ಹಗಲು ರಾತ್ರಿ ಕೆಲಸ ಮಾಡಿ ರಸ್ತೆ ಗುಂಡಿ ಮುಚ್ಚಿ; ಬಿಬಿಎಂಪಿ ಆಯುಕ್ತರು!

ಬೆಂಗಳೂರು, ಮೇ 29: ಬಿಬಿಎಂಪಿ ವ್ಯಾಪ್ತಿಯಲ್ಲಿ ಫಿಕ್ಸ್ ಮೈ ಸ್ಟ್ರೀಟ್ ಆಯಪ್ ಮೂಲಕ ರಸ್ತೆ ಗುಂಡಿಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಆಯಾ ವಲಯ ವ್ಯಾಪ್ತಿಯ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆ ಹಾಗೂ ವಾರ್ಡ್ ರಸ್ತೆಗಳಲ್ಲಿ ಆದ್ಯತೆ ಮೇರೆಗೆ ರಸ್ತೆ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನು ನೀಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಹಾಗೂ ಮಳೆ ಮುಂಜಾಗ್ರತಾ ಕ್ರಮಗಳಿಗೆ ಸಂಬಂಧಿಸಿದಂತೆ ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ನಗರದಲ್ಲಿ ಇದುವರೆಗೆ ಗುರುತಿಸಿರುವ ಗುಂಡಿಗಳನ್ನು ಕೂಡಲೇ ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಆಯಾ ವಲಯಗಳ ಮುಖ್ಯ ಅಭಿಯಂತರರು ಪಾಲಿಕೆಯ ಬ್ಯಾಚ್ ಮಿಕ್ಸ್ ಪ್ಲಾಂಟ್ ಜೊತೆ ಸಮನ್ವಯ ಸಾಧಿಸಿ ಅಗತ್ಯ ಡಾಂಬರನ್ನು ಪಡೆದು ರಸ್ತೆ ಗುಂಡಿಗಳನ್ನು ಮುಚ್ಚಬೇಕು” ಎಂದು ಹೇಳಿದ್ದಾರೆ.

ಬ್ಯಾಚ್ ಮಿಕ್ಸ್ ಪ್ಲಾಂಟ್‌ನಿಂದ ಬರುವ ಡಾಂಬರಿನ ಪ್ರಮಾಣವನ್ನು ಸರಿಯಾಗಿ ಪರಿಶೀಲಿಸಬೇಕು. ಜೊತೆಗೆ ಗುಣಮಟ್ಟವನ್ನು ಕಾಪಾಡಿಕೊಂಡು ರಸ್ತೆ ಗುಂಡಿಗಳನ್ನು ಮುಚ್ಚಬೇಕು. ರಸ್ತೆ ಗುಂಡಿ ಬಿದ್ದ ಸ್ಥಳವನ್ನು ಶುಚಿಮಾಡಿ ವೆಟ್ ಮಿಕ್ಸ್ (ಹಸಿ ಜೆಲ್ಲಿ ಮಿಶ್ರಣ) ಹಾಕಿದ ನಂತರ ಡಾಂಬರನ್ನು ಹಾಕಿ ರೋಲರ್ ಮೂಲಕ ಸಮತಟ್ಟು ಮಾಡಬೇಕು ಎಂದು ಅಧಿಕಾರಿಗಳಿಗೆ ‌ಸೂಚಿಸಲಾಗಿದೆ. ಸದರಿ ಕಾರ್ಯವನ್ನು ಹಗಲು-ರಾತ್ರಿ ಖುದ್ದು ಪರಿಶೀಲನೆ ನಡೆಸುವಂತೆ ವಲಯ ಆಯುಕ್ತರು ಮತ್ತು ಜಂಟಿ ಆಯುಕ್ತರುಗಳಿಗೆ ಸೂಚನೆ ನೀಡಿದ್ದಾರೆ.

