ಉದ್ಯೋಕಾಂಕ್ಷಿಗಳ ಕತೆ ವ್ಯಥೆಗಳ ಒಟ್ಟು ಸಂಕಲನವೇ “ದ್ವೀಪವ ಬಯಸಿ”.

ನೂರಾರು ಕನಸುಗಳನ್ನು ಹೊತ್ತುಕೊಂಡು, ಬದುಕನ್ನು ಬೇಕಾದ ಸ್ತರದಲ್ಲಿ ರೂಪಿಸಿಕೊಳ್ಳಬಹುದೆನ್ನುವ ಮಹತ್ವಾಕಾಂಕ್ಷೆಯೊಂದಿಗೆ ತಾಯ್ನಾಡನ್ನು ತೊರೆದು ಬರುವ ಉದ್ಯೋಕಾಂಕ್ಷಿಗಳ ಕತೆ ವ್ಯಥೆಗಳ ಒಟ್ಟು ಸಂಕಲನವೇ “ದ್ವೀಪವ ಬಯಸಿ”.
“ಇಷ್ಟು ವಿಶಾಲ ಲೋಕವಿರುವಾಗ ನಾವೊಂದು ನೀರಿನ ಗುಳ್ಳೆಯೊಳಗೆ ಬದುಕು ಸವೆಸಬೇಕೇ? ದಿನಬೆಳಗಾದರೆ ಆ ಗುಳ್ಳೆ ಒಡೆಯುತ್ತದೆಂಬ ಅಂಜಿಕೆಯಲ್ಲಿ ಕಾಲ ಹಾಕಬೇಕೇ? ಯಾವ ಕಾರಣಕ್ಕಾಗಿ ಪರಿಮಿತಿಯ ಜೀವನ ಸಾಗಿಸಬೇಕು? ಯಾವ ಕಾರಣಕ್ಕಾಗಿ ಉದ್ಯೋಗವೆನ್ನುವುದು ಮುಸ್ಸಂಜೆಯ ನೆರಳಿನಂತೆ ನಮಗಿಂತಲೂ ಉದ್ದವಾಗಿ ಬೆಳೆಯಬೇಕು?” ಕಥಾ ನಾಯಕ ಶ್ರೀಕಾಂತನ ನುಡಿಗಳಿವು.
ಮೂಲಭೂತ ಸೌಕರ್ಯ ಕಾಣದ ಕರ್ನಾಟಕದ ಕಗ್ಗಾಡಿನ ಹಳ್ಳಿಯಲ್ಲಿದ್ದುಕೊಂಡು, ಯಗಚಿ ನದಿಗೆ ಅಡ್ಡವಾಗಿ ಕಟ್ಟಲಿರುವ ಸೇತುವೆಯಿಂದಾಗಿ ಮುಳುಗಡೆ ಭೀತಿಯನ್ನೆದುರಿಸುತ್ತಲೇ, ವಿದ್ಯೆ ಹತ್ತದ ತಮ್ಮ ಕೃಷ್ಣ ಮತ್ತು ಕೇವಲ ಮನೆ, ದೇವರಗುಡಿಯನ್ನೇ ಪ್ರಪಂಚವಾಗಿರಿಸಿಕೊಂಡಿದ್ದ ತಂದೆಯ ಜೊತೆ ತನ್ನ ವಿದ್ಯಾಭ್ಯಾಸವನ್ನು ಏನೇ ಕಷ್ಟಗಳು ಎದುರಾದರೂ ಬಿಡದೇ ಮುಂದುವರೆಸಿರುತ್ತಾನೆ ಶ್ರೀಕಾಂತ. ಅಣ್ಣನಂತೆಯೇ ವಿದ್ಯಾಭ್ಯಾಸಕ್ಕೆ ತೊಡಗಿಸಿಕೊಳ್ಳಲಾಗದ ಕೃಷ್ಣ ಒಂದು ದಿನ ಇದ್ದಕ್ಕಿದ್ದಂತೆ ಮನೆಬಿಟ್ಟು ಕಾಣೆಯಾಗುತ್ತಾನೆ. ಶ್ರೀಕಾಂತನಿಗೆ ಬದುಕು ಉಣಬಡಿಸುವ ಮೊದಲ ಆಘಾತವಿದು. ಇದರಿಂದ ಕೊನೆಯವರೆಗೂ ಅವನು ಹೊರಬರುವುದಿಲ್ಲ. ಎಲ್ಲಿ ಹೋಗಿ ಬಂದರೂ ಬೆಂಬಿಡದ ಛಾಯೆಯಾಗಿ ಕಣ್ಮರೆಯಾದ ತಮ್ಮನ ನೆನಪು ಅವನನ್ನು ಬಾಧಿಸುತ್ತಲೇ ಇರುತ್ತದೆ. ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಸೇರಿರುತ್ತಾನಲ್ಲ? ಮಹಾನಗರದ ಬೀದಿಬೀದಿಗಳಲ್ಲಿ, ರಸ್ತೆಯಂಚಿನ ಹೋಟೆಲ್’ಗಳಲ್ಲಿ, ಮಾರುಕಟ್ಟೆಗಳಲ್ಲಿ, ಎಣಿಕೆಗೆ ನಿಲುಕದ ಜನಪ್ರವಾಹದಲ್ಲಿ, ಬಸ್ಸಿನಲ್ಲಿ ಕೂತಾಗ ಸರಸರನೆ ಮಿಂಚಿ ಮರೆಯಾಗುವ
ಅಪರಿಚಿತ ಮುಖಗಳಲ್ಲಿ ತಮ್ಮನನ್ನು ಅರಸುತ್ತಿರುತ್ತಾನೆ ಶ್ರೀಕಾಂತ್.
