ಸಿಎಂ ಇಬ್ರಾಹಿಂ ಕುರಿತಂತೆ ಮೊದಲಿಗೆ ಸಹಾನುಭೂತಿ ತೋರುತ್ತಿದ್ದವರಿಂದಲೇ ಈಗ ಚಾಟಿ

ವಿಧಾನ ಪರಿಷತ್ತಿನ ವಿಪಕ್ಷ ನಾಯಕನ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಪ್ರತಿದಿನವೂ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುತ್ತಿರುವ, ಕಾಂಗ್ರೆಸ್ ಬಗ್ಗೆ ಅಸಮಾಧಾನಗೊಂಡಿರುವ ಎಸ್.ಆರ್. ಪಾಟೀಲ್ ಮತ್ತು ಕಾಂಗ್ರೆಸಿನಿಂದ ಉಚ್ಛಾಟಿತಗೊಂಡಿರುವ ರೋಷನ್ ಬೇಗ್ ಭೇಟಿ ಮಾಡಿ ‘ಮಹತ್ವದ ಚರ್ಚೆ’ ನಡೆಸಿರುವ, ಜೆಡಿಎಸ್ ನಾಯಕರ ಮನೆ ಬಾಗಿಲಲ್ಲೇ ಬಿಡಾರ ಹೂಡಿರುವ ಸಿ.ಎಂ. ಇಬ್ರಾಹಿಂ ನಡೆ ಬಗ್ಗೆ ಈಗ ಕಾಂಗ್ರೆಸ್ ಪಕ್ಷದಲ್ಲಿ ವ್ಯಾಪಕ ವಿರೋಧ ಆಗುತ್ತಿದೆ.‘ಇಬ್ರಾಹಿಂ ಅವರದು ಅತಿಯಾಯಿತು’ ಎಂಬ ಭಾವನೆ ಬೆಳೆಯುತ್ತಿದೆ. ಮೊದಲಿಗೆ ಸಹಾನುಭೂತಿ ತೋರುತ್ತಿದ್ದವರೇ ಈಗ ಸಹನೆ ಕಳೆದುಕೊಳ್ಳುತ್ತಿದ್ದಾರೆ. ಅದಕ್ಕೆ ಬಹಳ ಒಳ್ಳೆಯ ಉದಾಹರಣೆ ಎಂದರೆ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಕೆ.ಎಸ್.ಟಿ.ಡಿ.ಸಿ ಮಾಜಿ ಅಧ್ಯಕ್ಷರಾದ ಸೈಯದ್ ಅಹಮದ್ ಹುಸೇನ್ ಅವರು ಹೊರಡಿಸಿರುವ ಪತ್ರಿಕಾ ಪ್ರಕಟಣೆ.ಕಳೆದ ವಾರ ವಿಧಾನ ಪರಿಷತ್ತಿನ ವಿಪಕ್ಷ ನಾಯಕನ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದ ಸಿ.ಎಂ. ಇಬ್ರಾಹಿಂ ತಾಳ್ಮೆ ಕಳೆದುಕೊಳ್ಳಬಾರದು, ಪಕ್ಷ ಬಿಡುವ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಬೇಕೆಂದು ‘ಆಪ್ತ ಮನವಿ’ ಮಾಡಿದ್ದ ಸೈಯದ್ ಅಹಮದ್ ಹುಸೇನ್ ಅವರು ಈಗ ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯ ಅವರು ಸಿ.ಎಂ. ಇಬ್ರಾಹಿಂ ಅವರಿಗೆ ಏನೇನು ಕೊಡುಗೆ ಕೊಟ್ಟಿದೆ ಎಂದು ಉಲ್ಲೇಖಿಸಿ ಅಂಥದ್ದರಲ್ಲೂ ಇಬ್ರಾಹಿಂ ಹೀಗೆ ನಡೆದುಕೊಳ್ಳುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಚಾಟಿ ಬೀಸಿದ್ದಾರೆ. ಅವರ ಪತ್ರಿಕಾ ಪ್ರಕಟಣೆಯ ಪೂರ್ಣ ಪಾಠವನ್ನು ‘ಪ್ರತಿಧ್ವನಿ’ ನಿಮ್ಮ ಮುಂದಿಡುತ್ತಿದೆ.ಕ್ರೀಯಾಶೀಲ ಮತ್ತು ಸಜ್ಜನರೂ ಆದ ಶಾಸಕ ಯು.ಟಿ. ಖಾದರ್ ಅವರನ್ನು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕನನ್ನಾಗಿ ನೇಮಿಸಿರುವುದಕ್ಕೆ ಎಐಸಿಸಿಯ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿ, ಹೈಕಮಾಂಡ್ ನಾಯಕರು, ರಾಜ್ಯ ವಿಧಾನಸಭೆಯ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದಗಳು. ಹಾಗೆಯೇ ಯು.ಟಿ. ಖಾದರ್ ಮತ್ತು ನಾನು 2010ರಲ್ಲಿ ಕೆಪಿಸಿಸಿ ಪದಾಧಿಕಾರಿಗಳಾಗಿ ಒಟ್ಟಿಗೆ ಕೆಲಸ ಮಾಡಿದ್ದೆವು. ಈಗ ಅವರ ಅರ್ಹತೆಯನ್ನು ಗುರುತಿಸಿ ಅವರನ್ನು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕನನ್ನಾಗಿ ನೇಮಿಸಲಾಗಿದೆ. ಯು.