ದ. ಬಾ. ಕುಲಕರ್ಣಿ

ದತ್ತಾತ್ರೇಯ ಬಾಲಕೃಷ್ಣ ಕುಲಕರ್ಣಿ ಅವರು ಬರಹಗಾರರಾಗಿ ಮತ್ತು ಕನ್ನಡದ
ಸಾಹಿತ್ಯದ ಪರಿಚಾರಿಕರಾಗಿ ಪ್ರಸಿದ್ಧ ಹೆಸರು.
ದತ್ತಾತ್ರೇಯ ಬಾಲಕೃಷ್ಣ ಕುಲಕರ್ಣಿ ಅವರು ಬೆಳಗಾಂ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನಕೊಪ್ಪದಲ್ಲಿ 1916ರ ಮಾರ್ಚ್ 23 ರಂದು ಜನಿಸಿದರು. ಹುಟ್ಟಿದೂರಿನಲ್ಲಿಯೇ ಮುಲ್ಕಿ ಪರೀಕ್ಷೆ ಮುಗಿಸಿದ ನಂತರ ದೊಡ್ಡಮ್ಮನ ಮಗ ಪ್ರಹ್ಲಾದನನ್ನು ಕರೆದುಕೊಂಡು ಧಾರವಾಡಕ್ಕೆ ಬಂದರು. ಇವರ ಸೋದರ ಮಾವನವರಾದ ಗೋವಿಂದರಾವ್ ಚುಳಕಿಯವರು ಆಗ ಗೆಳೆಯರ ಗುಂಪಿನ ಸದಸ್ಯರಾಗಿದ್ದರು. ಚುಳಕಿಯವರು ಮನೋಹರ ಗ್ರಂಥಮಾಲೆಯ ಸಂಸ್ಥಾಪಕರಲ್ಲೊಬ್ಬರು. ಮುಂದೆ ಈ ಗ್ರಂಥ ಮಾಲೆಯನ್ನು ಜಿ.ಬಿ. ಜೋಶಿಯವರು ವಹಿಸಿಕೊಂಡ ನಂತರ ಚುಳಕಿಯವರು ಮನೋಹರ ಗ್ರಂಥ ಭಂಡಾರವನ್ನು ತೆರೆದು ಈ ಇಬ್ಬರಿಗೂ ಉದ್ಯೋಗದ ಅವಕಾಶವನ್ನು ಕಲ್ಪಿಸಿದರು.
ಮನೋಹರ ಗ್ರಂಥ ಭಂಡಾರವನ್ನು ಪ್ರಹ್ಲಾದನು ಕುಳಿತು ನೋಡಿಕೊಂಡರೆ ದ. ಬಾ. ಕುಲಕರ್ಣಿಯವರು ಲಲಿತ ಸಾಹಿತ್ಯ ಮಾಲೆ ಎಂಬ ಪ್ರಕಾಶನ ಸಂಸ್ಥೆಯನ್ನು ತೆರೆದು, ತಾವು ಪ್ರಕಟಿಸಿದ ಪುಸ್ತಕಗಳನ್ನು ಹೊತ್ತು ಮೈಸೂರು, ಕೊಡಗು, ಮುಂಬೈ, ಹೈದರಾಬಾದು, ಮದರಾಸುಗಳನ್ನು ಸುತ್ತಿದರು. ಹೀಗೆ ಪರಿಚಾರಿಕೆ ಕೈಗೊಂಡಾಗ ಇವರಿಗೆ ದೊರೆತ ಲಾಭವೆಂದರೆ ಅನೇಕ ಸಾಹಿತಿಗಳ ಪರಿಚಯ. ಬೇಂದ್ರೆ, ಗೋಕಾಕರು, ಮಾಸ್ತಿ, ಕಾರಂತರು ಮುಂತಾದ ಅನೇಕ ಸಾಹಿತಿಗಳ ಪ್ರೀತಿಯನ್ನು ಗಳಿಸಿದರು.
