ದಾಶರಥಿ ದೀಕ್ಷಿತ್ ನಾಡಿನ ಪ್ರಸಿದ್ಧ ಹಾಸ್ಯನಾಟಕಕಾರ.

ದಾಶರಥಿ ದೀಕ್ಷಿತ್ ನಾಡಿನ ಪ್ರಸಿದ್ಧ ಹಾಸ್ಯನಾಟಕಕಾರರಲ್ಲಿ ಒಬ್ಬರು. ಶಾಲಾ ಕಾಲೇಜುಗಳಲ್ಲಿ ನಾಟಕಗಳೆಂದರೆ ವಿದ್ಯಾರ್ಥಿಗಳಿಗೆ ಪ್ರಯೋಗಿಸಲು ಸುಲಭ ಮತ್ತು ಆಪ್ತ ಆಯ್ಕೆಗೆ ಮೊದಲು ಕಾಣುತ್ತಿದ್ದುದು ದಾಶರಥಿ ದೀಕ್ಷಿತ್ ಅವರ ನಾಟಕಗಳು.ದಾಶರಥಿ ದೀಕ್ಷಿತ್‌ 1921ರ ಜನವರಿ 18ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಜನಿಸಿದರು. ತಂದೆ ಬಾಲಾಜಿ ದೀಕ್ಷಿತ್.ತಾಯಿ ಗಂಗೂಬಾಯಿ. ತಂದೆ ಶಿರಸ್ತೇದಾರರಾಗಿದ್ದುದರಿಂದ ವರ್ಗವಾಗುತ್ತಿದ್ದು ದಾವಣಗೆರೆ, ಮೊಳಕಾಲ್ಮೂರು, ಚಿತ್ರದುರ್ಗ ಮುಂತಾದೆಡೆಗಳಲ್ಲಿ ದಾಶರಥಿ ದೀಕ್ಷಿತ್ ಅವರ ಪ್ರಾರಂಭಿಕ ಶಿಕ್ಷಣ ನಡೆಯಿತು. ಮುಂದೆ ಬೆಂಗಳೂರಿನ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್‌ ಓದಿ ಅಲ್ಲಿಗೆ ಓದಿಗೆ ನಮಸ್ಕಾರ ಹೇಳಿದರು.
ದಾಶರಥಿ ದೀಕ್ಷಿತ್ ಉದ್ಯೋಗಕ್ಕೆ ಸೇರಿದ್ದು ಬೆಂಗಳೂರಿನ ವಿಮಾನ ಕಾರ್ಖಾನೆಯಲ್ಲಿ. ಬಾಲ್ಯದಿಂದಲೂ ಸಾಹಿತ್ಯದ ಬಗ್ಗೆ ಇದ್ದ ಒಲವಿನಿಂದ ಬರವಣಿಗೆಯನ್ನು ರೂಢಿಸಿಕೊಂಡರು. ತಾವು ಬರೆದ ಕಥೆಯೊಂದನ್ನು ಅಭಿಪ್ರಾಯ ಕೇಳಲು ನಾಡಿಗೇರ್ ಕೃಷ್ಣರಾಯರಿಗೆ ನೀಡಿದಾಗ, ನಾಡಿಗೇರರು ತಾವು ಕಾರ್ಯನಿರ್ವಹಿಸುತ್ತಿದ್ದ ಪ್ರಜಾಮತ ಪತ್ರಿಕೆಯಲ್ಲಿ ಪ್ರಕಟಿಸಿದರು. ಇದೇ ಹುಮ್ಮಸ್ಸಿನಿಂದ ಅವರು ಬರೆದ ಕಥೆಗಳು ‘ಕಥೆಗಾರ’ ಪತ್ರಿಕೆಯಲ್ಲೂ ಪ್ರಕಟಗೊಂಡವು. ಇವರ ಕಥೆಗಳನ್ನು ಓದುತ್ತಾ, ಗಮನಿಸುತ್ತಾ ಬಂದ ಕಾದಂಬರಿಕಾರರಾದ ತ.ರಾ. ಸುಬ್ಬರಾಯರು ಒಮ್ಮೆ ‘ಗಂಭೀರ ಸಾಹಿತ್ಯ ರಚಿಸಲು ಜನರಿದ್ದಾರೆ. ನೀನು ಲಘು ಬರಹವನ್ನು ರೂಢಿಸಿಕೋ’ ಎಂದು ಸಲಹೆ ನೀಡಿದಾಗ ಲಘುಬರಹದ ಬರವಣಿಗೆಯನ್ನು ಪ್ರಾರಂಭಿಸಿದರು. ಹರಿಹರ, ದಾವಣಗೆರೆಗಳಲ್ಲಿ ನೋಡುತ್ತಿದ್ದ ನಾಟಕಗಳ ಪ್ರಭಾವದಿಂದ ನಾಟಕಗಳ ರಚನೆಗೆ ಇಳಿದರು.
