ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬಗ್ಗೆ ಬಿಜೆಪಿ ಮೌನ: ಹೆಚ್‌ಡಿಕೆ ಆಕ್ರೋಶ!

ಬೆಂಗಳೂರು, ಏ.3- ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬಗ್ಗೆ ಮೌನವಾಗಿರುವ ಬಿಜೆಪಿ, ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಬೆಳಗ್ಗೆ ಸರಣಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೌನಕ್ಕೆ ಶರಣಾಗಿರುವ ಬಿಜೆಪಿಯನ್ನು ಮೌನಿ ಪಕ್ಷ, ಸರ್ಕಾರವನ್ನು ಮೌನಿ ಸರ್ಕಾರ ಹಾಗೂ ಮುಖ್ಯಮಂತ್ರಿಯನ್ನು ಮೌನಿ ಮುಖ್ಯಮಂತ್ರಿ ಎಂದು ಛೇಡಿಸಿದ್ದಾರೆ.

ಹಲಾಲ್ ಹಾಲಾಹಲದ ನಡುವೆಯೇ ಇಂದು ಬೆಳಗ್ಗೆ ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ. 13 ದಿನಗಳಲ್ಲಿ 8 ರೂ. ಜಿಗಿತ. ಇದಪ್ಪಾ ಬಹುಜನ ಹಿತಾಯ, ಬಹುಜನ ಸುಖಾಯ ಎಂದು ಭಾಷಣ ಬಿಗಿಯುವ ಬಿಜೆಪಿ ಆಡಳಿತದಲ್ಲಿ ಇಂಡಿಯಾ ಶೈನಿಂಗ್ ಎಂದಿದ್ದಾರೆ.

13 ದಿನಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಏರುತ್ತಲೇ ಇದ್ದು, ಇಲ್ಲಿಯವರೆಗೂ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 8ರೂ. ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‍ಗೆ 108.99 ರೂ., (ಇಂದಿನ ಹೆಚ್ಚಳ 88 ಪೈಸೆ) ಡೀಸೆಲ್ ಬೆಲೆ ಲೀಟರ್‍ಗೆ 92.83 ರೂ.(ಇಂದಿನ ಹೆಚ್ಚಳ 78 ಪೈಸೆ) ಜಿಗಿದಿದೆ. ಖಜಾನೆ ಭರ್ತಿಗೆ ಷೇರು ಸೂಚ್ಯಂಕವನ್ನು ಕುಣಿಸಿದಂತೆ, ಬೆಲೆ ಸೂಚ್ಯಂಕದ ಕರಡಿ ಕುಣಿತವೂ ಭರ್ಜರಿಯಾಗಿದೆ ಎಂದು ಟೀಕಿಸಿದ್ದಾರೆ.

2018ರಲ್ಲಿ ನಾನು ಸಿಎಂ ಆಗಿದ್ದಾಗ ಸಾಲ ಮನ್ನಾಕ್ಕಾಗಿ ಪೆಟ್ರೋಲ್ ಲೀಟರಿಗೆ 1ರೂ. 12 ಪೈಸೆ, ಡೀಸೆಲ್ ಬೆಲೆಯಲ್ಲಿ ಲೀಟರಿಗೆ 1ರೂ. 14 ಪೈಸೆ ಹೆಚ್ಚಳ ಮಾಡಿದ್ದಕ್ಕೆ ಬಿಜೆಪಿ ನಾಯಕರು ಕೂಗಾಡಿ ಗಲಾಟೆ ಎಬ್ಬಿಸಿದ್ದರು. ಬೆಲೆ ಹೆಚ್ಚಳದ ಈ ಹಣ ರೈತರಿಗೆ ಹೋಗಿಬಿಡುತ್ತದಲ್ಲ ಎಂದು ಅವರ ಹೊಟ್ಟೆ ಉರಿದುಹೋಯಿತು ಎಂದು ದೂರಿದ್ದಾರೆ.

