9ನೇ ತರಗತಿಯಿಂದ ಪಿಯುಸಿವರೆಗೆ ಉದ್ಯಮಶೀಲತೆಯ ಬೆಳವಣಿಗೆ!

ಬೆಂಗಳೂರು: ವಿದ್ಯಾರ್ಥಿಗಳಿಗೆ 9ನೇ ತರಗತಿಯಿಂದ ಪಿಯುಸಿವರೆಗೆ ಉದ್ಯಮಶೀಲತೆಯ ಬೆಳವಣಿಗೆಯನ್ನು ತಿಳಿಸುವ ಪಠ್ಯಕ್ರಮವನ್ನು ಮತ್ತು 8ನೇ ತರಗತಿಯಿಂದ ಪದವಿಯವರೆಗೂ ವೃತ್ತಿ ಮಾರ್ಗದರ್ಶನವನ್ನು ಕಡ್ಡಾಯಗೊಳಿಸಬೇಕು ಎಂದು ಕೌಶಲ್ಯ, ಉದ್ಯಮಶೀಲತೆ ಮತ್ತು ನವೋದ್ಯಮ ಕಾರ್ಯಪಡೆಯು ಶಿಫಾರಸು ಮಾಡಿದೆ.

ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಕಾರ್ಯಪಡೆ ಅಧ್ಯಕ್ಷರೂ ಆದ ಉದ್ಯಮಶೀಲತೆ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ಅವರು ಕೊಟ್ಟ ವರದಿಯನ್ನು ಸ್ವೀಕರಿಸಿದ ನಂತರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಮಾತನಾಡಿದರು.

ಮುಂದಿನ 10 ವರ್ಷಗಳಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿಸುವುದು ಸರಕಾರದ ಗುರಿಯಾಗಿದೆ. ಕೃಷಿ ಸೇರಿದಂತೆ ‌ಎಲ್ಲ ವಲಯಗಳಲ್ಲಿ ಗರಿಷ್ಠ ಉದ್ಯೋಗಾವಕಾಶದ ಸಾಧ್ಯತೆ ಇದೆ. ಇದನ್ನು ನನಸಾಗಿಸಲು ಪ್ರಮುಖ ಇಲಾಖೆಗಳನ್ನೆಲ್ಲ ಸೇರಿಸಿಕೊಂಡು ಕಾರ್ಯ ಪ್ರವೃತ್ತವಾಗಲಿದ್ದೇವೆ ಎಂದು ಅವರು ವಿವರಿಸಿದರು.

ವಿದ್ಯಾರ್ಥಿಗಳ ಉಜ್ವಲ ಭವಿಷ್ಯ, ನಿರುದ್ಯೋಗ ನಿವಾರಣೆ ಮತ್ತು ಗುಣಮಟ್ಟದ ಶಿಕ್ಷಣ ಇವು ಸಾಧ್ಯವಾಗಬೇಕೆಂದರೆ ಕಲಿಕೆಯ ಹಂತದಿಂದಲೇ ಕೌಶಲ್ಯವನ್ನು ಕಲಿಸುವುದರ ಜತೆಗೆ ಉದ್ಯಮಶೀಲ ಮನೋಭಾವವನ್ನು ಬೆಳೆಸಬೇಕಾಗಿದೆ. ಹೀಗಾಗಿ, ಕಾರ್ಯಪಡೆಯ ಶಿಫಾರಸಿನಂತೆ ಜಿಲ್ಲಾ ಮಟ್ಟದಲ್ಲಿ ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಉದ್ಯಮಶೀಲತಾ ವಿಕಸನ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.

ಆಧುನಿಕ ಕಾಲಕ್ಕೆ ತಕ್ಕಂತೆ ಎಲ್ಲಾ ಜಿಲ್ಲೆಗಳಲ್ಲೂ ವಿಕಸನ ಅಥವಾ ಪರಿಪೋಷಣಾ ಕೇಂದ್ರಗಳ ಜಾಲವನ್ನು ಅಸ್ತಿತ್ವಕ್ಕೆ ತರಬೇಕು. ಇದನ್ನು ಬಲಪಡಿಸಲು ಇಸ್ರೇಲಿನ ತಂತ್ರಜ್ಞಾನ ವರ್ಗಾವಣೆ ಕೇಂದ್ರಗಳ ಮಾದರಿಯಲ್ಲಿ `ಕರ್ನಾಟಕ ಸಂಶೋಧನೆ ಮತ್ತು ನಾವೀನ್ಯತೆ ಪ್ರಾಧಿಕಾರ’ವನ್ನು ಸ್ಥಾಪಿಸಿ, ಅದನ್ನು ನೋಡಲ್ ಏಜೆನ್ಸಿಯಾಗಿ ಮಾಡಲಿದ್ದೇವೆ ಎಂದು ಅವರು ಹೇಳಿದರು.

ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಕೌಶಲ್ಯಗಳು ಯಾವ ಮಟ್ಟದಲ್ಲಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಮಾದರಿ ಸಮೀಕ್ಷೆ ಕೈಗೊಳ್ಳಬೇಕು. ಜತೆಗೆ, ಜಿಲ್ಲಾ ಮಟ್ಟದಲ್ಲಿ `ಉದ್ಯಮ ಸೌಲಭ್ಯ ಕೇಂದ್ರ’ಗಳನ್ನು ಸ್ಥಾಪಿಸಬೇಕೆಂದು ಇದರಲ್ಲಿ ಹೇಳಲಾಗಿದೆ. ಹೊಸ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಏಂಜಲ್ ಹೂಡಿಕೆದಾರರು, ಬ್ಯಾಂಕು ಮತ್ತು ಇನ್ನಿತರ ಸೂಕ್ತ ಹಣಕಾಸು ಸಂಸ್ಥೆಗಳಿಂದ `ಸಾಫ್ಟ್ ಲೋನ್’ ಒದಗಿಸಲು ವ್ಯವಸ್ಥೆ ಮಾಡುವ ಅಗತ್ಯವಿದೆ. ಇವೆಲ್ಲವುಗಳನ್ನೂ ಸರಕಾರ ಗಂಭೀರವಾಗಿ ಪರಿಗಣಿಸಿ, ಶೀಘ್ರದಲ್ಲೇ ಮುಂದಿನ ಕಾರ್ಯಕ್ರಮಗಳನ್ನು ರೂಪಿಸಲಿದೆ ಎಂದು ಅವರು ಭರವಸೆ ನೀಡಿದರು.

ಡಿಜಿಟಲ್ ಆರ್ಥಿಕತೆಯಲ್ಲಿ ಕೌಶಲ್ಯಪೂರ್ಣ ಯುವಜನರಿಗೆ ಅಪಾರ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಪದವಿ ಶಿಕ್ಷಣ ಮುಗಿಸಿರುವ ವಿದ್ಯಾರ್ಥಿಗಳಿಗೆ ಸೂಕ್ತ ಕೌಶಲ್ಯ ಕೋರ್ಸುಗಳನ್ನು ಅಭಿವೃದ್ಧಿಪಡಿಸಲಾಗುವುದು. ಮಿಗಿಲಾಗಿ, ಯುವಜನರನ್ನು ಭವಿಷ್ಯದ ಕೌಶಲ್ಯಗಳಲ್ಲಿ ಸನ್ನದ್ಧಗೊಳಿಸಲು ಇನ್ಫೋಸಿಸ್, ಮೈಕ್ರೋಸಾಫ್ಟ್, ಐಬಿಎಂ ಮುಂತಾದ ಕಂಪನಿಗಳಲ್ಲಿ ಇಂಟರ್ನ್-ಶಿಪ್ ಮಾಡಲು ಅವಕಾಶ ಕಲ್ಪಿಸಲಾಗುವುದು. ಇದಕ್ಕಾಗಿ `ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್’ ಈ ಕಂಪನಿಗಳೊಂದಿಗೆ ಸಹಯೋಗ ಹೊಂದಲಿದೆ ಎಂದು ಅಶ್ವತ್ಥನಾರಾಯಣ ವಿವರಿಸಿದರು.

ಉದ್ಯಮಶೀಲತೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಮಾತನಾಡಿ, `ಕೃಷಿ ವಿ.ವಿ.ಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿರಾಜ್ ವಿವಿ ಮೂಲಕ 8 ಬಿಜಿನೆಸ್ ಸ್ಕೂಲುಗಳ ನೆರವಿನೊಂದಿಗೆ ರೈತ ಉತ್ಪಾದಕ ಸಂಸ್ಥೆಗಳ ನಿರ್ವಾಹಕರಿಗೆ ಕೃಷಿ ಮತ್ತು ಕೃಷಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಸಾಮರ್ಥ್ಯ ಬಲವರ್ಧನೆ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಶಿಫಾರಸು ಮಾಡಲಾಗಿದೆ. ಇದು ಸಾಧ್ಯವಾದರೆ ರೈತ ಸಮುದಾಯದ ಸಬಲೀಕರಣದ ನಿಟ್ಟಿನಲ್ಲಿ ದಾಪುಗಾಲು ಇಟ್ಟಂತಾಗುತ್ತದೆ’ ಎಂದರು.

ಇದನ್ನು ಸಾಧ್ಯವಾಗಿಸುವ ಗುರಿಯೊಂದಿಗೆ ಕೃಷಿ ತಂತ್ರಜ್ಞಾನ ಸಂಬಂಧಿ ನವೋದ್ಯಮಗಳನ್ನು ಜಿಲ್ಲಾ ಮಟ್ಟದ ಎಫ್.ಪಿ.ಒ.ಗಳು ಮತ್ತು ಕೃಷಿ ವಿ.ವಿ.ಗಳೊಂದಿಗೆ ಬೆಸೆಯಲು ವರದಿಯಲ್ಲಿ ಹೇಳಲಾಗಿದೆ. ಜತೆಗೆ ರೈತರು ಸಮಗ್ರ ಕೃಷಿ ಪದ್ಧತಿಗೆ ಹೊರಳಿಕೊಳ್ಳಲು ಅಗತ್ಯ ಆರ್ಥಿಕ ಸಹಕಾರ ಮತ್ತು ತಾಂತ್ರಿಕ ಮಾರ್ಗದರ್ಶನ ನೀಡಬೇಕಾದ್ದನ್ನು ಮನಗಾಣಲಾಗಿದೆ’ ಎಂದು ಅವರು ನುಡಿದರು.

ರಾಜ್ಯ ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಮಾತನಾಡಿದ ಇದು ಒಂದು ವಿನೂತನ ಪ್ರಯತ್ನ. ಖಾಸಗಿ ಮತ್ತು ಸರ್ಕಾರದ ವಿವಿಧ ಇಲಾಖೆಗಳು ಸೇರಿ ಸಿದ್ಧಪಡಿಸಿದ್ದು ಗ್ರಾಮೀಣ ಮಟ್ಟದಲ್ಲಿ ದೊಡ್ಡ ಬದಲಾವಣೆ ತರಲು ನೆರವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಜೀವನೋಪಾಯ ಇಲಾಖೆ ಮಿಷನ್ ನಿರ್ದೇಶಕಿ ಮಂಜುಶ್ರೀ, ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ, ಉದ್ಯಮಿ ಮತ್ತು ಕಾರ್ಯಪಡೆಯ ಸಂಚಾಲಕ ಮದನ್ ಪದಕಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮನವಿ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.ನರೇಂದ್ರ ಮೋದಿ

Wed Apr 13 , 2022
  ಮುಜಾಫರಾಬಾದ್​: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗ್ಯಾಂಗ್​ರೇಪ್​ ಸಂತ್ರಸ್ತೆಯು ಸಹಾಯ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಪಾಕ್​ನ ದುರಾಡಳಿತವನ್ನು ಸಂತ್ರಸ್ತೆ ವಿಡಿಯೋ ಸಂದೇಶದಲ್ಲಿ ವಿವರಿಸಿದ್ದು, ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ. ಗ್ಯಾಂಗ್​ರೇಪ್​ ಸಂತ್ರಸ್ತೆ ಮರಿಯಾ ತಾಹೀರ್ ಪ್ರಧಾನಿ ಮೋದಿಗೆ ಭಾವನಾತ್ಮಕವಾಗಿ ಮನವಿ ಮಾಡಿದ್ದಾರೆ. ತನ್ನ ಮಕ್ಕಳಿಗೆ ಹಾಗೂ ತನಗೆ ರಕ್ಷಣೆ ಮತ್ತು ಆಶ್ರಯ ಒದಗಿಸಿಕೊಡುವಂತೆ ವಿಡಿಯೋ ಸಂದೇಶದ ಮೂಲಕ ಮನವಿ ಮಾಡಿದ್ದಾರೆ. ನನಗೆ […]

Advertisement

Wordpress Social Share Plugin powered by Ultimatelysocial