ಮಳೆ ಕೊರತೆ, ರೋಗಬಾಧೆಗೆ ಬಾರದ ಇಳುವರಿ: ಸಾವಯವ ತರಕಾರಿ ಬೆಳೆಗಾರರಿಗೆ ಸಂಕಷ್ಟ

ಕಾರವಾರ, ಸೆಪ್ಟೆಂಬರ್‌ 10: ಮಾರುಕಟ್ಟೆಗಳಿಗೆ ಅದೆಷ್ಟೇ ಕಡಿಮೆ ಬೆಲೆಗೆ ತರಕಾರಿ ಬಂದರು ಕೂಡ ಜನ ಸಾವಯವ ಕೃಷಿಯ ತರಕಾರಿಗಳನ್ನೇ ಹುಡುಕಿ ಪಡೆಯುತ್ತಾರೆ. ಇದೇ ಕಾರಣಕ್ಕೆ ಪ್ರತಿ ವರ್ಷವೂ ಸಾವಯವ ಪದ್ದತಿ ಮೂಲಕ ತರಕಾರಿ ಬೆಳೆಯುತ್ತಿದ್ದ ಇಲ್ಲೊಂದು ಗ್ರಾಮದ ರೈತರಿಗೆ ಈ ಬಾರಿ ಮಳೆ ಕೊರತೆ ಹಾಗೂ ರೋಗದ ಬಾಧೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ.

 

ಕರಾವಳಿ ತಾಲೂಕುಗಳಲ್ಲಿ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಅದರಲ್ಲಿಯೂ ಕಾರವಾರದಂತಹ ಪ್ರದೇಶಗಳಲ್ಲಿ ನೂರಾರು ಹೆಕ್ಟೇರ್ ಕೃಷಿ ಭೂಮಿಗಳನ್ನು ಪಾಳು ಬಿಡಲಾಗಿದೆ. ಆದರೆ ಇವರುಗಳ ನಡುವೆಯೂ ತಾಲ್ಲೂಕಿನ ಕಡವಾಡ ವ್ಯಾಪ್ತಿಯಲ್ಲಿ ಒಂದಿಷ್ಟು ರೈತರು ಪ್ರತಿ ವರ್ಷವೂ ಇರುವ ತುಂಡು ಭೂಮಿಯಲ್ಲಿಯೇ ಸಾವಯವ ಕೃಷಿ ಮೂಲಕ ತರಕಾರಿಗಳನ್ನು ಬೆಳೆದು ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ.

ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆ

ಕಳೆದ ಎರಡು ತಿಂಗಳ ಅವಧಿಯಲ್ಲಿ ಮಳೆಯಾಗದ ಕಾರಣ ಇದೀಗ ರೈತರ ಬದುಕು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆರಂಭದಿಂದಲೂ ಮಳೆ ಕಡಿಮೆಯಾಗಿ ಕೊನೆಗೆ ಮಧ್ಯಂತರದಲ್ಲಿ ಮಳೆಯಾದಾಗ ತರಕಾರಿ ಬೀಜ ಬಿತ್ತನೆ, ಗೊಬ್ಬರ ಹಾಕುವ ಕಾರ್ಯ ನಡೆಸಿದ್ದರು. ಉತ್ತಮ ಇಳುವರಿಯಾಗಿ ತರಕಾರಿ ಗಿಡ ಹಾಗೂ ಬಳ್ಳಿಗಳು ಸೊಂಪಾಗಿ ಬೆಳೆಯುವ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆ ಕೈಕೊಟ್ಟ ಕಾರಣ ಕಾಯಿಗಳು ಬಿಟ್ಟರು ಕಜ್ಜಿ ರೀತಿ ಬೆಳೆದಿದ್ದು ಪ್ರಯೋಜನಕ್ಕೆ ಬಾರದಂತಾಗಿದೆ. ಮಾತ್ರವಲ್ಲದೆ ಬಳ್ಳಿಗಳು ಕೊಳೆಯಲಾರಂಭಿಸಿದ್ದು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ ಮೂಡತೊಡಗಿದೆ.

