ಎನ್. ಬಸವಾರಾಧ್ಯರು ವಿದ್ವಾಂಸರು ಮತ್ತು ನಿಘಂಟು ತಜ್ಞರಾಗಿ ಪ್ರಸಿದ್ಧರು.

ಎನ್. ಬಸವಾರಾಧ್ಯರು ವಿದ್ವಾಂಸರು ಮತ್ತು ನಿಘಂಟು ತಜ್ಞರಾಗಿ ಪ್ರಸಿದ್ಧರು.
ಎನ್. ಬಸವಾರಾಧ್ಯರು ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ನಾರಸಿಂಹನಹಳ್ಳಿಯಲ್ಲಿ 1926ರ ಫೆಬ್ರವರಿ 20ರಂದು ಜನಿಸಿದರು. ತಂದೆ ನಂಜುಂಡಾರಾಧ್ಯ. ತಾಯಿ ಗಿರಿಜಮ್ಮ.
ಬಸವಾರಾಧ್ಯರು ಗೌರಿಬಿದನೂರಿನಲ್ಲಿ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ ಮುಗಿಸಿ, ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಬೆಂಗಳೂರು ಕೋಟೆ ಪ್ರೌಢಶಾಲೆಯಲ್ಲಿ ನಡೆಸಿ, ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಡಿಗ್ರಿ ವ್ಯಾಸಂಗಕ್ಕೆ ಮೈಸೂರು ಮಹಾರಾಜ ಕಾಲೇಜಿಗೆ ಸೇರಿದರು. 1950 ರಲ್ಲಿ ಎಂ.ಎ. ಪದವಿ ಪಡೆದರು.
ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ಸ್ನಾತಕ ವಿಶೇಷ ತಜ್ಞರಾಗಿ ಸೇವೆ ಸಲ್ಲಿಸಿದ ಬಸವಾರಾಧ್ಯರು ಮುಂದೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಯೋಜನೆಯಲ್ಲಿ ಉಪಸಂಪಾದಕ, ಸಂಪಾದಕ, ಮುಖ್ಯ ಸಂಪಾದಕ, ಪ್ರಧಾನ ಸಂಪಾದಕ ಮುಂತಾದ ಹುದ್ದೆಗಳನ್ನು ಅಲಂಕರಿಸಿ ಪರಿಷತ್ತಿನ 8 ಸಂಪುಟಗಳಲ್ಲಿ ನಿರಂತರವಾಗಿ ಕೆಲಸ ಮಾಡಿದರು.
ಬಸವಾರಾಧ್ಯರು ತೊರವೆ ರಾಮಾಯಣ ಸಂಗ್ರಹ(ಇತರರೊಡನೆ), ತ್ರಿಪುರ ದಹನ ಸಾಂಗತ್ಯ, ಚಂದ್ರಹಾಸನ ಕಥೆ, ಭೈರವೇಶ್ವರ ಕಾವ್ಯದ ಕಥಾ ಸೂತ್ರ ರತ್ನಾಕರ, ಹರಿಶ್ಚಂದ್ರ ಕಾವ್ಯಂ (ಇತರರೊಡನೆ), ಚೇರಮಕಾವ್ಯಂ, ಸರ್ವಜ್ಞ ವಚನ ಸಂಗ್ರಹ, ಉದ್ಭಟದೇವ ಚರಿತೆ ಮುಂತಾದ 27 ಕೃತಿಗಳನ್ನು ಸಂಪಾದಿಸಿದ್ದರು. ಇದಲ್ಲದೆ ವಡ್ಡಾರಾಧನೆ, ಸಚಿತ್ರ ಶಾಲಾ ನಿಘಂಟು (ಭಾಷಾಂತರ) ರಾಘವಾಂಕ, ಜೋತಿಷಿಯ ಮಗ ಮತ್ತು ಕೊಡದಣ್ಣ ಬಿಡದಣ್ಣ (ಮಕ್ಕಳ ಪುಸ್ತಕ), ಅಪ್ಪಯ್ಯ ಮತ್ತು ಬಾಯಿಶೂರ, ಕೈಶೂರ (ಮಕ್ಕಳ ಪುಸ್ತಕ) ಮುಂತಾದ ಹಲವಾರು ಕೃತಿಗಳನ್ನು ರಚಿಸಿದ್ದರು.
ಮೈಸೂರು ವಿಶ್ವವಿದ್ಯಾನಿಲಯ, ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಪಂಡಿತ ಪರೀಕ್ಷಾ ಮಂಡಳಿ, ಕಾಮರಾಜ ವಿಶ್ವವಿದ್ಯಾನಿಲಯದಲ್ಲಿ ವಿಶೇಷ ತಜ್ಞರಾಗಿ ಬಸವಾರಾಧ್ಯರ ಸೇವೆ ವಿವಿಧ ರೀತಿಯಲ್ಲಿ ಸಂದಿತು. ಪಠ್ಯಪುಸ್ತಕ ಸಮಿತಿ ಅಧ್ಯಕ್ಷರಾಗಿ 1980 ರಲ್ಲಿ ಕಾರ್ಯನಿರ್ವಹಿಸಿದ್ದರು. ಕನ್ನಡದಲ್ಲಿ ಕಚೇರಿ ಕೈಪಿಡಿ, ಇಂಗ್ಲಿಷ್-ಕನ್ನಡ ನಿಘಂಟು ಪರಿಷ್ಕರಣ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಇಪ್ಪತ್ತನೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ 1998-2001 ಅವಧಿಯಲ್ಲಿ ಚುನಾಯಿತರಾಗಿ ಗಣನೀಯ ಸೇವೆ ಸಲ್ಲಿಸಿದರು.
ಬಸವಾರಾಧ್ಯರ ‘ತೊರೆವೆ ರಾಮಾಯಣ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ‘ಧರ್ಮನಾಥ ಪುರಾಣಂ’ ಕೃತಿಗೆ ಮೈಸೂರು ವಿಶ್ವವಿದ್ಯಾಲಯದ ತೀ.ನಂ.ಶ್ರೀ. ಸ್ಮಾರಕ ಪ್ರಶಸ್ತಿ, ‘ಹರಿಶ್ಚಂದ್ರ ಕಾವ್ಯಂ’, ‘ಚೇರಮ ಕಾವ್ಯಂ’, ‘ಉದ್ಭಟದೇವ ಚರಿತೆ’ ಕೃತಿಗಳಿಗೆ ದೇವರಾಜ ಬಹದ್ದೂರ್ ಬಹುಮಾನಗಳು ಸಂದವು. ಇದಲ್ಲದೆ ಬಸವಾರಾಧ್ಯರಿಗೆ ಭಾರತ ಭಾಷಾಭೂಷಣ, ಶಿವರತ್ನ, ಶಿವಕಮಲ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಸಹಾ ಸಂದವು. ಇವರಿಗೆ ಅರ್ಪಿಸಿದ ಗೌರವ ಗ್ರಂಥಗಳು ‘ಆರಾಧ್ಯ ಸಂಪದ’ ಹಾಗೂ ‘ಆರಾಧ್ಯ ಸಿರಿ’.
ಕನ್ನಡ ನಿಘಂಟು ನಿಷ್ಣಾತರೂ ಮತ್ತು ವಿದ್ವಾಂಸರೂ ಆದ ಬಸವರಾಧ್ಯರು 2013ರ ಡಿಸೆಂಬರ್ 6 ರಂದು ಈ ಲೋಕವನ್ನಗಲಿದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿ ಸೇರುವ ಸಾಧ್ಯತೆ ಇದೆ. ಕೇಂದ್ರ

