ಅಮೀರ್ ಖಾನ್

 
ಚಿತ್ರರಂಗದ ಪ್ರಖ್ಯಾತ ನಟ ಅಮೀರ್ ಖಾನ್ ಹುಟ್ಟಿದ ದಿನ ಮಾರ್ಚ್ 14, 1965. ಅಮೀರ್ ಖಾನ್ ಒಬ್ಬ ಜನಪ್ರಿಯ ನಟ ಎಂಬುದಕ್ಕಿಂತ ಆತ ಕ್ರಿಯಾಶೀಲವಾಗಿ ತಾನಿರುವ ಚಿತ್ರ ಮಾಧ್ಯಮವನ್ನು ಉಪಯೋಗಿಸಿದ್ದಾನೆ ಎಂಬ ಕಾರಣಕ್ಕಾಗಿ ಆತನ ಬಗ್ಗೆ ಚಿಂತಿಸುವಂತಾಗುತ್ತದೆ.
ಪುಟ್ಟ ಹುಡುಗನಾಗಿ ತನ್ನ ಮಿನುಗುವ ಕಂಗಳಿಂದ ‘ಯಾದೋಂಕಿ ಬಾರಾತ್’ ಸಿನಿಮಾದಲ್ಲಿ ಕಂಡ ಅಮೀರ್, ಮುಂದೆ ‘ಪಾಪಾ ಕೆಹತೆ ಹೈ ಬಡಾ ನಾಮ್ ಕರೇಗ’ ಎನ್ನುತ್ತಾ ಯುವಕನಾಗಿ ಬಂದ. ಆಕರ್ಷಣೆಯ ದೃಷ್ಟಿಯಿಂದ ಮತ್ತೊಬ್ಬ ಖಾನನಾಗಿ, ಚೆಲುವನಾಗಿ ಚಿತ್ರರಂಗದಲ್ಲಿ ಕಾಣುತ್ತಿದ್ದ ಅಮೀರ್, ಸಿನಿಮಾದವರ ದಿನಬೆಳಗಾದರೆ ಎಲ್ಲರಿಗೂ ಒಂದೊಂದು ಎಂದು ಹಂಚುವ ಪ್ರಶಸ್ತಿಗಳು; ದೊಡ್ಡ ಬ್ಯಾನರುಗಳು ಎಂದು ಅದೇ ಮರ ಸುತ್ತಿಸಿ ಸೃಷ್ಟಿಸುತ್ತಿದ್ದ ಚುರುಮುರಿಗಳಂತಹ ಚಿತ್ರಗಳ ನಿರ್ಮಾಪಕರನ್ನು ಕ್ಯಾರೆ ಅನ್ನದೆ ದೂರ ಇಟ್ಟು ಹೊಸ ರೀತಿಯಲ್ಲಿ ಇಮೇಜುಗಳ ಹುಡುಕಾಟದಲ್ಲಿ ತನ್ನ ಪಾತ್ರಗಳನ್ನು ಆಯತೊಡಗಿದ. ‘ಜೋ ಜೀತಾ ವಹೀ ಸಿಕಂದರ್’, ‘ರಂಗೀಲ’, ‘ಸರ್ಫರೋಷ್’, ‘ಗುಲಾಂ’ ಇತ್ಯಾದಿಗಳು ಆತನನ್ನು ಸಾಮಾನ್ಯರ ಮಧ್ಯೆ ಕೂಡಾ ವಿಭಿನ್ನವಾಗಿ ತೋರಿದವು.
ಹೀಗೆ ತನ್ನ ನೆಲೆಯನ್ನು ಅರಸುತ್ತ ಹೊರಟ ಅಮೀರ್ ತಾನೇ ನಿರ್ಮಾಪಕನಾಗಿ ಅಶುತೋಶ್ ಗೌರೀಕರ್ ನಿರ್ದೇಶನದಲ್ಲಿ ಮೂಡಿಸಿದ ‘ಲಗಾನ್’ ಚಿತ್ರದ ಮೂಲಕ ವಿಶ್ವವ್ಯಾಪಿಯಾಗಿಬಿಟ್ಟ. ಅದೇ ಸಮಯದಲ್ಲಿ ಬಂದ, ನವ ಯುವಕ ಫರಾನ್ ಅಖ್ತರ್ ನಿರ್ದೇಶನದ ‘ದಿಲ್ ಚಾಹ್ತಾ ಹೈ’ ಕೂಡ ಅಮೀರ್ ಖಾನನ ಹೊಸತನ ಹುಡುಕುವಿಕೆಗೆ ಸಂದ ಗೆಲುವಾಗಿತ್ತು.
ಲಗಾನ್ ವಿಶ್ವಪ್ರಸಿದ್ಧಿಗೆ ಹೊಂದಿಕೊಂಡಂತೆ ಆತನ ವೈಯಕ್ತಿಕ ಬುದುಕು ಗೊಂದಲಕ್ಕೆ ಸಿಲುಕಿ ಕೆಲ ಸಮಯ ಚಿತ್ರರಂಗದಿಂದ ದೂರವಿದ್ದ ಅಮೀರ್ ‘ತಾರೆ ಜಮೀನ್ ಪರ್’ ನಿರ್ಮಾಣ ಮತ್ತು ನಿರ್ದೇಶದ ಮೂಲಕ ತನ್ನ ಸಾಮರ್ಥ್ಯವನ್ನು ಲೋಕಕ್ಕೆ ಇನ್ನಿಲ್ಲದಂತೆ ಪರಚಯಿಸಿಕೊಟ್ಟ. ತನ್ನ ಹೊಸತನದ ಆಯ್ಕೆಯಿಂದ ‘ರಂಗ್ ದೇ ಬಸಂತಿ’ ಕೂಡಾ ಯಶಸ್ಸು ಕಂಡದ್ದು ಆಮೀರ್ ಖಾನ್ ಗೆ ಮತ್ತಷ್ಟು ಹಿರಿಮೆ ಜೊತೆಗೂಡಿದಂತಾಯ್ತು. ಆತ ವಿಭಿನ್ನತೆಗಾಗಿ ಆಯ್ದುಕೊಂಡ ತಮಿಳು ಅವತರಣಿಕೆಯ ‘ಗಜನಿ’ ಚಿತ್ರ ಅಭೂತಪೂರ್ವ ಯಶಸ್ಸು ಕಂಡಿತು.
