ಅಶರೀರವಾಣಿ ಆಶ್ಚರ್ಯ!

ಹೊರಗಿನಿಂದ ಬರುವ ಸಮಸ್ಯೆಗಳು ಒಂದು ರೀತಿಯವು ಎಂದರೆ, ನಾವೇ ಏನೋ ಮಾಡಲು ಹೋಗಿ ಮೈಮೇಲೆ ಹಾಕಿಕೊಳ್ಳುವ ಸಮಸ್ಯೆಗಳೂ ಉಂಟು! ಜೆನ್ ಮತದಲ್ಲಿ ಇದನ್ನು ಕುರಿತು ಒಂದು ಕಥೆ ಇದೆ.
ಅದು ಒಂದು ಗ್ರಾಮ. ಒಂದು ದಿವಸ ಗ್ರಾಮಕ್ಕೆ ಜೆನ್ ಸಂನ್ಯಾಸಿಯೊಬ್ಬ ಬಂದ. ಊರಜನರಲ್ಲಿ ಕೆಲವರು ‘ನನ್ನ ಸಮಸ್ಯೆಗಳಿಗೆಲ್ಲ ಪರಿಹಾರ ದೊರಕಬೇಕು, ನಾನು ಬಯಸಿದ್ದೆಲ್ಲ ನಡೆಯಬೇಕು. ಹೀಗಿಷ್ಟು ಮಾತ್ರ ಜರುಗಿಬಿಟ್ಟರೆ ನನ್ನ ಬದುಕು ಸಂತೋಷವಾಗಿರುತ್ತದೆ” ಎಂದೆಲ್ಲ ಸಂನ್ಯಾಸಿಗೆ ಹೇಳಿದರು. ಎಲ್ಲವನ್ನೂ ಮೌನವಾಗಿ ಕೇಳಿಸಿಕೊಂಡ ಸಂನ್ಯಾಸಿ ಮರುದಿವಸ ಗ್ರಾಮದಲ್ಲಿ ಒಂದು ಅಶರೀರವಾಣಿ ಕೇಳುವಂತೆ ಮಾಡಿದ:
‘ನಾಳೆ ಹಗಲು ಹನ್ನೆರಡು ಗಂಟೆಗೆ ಈ ಗ್ರಾಮದಲ್ಲಿ ಒಂದು ಅತಿಶಯವಾದದ್ದು ನಡೆಯಲಿದೆ. ಹೌದು. ನಿಮ್ಮ ಎಲ್ಲ ಕಲ್ಪನೆಗಳನ್ನೂ ಒಂದು ಕಲ್ಪನೆಯ ಗೋಣಿಚೀಲದಲ್ಲಿ ಹಾಕಿ ಕಟ್ಟಿ ತೆಗೆದುಕೊಂಡು ಹೋಗಿ ಹೊಳೆಯ ಇನ್ನೊಂದು ದಡದಲ್ಲಿ ಹಾಕಿಬಿಡಿ. ಆಮೇಲೆ ಅದೇ ಕಲ್ಪನೆ ಗೋಣಿಚೀಲದಲ್ಲಿ ಮನೆ, ಒಡವೆ, ಆಹಾರ ಅಂತ ನಿಮಗೇನು ಬೇಕೋ ಅದನ್ನೆಲ್ಲ ಹಾಕಿಕೊಂಡು ಊರಿಗೆ ವಾಪಸ್ಸಾಗುತ್ತಿದ್ದೇವೆ ಎಂದು ಕಲ್ಪನೆ ಮಾಡಿಕೊಳ್ಳಿ! ನಿಮ್ಮ ಕಲ್ಪನೆಯೆಲ್ಲ ನಿಜವಾಗುತ್ತದೆ.’