ಸಾವಯವ ಕೃಷಿ ಪದ್ದತಿ

ಇನ್ನು ಕಡವಾಡ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ಕೃಷಿಕರಿದ್ದಾರೆ. ಆದರೆ ಬಹುತೇಕರು ಅಲ್ಪ ಜಮೀನಿನಲ್ಲಿಯೇ ಕೊಟ್ಟಿಗೆ ಗೊಬ್ಬರ, ಸೊಪ್ಪು ಬಳಸಿ ಸೌತೆಕಾಯಿ, ಬೆಂಡೆಕಾಯಿ, ಬದನೆ, ಸೋರೆಕಾಯಿ, ಪಡವಲಕಾಯಿ, ಹಾಗಲಕಾಯಿ, ಹೀರೆಕಾಯಿ ಹೀಗೆ ಹತ್ತಾರು ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ಈ ಭಾರಿ ಬಿಸಿಲಿನಿಂದಾಗಿ ಬಳ್ಳಿಗಳು ಬೆಳವಣಿಗೆ ಕಂಡಿಲ್ಲ. ವರ್ಷಗಳಿಗೆ ಹೋಲಿಸಿದರೇ ಇಳುವರಿ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಕಡವಾಡದ ಮಂದ್ರಾಳಿ ರೈತ ಸಂತೋಷ ಗುನಗಿ ಹೇಳಿದ್ದಾರೆ.

ಹಕ್ಕಿಗಳ ಕಾಟಕ್ಕೆ ಬೇಸತ್ತ ರೈತರು

ಇನ್ನು ಬಿಸಿಲು ಮಳೆಯಿಂದ ಇಳುವರಿ ಸಿಗದೆ ಕಂಗಾಲಾಗಿದ್ದ ರೈತರಿಗೆ ಹಕ್ಕಿಗಳ ಕಾಟದಿಂದಾಗಿ ಗಿಡಗಳಲ್ಲಿ ಬಿಟ್ಟ ಕಾಯಿಗಳನ್ನು ಉಳುಸಿಕೊಳ್ಳುವುದು ಹರ ಸಾಹಸವಾಗಿದೆ. ಮುಂಜಾನೆಯಿಂದಲೇ ತರಕಾರಿ ಬಳ್ಳಿಗಳಿಗೆ ಮುತ್ತಿಗೆ ಹಾಕುವ ಹಕ್ಕಿಗಳು ಬೆಳೆಯನ್ನು ಅರೆಬರೆ ತಿಂದಿ ತೆರಳುತ್ತಿವೆ. ಇದರಿಂದ ಆ ತರಕಾರಿ ಬಳಕೆಗೆ ಬಾರದ ಸ್ಥಿತಿ ಇದ್ದು ನಿತ್ಯವೂ ಮುಂಜಾನೆಯಿಂದ ಓರ್ವರು‌ ಕಾವಲು ಕಾಯಬೇಕಾದ ಅನಿವಾರ್ಯತೆ ಇದೆ ಎಂದು ರೈತರು ತಿಳಿಸಿದ್ದಾರೆ.

ಬೇಡಿಕೆ ಹೆಚ್ಚು ಪೂರೈಕೆ ಕಡಿಮೆ

ಕಡವಾಡ ವ್ಯಾಪ್ತಿಯಲ್ಲಿ ಬೆಳೆದ ತರಕಾರಿ ಕಾರವಾರದ ಸ್ಥಳೀಯ ಮಾರುಕಟ್ಟೆಗೆ ಮಾತ್ರವಲ್ಲದೆ ಪಕ್ಕದ ಗೋವಾ ಮಹಾರಾಷ್ಟ್ರಕ್ಕೂ ಪೂರೈಕೆಯಾಗುತ್ತಿದೆ. ಸಾವಯವ ಗೊಬ್ಬರದಿಂದ ಬೆಳೆದ ಈ ತರಕಾರಿಗಳು ರುಚಿಕಟ್ಟಾಗಿರುವ ಜನ ಇದನ್ನು ಕೇಳಿ ಪಡೆಯುತ್ತಾರೆ. ಆದರೆ ಈ ಭಾರೀ ಮಳೆ ಹಾಗೂ ಬಿಸಿಲಿನಿಂದ ಇಳುವರಿ ಕಡಿಮೆಯಾಗಿದೆ. ಇದರಿಂದ ಮಾರುಕಟ್ಟೆಗೆ ಪೂರೈಕೆ ಕೂಡ ಕಡಿಮೆಯಾಗಿದ್ದು, ರೈತರು ಹೋಲ್ ಸೇಲ್ ಮಾರಾಟ ಮಾಡುವ ಕಾರಣ ಅಲ್ಪ ಲಾಭ ಸಿಗುವಂತಾಗಿದೆ ಎಂದು ತರಕಾರಿ ಬೆಳೆಗಾರರು ತಿಳಿಸಿದ್ದಾರೆ.