ಮುನ್ನಾಭಾಯಿ ಚಿತ್ರಗಳ ಸೂತ್ರಧಾರರಾದ ರಾಜ್ ಕುಮಾರ್ ಹಿರಾನಿ ರೂಪಿಸಿದ ‘3 ಈಡಿಯೇಟ್ಸ್’ ಚಿತ್ರ ಅಮೀರ್ ಮತ್ತು ರಾಜ್ ಕುಮಾರ್ ಹಿರಾನಿ ಅವರನ್ನು ಎಲ್ಲಾ ರೀತಿಯ ಜನಪ್ರಿಯತೆ, ಯಶಸ್ಸು, ಗೌರವಗಳ ಪರಾಕಾಷ್ಠೆಗೆ ಕೊಂಡೊಯ್ಯಿತು. ಮುಂದೆ ಅವರೊಂದಿಗೆ ಪಿಕೆ ಎಂಬ ಚಿತ್ರದಲ್ಲಿ ಕೂಡಾ ಅಭಿನಯಿಸಿದರು. ಇವೆಲ್ಲವುಗಳ ಜೊತೆಗೆ ಉತ್ತಮ ಚಿತ್ರಗಳ ನಿರ್ಮಾಣದತ್ತ ಒಲವು ತೋರಿದ ಅಮೀರ್ ‘ಪೀಪ್ಲಿ ಲವ್’ ಚಿತ್ರವನ್ನು ನಿರ್ಮಿಸಿ ಪತ್ರಿಕೆ ಮತ್ತು ಪ್ರೇಕ್ಷಕರಿಬ್ಬರಿಂದಲೂ ಮತ್ತೊಮ್ಮೆ ಪ್ರಶಂಸೆ ಪಡೆದ. ‘ದೋಭಿ ಘಾಟ್’. ‘ಡೆಲ್ಲಿ ಬೆಲ್ಲಿ’, ‘ಜಾನೇ ತೂ ಯಾ ಜಾನೇ ನಾ’, ‘ದಾಂಗಲ್’, ‘ಸೀಕ್ರೆಟ್ ಸೂಪರ್ ಸ್ಟಾರ್’ ಮುಂತಾದವು ಆತನ ನಿರ್ಮಾಣದ ಇನ್ನಿತರ ಚಿತ್ರಗಳು.
ಅಮೀರ್ ಕಿರುತೆರೆಯಲ್ಲಿ ‘ಸತ್ಯಮೇವ ಜಯತೇ’ ಎಂಬ ಕಾರ್ಯಕ್ರಮದ ಮೂಲಕ ದೇಶವನ್ನು ಕಾಡುತ್ತಿರುವ ಹಲವಾರು ಸಾಮಾಜಿಕ ಹಾಗೂ ವ್ಯವಸ್ಥಾತ್ಮಕ ಪಿಡುಗುಗಳ ಬಗೆಗೆ ಬೆಳಕು ಚೆಲ್ಲಿದ ರೀತಿ ಅಪಾರ ಜನಪ್ರಿಯತೆ ಪಡೆಯಿತು. ಈ ಕಾರ್ಯಕ್ರಮ ಜನಪ್ರಿಯತೆಯ ಜೊತೆಗೆ ದೇಶದಾದ್ಯಂತ ಹಲವಾರು ಚರ್ಚೆಗಳನ್ನೂ ಹುಟ್ಟುಹಾಕಿತು.
ಯಾವುದನ್ನೂ ಮಾಡಲೇಬೇಕು ಎಂದು ಮಾಡದೆ ಅದರ ಬಗ್ಗೆ ಸಾಕಷ್ಟು ಚಿಂತಿಸಿ, ಅಧ್ಯಯನ ಮಾಡಿ ನಂತರವೇ ಕೆಲಸಕ್ಕೆ ಕೈ ಹಾಕುವ ಅಮೀರ್ ಖಾನ್ ಹೊಸ ಹೊಸ ದಿಕ್ಕಿನಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ಚಿತ್ರರಂಗವನ್ನು ತನ್ನ ಸಂತಸದ ಕ್ರೀಡಾಂಗಣವನ್ನಾಗಿ ಕಂಡವ. ಪದ್ಮಶ್ರೀ, ಪದ್ಮಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿದೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