ವಿದ್ಯಾಭ್ಯಾಸ ಮುಕ್ತಾಯವಾಗಿ ಒಳ್ಳೆಯ ಸಂಸ್ಥೆಯಲ್ಲಿ ಕೆಲಸ ಸಿಕ್ಕು, ಸಹೋದ್ಯೋಗಿಯನ್ನು ಪ್ರೀತಿಸಿ ಮದುವೆಯಾಗಿ ಟಿಪಿಕಲ್ ಸಂಸಾರಸ್ಥಾನ ಹಾಗೆ ಇನ್ನೇನು ನೆಲೆಕಂಡುಕೊಳ್ಳಬೇಕು ಎನ್ನುವಷ್ಟರಲ್ಲಿ ಬದುಕು ತಿರುವು ತೆಗೆದುಕೊಳ್ಳುತ್ತದೆ. ಕೆಲಸ ಮಾಡುತ್ತಿದ್ದ ಸಂಸ್ಥೆಯಿಂದ ಆಯ್ಕೆಯಾಗಿ ಅಮೇರಿಕಾಗೆ ಹೋಗುವುದು, ಬೇಸಿಕಲಿ, ಅವನಿಗೆ ಇಷ್ಟವಿರದಿದ್ದರೂ ಹೋಗುತ್ತಾನೆ. ಇಲ್ಲಿಯ ತನಕ ಶ್ರೀಕಾಂತನ ಹಿನ್ನೆಲೆ, ವಿದ್ಯಾಭ್ಯಾಸ, ಪ್ರಯಾಣದ ವಿವರ, ಅಮೇರಿಕಾದ ಮೇಲೆ 2001ರ ಸೆಪ್ಟೆಂಬರ್ ಪೈಶಾಚಿಕ ದಾಳಿ, ವಿಧಿವಶಾತ್ ಅದರಿಂದ ತಾವು ಪಾರಾದುದು, ಅಲ್ಲಿಗೆ ಹೋಗಿ ನೆಲೆಸಿದ ನಂತರ ಮನೆ ಕಾರು ಕೊಂಡಿದ್ದು, ನಿಧಾನಕ್ಕೆ ಸೆಟ್ಲ್ ಆದದ್ದು ಕಥಾನಕ ಸಾಧಾರಣವಾಗಿ ನಡೆಯುತ್ತದೆ.
ನಿಜವಾದ ಕತೆ ಆರಂಭಗೊಳ್ಳುವುದು ತಾನು ಕೆಲಸ ಮಾಡುತ್ತಿದ್ದ ಸಂಸ್ಥೆ ಜೋಳದಿಂದ ಇಂಧನವನ್ನು ತಯಾರಿಸುವ – ಬಯೋ ಫ್ಯುಯೆಲ್ – ಸಂಸ್ಥೆಯೊಂದರಲ್ಲಿ ವಿಲೀನಗೊಂಡ ನಂತರ. ಆರಂಭದಲ್ಲಿ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಡೆಯುವ ಸಂಸ್ಥೆ, ನೌಕರರಿಗೆ ಕೈತುಂಬ ಸಂಬಳ ಬೋನಸ್ ಆರೋಗ್ಯವಿಮೆ ಕೊಡುತ್ತಿರುತ್ತದೆ. ಆದರೆ ವರುಷಗಳುರುಳಿದಂತೆ ಅಮೇರಿಕ ಮಾತ್ರವಲ್ಲದೆ ಜಗತ್ತಿನಲ್ಲೆಡೆ ಕಾಣಿಸಿಕೊಳ್ಳುವ ಆಹಾರಾಭಾವದಿಂದಾಗಿ ಮತ್ತು ಕೆಲವು ಉನ್ನತಾಧಿಕಾರಿಗಳ ಹಗರಣಗಳಿಂದಾಗಿ ಸಂಸ್ಥೆ ಪತನದತ್ತ ಸಾಗುತ್ತದೆ. ಶ್ರೀಕಾಂತನ ಕಾರ್ಯಕ್ಷಮತೆ ಮತ್ತು ದಕ್ಷತೆಯಿಂದಾಗಿ ಆಪ್ತರೆಲ್ಲರ ಕೆಲಸ ಹೋದರೂ, ಇವನನ್ನು ಸಂಸ್ಥೆ ಉಳಿಸಿಕೊಳ್ಳುತ್ತದೆ. ತನಗಿಂತ ಹೆಚ್ಚು ದಕ್ಷ ಉದ್ಯೋಗಿಗಳನ್ನು, ಅದರಲ್ಲೂ ಮುಖ್ಯವಾಗಿ ವಯಸ್ಸಿನಲ್ಲಿ ದೊಡ್ಡವನಾಗಿದ್ದರೂ ಕಳೆದು ಹೋದ ತಮ್ಮನನ್ನು ನೆನಪಿಸುವ ಸ್ನೇಹಿತನೂ ಆಗಿದ್ದ ಫ್ರಾಂಕೋ ರಬ್ಬೆನೊನನ್ನು ಕೆಲಸದಿಂದ ವಜಾಗೊಳಿಸಿದ್ದಕ್ಕೆ ತಾನೇ ಕಾರಣವಾಗಿಬಿಟ್ಟೆನೇನೋ ಎಂದು ಚಿಂತಿಸುತ್ತ ಖಿನ್ನನಾಗುತ್ತಾನೆ ಶ್ರೀಕಾಂತ್. ಸಂಸ್ಥೆಯ ಆರೋಗ್ಯಾಧಿಕಾರಿ ಶಿಫಾರಸ್ಸಿನ ಮೇಲೆ ರಜೆ ತೆಗೆದುಕೊಂಡು ಹೆಂಡತಿಯ ಜೊತೆ ಪ್ರವಾಸಕ್ಕೆ ಹೋಗುತ್ತಾನೆ. ಪ್ರಪಂಚವನ್ನೆ ಮರೆತು ಸ್ವಚ್ಛಂದವಾಗಿ ವಿಹರಿಸುತ್ತಾರೆ. ಅಲ್ಲಿ ಒಂದು ರಾತ್ರಿ ಅವನ ಹೆಂಡತಿಗೆ ಭಾರತಕ್ಕೆ ಹೋಗಲೇಬೇಕೆನ್ನುವ ತೀವ್ರ ಬಯಕೆಯುಂಟಾಗುತ್ತದೆ. ಭಾರತಕ್ಕೆ ಮರಳಿ ಹೋಗಬೇಕೆನ್ನುವ ಅವಳ ಬಯಕೆ ಮತ್ತು ಕಾರಣ ಬಾಲಿಶ ಅಂತನ್ನಿಸಿದರೂ ಶ್ರೀಕಾಂತ ಕೂಡ ಅದಕ್ಕೆ ಸಮ್ಮತಿಸುತ್ತಾನೆ. ಕೆಲವು ದಿನಗಳ ನಂತರ, ಒಳ್ಳೆಯ ಆದಾಯ ಮತ್ತು ಭವಿಷ್ಯವಿರುವ ಸಂಸ್ಥೆ ಮತ್ತು ಕೆಲಸಕ್ಕೆ ರಾಜೀನಾಮೆ ನೀಡಿ, ಮುಂದೇನು ಮಾಡಬೇಕೆನ್ನುವ ಗೊತ್ತು ಗುರಿಯಿಲ್ಲದೆ ಭಾರತದ ವಿಮಾನವನ್ನೇರುತ್ತಾರೆ ಎಂಬಲ್ಲಿಗೆ ಕಾದಂಬರಿ ಅಂತ್ಯ ಕಾಣುತ್ತದೆ. ಇದು ಕಾದಂಬರಿಯ ಸಂಕ್ಷಿಪ್ತತೆ.