ದ. ಬಾ. ಕುಲಕರ್ಣಿ ಅವರು ಪ್ರಾರಂಭಿಸಿದ್ದ ಮನೋಹರ ಗ್ರಂಥ ಭಂಡಾರವು ಬಸ್ಟಾಂಡಿನ ಎದುರಿಗೇ ಇದ್ದು ಅನೇಕ ಸಾಹಿತಿಗಳು ಪ್ರತಿನಿತ್ಯವೂ ಒಂದೆಡೆ ಸೇರುವ ಕೇಂದ್ರ ಸ್ಥಳವಾಯಿತು. ಹೀಗೆ ಸಾಹಿತಿಗಳ ಒಡನಾಟದಿಂದ ದ. ಬಾ. ಕುಲಕರ್ಣಿಯವರು ಅನೇಕ ಪ್ರಬಂಧಗಳನ್ನು ರಚಿಸಿದರು. ಇವರ ಬದುಕಿನ ಅಂಗವಾಗಿದ್ದ ಪುಸ್ತಕ ಪ್ರಕಾಶನ, ಮಾರಾಟದ ವಿಷಯವನ್ನೇ ಕುರಿತು ಬರೆದ ಪ್ರಬಂಧ ‘ಸಾಹಿತ್ಯ ಭಂಡಾರಿ’ ಎಂಬುದು. ನಂತರ ಹಲವಾರು ಪ್ರಬಂಧಗಳು, ಸಣ್ಣ ಕಥೆಗಳನ್ನು ಬರೆದರು. ಕೊಡಗಿನ ಗೌರಮ್ಮ ಮತ್ತು ಗೀತಾ ಕುಲಕರ್ಣಿಯವರು ಕಥೆಗಾರ್ತಿಯರಾಗಿ ಹೆಸರು ಮಾಡಿದ್ದು ದ. ಬಾ. ಕುಲಕರ್ಣಿಯವರ ಪ್ರಕಾಶನದ ಸ್ಫೂರ್ತಿಯಿಂದಲೇ. ಕತೆಗಾರ್ತಿ ಕೊಡಗಿನ ಗೌರಮ್ಮನವರು ದುರಂತದಲ್ಲಿ ತೀರಿಕೊಂಡಾಗ ತಮ್ಮ ಮನದ ಅಳಲಿಗೆ ಅಕ್ಷರ ರೂಪಕೊಟ್ಟು ಬರೆದ ಹೃದಯ ಸ್ಪರ್ಶಿ ಲೇಖನ ‘ನಾ ಕಂಡ ಗೌರಮ್ಮ’ ಎಂಬ ವ್ಯಕ್ತಿಚಿತ್ರ. ಇದು ಬಹುಜನ ಓದುಗರಿಂದ ಪ್ರಶಂಸಿಸಲ್ಪಟ್ಟ ನಂತರ ಹಲವಾರು ವ್ಯಕ್ತಿಚಿತ್ರಗಳನ್ನು ಬರೆದರು. ಹೀಗೆ ಬರೆದ ವ್ಯಕ್ತಿ ಚಿತ್ರಗಳು ‘ಹಕ್ಕಿನೋಟ’ ಮತ್ತು ‘ಸೀಮಾ ಪುರುಷರು’ ಎಂಬ ಸಂಕಲನಗಳಲ್ಲಿ ಸೇರಿವೆ. ಕೇಂದ್ರ ಸಾಹಿತ್ಯ ಅಕಾಡಮಿಗಾಗಿ ಇವರು ಭಾಷಾಂತರಿಸಿದ ವ್ಯಕ್ತಿಚಿತ್ರಕೃತಿ ‘ಸ್ಮೃತಿ ಚಿತ್ರಗಳು’. ‘ಹಾಸುಹೊಕ್ಕು’, ‘ಕಪ್ಪು ಹುಡುಕಿ’, ‘ನಾಳಿನ ಕನಸು’ ಇವರು ಪ್ರಕಟಿಸಿದ ಮೂರು ಕಥಾ ಸಂಕಲನಗಳು. ‘ಪರಿಹಾರ’ ಎಂಬುದು ಕಾದಂಬರಿ. ಸಮಕಾಲೀನ, ಸಾಮಾಜಿಕ ಪರಿಸ್ಥಿತಿ ಸ್ಥಿತ್ಯಂತರಗಳು ಆಧುನಿಕ ಜೀವನ ಕ್ರಮದಿಂದ ಅನಿವಾರ್ಯವಾಗಿ ಸಡಿಲಗೊಳ್ಳುತ್ತಿರುವ ಸಾಮಾಜಿಕ ಕಟ್ಟುಪಾಡುಗಳನ್ನು ‘ನಾಳಿನ ಕನಸು’ ಕಥಾ ಸಂಕಲನದಲ್ಲಿ ಕಾಣಬಹುದಾಗಿದೆ.