ಕಣ್ಣೆತ್ತಿಯೂ ನೋಡದ ಅಧಿಕಾರಿಗಳು

ಇನ್ನು ಸಾವಯವ ಕೃಷಿ ಮಾಡುವವರ ಸಂಖ್ಯೆ ತೀರಾ ಕಡಿಮೆ.‌ ಆದರೆ ಈ ಗ್ರಾಮದಲ್ಲಿ ರೈತರು ಸಾವಯವ ಕೃಷಿ ಪದ್ದತಿ ಅನುಸರಿಸುತ್ತಿದ್ದರೂ ಕೂಡ ಅವರಿಗೆ ಸರ್ಕಾರದಿಂದ ಯಾವುದೇ ಪ್ರೋತ್ಸಾಹ ಇಲ್ಲ. ಇದೀಗ ಬ್ಯಾಂಕ್ ಗಳಲ್ಲಿ ಸಾಲ ಮಾಡಿ ಬೆಳೆ ಬೆಳೆಯಲಾಗಿತ್ತು. ಆದರೆ ಬಿಸಲು ಮಳೆಯಿಂದಾಗಿ ಇಳುವರಿ ಬಾರದೆ ಸಾಲ ತುಂಬುವುದಕ್ಕೂ ಸಾಧ್ಯವಾಗದ ಸ್ಥಿತಿ ಇದೆ. ಇಷ್ಟಾದರೂ ಕೂಡ ಯಾರೊಬ್ಬರು ಅಧಿಕಾರಿಗಳು ಕಣ್ಣೆತ್ತೇಯೂ ನೋಡುತ್ತಿಲ್ಲ. ಯಾವುದೇ ಪರಿಹಾರ ದೊರೆಯುತ್ತಿಲ್ಲ.‌ ಸರ್ಕಾರ ನಮಗಾದ ಹಾನಿಗಳನ್ನು ಪರಿಗಣನೆಗೆ ಪಡೆದು ಪರಿಹಾರ ನೀಡಬೇಕು ಎಂಬುದು ಕಡವಾಡದ ರೈತ ಮಹಿಳೆ ರಜನಿ ಗುನಗಿ ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಸಾವಯವ ಕೃಷಿಯ ಮೂಲಕ ಬದುಕು ಕಟ್ಟಿಕೊಳ್ಳುತ್ತಿದ್ದವರಿಗೆ ಮಳೆ ದೊಡ್ಡ ಆಘಾತ ನೀಡಿದೆ.‌ ಇರುವ ಅಲ್ಪ ಜಮೀನಿನಲ್ಲಿಯೇ ಉತ್ಸಾಹವಹಿಸಿ ಸಾವಯವ ಕೃಷಿ ಪದ್ದತಿ ಮೂಲಕ ಬೆಳೆ ಬೆಳೆಯುವವರ ಹಾನಿಗೆ ಸರ್ಕಾರ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕಾಗಿದೆ.

Please follow and like us:

tmadmin

Leave a Reply

Your email address will not be published. Required fields are marked *

Next Post

ಶಿವಾಜಿಯ 'ವಾಘ್ ನಖ್' ಡ್ಯಾಗರ್ ಬ್ರಿಟನ್‌ನಿಂದ ವಾಪಸ್ ತರಲಾಗುವುದು: ಕೇಂದ್ರ

Sun Sep 10 , 2023
ನವದೆಹಲಿ: ಮರಾಠ ರಾಜ ಛತ್ರಪತಿ ಶಿವಾಜಿಗೆ ಸಂಬಂಧಿಸಿದ ಅಪರೂಪದ ಕಲಾಕೃತಿಯನ್ನು ಯುನೈಟೆಡ್ ಬ್ರಿಟನ್‌ನಿಂದ ಸ್ವದೇಶಕ್ಕೆ ತರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ತಿಳಿಸಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಸಚಿವಾಲಯವು, ‘ನಮ್ಮ ಅಮೂಲ್ಯವಾದ ಕಲಾಕೃತಿಗಳನ್ನು ಸ್ವದೇಶಕ್ಕೆ ವಾಪಸ್ ತರುತ್ತಿರುವುದು ಭಾರತದ ರಾಜತಾಂತ್ರಿಕ ಪ್ರಯತ್ನಗಳಿಗೆ ದೊಡ್ಡ ಗೆಲುವು’ ಎಂದು ಅದು ಹೇಳಿದೆ. ಶನಿವಾರ ದೆಹಲಿಯಲ್ಲಿ ಆರಂಭವಾದ ಜಿ 20 ನಾಯಕರ ಶೃಂಗಸಭೆಯ ಸಂದರ್ಭದಲ್ಲೇ ಈ ಘೋಷಣೆ ಆಗಿದೆ. ‘ನಮ್ಮ […]

Advertisement

Wordpress Social Share Plugin powered by Ultimatelysocial