Sun Feb 20 , 2022
ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿ ಸೇರುವ ಸಾಧ್ಯತೆ ಇದೆ. ಕೇಂದ್ರ ಸಚಿವರಿಂದಲೇ ಈ ಬಗ್ಗೆ ಸುಳಿವು ಸಿಕ್ಕಿದ್ದು, ಬಸವರಾಜ ಹೊರಟ್ಟಿ ಬಿಜೆಪಿಗೆ ಸೇರುತ್ತಾರೆ ಎಂದು ಹೇಳಲಾಗಿದೆ. ವಿಧಾನಪರಿಷತ್ ಚುನಾವಣೆಗೆ ಇಬ್ಬರ ಹೆಸರನ್ನು ದೆಹಲಿಗೆ ರವಾನೆ ಮಾಡಲಾಗಿದೆ. ಸದ್ಯ ಬಸವರಾಜ ಹೊರಟ್ಟಿ ಸಭಾಪತಿಯಾಗಿರುವ ಹಿನ್ನೆಲೆಯಲ್ಲಿ ಮೇ ನಂತರ ತೀರ್ಮಾನ ಕೈಗೊಳ್ಳಲಿದ್ದಾರೆ. ಉತ್ತರ ಕರ್ನಾಟಕದ ಜೆಡಿಎಸ್ ನಾಯಕ ಎನ್.ಹೆಚ್. ಕೋನರೆಡ್ಡಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಈಗ ಹೊರಟ್ಟಿ ಅವರೂ […]

Advertisement

Wordpress Social Share Plugin powered by Ultimatelysocial