ಟಿ. ಖಾದರ್ ಅವರಿಗೆ ಮತ್ತು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೊಹಮ್ಮದ್ ನಲ್ಪಾಡ್ ಅವರಿಗೆ ಅಭಿನಂದನೆಗಳು.ವಿಧಾನ ಪರಿಷತ್ತಿನ ವಿಪಕ್ಷ ನಾಯಕನ ಸ್ಥಾನ ಸಿಗದೇ ಇದ್ದ ಕಾರಣಕ್ಕೆ ಸಿ.ಎಂ. ಇಬ್ರಾಹಿಂ ಅಸಮಾಧಾನಗೊಂಡಿದ್ದಾರೆ. ಇದರಿಂದ ಅಲ್ಪಸಂಖ್ಯಾತರೂ ಅಸಮಾಧಾನಗೊಂಡಿದ್ದಾರೆ. ಆ ಕಾರಣಕ್ಕೆ ಯು.ಟಿ. ಖಾದರ್ ಅವರನ್ನು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕನನ್ನಾಗಿ ನೇಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಕೆಲವು ಪ್ರಮುಖ ವಿಷಯವನ್ನು ರಾಜ್ಯದ ಜನರ ಮುಂದೆ ಹೇಳಲೇಬೇಕಿದೆ.ಮೊದಲನೆಯದಾಗಿ ಅಲ್ಪಸಂಖ್ಯಾತರು ವ್ಯಕ್ತಿ ಪೂಜೆ ಮಾಡುವವರಲ್ಲ. ಸಿಎಂ ಇಬ್ರಾಹಿಂ ಅಲ್ಪಸಂಖ್ಯಾತ ಸಮುದಾಯಕ್ಕೆ ಅನಿವಾರ್ಯವೂ ಅಲ್ಲ. ಅಲ್ಪಸಂಖ್ಯಾತರೂ ಎಂದೆಂದಿಗೂ ವಿಚಾರಧಾರೆ ಜೊತೆಗಿರುವವರು. ಹಾಗೆಯೇ ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆಯುಳ್ಳವರು. 2013ರಲ್ಲಿ ಸಾಮೂಹಿಕ ನಾಯಕತ್ವದಡಿ ಚುನಾವಣೆ ಮಾಡಲಾಯಿತು. ಆಗ ನಸೀರ್ ಅಹಮದ್ ಕೆಪಿಸಿಸಿಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿದ್ದರು. ಬೆಂಗಳೂರು ವಿಭಾಗದಲ್ಲಿ ಜಾಫರ್ ಷರೀಫ್, ಗುಲ್ಬರ್ಗ ವಿಭಾಗದಲ್ಲಿ ಖಮರುಲ್ ಇಸ್ಲಾಂ, ಮಂಗಳೂರು ವಿಭಾಗದಲ್ಲಿ ಯು.ಟಿ. ಖಾದರ್, ಮೈಸೂರು ವಿಭಾಗದಲ್ಲಿ ತನ್ವೀರ್ ಸೇಠ್ ಇದ್ದರು. ಅಲ್ಲದೆ ಆಗ ಕೇಂದ್ರ ಸಚಿವರಾದ ರೆಹಮಾನ್ ಖಾನ್ ಇದ್ದರು. ಇವರೆಲ್ಲಾ ಚುನಾವಣಾ ಕೆಲಸ ಮಾಡುತ್ತಿದ್ದಾಗ ಸಿ.ಎಂ. ಇಬ್ರಾಹಿಂ ತಮಗೆ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದರು. ಬಳಿಕ ಸ್ವಂತದ ಚುನಾವಣೆಯಲ್ಲಿ ಬ್ಯುಸಿಯಾಗಿದ್ದರು. ಆಗ ಅಲ್ಪಸಂಖ್ಯಾತರು ಬೆಂಬಲಿಸಿದ್ದು ಮೇಲೆ ಉಲ್ಲೇಖಿಸಿದ ಎಲ್ಲರನ್ನೂ. ಸಿ.ಎಂ. ಇಬ್ರಾಹಿಂ ಅವರೊಬ್ಬರನ್ನೇ ಅಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕ್ಯಾಂಪಸ್ ಫ್ರಂಟ್ ವತಿಯಿಂದ ಉಡುಪಿಯಲ್ಲಿ ವಿಶ್ವ ಹಿಜಾಬ್ ದಿನಾಚರಣೆ

Wed Feb 2 , 2022
ವಿಶ್ವ ಹಿಜಾಬ್ ದಿನಾಚರಣೆಯ ಅಂಗವಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಉಡುಪಿಯ ದುರ್ಗಾ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ವಿಚಾರ ಸಂಕಿರಣ ನಡೆಯಿತು.ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಆಯಿಶಾ ಮುರ್ಶಿದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿ, ಇಂದು ಹಿಜಾಬ್ ಮುಸ್ಲಿಂ ಮಹಿಳೆಯರ ಘನತೆ ಹಾಗೂ ರಕ್ಷಣೆಯ ಕವಚವಾಗಿದೆ. ಆದರೆ ಸಂಘ ಪರಿವಾರ ಇಂದು ತನ್ನ ರಾಜಕೀಯ ಷಡ್ಯಂತ್ರದ ಭಾಗವಾಗಿ ಮುಸ್ಲಿಂ […]

Advertisement

Wordpress Social Share Plugin powered by Ultimatelysocial