ಅನಧಿಕೃತವಾಗಿ ನಿರ್ಮಾಣಗೊಂಡಿರುವ ಕಟ್ಟಡಗಳು,

 ಅನುಮೋದನೆಯಿಲ್ಲದ ಬಡಾವಣೆಗಳು, ನಕ್ಷೆ ಮಂಜೂರಾತಿಯಿಲ್ಲದೆ ತಲೆಯೆತ್ತಿರುವ ಕಟ್ಟಡಗಳಿಗೆ ಒಂದು ಬಾರಿ ದಂಡ ಶುಲ್ಕ ವಿಧಿಸಿ ಸಕ್ರಮಗೊಳಿಸುವ ನಿಟ್ಟಿನಲ್ಲಿ ಸರಕಾರ ಗಂಭೀರ ಪ್ರಯತ್ನ ನಡೆಸಿದೆ.

ಶೀಘ್ರದಲ್ಲೇ ಇದು ಅನುಷ್ಠಾನವಾಗುವ ನಿರೀಕ್ಷೆ ಇದೆ.

ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಡಾವಣೆ ಅನುಮೋದನೆ, ನಕ್ಷೆ ಮಂಜೂರಾತಿಯಿಲ್ಲದೆ ನಿರ್ಮಾಣವಾಗಿರುವ ಲಕ್ಷಾಂತರ ಆಸ್ತಿಗಳಿವೆ. ಈ ಆಸ್ತಿಗಳಿಗೆ ಸ್ಥಳೀಯ ಸಂಸ್ಥೆಗಳು ಕುಡಿಯುವ ನೀರು, ವಿದ್ಯುತ್, ರಸ್ತೆ, ಚರಂಡಿ ಇತರೆ ಸೌಲಭ್ಯವನ್ನು ಕಲ್ಪಿಸಿವೆ. ಹಾಗಿದ್ದರೂ ಅಕ್ರಮ ಕಟ್ಟಡಗಳಾಗಿರುವುದರಿಂದ ಸ್ಥಳೀಯ ಸಂಸ್ಥೆಗಳಿಗೆ ಯಾವುದೇ ರೀತಿಯಲ್ಲಿ ತೆರಿಗೆ ಸಂಗ್ರಹವಾಗುತ್ತಿಲ್ಲ.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಡಾವಣೆ ಅನುಮೋದನೆ, ನಕ್ಷೆ ಮಂಜೂರಾತಿ ಇಲ್ಲದೆ ನಿರ್ಮಾಣಗೊಂಡಿರುವ ಕಟ್ಟಡಗಳ ಪೈಕಿ ಬಹಳಷ್ಟು ಕಡೆ ಬಿ ಖಾತಾ ನೀಡಿ ತೆರಿಗೆ ವ್ಯಾಪ್ತಿಗೆ ತರುವ ಪ್ರಯತ್ನ ಹಿಂದೆ ನಡೆದಿತ್ತು. ಹಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಬಿ ಖಾತಾ ಪಡೆಯುವುದಾಗಲಿ, ನಿರೀಕ್ಷಿತ ಆಸ್ತಿ ತೆರಿಗೆಯಾಗಲಿ ಸಂಗ್ರಹವಾಗುತ್ತಿಲ್ಲ. ಹಾಗಾಗಿ ಬಿ ಖಾತಾ ಪಡೆದ ಕಟ್ಟಡಗಳಿಗೂ ಎ ಖಾತಾ ನೀಡಿ ಸಕ್ರಮಗೊಳಿಸಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ಆ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಇ- ಸ್ವತ್ತು ಹಾಗೂ ನಗರ ಪ್ರದೇಶದಲ್ಲಿ ಇ- ಖಾತಾ ಮೂಲಕ ಒಂದು ಬಾರಿ ಅಕ್ರಮ ಕಟ್ಟಡಗಳಿಗೆ ಸಕ್ರಮ ರೂಪ ನೀಡಲು ಸರಕಾರ ಮುಂದಾಗಿದೆ. ಒಂದು ಬಾರಿಗೆ ನಿರ್ದಿಷ್ಟ ವಿಸ್ತೀರ್ಣಕ್ಕೆ ಇಂತಿಷ್ಟು ಅಭಿವೃದ್ಧಿ ಶುಲ್ಕ ವಿಧಿಸಿ ಕಾನೂನುಬದ್ಧಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದೆ. ಇದರಿಂದ ಸರಕಾರಕ್ಕೆ ನೂರಾರು ಕೋಟಿ ರೂ. ಆದಾಯ ಸಂಗ್ರಹವಾಗುವ ಜತೆಗೆ ಮುಂದೆ ಆಸ್ತಿ ತೆರಿಗೆ ವ್ಯಾಪ್ತಿಗೂ ಒಳಪಡುವುದರಿಂದ ನಿರಂತರವಾಗಿ ಸ್ಥಳೀಯ ಸಂಸ್ಥೆಗಳಿಗೆ ಆದಾಯ ಸಂಗ್ರಹವಾಗಲಿದೆ.