ಕಥಾ ವಸ್ತು ಕಾರ್ಪೊರೇಟ್ ಜಗತ್ತಿಗೆ ಸಂಬಂಧಿಸಿದ್ದಾದರೂ, ಅದರಲ್ಲಿ ಏನನ್ನೇ ಹೊಸತು ಹೇಳಲು ಹೊರಟರೂ ಈಗಾಗಲೇ ಓದಿರಬಹುದಾದ ಚಿತ್ತಾಲರ “ಶಿಕಾರಿ”ಯ ಛಾಯೆಯಿರಬಹುದಾ ಅಂತನ್ನಿಸಿದರೂ, ಕಥಾನಕವನ್ನು ಕಟ್ಟಿಕೊಡುವ ಹಿನ್ನೆಲೆಯಿಂದಾಗಿ ಕಾದಂಬರಿಗೆ ಓದಿಸಿಕೊಳ್ಳುವ ಗುಣವಿದೆ. ಇಲ್ಲಿಂದ ಅಲ್ಲಿಗೆ ಹೋದವರ ಸ್ಥಿತ್ಯಂತರಗಳ ಬಗ್ಗೆ ಈಗಾಗಲೇ ಅನೇಕ ಸಿನಿಮಾಗಳು, ಕತೆ ಕಾದಂಬರಿಗಳು ಬಂದಿವೆ. ಆ ಹಿನ್ನೆಲೆಯಲ್ಲಿ ನೋಡಿದಾಗ ಕಥಾವಸ್ತು ಸಾಮಾನ್ಯವೇ ಅಂತನ್ನಿಸುವುದು ಸಹಜ. ಇಷ್ಟೇ ಆಗಿದ್ದಿದ್ದರೆ ಇದೊಂದು ಇತರೆ ಕೃತಿಗಳ ಸಾಲಿನಲ್ಲಿ ನಿಲ್ಲಿಸಬಹುದಿತ್ತು. ಹೇಳಿದೆನೆಲ್ಲ? ತನ್ನ ಕಥಾನಕವನ್ನು ಕಟ್ಟಿಕೊಡುವ ಭಿನ್ನತೆಯಿಂದಾಗಿ ಕಾದಂಬರಿ ಯಶಸ್ವಿಯಾಗಿ ಪಾರಾಗಿದೆ.
ಉದಾಹರಣೆಗೆ, ಹಿಟ್ಲರನ ಪೈಶಾಚಿಕ ದಾಳಿಯಿಂದ ನಲುಗಿ ಹೊರಬಂದ ಎಷ್ಟೋ ವರ್ಷಗಳ ನಂತರವೂ ಯುದ್ಧದ ಭೀಕರತೆ ಮತ್ತು ಅದು ತಂದೊಡ್ಡುವ ಖಿನ್ನತೆಯಿಂದ ಪಾರಾಗಲಾರದ ಶ್ರೀಕಾಂತನ ಸ್ನೇಹಿತ ಫ್ರಾಂಕೋ ರಬ್ಬೆನೊ ಹೇಳುವ ಮಾತುಗಳಿವು: “ಸರ್ವೈವ‌ರ್ ಸಿಂಡ್ರೋಮ್ ಎನ್ನುವ ರೋಗವನ್ನು ಕೇಳಿದ್ದೀಯ ನೀನು? ಯುದ್ಧದಲ್ಲಿ ಬದುಕುಳಿದವರನ್ನು ಕಾಡುವ ರೋಗ, ಅವರ ಬದುಕಿನುದ್ದಕ್ಕೂ ಕಾಡುವ ಖಿನ್ನತೆ, ಪಿಶಾಚಿಗಳಂತೆ ಕಾಡುವ ದುಃಸ್ವಪ್ನಗಳು, ಮುಟ್ಟಿದರೆ ಮುನಿಯ ಎಲೆಗಳಂತೆ ಬೀಸುವ ಗಾಳಿಗೂ ಮುದುಡಿ ಹೋಗುವ ಜೀವ, ಸ್ವಂತ ಐಡೆಂಟಿಟಿಯನ್ನು ಕಳೆದುಕೊಂಡ ಬದುಕು!” ಎನ್ನುವ ಸಾಲುಗಳನ್ನೋದಿದಾಗ, ಇಡೀ ಮಾನವ ಕುಲಕ್ಕೆ ಯುದ್ಧ ಬಳುವಳಿಯಾಗಿ ಕೊಟ್ಟ ರಕ್ತಸಿಕ್ತವಾದ ಕಲೆಗಳು ಇನ್ನೂ ಆರದೇ ಉಳಿದಿವೆ ಎನಿಸದಿರದು. ಪ್ರಪಂಚ ಏನೇ ಶಾಂತಿ ಅಂತ ಬಾಯಿ ಬಡಿದುಕೊಂಡರೂ, ವಿಶ್ವಸಂಸ್ಥೆ ಅಥವಾ ಇನ್ಯಾವುದೋ ಸಂಸ್ಥೆಗಳು ಶಾಂತಿ ಸಂಸ್ಥಾಪಿಸಲು ಸಭೆಗಳ ಮೇಲೆ ಸಭೆ, ಹೋರಾಟ ಹಾರಾಟ ಅಂತ ಏನೇ ನಡೆಸುತ್ತಿದ್ದರೂ, ಫ್ರಾಂಕೋ ರಬ್ಬೆನೊ ಹೇಳುವ ಮಾತುಗಳ ಮುಂದೆ ಎಲ್ಲವೂ ನಿರರ್ಥಕ ಎನ್ನಿಸಿಬಿಡುತ್ತದೆ. ಅಂದಿನ ಹಿಟ್ಲರ್ ಮುಸಲೋನಿಗಳು ಈಗಲೂ ಬುಶ್ ಗಡಾಫಿ ತಾಲೀಬಾನ್ ಐಎಸ್ಐ ಆಲ್’ಖೈದಾ ಲಾಡೆನ್ ಸದ್ದಾಂ ಹುಸೇನ್’ಗಳ ರೂಪದಲ್ಲಿ ಇಂದಿಗೂ ಜೀವಂತವಿದ್ದಾರೆ. ಜಗತ್ತಿಗೇ ಶಾಂತಿ ಮಂತ್ರ ಸಾರಿದ ಗಾಂಧಿಯ ತತ್ವ, ವೈಚಾರಿಕ ಸರಣಿಗಳ ಸಾರ್ಥಕತೆ ಇಂತಹ ಯುದ್ಧ ಪಿಪಾಸುಗಳ ಮುಂದೆ ನಿರರ್ಥಕ ಎನಿಸುವಂತೆ ಮಾಡುತ್ತದೆ. ಹವಾ ನಿಯಂತ್ರಿತ ಮಹಲುಗಳಲ್ಲಿ ಯುದ್ಧೋನ್ಮಾದಿಗಳಾಗಿ ಕುಳಿತು ತಮ್ಮ ಸ್ವಹಿತಾಸಕ್ತಿ ಮತ್ತು ರಾಜಕೀಯ ಪ್ರೇರಿತ ಕಾರಣಗಳಿಗೋಸ್ಕರ ನಾಡನ್ನು ಮತ್ತು ನಾಡಿನ ಪ್ರಜೆಗಳನ್ನು ಸಮಿಧೆಗಳನ್ನಾಗಿ ಬಳಸುವ ಆಳುವ ಮಂದಿಗೆ, ಅದೇ ಯುದ್ಧದಲ್ಲಿ ಎಲ್ಲವನ್ನೂ ಕಳೆದುಕೊಂಡು ನಿರಾಶಿತ್ರನಾಗಿ ದೇಶದಿಂದ ದೇಶಕ್ಕೆ ವಲಸೆ ಬಂದ ಫ್ರಾಂಕೋ ರಬ್ಬೆನೊ ಹೇಳುವ ಈ ಮಾತುಗಳು ಎಂದಿಗೂ ಅರ್ಥವಾಗುವುದೇ ಇಲ್ಲ: “ಯುದ್ಧದಲ್ಲಿ ಬುಲೆಟ್ ಹೊಡೆಯುವವರು ತಮ್ಮೆದುರಿನ ಮನುಷ್ಯನಿಗೆ ಮಾತ್ರ ಹೊಡೆದಿರುವುದಿಲ್ಲ ಅವನ ಬೆನ್ನ ಹಿಂದೆ ಅಡಗಿರುವ ಅನೇಕ ಸಂತಾನಗಳಿಗೂ ಹೊಡೆದಿರುತ್ತಾರೆ, ಇನ್ನೂ ಭೂಮಿಗೆ ಬಾರದ ಸಂತತಿಯನ್ನೂ ಯುದ್ಧದ ಗಾಯಾಳುಗಳನ್ನಾಗಿಸಿ ಬಿಡುತ್ತಾರೆ”
ಸಮಿಂದ ಮಧುರಸಿಂಘೆ ಎನ್ನುವರು ಶ್ರೀಕಾಂತನ ಇನ್ನೊಬ್ಬ ಸ್ನೇಹಿತರು. ಶ್ರೀಲಂಕಾ ಮೂಲದವರು. ಮಾಜಿ ಸೈನಿಕರು. ಅಮೇರಿಕಾ ಸಂಸ್ಥೆಯೊಂದರಲ್ಲಿ ಉನ್ನತಾಧಿಕಾರಿಗಳು. ಹವ್ಯಾಸಿ ಛಾಯಾಗ್ರಾಹಕರು. “ಸತ್ಯ ನಮ್ಮ ಅರಿವಿನ ಸ್ಥಿತಿ, ಸತ್ಯ ಒಂದು ಮನೋಸ್ಥಿತಿ. ಪ್ರಪಂಚದ ನೈಜರೂಪ ಸತ್ಯವನ್ನು ಮೀರಿದ್ದು. ಸತ್ಯ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತ ಹೋಗುತ್ತದೆ. ಸತ್ಯ ಮನುಷ್ಯನ ಸೃಷ್ಟಿ, ಪ್ರಕೃತಿಗೆ ಸತ್ಯ ಅಸತ್ಯವೆಂಬುದಿಲ್ಲ. ಸತ್ಯದ ಮೂಲ ಅಸ್ತಿತ್ವವೇ ವಿವಾದಕ್ಕೆ ಸಂಬಂಧಿಸಿದ್ದು, ಈ ಭೂಮಿಯಲ್ಲಿ ಬಂಡೆದ್ದ ಪ್ರತಿಯೊಬ್ಬನೂ ಕೂಡ ಸತ್ಯ ತನ್ನ ಕಡೆಯೇ ಇದೆ ಎಂದು ಭಾವಿಸುತ್ತಾನೆ. ಯುದ್ಧದಲ್ಲಿ ಎರಡೂ ಪಕ್ಷಗಳು ತಾವು ಸತ್ಯಕ್ಕಾಗಿ ಹೋರಾಡುತ್ತಿರುವುದಾಗಿ ಘೋಷಿಸುತ್ತವೆ” – ಛಾಯಾಚಿತ್ರ ಪ್ರದರ್ಶನ ಸಮಾರಂಭವೊಂದರಲ್ಲಿ ಅವರು ಹೇಳುವ ಮಾತುಗಳಿವು. ಯುದ್ಧ ವಿರೋಧಿ ವಾದಕ್ಕೆ ಮತ್ತಷ್ಟು ಪುಷ್ಠಿ ಕೊಡುತ್ತವೆ. ಮೂಲತಃ ಸೈನಿಕನಾದ್ದರಿಂದ ಮತ್ತು ಯುದ್ಧದಲ್ಲಿ ಭಾಗವಹಿಸಿರುತ್ತಾರಾದ್ದರಿಂದ ಯುದ್ಧದ ನಿರರ್ಥಕತೆ, ಯುದ್ಧಾ ನಂತರದ ಕೊನೆಯೇ ಇಲ್ಲದ ವಿಷಾದತೆಗಳನ್ನು ಸ್ವತಃ ಅನುಭವಿಸಿರುತ್ತಾರೆ. ತಮ್ಮ ಛಾಯಾಚಿತ್ರಗಳ ಮೂಲಕ ಯುದ್ಧದ ಕುರಿತು, ಸೈನಿಕರ ಪಾಡುಗಳನ್ನು ಕುರಿತು ಹೇಳಲು ಯತ್ನಿಸಿರುವುದಿಲ್ಲವಾದರೂ ಸಹಜವಾಗಿ ಅವರ ಚಿತ್ರಗಳು ಯುದ್ಧದ ಕುರಿತೇ ಆಗಿರುತ್ತವೆ.