‘ಈ ಅಶರೀರವಾಣಿ ನಿಜವೆ, ಅಲ್ಲವೆ?’ – ಎನ್ನುವುದರ ಬಗ್ಗೆಯೇ ಊರಜನರಿಗೆ ಗೊಂದಲ. ಆದರೂ ಅಶರೀರವಾಣಿಯ ಮಾತುಗಳು ಅವರಿಗೆ ಭ್ರಮೆಗೊಳಗಾಗುವಂತೆ ಮಾಡಿತು. ‘ಅದು ಹೇಳಿದಂತೆ ಮಾಡಿದರೆ, ನಮಗೆ ಒಳ್ಳೆಯದು ತಾನೆ! ಸಮಸ್ಯೆಗಳೆಲ್ಲ ಪರಿಹಾರವಾಗಿ ನಮ್ಮಾಸೆಗಳೆಲ್ಲ ನೆರವೇರಿದರೆ ಒಳ್ಳೆಯದಲ್ಲವೆ? ಅಶರೀರವಾಣಿ ಸುಳ್ಳಾದರೆ ನಮಗೇನೂ ನಷ್ಟವಿಲ್ಲವಲ್ಲ. ಆದ್ದರಿಂದ ಅದು ಹೇಳಿದ ಹಾಗೆ ಮಾಡಿಯೇ ನೋಡಿದರೇನು!’ ಎಂದುಕೊಂಡೇ ಮರುಹಗಲು ಹನ್ನೆರಡು ಗಂಟೆಗೆ ಊರ ಜನ ತಮ್ಮ ಸಮಸ್ಯೆಗಳನ್ನು ಮೂಟೆಕಟ್ಟಿಕೊಂಡು ಹೋಗಿ, ಹೊಳೆಯ ಆಚೆ ಬದಿ ದಂಡೆಯಲ್ಲಿ ಚೆಲ್ಲಿ, ಬಂಗಲೆ, ವಜ್ರದ ನೆಕ್ಲೇಸ್, ಕಾರು ಎಂದು ತಮಗೆ ಸಂತೋಷವೆನಿಸುವ ಎಲ್ಲವನ್ನೂ ಕಲ್ಪನೆಯ ಮೂಟೆಯಲ್ಲಿ ತುಂಬಿಕೊಂಡು ಬಂದು ಊರು ಸೇರಿದರು!
ಹಿಂತಿರುಗಿದವರು ಆಶ್ಚರ್ಯದಿಂದ ಬೆಚ್ಚಿ ಬೆರಗಾಗುವ ಹಾಗೆ, ಆ ಅಶರೀರವಾಣಿ ಹೇಳಿದ್ದು ಹಾಗೆಯೇ ಫಲಿಸಿಹೋಗಿತ್ತು. ಕಾರು ಬೇಕು ಎಂದು ಆಸೆಪಟ್ಟವರ ಮನೆಯ ಮುಂದೆ ನಿಜವಾಗಲೂ ಕಾರೊಂದು ಬಂದು ನಿಂತಿತ್ತು. ಮಹಡಿ ಮನೆ ಬೇಕೆಂದು ಕೇಳಿದವರ ಹಳೆಮನೆ ಮಹಡಿ ಮನೆಯಾಗಿಹೋಗಿತ್ತು. ಎಲ್ಲರಿಗೂ ಸಂತೋಷ ತಡೆಯಲಾಗಲಿಲ್ಲ. ಆದರೆ ಆ ಸಂತೋಷ ಸ್ವಲ್ಪ ಹೊತ್ತು ಮಾತ್ರ.
ತಮಗಿಂತಲೂ ಅಕ್ಕಪಕ್ಕದ ಮನೆಯವರು ಇನ್ನೂ ಐಶ್ವರ್ಯಸುಖದಿಂದ ಇರುವ ಹಾಗೆ ಒಬ್ಬೊಬ್ಬರಿಗೂ ತೋರಿತು. ಹೀಗೇಕೆ ಎಂದು ತನಿಖೆಮಾಡಲು ಪ್ರಾರಂಭಿಸಿದರು. ಮರುಕ್ಷಣವೇ ದೊಡ್ಡ ಚಿಂತೆ ಬಂದು ಅವರನ್ನೆಲ್ಲ ಆವರಿಸಿಕೊಂಡುಬಿಟ್ಟಿತು!