ಗ್ರಾಮೀಣ ಪ್ರದೇಶದಲ್ಲಿ ಇ- ಸ್ವತ್ತು ಹಾಗೂ ನಗರ ಪ್ರದೇಶದಲ್ಲಿ ಇ- ಖಾತಾ ನೀಡುವ ಬಗ್ಗೆ ಪರಾಮರ್ಶೆ ನಡೆಸಲು ರಚನೆಯಾಗಿರುವ ಸಂಪುಟ ಉಪಸಮಿತಿ 2 – 3 ಸಭೆ ನಡೆಸಿದೆ. ಸಮಿತಿ ಅಧ್ಯಕ್ಷರಾಗಿದ್ದ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಕಾನೂನು ಸಚಿವ ಜೆ. ಸಿ. ಮಾಧುಸ್ವಾಮಿ ಅವರನ್ನು ಸಮಿತಿ ಅಧ್ಯಕ್ಷರನ್ನಾಗಿ ಸಿಎಂ ನೇಮಕ ಮಾಡಿದ್ದಾರೆ.

ನಗರ, ಗ್ರಾಮೀಣ ಪ್ರದೇಶ ಮಾತ್ರವಲ್ಲದೆ ಮಲೆನಾಡು ಸೇರಿದಂತೆ ರಾಜ್ಯದ ಇತರೆಡೆ ಅರಣ್ಯ ಭೂಮಿಯಲ್ಲಿ ನಿರ್ಮಾಣವಾಗಿರುವ ಕಟ್ಟಡಗಳಿಗೂ ನಿರ್ದಿಷ್ಟ ಶುಲ್ಕ ವಿಧಿಸಿ ಸಕ್ರಮಗೊಳಿಸುವ ಬಗ್ಗೆಯೂ ಸಮಿತಿ ಪರಿಶೀಲನೆ ನಡೆಸುತ್ತಿದೆ. ಸಂಪುಟ ಉಪ ಸಮಿತಿಯು ಮುಂದಿನ ಸಭೆ ನಡೆಸುವ ಸಾಧ್ಯತೆ ಇದ್ದು, ಈ ಎಲ್ಲ ವಿಚಾರಗಳ ಬಗ್ಗೆ ಸಮಗ್ರವಾಗಿ ಚರ್ಚಿಸುವ ನಿರೀಕ್ಷೆ ಇದೆ.

ಬಡಾವಣೆ ಅನುಮೋದನೆ, ನಕ್ಷೆ ಮಂಜೂರಾತಿಯಿಲ್ಲದೆ ನಿರ್ಮಾಣಗೊಂಡ ಕಟ್ಟಡಗಳಿಗೆ ದುಪ್ಪಟ್ಟು ದಂಡ ವಿಧಿಸಲು ಸದ್ಯ ಜಾರಿಯಲ್ಲಿರುವ ಕಾಯಿದೆಯಲ್ಲಿ ಅವಕಾಶವಿದೆ. ಹಾಗಾಗಿ ಬೈಲಾ ಇಲ್ಲವೇ ನಿಯಮಾವಳಿಗಳನ್ನು ರೂಪಿಸಿಕೊಂಡು ಸಕ್ರಮಗೊಳಿಸಲು ಬಗ್ಗೆಯೂ ಪರಿಶೀಲನೆ ನಡೆದಿದೆ.

ಕಾನೂನಾತ್ಮಕವಾಗಿ ಮುಂದೆ ಅಡಚಣೆಗಳು ಉಂಟಾಗದಂತೆ ಎಚ್ಚರಿಕೆಯಿಂದ ಮುಂದುವರಿಯಲಾಗುತ್ತಿದೆ. ಒಂದು ಬಾರಿ ಸಕ್ರಮಗೊಳಿಸಿದ ನಂತರ ಯಾವುದೇ ಅಕ್ರಮ ನಿರ್ಮಾಣಕ್ಕೆ ಅವಕಾಶ ನೀಡದಂತೆ ನಿರ್ಬಂಸಿ, ಸೂಕ್ತ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದು ನಗರಾಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ.

