ್ತದೆ. ಕೇಂದ್ರ ಸರ್ಕಾರ ನಗದು ನೇರ ವರ್ಗಾವಣೆ ಯೋಜನೆಯಡಿ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ 4 ತಿಂಗಳಿಗೊಮ್ಮೆ ಮೂರು ಕಂತುಗಳಲ್ಲಿ ತಲಾ 2000 ರೂ.ಗಳನ್ನು ವರ್ಗಾವಣೆ ಮಾಡುತ್ತದೆ.

ಯೋಜನೆಗೆ ಫಲಾನುಭವಿಗಳನ್ನು ಗುರುತಿಸುವ ಜವಾಬ್ದಾರಿಯನ್ನು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿತ್ತು. ಇದಕ್ಕಾಗಿ www.pmkisan.gov.in ಎಂಬ ಪ್ರತ್ಯೇಕ ವೆಬ್‌ಸೈಟ್‌ ಆರಂಭಿಸಲಾಗಿದೆ. ರೈತರು ಸಿದ್ಧಪಡಿಸಿದ ಮತ್ತು ಅಪ್‌ಲೋಡ್ ಮಾಡಿದ ಮಾಹಿತಿ ಆಧರಿಸಿ ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ.

ಮೋದಿ ಬೆಳಗಾವಿ ಕಾರ್ಯಕ್ರಮಗಳು

* ಬೆಳಗಾವಿ ಜಿಲ್ಲೆಯಲ್ಲಿ 1132 ಕೋಟಿ ವೆಚ್ಚದ ಐದು ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿಗಳಿಗೆ ಶಂಕುಸ್ಥಾಪನೆ.

* ಬೆಳಗಾವಿ-ಧಾರವಾಡ ರೈಲುಮಾರ್ಗ ಸೇರಿದಂತೆ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ

* ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತಿನ ನಿಧಿಯನ್ನು ರೈತರ ಖಾತೆಗೆ ಜಮೆ ಮಾಡಲು ಚಾಲನೆ

* ಬೆಳಗಾವಿ ನಗರದಲ್ಲಿ ಸುಮಾರು 8 ಕಿ. ಮೀ. ರೋಡ್ ಶೋ.

ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರದ ಯೋಜನೆಯ ಫಲಾನುಭವಿಗಳನ್ನು ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಕರೆತರಲು ಸುಮಾರು 1500 ಬಸ್ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಊಟ, ನೀರು ಮತ್ತು ಮಜ್ಜಿಗೆಯನ್ನು ಸಮರ್ಪಕವಾಗಿ ವಿತರಿಸಲು ತಂಡಗಳನ್ನು ನಿಯೋಜಿಸಲಾಗಿದೆ.

ಸಮಾವೇಶ ನಡೆಯುವ ಪ್ರಧಾನ ವೇದಿಕೆ, ಸಾರ್ವಜನಿಕರಿಗೆ ಆಸನ ವ್ಯವಸ್ಥೆ, ಗ್ರೀನ್ ರೂಮ್, ತಾತ್ಕಾಲಿಕ ರಸ್ತೆ, ಊಟದ ವ್ಯವಸ್ಥೆಯ ಕುರಿತು ಜಿಲ್ಲಾಡಳಿತ ಕ್ಷಣ-ಕ್ಷಣದ ಮಾಹಿತಿ ಪಡೆದುಕೊಂಡು ಅಂತಿಮ ಹಂತದ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.

ಪ್ರಧಾನಿ ಮುಖ್ಯ ವೇದಿಕೆಗೆ ಆಗಮಿಸುವುದಕ್ಕಿಂತ ಮುಂಚೆ ಕನ್ನಡದ ಖ್ಯಾತ ಟಿವಿ ವಾಹಿನಿಯ ಕಲಾವಿದರು ಪರ್ಯಾಯ ವೇದಿಕೆಯಲ್ಲಿ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ನೀಡಲಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಂಪಾದಕೀಯ | ಉಕ್ರೇನ್‌- ರಷ್ಯಾ ಯುದ್ಧದಿಂದ ಜಗತ್ತಿಗೇ ದೊಡ್ಡ ಹೊರೆ.

Mon Feb 27 , 2023
ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಆರಂಭಿಸಿ ವರ್ಷ ಕಳೆದಿದೆ. ಯುದ್ಧದಿಂದಾಗಿ ಅಪಾರವಾದ ನಷ್ಟ ಉಂಟಾಗಿದೆ. ಒಂದು ಅಂದಾಜಿನ ಪ್ರಕಾರ, ಉಕ್ರೇನ್‌ನ ಒಂದು ಲಕ್ಷದಷ್ಟು ಸೈನಿಕರು ಗಾಯಗೊಂಡಿದ್ದಾರೆ ಅಥವಾ ಮೃತಪಟ್ಟಿದ್ದಾರೆ. ಉಕ್ರೇನ್‌ ನಗರಗಳ ಮೇಲೆ ರಷ್ಯಾ ನಡೆಸಿದ ಬಾಂಬ್ ಮತ್ತು ಕ್ಷಿಪಣಿ ದಾಳಿಗಳಿಂದಾಗಿ ಬಲಿಯಾದ ನಾಗರಿಕರ ಸಂಖ್ಯೆಯೂ ದೊಡ್ಡದಾಗಿಯೇ ಇದೆ.80 ಲಕ್ಷಕ್ಕೂ ಹೆಚ್ಚು ಉಕ್ರೇನ್‌ ಪೌರರು ನಿರಾಶ್ರಿತರಾಗಿದ್ದಾರೆ. ಸಾವಿರಾರು ಕಟ್ಟಡಗಳು, ನೂರಾರು ಸೇತುವೆಗಳು, ವಿದ್ಯುತ್‌ ವಿತರಣೆ ಜಾಲ ಮತ್ತು ರಸ್ತೆಗಳು ನಾಶವಾಗಿವೆ. […]

Related posts

Advertisement

Wordpress Social Share Plugin powered by Ultimatelysocial