‘ಅಯ್ಯಯ್ಯೋ! ನಾವು ಒಂದೇ ಎಳೆ ಬಂಗಾರದ ಚೈನು ಕೇಳ್ಬಿಟ್ವಿ. ಅದೇ ಸಿಕ್ತು. ಆದ್ರೆ ಪಕ್ಕದ್ಮನೆ ಹುಡುಗಿ ಮೂರು ಎಳೆ ಬಂಗಾರದ ಚೈನ್ ಕೇಳಿ ತೊಗೊಂಡ್ಬಿಟ್ಟಿದ್ದಾಳೆ! ನಾವು ಬರೀ ಮನೆ ಕೇಳಿದ್ವಿ. ಎದುರು ಮನೆಯೋನು ರಾಜಾಸ್ಥಾನ್ ಟೈಲ್ಸ್ ಹಾಕಿರೋ ದೊಡ್ಡ ಬಂಗಲೇನೇ ಕೇಳಿ ಪಡ್ಕೊಂಬಿಟ್ಟಿದ್ದಾನೆ. ನಾವೂ ಹಾಗೇ ಕೇಳ್ಬಹುದಾಗಿತ್ತು. ಎಂಥ ಅವಕಾಶವನ್ನು ಕಳ್ಕೊಂಡ್ಬಿಟ್ವಿ!’ ಎಂದು ಸಂಕಟಪಟ್ಟು ಮತ್ತೆ ಆ ಸಂನ್ಯಾಸಿಯನ್ನು ಸಂಧಿಸಿ ಗೋಳಾಡಲು ಪ್ರಾರಂಭಿಸಿಬಿಟ್ಟರು. ಮತ್ತೊಮ್ಮೆ ಆ ಊರನ್ನು ಅನಾಸಕ್ತಿ ಆಕ್ರಮಿಸಿಕೊಂಡಿತು.
ಸಮಸ್ಯೆಗಳು ಇದ್ದರೆ ಸಂತೋಷವಾಗಿರಲು ಸಾಧ್ಯವಿಲ್ಲ ಎಂದೇ ಹಲವರು ಭಾವಿಸಿಕೊಳ್ಳುತ್ತಾರೆ. ಇವರಿಗೆಲ್ಲ ನಾನು ಹೇಳುವುದು ಇಷ್ಟೇ –
ಸಮಸ್ಯೆಗಳನ್ನು ಸಂತೋಷದೊಂದಿಗೆ ಜೋಡಿಸಿ ನೋಡಬೇಡಿ! ಸಮಸ್ಯೆಗಳು ಎಲ್ಲರ ಬದುಕಿನಲ್ಲೂ ಇರುತ್ತವೆ. ಸಮಸ್ಯೆಗಳು ಒಂದು ಕಡೆ ಇದ್ದುಬಿಟ್ಟು ಹೋಗಲಿ. ನಾನು ಸಂತೋಷವಾಗಿರುತ್ತೇನೆ ಎಂದು ಪ್ರತಿಯೊಬ್ಬರೂ ಉತ್ಸಾಹದಿಂದ ಇರಬೇಕು. ಹೀಗೆ ಹೇಳುವುದರಿಂದ ಸಮಸ್ಯೆಗಳಿಗೆ ಪರಿಹಾರ ಏನು ಎಂದು ಆಲೋಚಿಸಬೇಡಿ ಎಂದು ನಾನು ಹೇಳುತ್ತಿದ್ದೇನೆಂದು ಅರ್ಥವಲ್ಲ.