ನಕ್ಷೆ ಉಲ್ಲಂಘಿಸಿ ಅನಜಾಕೃತವಾಗಿ ನಿರ್ಮಾಣಗೊಂಡ ವಸತಿ, ವಾಣಿಜ್ಯ ಕಟ್ಟಡಗಳನ್ನು ಸಕ್ರಮಗೊಳಿಸುವ ಪ್ರಯತ್ನ ಎರಡು ದಶಕಗಳಿಂದ ನಡೆದಿದ್ದರೂ ಇದುವರೆಗೂ ಮುಕ್ತಿ ದೊರಕಿಲ್ಲ. ಅಕ್ರಮ- ಸಕ್ರಮಕ್ಕಾಗಿ ಕಾಯಿದೆ ರೂಪಿಸಿ ಸರಕಾರ ಈ ಹಿಂದೆ ಅನುಷ್ಠಾನಕ್ಕೆ ಮುಂದಾಗಿತ್ತು.
ಅಷ್ಟರಲ್ಲಿ ಕೆಲ ಸಂಘಸಂಸ್ಥೆಗಳು ನ್ಯಾಯಾಲಯದ ಮೊರೆ ಹೋದವು. ಹೈಕೋರ್ಟ್ ಸರಕಾರದ ಪರ ತೀರ್ಪು ನೀಡಿತ್ತು. ಸಂಘಸಂಸ್ಥೆಗಳು ಇದನ್ನು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಿದ್ದು, 2017ರಲ್ಲಿ ತಡೆಯಾಜ್ಞೆ ತರಲಾಗಿದೆ. ಇದೀಗ ರಾಜ್ಯ ಸರಕಾರ ಸುಪ್ರೀಂಕೋರ್ಟ್‍ನಲ್ಲಿ ಬಾಕಿಯಿರುವ ಪ್ರಕರಣ ವಾಪಸ್ ತೆಗೆಸುವ ಪ್ರಯತ್ನದಲ್ಲಿ ತೊಡಗಿದಂತಿದೆ.

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ (ಬಿಬಿಎಂಪಿ ಹೊರತುಪಡಿಸಿ) ಸಕ್ಷಮ ಪ್ರಾಧಿಕಾರದಿಂದ ಬಡಾವಣೆ ಅನುಮೋದನೆ, ನಕ್ಷೆ ಮಂಜೂರಾತಿಯಿಲ್ಲದೆ ನಿರ್ಮಾಣಗೊಂಡಿರುವ ಕಟ್ಟಡಗಳನ್ನು ಸಕ್ರಮಗೊಳಿಸಲು ಪ್ರಯತ್ನ ನಡೆದಿದೆ.

ರಾಜ್ಯದಲ್ಲಿ ಈ ರೀತಿ ಲಕ್ಷಾಂತರ ಕಟ್ಟಡಗಳು ನಿರ್ಮಾಣಗೊಂಡಿದ್ದು, ಅವುಗಳಿಗೆ ಸರಕಾರದಿಂದ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಈ ಕಟ್ಟಡಗಳನ್ನು ಒಂದು ಬಾರಿಗೆ ಶುಲ್ಕ ವಿಧಿಸಿ ಸಕ್ರಮಗೊಳಿಸಿ ಆಸ್ತಿ ತೆರಿಗೆ ವ್ಯಾಪ್ತಿಗೆ ತರಲಾಗುವುದು. ಇದರಿಂದ ಸರಕಾರಕ್ಕೆ ನೂರಾರು ಕೋಟಿ ರೂ. ತೆರಿಗೆ ಆದಾಯ ಸಂಗ್ರಹವಾಗಲಿದೆ.

ಇನ್ನೊಂದೆಡೆ ಆಸ್ತಿದಾರರಿಗೆ ಶಾಶ್ವತ ಪರಿಹಾರ ದೊರೆತಂತಾಗಲಿದೆ. ಈ ಬಗ್ಗೆ ಸಂಪುಟ ಉಪ ಸಮಿತಿಯ1ಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿಎಎ ಪ್ರತಿಭಟನೆಯ ಕೇಂದ್ರವಾಗಿದ್ದ ಶಾಹೀನ್‌ಭಾಗ್‌ ನಲ್ಲಿ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ!

Mon May 9 , 2022
  ಹೊಸದಿಲ್ಲಿ: ವಿವಾದಿತ ಪೌರತ್ವ ಕಾನೂನಿನ ವಿರುದ್ಧದ ಬೃಹತ್ ಪ್ರತಿಭಟನೆ ನಡೆಸಿದ್ದ ಕೇಂದ್ರವಾದ ಶಾಹೀನ್ ಬಾಗ್‌ನಲ್ಲಿ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಸ್‌ಡಿಎಂಸಿ) ಇಂದು ಅತಿಕ್ರಮಣ ವಿರೋಧಿ ಅಭಿಯಾನವನ್ನು ನಡೆಸಲು ಸಿದ್ಧವಾಗಿದೆ ಎಂದು ndtv.com ವರದಿ ಮಾಡಿದೆ. ಸ್ಥಳಕ್ಕೆ ಬುಲ್ಡೋಝರ್‌ ಗಳು ಈಗಾಗಲೇ ಆಗಮಿಸಿವೆ. ಈ ಮೊದಲು ಶುಕ್ರವಾರ ನಡೆಯಬೇಕಿದ್ದ ಕಾರ್ಯಾಚಾರಣೆಯು ಸೂಕ್ತ ಭದ್ರತಾ ಪಡೆಯ ಅಲಭ್ಯತೆಯಿಂದಾಗಿ ರದ್ದಾಗಿತ್ತು. ಇಂದು ಬೆಳಗ್ಗೆ ದಿಲ್ಲಿ ಪೊಲೀಸರು ಧ್ವಂಸ ಕಾರ್ಯಾಚರಣೆಗೆ ಸ್ಥಳದಲ್ಲಿ ಸೂಕ್ತ […]

Advertisement

Wordpress Social Share Plugin powered by Ultimatelysocial