ಎಣ್ಣೆ ಮಾತ್ರ ಸಿಕ್ಕಿದೆ : ಇನ್ನು ಹಣ ಸಿಕ್ಕಿಲ್ಲ : ಉಪ ಚುನಾವಣೆ…?

ಬೆಂಗಳೂರು, ಅಕ್ಟೋಬರ್ 22; ಹಾನಗಲ್ ಮತ್ತು ಸಿಂಧಗಿ ಉಪ ಚುನಾವಣೆಯ ಪ್ರಚಾರದ ಕಾವು ಏರಿದೆ. ಅಕ್ಟೋಬರ್ 30ರಂದು ಮತದಾನ ನಡೆಯಲಿದ್ದು, ನವೆಂಬರ್ 2ರಂದು ಫಲಿತಾಂಶ ಪ್ರಕಟವಾಗಲಿದೆ.

ಉಪ ಚುನಾವಣೆ ಪ್ರಚಾರದ ವೇಳೆಯಲ್ಲಿ ಬಿಜೆಪಿ ಹಣ ಹಂಚಿಕೆ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆರೋಪಿಸಿದ್ದರು. ಈ ಆರೋಪಕ್ಕೆ ಬಿಜೆಪಿ ನಾಯಕರು ಸಹ ತಿರುಗೇಟು ಕೊಟ್ಟಿದ್ದರು.

ಚುನಾವಣಾ ಆಯೋಗ ಸಿಂಧಗಿ ಮತ್ತು ಹಾನಗಲ್‌ನಲ್ಲಿ ಇದುವರೆಗೂ ಯಾವುದೇ ಹಣವನ್ನು ವಶಕ್ಕೆ ಪಡೆದಿಲ್ಲ. ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಮದ್ಯವನ್ನು ಮಾತ್ರ ವಶಕ್ಕೆ ಪಡೆಯಲಾಗಿದೆ ಎಂದು ಪತ್ರಿಕಾಪ್ರಕಟಣೆಯಲ್ಲಿ ಹೇಳಿದೆ.ಹಾನಗಲ್ ಮತ್ತು ಸಿಂಧಗಿ ಉಪ ಚುನಾವಣೆಯಲ್ಲಿ ಅಕ್ರಮ ನಡೆಯದಂತೆ ತಡೆಯಲಿ ಒಟ್ಟು 99 ಸಂಚಾರಿ ತಂಡಗಳನ್ನು ರಚನೆ ಮಾಡಲಾಗಿದೆ. 303 ಕಣ್ಗಾವಲು ತಂಡಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.ಸಂಚಾರಿ ತಂಡ ಮತ್ತು ಪೊಲೀಸರು ಇದುವರೆಗೂ 53.130 ಲೀಟರ್ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ಇದರ ಮೌಲ್ಯ 22,785.52 ರೂ. ಆಗಿದೆ. ಅಬಕಾರಿ ಇಲಾಖೆಯ ತಂಡ 353.470 ಲೀಟರ್ ಮದ್ಯವನ್ನು ವಶಕ್ಕೆ ಪಡೆದಿದ್ದು, ಇದರ ಮೌಲ್ಯ 1.85 ಲಕ್ಷ ಎಂದು ಚುನಾವಣಾ ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

ಚುನಾವಣೆ ನಡೆಯುತ್ತಿರುವ ಜಿಲ್ಲೆಗಳ ಚುನಾವಣಾಧಿಕಾರಿಗಳಿಂದ ಮಾಹಿತಿ ಸಂಗ್ರಹ ಮಾಡಲಾಗಿದ್ದು, ಸಂಚಾರಿ ತಂಡ, ಕಣ್ಗಾವಲು ತಂಡ ಯಾವುದೇ ಹಣವನ್ನು ಇದುವೆಗೂ ವಶಕ್ಕೆ ಪಡೆದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಕಾಂಗ್ರೆಸ್ ಆರೋಪ; ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆಡಳಿತಾರೂಢ ಬಿಜೆಪಿ ಉಪ ಚುನಾವಣೆ ಗೆಲ್ಲಲು ಮತದಾರರಿಗೆ ಹಣವನ್ನು ಹಂಚಿಕೆ ಮಾಡುತ್ತಿದೆ ಎಂದು ಆರೋಪಿಸಿದ್ದರು.

ಐದಾರು ಸಚಿವರು ಚೀಲಗಳಲ್ಲಿ ಹಣ ತುಂಬಿಕೊಂಡು ಪ್ರಚಾರಕ್ಕೆ ಬಂದಿದ್ದಾರೆ. 2 ರಿಂದ 5 ಸಾವಿರದಂತೆ ಹಣವನ್ನು ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಹಾನಗಲ್‌ನ ಹುಲ್ಲತ್ತಿಯ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಡಿ. ಕೆ. ಶಿವಕುಮಾರ್ ಬಿಜೆಪಿ ಅವರು ನೀಡುವ ಹಣ ತೆಗೆದುಕೊಳ್ಳಿ, ಮತವನ್ನು ಕಾಂಗ್ರೆಸ್‌ಗೆ ಹಾಕಿ ಎಂದು ಕರೆ ಕೊಟ್ಟಿದ್ದರು.

ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ಕೊಟ್ಟಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಡಿ. ಕೆ. ಶಿವಕುಮಾರ್ ಅನುಭವದ ಮಾತು ಹೇಳಿದ್ದಾರೆ. ಗುಂಡ್ಲುಪೇಟೆ, ನಂಜನಗೂಡು ಉಪ ಚುನಾವಣೆಯನ್ನು ಯಾವ ರೀತಿ ಮಾಡಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಕಾಂಗ್ರೆಸ್‌ನ ಇಂತಹ ಆರೋಪ, ಷಡ್ಯಂತ್ರ ಯಶಸ್ವಿಯಾಗುವುದಿಲ್ಲ. ನಾವು ಜನರ ಪ್ರೀತಿ, ವಿಶ್ವಾಸದ ಮೇಲೆ ಚುನಾವಣೆ ನಡೆಸುತ್ತೇವೆ” ಎಂದು ತಿರುಗೇಟು ನೀಡಿದ್ದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇದೇ ವಿಚಾರದ ಕುರಿತು ಮಾತನಾಡಿದ್ದರು, “ಬಿಜೆಪಿಯವರು ಪ್ರತಿ ಮತಕ್ಕೆ 2 ಸಾವಿರದಂತೆ ಹಂಚಿಕೆ ಮಾಡುತ್ತಿದ್ದಾರೆ ಎಂದು ಜನ ಹೇಳುತ್ತಿದ್ದಾರೆ. ಹಣ ಬಲದ ಮೇಲೆಯೇ ಅಧಿಕಾರಕ್ಕೆ ಬಂದ ಬಿಜೆಪಿಗೆ ಜನರ ಕಷ್ಟ, ಸಮಸ್ಯೆಗಳನ್ನು ಬಗೆಹರಿಸುವುದು ಬೇಕಿಲ್ಲ. ಎರಡು ವರ್ಷದಿಂದ ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡದೇ ಉಪ ಚುನಾವಣೆಯಲ್ಲಿ ಹಣದ ಹೊಳೆ ಹರಿಸಿ ಗೆಲ್ಲಲು ಮುಂದಾಗಿದ್ದಾರೆ” ಎಂದು ಆರೋಪಿಸಿದ್ದರು.

ಸೆಪ್ಟೆಂಬರ್ 28ರಿಂದ ಹಾನಗಲ್ ಮತ್ತು ಸಿಂಧಗಿ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ 386 ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಲಾಗಿದೆ. 291 ಜನರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ.

ಬಿಜೆಪಿಯ ಸಿ. ಎಂ. ಉದಾಸಿ ನಿಧನದಿಂದ ತೆರವಾದ ಹಾನಗಲ್ ಮತ್ತು ಜೆಡಿಎಸ್‌ನ ಎಂ. ಸಿ. ಮನಗೂಳಿ ನಿಧನದಿಂದ ತೆರವಾದ ಸಿಂಧಗಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಹಾನಗಲ್ ಕ್ಷೇತ್ರ ಮುಖ್ಯಮಂತ್ರಿಗಳು ಪ್ರತಿನಿಧಿಸುವ ಕ್ಷೇತ್ರದ ಪಕ್ಕದ ಕ್ಷೇತ್ರವಾಗಿದ್ದು, ಬಿಜೆಪಿಗೆ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಲ್ಲಿನ ಮಣ್ಣನ್ನು ಜನರು ಮಸಾಲೆಯಂತೆ ತಿನ್ನುತ್ತಾರೆ..!

Sat Oct 23 , 2021
ನವದೆಹಲಿ: ಈ ಜಗತ್ತಿನಲ್ಲಿ ಹಲವು ರಹಸ್ಯಗಳಿವೆ. ಈ ರಹಸ್ಯಗಳನ್ನು ಭೇದಿಸಲು ಇಂದಿಗೂ ಯಾರಿಂದಲೂ ಸಾಧ್ಯವಾಗಿಲ್ಲ. ಪ್ರಪಂಚದಲ್ಲಿ ಪ್ರತಿದಿನ ನಡೆಯುವ ಅನೇಕ ಕೌತುಕಗಳ ಬಗ್ಗೆ ಬಹುತೇಕರಿಗೆ ಕುತೂಹಲವಿರುತ್ತದೆ. ಈ ರೀತಿಯ ರಹಸ್ಯಗಳನ್ನು ಭೇದಿಸಲು ಅನೇಕ ಜನ್ಮತಾಳಬೇಕು. ಅನೇಕ ಜನರಿಗೆ ಅದ್ಭುತಗಳನ್ನು ನೋಡಲು ಮತ್ತು ತಿಳಿದುಕೊಳ್ಳುವ ಆಸಕ್ತಿ ಇರುತ್ತದೆ. ಇಂತಹ ಒಂದು ಅತ್ಯದ್ಭುತ ಸ್ಥಳಗಳಲ್ಲಿ ಇರಾನ್ ನ ಹೊರ್ಮೊಜ್ಗ್ ದ್ವೀಪ. ಇದು ಸಾಕಷ್ಟು ಆಕರ್ಷಕವಾಗಿದೆ ಮತ್ತು ಇದನ್ನು ಮಳೆಬಿಲ್ಲು ದ್ವೀಪ ಎಂತಲೂ ಕರೆಯುತ್ತಾರೆ. ಗಲ್ಫ್ […]

Advertisement

Wordpress Social Share Plugin powered by Ultimatelysocial