ಶ್ರೀಕಾಂತನ ಹೆಂಡತಿ ವಾಣಿಯ ಕಾಲೇಜಿನ ಸ್ನೇಹಿತನಾದ ಕ್ರಿಸ್ ಬ್ರೆಂಟನ್ ಎನ್ನುವ ಇಂಡಸ್ಟ್ರಿಯಲ್ ಸೈಕಾಲಜಿ ಓದುವ ಹದಿ ಹರೆಯದ ಯುವಕನ ಮಾತುಗಳು, ಅದರಲ್ಲೂ ಅಮೇರಿಕಾ ಎನ್ನುವ ವಿಲಾಸಿ ನಾಡಿನಲ್ಲಿ ಕೇಳಿದಾಗ ಆಶ್ಚರ್ಯದ ಜೊತೆಗೆ ರೋಮಾಂಚನವೂ ಆಗುತ್ತದೆ. “ಮನುಷ್ಯನ ಏಳಿಗೆಯನ್ನು ಲಾಭದಲ್ಲಿ ಅಳೆಯುವ ವ್ಯವಸ್ಥೆಯಿಂದ ಏನಾಗುತ್ತಿದೆ ನಮಗೆ, ಸರ್ವನಾಶವಲ್ಲದೇ? ಕಂಪನಿ ನೌಕರರನ್ನು ಲೇಆಫ್ ಮಾಡಿದರೆ ಅದರ ಸ್ಟಾಕ್ ಬೆಲೆ ಏರುತ್ತದೆ! ನೌಕರರನ್ನು ಮನೆಗೆ ಕಳುಹಿಸುವ ಮೂಲಕ ವೆಚ್ಚವನ್ನು ಕಡಿಮೆ ಮಾಡಿಕೊಂಡಿತೆಂದು ಸ್ಟಾಕ್ ಮಾರ್ಕೆಟ್ ಚಪ್ಪಾಳೆ ತಟ್ಟುತ್ತದೆ! ಆ ಕಂಪನಿಗೆ ಕೆಲಸ ಮಾಡಿದ ಮನುಷ್ಯನ ಬೆಲೆ ಏನಾಯಿತು ಅಲ್ಲಿಗೆ? ಉತ್ಪಾದನೆಯನ್ನು ಜಾಸ್ತಿ ಮಾಡಬೇಕು, ಉತ್ಪಾದನೆಯನ್ನು ಜಾಸ್ತಿ ಮಾಡಬೇಕು – ಕಂಪನಿ ಲೌಡ್ ಸ್ಪೀಕರಿನಲ್ಲಿ ಮಂತ್ರವನ್ನು ಹೇಳುತ್ತದೆ. ಉತ್ಪಾದನೆಯನ್ನು ಏಕೆ ಜಾಸ್ತಿ ಮಾಡಬೇಕು? ಏಕೆಂದರೆ ಉತ್ಪಾದನೆಯನ್ನು ಜಾಸ್ತಿ ಮಾಡಿದರೆ ಮತ್ತು ಮಾಡಿದ್ದನ್ನು ಭರದಿಂದ ಮಾರಾಟ ಮಾಡಿದರೆ ಲಾಭ ಜಾಸ್ತಿಯಾಗುತ್ತಲೇ ಹೋಗುತ್ತದೆ, ಕಂಪನಿಯ ಸ್ಟಾಕ್‌ನ ಬೆಲೆ ಏರುತ್ತಲೇ ಹೋಗುತ್ತದೆ. ಬಂಡವಾಳಗಾರರು ಸಂತೃಪ್ತರಾಗಿ ಮತ್ತಷ್ಟು ಬಂಡವಾಳವನ್ನು ಹೂಡುತ್ತಾರೆ. ಲಾಭದ ಚಕ್ರ ತಿರುಗುತ್ತಲೇ ನಡೆಯುತ್ತದೆ. ಅಗತ್ಯಕ್ಕಿಂತ ಹೆಚ್ಚೇಕೆ ಉತ್ಪಾದನೆ ಮಾಡಬೇಕು ಎಂದು ಕೇಳುವ ಗಂಡಸುತನ ಯಾರಿಗೆ ಇದೆ? ಇಂದು ನಿಮ್ಮ ಸುತ್ತಲೂ ತಿರುಗಿ ನೋಡಿ! ಅಗತ್ಯವಿಲ್ಲದ ವಸ್ತುಗಳು! ಅಗತ್ಯ ಮೀರಿದ ವ್ಯಾಪಾರ ವಹಿವಾಟುಗಳು. ನಮ್ಮ ಪಂಚೇಂದ್ರಿಯಗಳನ್ನು ಮುಟ್ಟುವ ಪ್ರತಿ ಮಾಧ್ಯಮಕ್ಕೂ ಈ ವ್ಯಾಪಾರದ ಭಯಂಕರ ರೋಗ ಬಡಿದುಕೊಂಡಿದೆ. ನೀವು ನೋಡುವ ಮತ್ತು ಕೇಳುವ ಒಂದೊಂದು ಜಾಹಿರಾತು ಕೂಡ ನಮ್ಮನ್ನು ವಸ್ತುಗಳ ಭ್ರಮಾಲೋಕಕ್ಕೆ ತಳ್ಳುತ್ತಿವೆ. ಕೊಳ್ಳಿ ಕೊಳ್ಳಿ ಕೊಳ್ಳಿ ಕೊಳ್ಳಿ ಎಂದು ಸಮಾಜ ಒಂದೇ ಸಮನೆ ನಿಮ್ಮ ಕಿವಿಯಲ್ಲಿ ಉಸುರುತ್ತಿದೆ. ಭೂಮಿಯನ್ನು ಉರಿಸಿಕೋ, ಅದೊಂದು ಉರುವಲು ಎನ್ನುತ್ತದೆ ಬಂಡವಾಳಶಾಹೀ ಸಮಾಜ. ಅದರ ಪ್ರಕಾರ ಭೂಮಿ ಅಪರಿಮಿತ ಕಚ್ಚಾಪದಾರ್ಥಗಳ ಗಣಿ, ದೋಚಿದಷ್ಟೂ ತುಂಬಿಸಿ ಕೊಡುವ ಕಾಮಧೇನು. ನಿಮಗೆ ವಸ್ತುಗಳನ್ನು ತಲುಪಿಸಲು ರಾಕ್ಷಸಾಕಾರದಲ್ಲಿ ಜೇಡರಬಲೆ ಹರಡಿಕೊಂಡಿದೆ”. ಒಬ್ಬ ಅಮೇರಿಕನ್ ಯುವಕ ಹೀಗೆ ಯೋಚಿಸಬಹುದೆನ್ನುವ ಯೋಚನೆಯೇ ಹೊಸದಾಗಿದೆಯಾದರೂ ವ್ಯಕ್ತಿಗತ ಮತ್ತು ಸಾಮಾಜಿಕ ಅಸಮಾನತೆಯ ಹಿನ್ನೆಲೆಯಲ್ಲಿ ನೋಡಿದಾಗ ನಮ್ಮ ಕೆಳ, ಮಧ್ಯಮ ವರ್ಗದ ಯುವಕರಿಗಿರುವಂತೆ ಅವನಿಗೂ ಅಧಿಕಾರಶಾಹಿತ್ವ, ಪಟ್ಟಭದ್ರ ಹಿತಾಸಕ್ತಿ ಮತ್ತು ಬಂಡವಾಳಶಾಹಿಗಳ ವಿರುದ್ಧ ಆಕ್ರೋಶವಿರುವುದು ತಿಳಿಯುತ್ತದೆ.