ನಿತ್ಯ 25 ಲೋಡ್ ಕಡ್ಡಾಯ ಡಾಂಬರು ಮಿಶ್ರಣ ಪೂರೈಸಿ
ಬಿಬಿಎಂಪಿಯ ಬ್ಯಾಚ್ ಮಿಕ್ಸ್ ಪ್ಲಾಂಟ್‌ನಿಂದ ಎಲ್ಲಾ ವಲಯಗಳಿಗೂ ಸೇರಿ ಪ್ರತಿನಿತ್ಯ 25 ಲೋಡ್ (ಹಗಲು 18 ಲೋಡ್, ರಾತ್ರಿ 7 ಲೋಡ್) ಕಡ್ಡಾಯವಾಗಿ ಕಳುಹಿಸಬೇಕು. ಈ ಮೂಲಕ ಆಯಾ ವಲಯಗಳಲ್ಲಿ ಗುರುತಿಸಿರುವ ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಬೇಕು. ಅದನ್ನು ವಲಯ ಆಯುಕ್ತರು ಮೇಲ್ವಿಚಾರಣೆ ಮಾಡಬೇಕು ಎಂದು ಮುಖ್ಯ ಆಯುಕ್ತರು ಸೂಚನೆ ನೀಡಿದ್ದಾರೆ.

ನಿಯಮ ಉಲ್ಲಂಘಿಸಿದರೇ ಸಾಮಗ್ರಿ ವಶಪಡಿಸಿಕೊಂಡು ದಂಡ ವಿಧಿಸಿ

ಜಲಮಂಡಳಿ, ಬೆಸ್ಕಾಂ, ಗೇಲ್ ಸೇರಿದಂತೆ ಇನ್ನಿತರೆ ಇಲಾಖೆಗಳು ಕಾಮಗಾರಿಗಳಿಗೆ ಸಂಬಂಧಿಸಿದ ಸಾಮಗ್ರಿಗಳನ್ನು ಸಾರ್ವಜನಿಕ ಸ್ಥಳ ಅಥವಾ ರಸ್ತೆ ಬದಿ ಅಥವಾ ಪಾದಚಾರಿ ಮಾರ್ಗಗಳಲ್ಲಿಯೇ ಹಾಕಿರುತ್ತಾರೆ. ಇದರಿಂದ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಲಿದೆ. ಈ ಸಂಬಂಧ ಎಲ್ಲೆಲ್ಲಿ ಸಾಮಗ್ರಿಗಳನ್ನು ಹಾಕಿದ್ದಾರೆ ಎಂಬುದನ್ನು ಗುರುತಿಸಿ ಕೂಡಲೇ ಪಾಲಿಕೆಯ ವಶಕ್ಕೆ ಪಡೆದು ಸಂಬಂಧಪಟ್ಟ ಗುತ್ತಿಗೆದಾರರಿಗೆ ದಂಡ ವಿಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪರ್ಯಾಯ ಮಾರ್ಗವಾಗಿ ಪೈಪ್ ಅಳವಡಿಸಿ

ನಗರದಲ್ಲಿ 27 ಅತಿ ಸೂಕ್ಷ್ಮ ತಾಣ ಹಾಗೂ 45 ಸೂಕ್ಷ್ಮ ತಾಣ ಸೇರಿದಂತೆ 72 ಪ್ರವಾಹ ತಾಣಗಳಿದ್ದು, ಅಂತಹ ಪ್ರದೇಶದಲ್ಲಿ ಪ್ರವಾಹ ಆಗುವುದನ್ನು ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರವಾಹ ತಾಣಗಳ ಬಳಿ ಸಂಪೂರ್ಣವಾಗಿ ಹೂಳೆತ್ತುವ ಕಾರ್ಯ ಆಗಬೇಕು. ಮುನ್ನೆಚ್ಚರಿಕಾ ಕ್ರಮವಾಗಿ ಸ್ಯಾಂಡ್ ಬ್ಯಾಗ್ಸ್ (ಮರಳು ಮೂಟೆಗಳು) ಗಳನ್ನು ಲಭ್ಯವಿಟ್ಟುಕೊಳ್ಳಬೇಕು. ಇದಲ್ಲದೆ ಪರ್ಯಾಯ ಮಾರ್ಗವಾಗಿ ಪೈಪ್ ಅಳವಡಿಸಿ ಆ ಮೂಲಕ ನೀರು ಬೇರೆಡೆ ಹೋಗುವ ವ್ಯವಸ್ಥೆ ಕಲ್ಪಿಸಬೇಕೆಂದು ಬೃಹತ್ ನೀರುಗಾಲುವೆ ವಿಭಾಗದ ಮುಖ್ಯ ಅಭಿಯಂತರ ಲೋಕೇಶ್‌ಗೆ ಸೂಚನೆ ನೀಡಿದ್ದಾರೆ.