ಶ್ರೀಕೃಷ್ಣನಿಗಿಂತಲೂ ಮಿಗಿಲಾಗಿ ಬೇರೆಯವರಿಗೆ ಸಮಸ್ಯೆಗಳು ಕಾಡಿದ್ದುಂಟೆ? ಗರ್ಭ ಸೇರಿಕೊಂಡಾಗಿನಿಂದಲೂ ಕೃಷ್ಣನನ್ನು ಕೊಲ್ಲುವುದಕ್ಕೆ ಅವನ ಸೋದರಮಾವ ಕಂಸ ಪ್ರಯತ್ನಮಾಡುತ್ತಲೇ ಇದ್ದನಲ್ಲವೆ? ಯುದ್ಧಭೂಮಿಯಲ್ಲಿ ಯಾವ ಅರ್ಜುನನಿಗಾಗಿ ಅವನು ರಥ ಓಡಿಸಿಕೊಂಡು ಹೋದನೋ ಆ ಅರ್ಜುನನೇ ‘ಅಯ್ಯಯ್ಯೋ! ನಾನು ಯುದ್ಧ ಮಾಡುವುದಿಲ್ಲ’ ಎಂದು ಬಿಲ್ಲುಬಾಣವನ್ನು ಬಿಸಾಡಿ ಕೊನೆಘಳಿಗೆಯಲ್ಲಿ ತಲೆನೋವು ಕೊಡಲಿಲ್ಲವೆ? ಕುರುಕ್ಷೇತ್ರ ರಣಾಂಗಣದಲ್ಲಿ ಒಂದೊಂದು ದಿನವೂ ಒಂದೊಂದು ಸಮಸ್ಯೆ! ಅದನ್ನೆಲ್ಲ ಸುಧಾರಿಸಿಕೊಳ್ಳುವಾಗಲೆಲ್ಲ ಕೃಷ್ಣನ ಮುಖದಿಂದ ಆ ಮುಗುಳುನಗೆ ಒಂದು ಸಲವೂ ಮರೆಯಾಗಲಿಲ್ಲವಲ್ಲ!
ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿರುವುದು ಇದನ್ನೇ! ‘ಸುಖ-ದುಃಖ ಎರಡನ್ನೂ ಸಮವಾಗಿ ಸ್ವೀಕರಿಸಲು ಕಲಿತುಕೊಳ್ಳಬೇಕು. ನೋವು-ನಲಿವು ಎಂಥದ್ದಾಗಿದ್ದರೂ ಅದರಿಂದ ಸರಿಯಾದ ಪಾಠ ಕಲಿತುಕೊಂಡರೆ ಬೆಳಕು ಕಾಣುತ್ತದೆ. ಆ ಬೆಳಕು ಆನಂದವನ್ನು ಕೊಡುತ್ತದೆ!’
– ಸ್ವಾಮಿ ಸುಖಬೋಧಾನಂದರು, ‘ಮನಸ್ಸೇ ರಿಲ್ಯಾಕ್ಸ್ ಪ್ಲೀಸ್!’ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗಂಡಸರಿಗೆ ಅರ್ಥವಾಗದ್ದು

Wed Mar 9 , 2022
ಗಂಡಸರಿಗೆ ಅರ್ಥವಾಗದ್ದು ಇತ್ತೀಚಿಗೆ ಒಂದು ಮದುವೆ ಮನೆಯಲ್ಲಿ ಒಂದಷ್ಟು ಜನ ಸೇರಿದ್ದೆವು. ಈ ಸಂದರ್ಭಗಳಲ್ಲಿ ಇರುವ ಹಾಗೆ ದಿಕ್ಕು ದೆಸೆ ಇಲ್ಲದ ಹರಟೆ ತಲೆಎತ್ತಿತು. ಆ ಗುಂಪಿನಲ್ಲಿ ಗಂಡಸರೇ ಇದ್ದರು. ಹೆಂಗಸರೆಲ್ಲ ಝಗಮಗಿಸುವ ಸೀರೆಗಳನ್ನಿಟ್ಟುಕೊಂಡು ಜೋರಾಗಿ ಮಾತನಾಡುತ್ತ ಮದುವೆಗೆ ಸಂಭ್ರಮ ತರುತ್ತಿದ್ದರು. ಯಾರೋ ಇನ್ನೊಬ್ಬರಿಗೆ ಕೇಳಿದರು ‘ನಿಮ್ಮ ಹೆಂಡತಿ ಏನು ಮಾಡುತ್ತಾರೆ’. ಅವರು ತುಸು ಹೆಮ್ಮೆಯಿಂದಲೇ, ‘ಆಕೆ ಕೆ.ಎ.ಎಸ್ ಆಗಿದ್ದಾಳಲ್ಲ. ಈಗ ಅಸಿಸ್ಟಂಟ್ ಕಮಿಷನರ್ ಆಗಿದ್ದಾಳೆ. ಇನ್ನೇನು ಐ.ಎ.ಎಸ್. ಬಂದುಬಿಡುತ್ತದೆ` […]

Advertisement

Wordpress Social Share Plugin powered by Ultimatelysocial