ಹಾದಿಬೀದಿಯಲ್ಲಿ ಖಾಲಿ ಸಿಲಿಂಡರುಗಳನ್ನು ಹೊತ್ತ ಬಿಜೆಪಿಗರು, ಈಗೇಕೆ ಮೌನಕ್ಕೆ ಶರಣಾಗಿದ್ದಾರೆ? ಬೆಲೆ ಏರಿಕೆಯಿಂದ ಬಡವರ ಹೊಟ್ಟೆ ಉರಿದರೆ ನಿಮಗೆ ಖುಷಿಯಾ? ಬನ್ನಿ, ಬೀದಿಗೆ ಬಂದು ಪ್ರತಿಭಟನೆ ಮಾಡಿ, ಕೇಂದ್ರ ಸರಕಾರದ ವಿರುದ್ಧ ಕ್ಕಾರ ಕೂಗಿ ಎಂದಿದ್ದಾರೆ.

ಸಿಮೆಂಟ್, ಕಬ್ಬಿಣ, ಆಹಾರ ಪದಾರ್ಥ ಸೇರಿ ಸಾಮಾನ್ಯ ವ್ಯಕ್ತಿ ಬಳಸುವ ಪ್ರತಿ ವಸ್ತುವಿನ ಬೆಲೆ ನಿತ್ಯವೂ ಜಿಗಿಯುತ್ತಿದೆ. ಶ್ರೀಸಾಮಾನ್ಯನು ಮನೆ ಕಟ್ಟುವ ಕನಸು ಇನ್ನು ಬರೀ ಕನಸೇ. ಅವನ ಜೇಬು ಖಾಲಿಯಾಗುತ್ತಿದೆ, ಕೆಲವರ ಜೇಬು ತುಂಬುತ್ತಿದೆ. ಬಿಜೆಪಿ ಭಾರತದಲ್ಲಿ ಉದ್ಯಮಿಗಳು ಜಗತ್ತಿನ ಟಾಪ್ ಶ್ರೀಮಂತರಾಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಹಿಜಾಬï, ಕೇಸರಿ ಶಾಲು, ಟಿಪ್ಪು ಪಠ್ಯ, ಮುಸ್ಲಿಂ ವರ್ತಕರಿಗೆ ನಿಷೇಧ, ಹಲಾಲ್ ಕಟ್ ಬಗ್ಗೆ ಅಬ್ಬರಿಸಿ ಬೊಬ್ಬಿರಿಯುವ ಶ್ರೀಮಂತರ ಪಕ್ಷ ಬಿಜೆಪಿಯು ಬೆಲೆ ಏರಿಕೆ ಬಗ್ಗೆ ಮಾತ್ರ ಮೌನವಾಗಿದೆ. ರಾಜ್ಯ ಸರ್ಕಾರವೂ ಮೌನ. ಮುಖ್ಯಮಂತ್ರಿಗಳೂ ಮೌನ. ಮೌನಂ ಶರಣಂ ಗಚ್ಛಾಮಿ ಎಂದು ಟೀಕಿಸಿದ್ದಾರೆ.

ಮೌನಿ ಪಕ್ಷ, ಮೌನಿ ಸರ್ಕಾರ. ಮೌನಿ ಮುಖ್ಯಮಂತ್ರಿ ಎಂದಿರುವ ಅವರು ಡಾ.ಮನಮೋಹನ್ ಸಿಂಗ್ ಅವರನ್ನು ಮೌನಿ ಪ್ರಧಾನಿ ಎಂದ ಇವರ ಅಬ್ಬರ ಎಲ್ಲಿ ಉಡುಗಿ ಹೋಗಿದೆ? ದನಿಯೆತ್ತಿ ಬೆಲೆ ಏರಿಕೆ ವಿರುದ್ಧ ಎಂದು ಆಗ್ರಹಿಸಿದ್ದಾರೆ. ಬೆಲೆ ಏರಿಕೆ ಬಗ್ಗೆ ಜನರ ಆಕ್ರೋಶ ಎಲ್ಲಿ ಆಸೋಟಗೊಂಡು ಬಿಜೆಪಿ ಬುಡಕ್ಕೆಲ್ಲಿ ಬೆಂಕಿ ಬೀಳುತ್ತದೋ ಎಂಬ ಭಯದಿಂದ ಆ ಮುಗ್ಧಜನರ ಮನಸ್ಸನ್ನು ಸೂಕ್ಷ್ಮ ವಿಷಯಗಳ ಕಡೆ ಹೊರಳುವಂತೆ ಮಾಡಲಾಗಿದೆ. 150 ಸೀಟಿನ ರೋಡ್ ಮ್ಯಾಪ್ ಎಲ್ಲಿ ಮಣ್ಣುಪಾಲಾಗುತ್ತದೋ ಎಂದು ಹಿಂದುತ್ವದ ವಿನಾಶಕ್ಕೆ ಹಿಂಸಾಚಾರದ ಶಂಖ ಊದಲಾಗಿದೆ ಎಂದಿದ್ದಾರೆ.