ದಾಶರಥಿ ದೀಕ್ಷಿತರು ಬೆಂಗಳೂರಿಗೆ ಬಂದನಂತರ ಪ್ರಾರಂಭಿಸಿದ್ದು ‘ಚಿತ್ರಕಲಾವಿದರು’ ತಂಡ. ಎಸ್.ರಾಮನಾಥ್‌, ಎಸ್‌. ಶಿವರಾಂ (ಸಹೋದರರು), ಎ.ಎಸ್‌.ಮೂರ್ತಿ ಎ.ಎಲ್‌. ಶ್ರೀನಿವಾಸಮೂರ್ತಿ ಮುಂತಾದವರೆಲ್ಲರೂ ಇವರೊಡನೆ ಕೈ ಜೋಡಿಸಿದರು. ಇವರು ಬರೆದ ಮೊದಲ ನಾಟಕ ‘ಅಜ್ಜಿ ಆಸ್ತಿ’ 1952ರಲ್ಲಿ ಪ್ರಯೋಗಗೊಂಡು ಪ್ರೇಕ್ಷಕರಿಂದ ದೊರೆತ ಪ್ರೋತ್ಸಾಹದಿಂದ ‘ಅಳಿಯದೇವರು’, ‘ಲಂಬೋದರ’ ಮುಂತಾದ ನಾಟಕಗಳನ್ನು ಬರೆದರು.
ದಾಶರಥಿ ದೀಕ್ಷಿತ್ ಅವರು, ಅ.ನ.ಕೃ. ಅವರ ಮುನ್ನುಡಿಯೊಡನೆ ಪ್ರಕಟಗೊಂಡ ತಮ್ಮ ಲಘುಬರಹಗಳ ಸಂಗ್ರಹವಾದ ‘ಪ್ರೇತ ಸಂಹಾರ’ವನ್ನು ಓದಲು ಕೊರವಂಜಿ ಹಾಸ್ಯ ಪತ್ರಿಕೆಯ ಸಂಪಾದಕರಾದ ಎಂ. ಶಿವರಾಂ (ರಾಶಿ) ಅವರಿಗೆ ನೀಡಿದರು. ಓದಿ ಮೆಚ್ಚಿದ ರಾಶಿಯವರು ಕೊರವಂಜಿ ಪತ್ರಿಕೆಗೂ ಬರೆಯಲು ಪ್ರೇರೇಪಿಸಿದರು. ಹೀಗೆ ಬರೆದ ಲಘುಲೇಖನಗಳ ಸಂಗ್ರಹ ‘ಪಕೋಡ ಪ್ರಿಯ ದಫೇದಾರ್ ದೇರಣ್ಣ’ ಪುಸ್ತಕಕ್ಕೆ ಡಿ.ವಿ.ಜಿ. ಯವರು ಮುನ್ನುಡಿ ಬರೆದು ಹಾರೈಸಿದರು.
ಕಥೆ, ಲಘುಬರಹಗಳು, ನಗೆ ನಾಟಕಗಳ ಜೊತೆಗೆ ದಾಶರಥಿ ದೀಕ್ಷಿತ್ ಅವರು ಬರೆದ ಮೊದಲ ಕಾದಂಬರಿ ‘ಬಾಳ ಬಂಧನ’. ನಂತರ ಬರೆದ ಹಾಸ್ಯ ಕಾದಂಬರಿಗಳು ಮಾವನ ಮನೆ, ಗಂಡಾಗಿ ಕಾಡಿದ್ದ ಗುಂಡ ಮತ್ತು ಮರಳಿ ಮಠಕ್ಕೆ. ತಾವು ಕಾರ್ಯ ನಿರ್ವಹಿಸುತ್ತಿದ್ದ ವಿಮಾನ ಕಾರ್ಖಾನೆಯಿಂದ ಅನಿರೀಕ್ಷಿತವಾಗಿ ಇಂಗ್ಲೆಂಡ್‌ ಪ್ರವಾಸದ ಅವಕಾಶ ದೊರೆತಾಗ ಆ ಪ್ರವಾಸಾನುಭವದಿಂದ ಸೃಷ್ಟಿಯಾದದ್ದು ‘ಗಾಂಪರ ಗುಂಪು’ ಎಂಬ ನಗೆ ನಾಟಕ.
ದಾಶರಥಿ ದೀಕ್ಷಿತ್ ಅವರ ರಚನೆಗಳಲ್ಲಿ ಅಳಿಯದೇವರು, ಅಜ್ಜಿ ಆಸ್ತಿ, ಲಂಬೋಧರ, ಸಿಡ್ಲುಮರಿ, ಗಾಂಪರ ಗುಂಪು, ಡಾ|| ಬ್ರಹ್ಮಚಾರಿ, ತಂಬೂರಿ ತಮ್ಮಯ್ಯ, ಅಜ್ಜನ ಅವಾಂತರ ಮೊದಲಾದವು ನಾಟಕಗಳು. ಮಾವನ ಮನೆ, ಮಾವನ ಮಗಳು, ಬೆಡಗಿನ ಬಲೆ, ಪಂಕಜಿ ಪರಿಣಯ, ಬಾಳಬಂಧನ, ಗಂಡಾಗಿ ಕಾಡಿದ್ದ ಗುಂಡ, ಅನುರಾಗ ಸುಧಾ, ಮದುವೆ ಉಡುಗೊರೆ, ಮರಳಿ ಮಠಕ್ಕೆ ಮುಂತಾದವು ಕಾದಂಬರಿಗಳು. ಪ್ರೇತಸಂಹಾರ, ಗಾಂಪರಗಾಡಿ, ಗಂಡನ ಪೂಜನೆ, ಪಕೋಡ ಪ್ರಿಯ ದಫೆದಾರ್ ದೇರಣ್ಣ, ಇಂದ್ರಿ-ಸುಂದ್ರಿ, ಬೆದರುಬೊಂಬೆ, ಗಾಂಪಾಯಣ, ಕಾಮಣ್ಣನ ಕೋಟು, ಕನ್ನಡದ ಗಾಡಿ, ವೈದ್ಯನ ವಿವಾಹ, ಬೊಂಬೆ ಕೊಂಡಳು ಮೊದಲಾದವು ನಗೆಬರಹಗಳ ಸಂಕಲನಗಳು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು ಬ್ರಿಗೇಡ್ ರಸ್ತೆ ಬಳಿಕ ಮಹಾಲಕ್ಷ್ಮಿ ಲೇಔಟ್ ರಸ್ತೆಯಲ್ಲಿ ಬೃಹತ್ ಗುಂಡಿ ಸೃಷ್ಟಿ.

Wed Jan 18 , 2023
ಬೆಂಗಳೂರು, ಜನವರಿ 18: ನಗರದಲ್ಲಿ ಇತ್ತೀಚೆಗಷ್ಟೇ ಬೃಹತ್ ರಸ್ತೆಗುಂಡಿ ಕಾಣಿಸಿಕೊಂಡ ಬೆನ್ನಲ್ಲೆ ಮಹಾಲಕ್ಷ್ಮಿ ಮೆಟ್ರೊ ನಿಲ್ದಾಣದಿಂದ ಸುಮಾರು 50 ಮೀಟರ್ ದೂರದಲ್ಲಿರುವ ಮುಖ್ಯರಸ್ತೆಯಲ್ಲೇ ಮತ್ತೊಂದು ರಸ್ತೆಗುಂಡಿ ಕಾಣಿಸಿಕೊಂಡು ಸಂಚಾರಕ್ಕೆ ತೊಂದರೆ ಮಾಡಿದ ಘಟನೆ ಎರಡು ದಿನದ ಹಿಂದಷ್ಟೇ ನಡೆದಿದೆ. ಕಳೆದ ವಾರದ ಬ್ರಿಗೇಡ್ ರಸ್ತೆಯ ಜಾನ್ಸನ್ ಮಾರುಕಟ್ಟೆ ಬಳಿ ರಸ್ತೆಯಲ್ಲಿ ಬೃಹತ್ ರಸ್ತೆಗುಂಡಿ ನಿರ್ಮಾಣವಾಗಿತ್ತು. ಇದರಿಂದ ಬೈಕ್ ಸವಾರರೊಬ್ಬರು ಬಿದ್ದಿದ್ದರಿಂದ ಅವರಿ ಗಾಯವಾಗಿತ್ತು. ಇದಾದ ಐದು ದಿನಗಳ ಅಂತರದಲ್ಲಿ ಮಂಗಳವಾರ […]

Advertisement

Wordpress Social Share Plugin powered by Ultimatelysocial