ಕಾದಂಬರಿಯಲ್ಲೊಂದು ಉಲ್ಲಸಿತ, ಕ್ರಿಯಾತ್ಮಕ, ಹಸನ್ಮುಖಿ ಮತ್ತು ಸದಾ ಚಟುವಟಿಕೆಯಿಂದುಳ್ಳ ಪಾತ್ರವೊಂದು ಬರುತ್ತದೆ; ಶ್ರೀಕಾಂತನ ಇನ್ನೊಬ್ಬ ಗೆಳೆಯ, ಮನಃಶಾಸ್ತ್ರಜ್ಞ ಹ್ಯಾಪಿಯದು. ಅವನು ಹೆಸರು ಫರ್ಗ್ಯೂಸನ್. “ಬೇರೆಯವರ ಕ್ರಿಯೆಗಳಿಗೆ, ಮಿತಿಗಳಿಗೆ, ಹೋರಾಟಗಳಿಗೆ ನಾವು ಹೊಣೆಯಲ್ಲ. ಬೇರೆಯವರ ಕ್ರಿಯೆಗಳಿಗೆ ನಮ್ಮನ್ನು ಹೊಣೆಯಾಗಿಸಿಕೊಳ್ಳುವುದರಿಂದ ನಾವೇ ಪ್ರಪಂಚದ ಕೇಂದ್ರ ಎನ್ನುವ ಭ್ರಮೆಗೆ ಬಿದ್ದುಬಿಡುತ್ತೇವೆ. ಯಾರೂ ನಮಗೆ ಸೇರಿದವರಲ್ಲ ಮತ್ತು ಯಾರ ಜೀವನದ ಮೇಲೆಯೂ ನಮಗೆ ಹತೋಟಿ ಇಲ್ಲ. ನಮ್ಮ ಮಕ್ಕಳ ಮೇಲೂ ಕೂಡ. ನಿಮ್ಮ ಮಕ್ಕಳು ನಿಮ್ಮಿಂದ ಬಂದವರಾದರೂ ಅವರು ನಿಮಗೆ ಸೇರಿದವರಲ್ಲ ಎನ್ನುತ್ತಾನೆ ಕಲೀಲ್ ಗಿಬ್ರಾನ್. ನಿಮ್ಮ ಮನಸ್ಸಿಗೆ ವಿರುದ್ಧವಾಗಿ ಬೇರೆ ಏನನ್ನೋ ಏಕೆ ಮಾಡಬೇಕು ನೀವು? ಪ್ರಪಂಚ ಏನೇ ಹೇಳಲಿ ನಮ್ಮ ಬದುಕು ನಮಗೆ ಸಾರ್ಥಕವೆನ್ನಿಸುವುದು ನಮ್ಮ ಕನಸುಗಳಂತೆ ನಾವು ಬದುಕಿದಾಗ, ನಿಮ್ಮ ಕನಸುಗಳನ್ನು ‘ಸಿಲ್ಲಿ’ ಎನ್ನುತ್ತದೆ ಪ್ರಪಂಚ. ಏಕೆಂದರೆ ತನಗರ್ಥವಾಗದ್ದೆಲ್ಲಾ ಸಿಲ್ಲಿಯೇ ಅದಕ್ಕೆ” ಎನ್ನುವ ಲವಲವಿಕೆಯುಳ್ಳ ಮಾತುಗಳನ್ನಾಡುತ್ತಾನೆ. ಮರುಭೂಮಿಯಲ್ಲಿ ಒಯಸಿಸ್ ಸಿಕ್ಕ ಅನುಭವ ನಮಗೆ.
ಮಹಿಂದ ಮಧುರಸಿಂಘೆ ಎನ್ನುವ ಹುಡುಗನ ಕತೆಯೂ ಭಿನ್ನವಾಗಿದೆ. ಅವನ ಅಪ್ಪ ಸಮಿಂದ ಮಧುರಸಿಂಘೆ; ವೆಲ್ ಎಸ್ಟಾಬ್ಲಿಷ್ಡ್ ಅಮೇರಿಕನ್ ಎಂಪ್ಲಾಯಿ. ಕೂತು ತಿಂದರೂ ಕರಗದಷ್ಟು ಸ್ಥಿತಿವಂತ. ಪತ್ರಿಕೋದ್ಯಮ ಓದಿ ಲಾಸ್ ಎಂಜಲೀಸಿನಲ್ಲಿ ಒಳ್ಳೆಯ ಕೆಲಸ ಸಿಗುವ ಸಂಭವವಿದ್ದರೂ ಆಫಘಾನಿಸ್ಥಾನಕ್ಕೆ ಬರುತ್ತಾನೆ; ಯುದ್ಧದ ವರದಿ ಮಾಡಲು. ಅವನ ಅಪ್ಪನಾದಿಯಾಗಿ ಯಾರು ಎಷ್ಟೇ ಹೇಳಿದರು, ಏನೇ ಹೇಳಿದರೂ ಕೇಳಲೊಲ್ಲ. ಸಮಾಜ ತೋರಗೋಡುವ ಕಾಳಜಿ ಮತ್ತು ಇಂಗಿತಕ್ಕಿಂತ ಮನದ ಇಚ್ಛೆಯಂತೆಯೇ ನಡೆಯುವ ಗುರಿಯುಳ್ಳವನು. ದಾಕ್ಷಿಣ್ಯ ಮತ್ತು ಬಂಧನಕ್ಕೊಳಗಾಗದೆ ಮನಸ್ಸಿಗೆ ಸರಿ ಅನ್ನಿಸಿದ್ದನ್ನು ಮಾಡುವ ದಿಟ್ಟ. ಎಲ್ಲರೂ ತಿಂದುಂಡು ಸುಖವಾಗಿ ಐಷಾರಾಮದ ಜೀವನ ನಡೆಸುವ ಕಾಲಕ್ಕೆ ಮಹಿಂದ ತನ್ನ ಗುರಿಯನ್ನು ಬೆನ್ನಟ್ಟುವ ಸಲುವಾಗಿ ನೇರವಾಗಿ ನಡೆದು ಬರುವುದು ಯುದ್ಧ ಭೂಮಿಗೆ. ಸದಾ ಮೊರೆಯುವ ಗುಂಡಿನ ಸದ್ದು, ಬಾಂಬುಗಳ ಮೊರೆತ, ಸೈನಿಕರ ಅಟ್ಟಹಾಸ, ಕೇಕೆ, ಆಕ್ರಂದನ, ಕಣ್ಣೆದುರೇ ಗುಡ್ಡೆ ಬೀಳುವ ಹೆಣಗಳ ರಾಶಿ ನಡುವೆಯೇ ಅವನನ್ನು ಅವನು ಹುಡುಕಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತಾನೆ. ಬೆಟ್ಟ ಬಯಲುಗಳಲ್ಲಿ, ಸೈನಿಕರಿಗಾಗಿ ಕೊರೆದ ಕೊರಕಲುಗಳಲ್ಲಿ ಜೀವದ ಹಂಗು ತೊರೆದು ಅಡಗಿ ಕುಳಿತು ಮಾಡುವ ವರದಿಗಾರಿಕೆ ಬರುಬರುತ್ತಾ ಅವನ ಪಥವನ್ನು ಇನ್ನೊಂದು ದಿಕ್ಕಿನತ್ತ ಕೊಂಡೊಯ್ಯುವಂತೆ ಮಾಡುತ್ತದೆ. ಮಾಧ್ಯಮಗಳ ಮಿತಿಮೀರಿದ ಪೈಪೋಟಿ, ಹಗ್ಗಜಗ್ಗಾಟ, ಕಿತ್ತಾಟ, ಪರಸ್ಪರರ ಕೆಸರೆರಚುವಿಕೆ ಅವನಿಗೆ ಹೇಸಿಗೆ ತರಿಸುತ್ತದೆ. ಸಿಎನ್ಎನ್, ಬಿಬಿಸಿಯಂತಹ ದೈತ್ಯರು ಸುದ್ದಿಗಾಗಿ ಹಪಹಪಿಸುವ ಪರಿ ಮಹಿಂದನ ಅರಿವಿಗೆ ಬರತೊಡಗುತ್ತದೆ. ತನ್ನನ್ನು ತಾನು ಅರಿಯಲು ಯಾವುದನ್ನು ಮಾಧ್ಯಮವನ್ನಾಗಿ ಆರಿಸಿಕೊಂಡಿದ್ದನೋ ಅದರಿಂದ ವಿಮುಖನಾಗುತ್ತಾನೆ. ಪತ್ರಿಕೋದ್ಯಮ ಅವನಿಗೆ ಬೇಸರಿಕೆ ತರಿಸುತ್ತದೆ. ಬಿಡುಗಡೆಗಾಗಿ ಕಾತರಿಸುತ್ತಿರುವ ಭಾವನೆಗಳ ವೇದಿಕೆಯನ್ನಾಗಿ ಕವಿತೆಯನ್ನು ಆರಿಸಿಕೊಳ್ಳುತ್ತಾನೆ. ತನ್ನಿಂದ ಮಹತ್ತರವಾದುದೇನೋ ಘಟಿಸಲಿದೆ ಎನ್ನುವ ಭ್ರಮೆ, ಜಗತ್ತಿನಲ್ಲಿ ತನ್ನಿಂತಾನೇ ಶಾಂತಿ ಸ್ಥಾಪಿತವಾಗುವುದರ ಬಗ್ಗೆ ಅವನಿಗಿದ್ದ ಕಲ್ಪನೆಗಳು ಕೇವಲ ಭಾವುಕತನವೆನಿಸತೊಡಗುತ್ತವೆ. ಬುದ್ಧನ ಆಳೆತ್ತರದ ಪ್ರತಿಮೆ ಧ್ವಂಸ ಪ್ರಕರಣ ಅವನನ್ನು ಯುದ್ಧದಿಂದ ಮತ್ತಷ್ಟು ವಿಮುಖನನ್ನಾಗಿಸುತ್ತದೆ. ಹೀಗಾಗಿ ರಜೆ ದೊರೆತಾಗ ತನ್ನ ದೇಶ ಶ್ರೀಲಂಕಾಗೆ ಹೋಗುತ್ತಾನೆ. ಅಲ್ಲಿನ ಮಣ್ಣ ಕಣಕಣದಲ್ಲಿ ಇನ್ನೂ ಹಸಿಯಾಗಿ ಆರದೇ ಉಳಿದಿರುವ ರಕ್ತಕಣಗಳು ಅವನನ್ನು ಕಂಗೆಡಿಸುತ್ತವೆ. ಭಾರತಕ್ಕೆ ಬರುತ್ತಾನೆ. ಬುದ್ಧ ಮೆಟ್ಟಿದ ಮಣ್ಣನ್ನು ಹಣೆಗೊತ್ತಿಕೊಳ್ಳುತ್ತಾನೆ. ಮುಂದೆ ಅಸ್ಪಷ್ಟವಾದ ಗುರಿ ಕಾಣಿಸುವ ಹಂತದಲ್ಲಿ ಹೊತ್ತ ಜವಾಬ್ದಾರಿ ಮುಗಿಸಲು ಮತ್ತೆ ಯುದ್ಧಭೂಮಿಗೆ ಬಂದು ಆಫಘಾನಿಸ್ಥಾನದ ಮಣ್ಣಲ್ಲಿ ಮಡಿಯುತ್ತಾನೆ. ಅನಂತ ಬದುಕಿನ ಗಮ್ಯಸ್ಥಾನ ತಲುಪುವ ಎಳೆಯೊಂದು ಚಿಗುರುವ ಮುನ್ನವೇ ಮುರುಟಿ ಹೋಗುತ್ತದೆ.
ಎಲ್ಲ ಇದ್ದು ಏನೂ ಇಲ್ಲದಂತಿರುವ ನಿರ್ವಾಣ ಸ್ಥಿತಿಯಲ್ಲಿ ಅವನು ತನ್ನ ಡೈರಿಯಲ್ಲಿ ಹೀಗೆ ಬರೆದುಕೊಂಡಿರುತ್ತಾನೆ: “ಈ ಘಳಿಗೆಯಲ್ಲಿ ನಾನು ಕುಳಿತಿರುವ ಈ ಕರೆಂಟು ಹೋದ ಕೋಣೆಯಲ್ಲಿ, ಯಾರೋ ಹಚ್ಚಿಹೋದ ಹೊಗೆಯುಗುಳುವ ಸೀಮೆ ಎಣ್ಣೆ ದೀಪದ ಬೆಳಕಿನಲ್ಲಿ ಬರೆಯಲು ಕುಳಿತಾಗ ಈ ಯುದ್ಧ, ಅದು ಸೃಷ್ಟಿಸಿರುವ ಪರಿಸ್ಥಿತಿಗಳು, ಅದನ್ನು ವ್ಯವಹಾರ ಮಾಡಿಕೊಂಡಿರುವ ನನ್ನಂತಹ ಪತ್ರಕರ್ತರು ಎಲ್ಲವೂ ತಮಾಷೆಯಾಗಿ ಕಾಣುತ್ತದೆ. ಒಂದು ಬಗೆಯ ಕ್ರೂರ ಹಾಸ್ಯ. ಹಿಂಸೆಯ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದೇವೆ ವರದಿಯನ್ನು ಬರೆಯಲು, ಇದಕ್ಕಿಂತಲೂ ಕ್ರೌರ್ಯ ಮತ್ತೊಂದಿದೆಯೇ? ನಾವು ಜರ್ನಲಿಸ್ಟರು ಈ ಯುದ್ಧಪ್ರದೇಶದಲ್ಲಿ ಏನು ಮಾಡುತ್ತಿದ್ದೇವೆ? ಅರೆಬೆಂದ ದೇಹಗಳ ಫೋಟೊ ತೆಗೆಯುತ್ತಿದ್ದೇವೆ! ಮರಣವನ್ನು ಖಯಾಲಿನಿಂದ ದಾಖಲಿಸುತ್ತಿದ್ದೇವೆ! ನಾನಿಲ್ಲಿ ಭೇಟಿ ಮಾಡಿದ ಲಾಸ್ ಏಂಜಲಿಸ್ ಟೈಮ್ಸ್ನ ಪೌಲ್ ವ್ಯಾಟ್ಸನ್‌ನ ಪ್ರಕಾರ ‘ಸತ್ತವರ ಆತ್ಮಗಳನ್ನು ಕದಿಯುತ್ತಿದ್ದೇವೆ.”