ಮಾಜಿ ಸಿಎಂ, ಮಾಜಿ ಕೇಂದ್ರಮಂತ್ರಿಗಳ ಆದೂ ಡಿ.ವಿ.ಸದಾನಂದಗೌಡರು, ಬೆಲೆ ಏರಿಕೆಗೆ ಹಿಂದಿನ ಯುಪಿಎ ಸರಕಾರ ಕಾರಣ ಎಂದಿದ್ದಾರೆ. 8 ವರ್ಷವಾದರೂ ಯುಪಿಎ ಮಾಡಿದ ತಪ್ಪು ಸರಿ ಮಾಡಲಿಲ್ಲ, ಏಕೆ? ಅಡುಗೆ ಮನೆಗಳಲ್ಲಿ ತಾಯಂದಿರು, ಬೆಲೆ ಏರಿಕೆ ಬೆಂಕಿಯಲ್ಲಿ ಬೇಯುತ್ತಿದ್ದರೆ ನಿಮಗೆ ರಾಜಕೀಯ ಮುಖ್ಯವಾಗಿದೆ. ನಾಚಿಕೆಯಾಗಬೇಕು.

ಬಿಜೆಪಿ ಎಂದರೆ ಭಾರತೀಯ ಜನತಾ ಪಕ್ಷವಲ್ಲ, ಬಡವರ ರಕ್ತಹೀರಿ ಸಿರಿವಂತರ ಖಜಾನೆ ಭರ್ತಿ ಮಾಡುವ ಬಲ್ಲಿದ ಜನರ ಪಕ್ಷ. ಬೆಲೆ ಶೂಲದಿಂದ ಬಡಜನರನ್ನು ಬರ್ಬಾದ್ ಮಾಡುತ್ತಿರುವ ಪಕ್ಷ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಾಕಿಸ್ತಾನದಲ್ಲಿ ಸರಕಾರ ವಿಸರ್ಜಿಸಿ ಹೊಸದಾಗಿ ಚುನಾವಣೆ ನಡೆಸುವಂತೆ ಕೇಳಿಕೊಂಡ ಇಮ್ರಾನ್‌ ಖಾನ್‌ !

Sun Apr 3 , 2022
  ಇಸ್ಲಾಮಾಬಾದ್:‌ ಹಲವಾರು ದಿನಗಳಿಂದ ಪಾಕಿಸ್ತಾನದ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಉಂಟಾಗಿದ್ದು, ಇದೀಗ ಇಂದು ನಡೆದ ಕ್ಷಿಪ್ರ ಘಟನೆಯಲ್ಲಿ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸುವಂತೆ ರಾಜ್ಯಪಾಲರಿಗೆ ಇಮ್ರಾನ್‌ ಖಾನ್‌ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ನಿರೀಕ್ಷಿತ ಅವಿಶ್ವಾಸ ನಿರ್ಣಯಕ್ಕೆ ಮುಂಚಿತವಾಗಿ ಅವರು ನೂತನ ಚುನಾವಣೆ ನಡೆಸುವಂತೆ ಘೋಷಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಜನರನ್ನುದ್ದೇಶಿಸಿ ಮಾತನಾಡಿದ ಇಮ್ರಾನ್‌ ಖಾನ್‌, “ಎಲ್ಲರೂ ಚುನಾವಣೆಗೆ ಸಿದ್ಧರಾಗಿ” ಎಂದು ಕರೆ ನೀಡಿದ್ದಾರೆ. ಸರಕಾರವನ್ನು ಕೆಳಗೆ ಉರುಳಿಸುವ ಪಿತೂರಿಯು […]

Advertisement

Wordpress Social Share Plugin powered by Ultimatelysocial