ಪ್ರಮುಖ ರಸ್ತೆಯಲ್ಲಿ ನೀರು ನಿಲ್ಲದಂತೆ ಕ್ರಮ

ಪಾಲಿಕೆಯ ಎಲ್ಲಾ ವಾರ್ಡ್ ಗಳಲ್ಲೂ ಶಿಲ್ಟ್ ಅಂಡ್ ಟ್ರ್ಯಾಕ್ಟರ್‌ಗಳಿದ್ದು, ಅವುಗಳಿಂದ ರಸ್ತೆ ಬದಿ ಚರಂಡಿಗಳಲ್ಲಿ ಹೂಳೆತ್ತುವ ಕೆಲಸ, ರಸ್ತೆ ಬದಿ ಸಂಗ್ರಹವಾಗಿರುವ ಮಣ್ಣು, ಶೋಲ್ಡರ್ ಡ್ರೈನ್ ಗಳನ್ನು ಸ್ವಚ್ಛಗೊಳಿಸಿ ರಸ್ತೆಗಳ‌ ಮೇಲೆ ಬೀಳುವ ನೀರು ಸರಾಗವಾಗಿ ಚರಂಡಿಗೆ ಹರಿದು ಹೋಗುವಂತೆ ಮಾಡಬೇಕು. ಇದೇ ವೇಳೆ ಮಳೆಗಾಲದ ಸಮಯದಲ್ಲಿ ಆಯಾ ವಲಯ ವ್ಯಾಪ್ತಿಯ ಪ್ರಮುಖ ರಸ್ತೆಗಳು ಹಾಗೂ ವಾರ್ಡ್ ರಸ್ತೆಗಳಲ್ಲಿ ನೀರು ನಿಲ್ಲುವ ಬಗ್ಗೆ ಸಂಚಾರಿ ಪೊಲೀಸರು ನೀಡಿರುವ ಮಾಹಿತಿಯನುಸಾರ ಸ್ಥಳ ಪರಿಶೀಲಿಸಿ ರಸ್ತೆ ಮೇಲೆ ನೀರು ನಿಲ್ಲದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತರ ಸಭೆಯಲ್ಲಿ ಎಲ್ಲಾ ವಲಯ ಆಯುಕ್ತರು, ಎಲ್ಲಾ ಜಂಟಿ ಆಯುಕ್ತರು, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು, ಎಲ್ಲಾ ಮುಖ್ಯ ಅಭಿಯಂತರರು ಹಾಗೂ ಇನ್ನಿತರ ಸಂಬಂಧಪಟ್ಟ ಅಧಿಕಾರಿಗಳು ‌ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಾಕ್ವೆಲಿನ್ ಫರ್ನಾಂಡಿಸ್ ಗೆ ಅಬುಧಾಬಿಗೆ ತೆರಳಲು ಕೋರ್ಟ್ ಅನುಮತಿ!

Sun May 29 , 2022
ಮುಂಬಯಿ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಅವರಿಗೆ ಐಐಎಫ್‌ಎ ಪ್ರಶಸ್ತಿಗಾಗಿ ಅಬುಧಾಬಿಗೆ ತೆರಳಲು ಕೋರ್ಟ್ ಅನುಮತಿ ನೀಡಿದೆ. 200 ಕೋಟಿ ರೂ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆ ಎದುರಿಸುತ್ತಿರುವ ಜಾಕ್ವೆಲಿನ್ ಫರ್ನಾಂಡಿಸ್ ಅವರು ಅಬುಧಾಬಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ (IIFA ) ಕಾರ್ಯಕ್ರಮಕ್ಕಾಗಿ 15 ದಿನಗಳ ಕಾಲ ವಿದೇಶ ಪ್ರವಾಸಕ್ಕೆ ಅನುಮತಿ ಕೋರಿದ್ದರು. ನ್ಯಾಯಾಲಯ ಮೇ 31 ರಿಂದ […]

Advertisement

Wordpress Social Share Plugin powered by Ultimatelysocial