BAFTA ಪ್ರಶಸ್ತಿಗಳಲ್ಲಿ 'ದಿ ಪವರ್ ಆಫ್ ದಿ ಡಾಗ್', 'ಡ್ಯೂನ್' ವಿಜಯೋತ್ಸವ!

Mon Mar 14 , 2022
‘ದಿ ಪವರ್ ಆಫ್ ದಿ ಡಾಗ್,’ ಬೆನೆಡಿಕ್ಟ್ ಕಂಬರ್‌ಬ್ಯಾಚ್ ಮತ್ತು ಜೆಸ್ಸಿ ಪ್ಲೆಮನ್ಸ್ ನಟಿಸಿದ ಮೊಂಟಾನಾ ರಾಂಚ್‌ನಲ್ಲಿ ಇಬ್ಬರು ಘರ್ಷಣೆಯ ಸಹೋದರರ ಬಗ್ಗೆ ಜೇನ್ ಕ್ಯಾಂಪಿಯನ್ ಅವರ ಉದ್ವಿಗ್ನ ಪಾಶ್ಚಾತ್ಯ, ಭಾನುವಾರ ರಾತ್ರಿ ಲಂಡನ್‌ನಲ್ಲಿ ನಡೆದ ಇಇ ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್‌ನಲ್ಲಿ ದೊಡ್ಡ ವಿಜೇತರಾಗಿದ್ದರು. ಡೆನಿಸ್ ವಿಲ್ಲೆನ್ಯೂವ್ ಅವರ ವೈಜ್ಞಾನಿಕ ಮಹಾಕಾವ್ಯ ‘ಡ್ಯೂನ್’, ಕೆನ್ನೆತ್ ಬ್ರಾನಾಗ್ ಅವರ ‘ಬೆಲ್‌ಫಾಸ್ಟ್’, ಉತ್ತರ ಐರ್ಲೆಂಡ್‌ನಲ್ಲಿನ ಅವರ ಬಾಲ್ಯವನ್ನು ಆಧರಿಸಿದ ಕಪ್ಪು-ಬಿಳುಪು ಚಲನಚಿತ್ರವನ್ನು […]

Advertisement

Wordpress Social Share Plugin powered by Ultimatelysocial