ಶ್ರೀಕಾಂತ, ಕ್ರಿಸ್ ಬ್ರೆಂಟನ್ ಮತ್ತು ಮಹಿಂದ ಏನನ್ನೋ ಹುಡುಕುತ್ತಿರುತ್ತಾರೆ; ಏನನ್ನುವುದರ ಗುರಿಯಿಲ್ಲದೆ, ನಿಶ್ಚಿತತೆಯಿಲ್ಲದೆ. ಅದರಲ್ಲೂ ಶ್ರೀಕಾಂತ ಮತ್ತು ಮಹಿಂದರದು, ಎಲ್ಲ ಜೊತೆಗಿದ್ದೂ ಯಾರೂ ಇಲ್ಲದ ಏಕಾಂಗಿ ಪಯಣ. ಒಬ್ಬನು ಕಾರ್ಪೊರೇಟ್ ದೈತ್ಯನ ಅಂಗಳದಲ್ಲಿ ಕಳೆದುಹೋದ ತನ್ನತನವನ್ನೋ, ತಾಯ್ನಾಡಿನ ನೆನಪುಗಳನ್ನೋ, ಓಡಿ ಹೋದ ತಮ್ಮನನ್ನೋ, ಮರಳಿ ಬಾರದ ಅನಾದಿ ಕಾಲದ ಬಾಲ್ಯದ ಮಧುರ ಸ್ಮೃತಿಗಳನ್ನೋ ಹುಡುಕುವ ಪ್ರಯತ್ನ ನಡೆಸಿದರೆ, ಇನ್ನೊಬ್ಬನು ಕೇವಲ ಹಾರಾಟ ಚೀರಾಟ ನರಳಿಕೆ ಭೀಕರತೆ ತುಂಬಿದ ಯುದ್ಧಭೂಮಿಯಲ್ಲಿ ತನ್ನನ್ನು ತಾನು ಹುಡುಕಿಕೊಳ್ಳುವ ಪ್ರಯತ್ನದಲ್ಲಿ ನಿರತನಾಗುತ್ತಾನೆ. ಅಲ್ಲಿ, ಆ ಕ್ಷಣಕ್ಕೆ ನಿಂತವನಿಗೆ ಮಾತ್ರ ವಸ್ತುಸ್ಥಿ ಅರಿವಿಗೆ ಬರುತ್ತದೆ. ಅಂದುಕೊಂಡಷ್ಟು ಸುಲಭ ಸಾಧುವಲ್ಲ ಇಲ್ಲಿ ಕ್ರಮಿಸಬೇಕಾದ ಮಾರ್ಗಗಳು. ಗುರಿಯಿಲ್ಲದೆ ಗಾಳಿಯಲ್ಲಿ ಗುಂಡು ಹಾರಿಸುವಂತೆ, ದಾರಿಗಾಣದ ಪಯಣವಿದು. ಯಾರು ಎಲ್ಲಿಗೆ ಹೇಗೆ ತಲುಪಿದರು ಎನ್ನುವುದು ಅವರವರ ಮನೋವಿಧಿ ನಿರ್ಧರಿಸುತ್ತದೆ. ಒಬ್ಬೊಬ್ಬರ ಮನೋವಿಧಿಯು ಕಾಲ ಗಡಿ, ದೇಶ ಭಾಷೆಯನ್ನು ಮೀರಿ ಬೆಳೆದು ಅನಂತದಲ್ಲಿ ಲೀನವಾಗುವತ್ತ ನಡೆಯುತ್ತಿರುತ್ತದೆ; ಅರಿವಿಲ್ಲದೆ, ಪರಸ್ಪರರ ಹಸ್ತಕ್ಷೇಪವಿಲ್ಲದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೈಗ್ರೇನ್ ಸಮಸ್ಯೆ ಇರುವವರು ತಿನ್ನುವ-ಕುಡಿಯುವ ಆಹಾರದ ಕಡೆ ತುಂಬಾನೇ ಗಮನ ನೀಡಬೇಕು.

Sat Feb 19 , 2022
   ನಿಮಗೆ ಸೇರದ ಒಂದು ಆಹಾರ ತಿಂದರೆ ಸಾಕು, ಆ ದಿನ ಪೂರ್ತಿ ತಲೆ ನೋವಿನಿಂದ ಬಳಲಬೇಕಾಗುತ್ತದೆ. ಕೆಲವರಿಗೆ ತಲೆನೋವಿನಿಂದ ವಾಂತಿ ಕೂಡ ಉಂಟಾಗುವುದು.ಆದ್ದರಿಂದ ಮೈಗ್ರೇನ್‌ ಸಮಸ್ಯೆ ಇರುವವರು ಈ ಬಗೆಯ ಆಹಾರಗಳನ್ನು ದೂರ ಇಡಬೇಕು:ನೀವು ಕಾಫಿ ಹೆಚ್ಚಾಗಿ ಕುಡಿದರೆ ಅಥವಾ ಕೆಫೀನ್ ಇರುವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿದರೆ ತಲೆ ನೋವು ಹೆಚ್ಚಾಗುವುದು.ತಲೆನೋವು ಬಂದಾಗ ಕೆಲವರು ಟೀ ಅಥವಾ ಕಾಫಿ ಕುಡಿದರೆ ರಿಲೀಫ್ ಆಗುತ್ತದೆ ಎಂದು ಕುಡಿಯತ್ತಾರೆ, ಆದರೆ ಹೆಚ್ಚು […]

Advertisement

Wordpress Social Share Plugin powered by Ultimatelysocial