ದ. ಬಾ.ಕುಲಕರ್ಣಿ ಅವರು ಬರೆದ ಪ್ರಬಂಧಗಳು ಕಸ್ತೂರಿ, ಕರ್ಮವೀರ, ಪ್ರಜಾವಾಣಿ, ಜಯಕರ್ನಾಟಕ ಮತ್ತು ನರಸಿಂಹ ಪತ್ರಿಕೆಗಳಲ್ಲಿ ಮತ್ತು ಆಕಾಶವಾಣಿಯಲ್ಲಿ ಪ್ರಸಾರಗೊಂಡ ನಂತರ ‘ಸಾವಧಾನ’ ಎಂಬ ಹೆಸರಿನಿಂದ ಪ್ರಕಟಗೊಂಡು ಮೈಸೂರು ವಿಶ್ವವಿದ್ಯಾಲಯದ ಬಿ.ಕಾಂ. ತರಗತಿಗಳಿಗೆ ಪಠ್ಯವಾಗಿ ಆಯ್ಕೆಯಾಯಿತು. ನಂತರ ಈ ಸಂಕಲನಕ್ಕೆ ಅವರು ತೀರಿಕೊಂಡ ನಂತರ ಮತ್ತಷ್ಟು ಪ್ರಬಂಧಗಳು ಸೇರಿ ಪ್ರಕಟವಾದ ನಂತರ ಬೆಂಗಳೂರು ವಿ.ವಿ.ದ ಪಿ.ಯು. ತರಗತಿಗಳಿಗೆ ಪಠ್ಯವಾಗಿಯೂ ಆಯ್ಕೆಯಾಯಿತು. ಹೀಗೆ ‘ಸಾವಧಾನ’ ಪ್ರಬಂಧ ಸಂಕಲನವು ಅನೇಕ ಮುದ್ರಣಗಳನ್ನು ಕಂಡ ಪ್ರಬಂಧ ಸಂಕಲನ. ಇವರ ಲೇಖನಗಳ ಮತ್ತೊಂದು ಸಂಕಲನ ‘ಬದುಕಿದ ಬಾಳು’.
ದ. ಬಾ. ಕುಲಕರ್ಣಿಯವರು 1963ರ ಆಗಸ್ಟ್‌ 11ರಂದು ನಿಧನರಾದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: 

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೋವಿಡ್-19 ಪ್ರಕರಣಗಳು: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 4,100 ಹೆಚ್ಚು ಸಾವುಗಳು, 1,660 ಹೊಸ ಪ್ರಕರಣಗಳು;

Sat Mar 26 , 2022
ಭಾರತದ COVID-19 ಸಾವಿನ ಸಂಖ್ಯೆ 5,20,855 ಕ್ಕೆ ಏರಿದೆ ಮತ್ತು ಒಂದು ದಿನದಲ್ಲಿ 4,100 ಸಾವುಗಳು ದಾಖಲಾಗಿವೆ ಮತ್ತು ಮಹಾರಾಷ್ಟ್ರವು ರಾಜ್ಯದಲ್ಲಿ ವೈರಲ್ ಕಾಯಿಲೆಯಿಂದ ಉಂಟಾದ ಸಾವಿನ ಸಂಖ್ಯೆಯನ್ನು ಸಮನ್ವಯಗೊಳಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ. ಒಟ್ಟು 1,660 ಹೊಸ ಪ್ರಕರಣಗಳು ದೇಶದ COVID-19 ಸಂಖ್ಯೆಯನ್ನು 4,30,18,032 ಕ್ಕೆ ತಳ್ಳಿದೆ, ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 20,000 ಕ್ಕಿಂತ ಕಡಿಮೆಯಾಗಿದೆ ಎಂದು ಸಚಿವಾಲಯದ ಡೇಟಾ ಪ್ರಕಾರ ಬೆಳಿಗ್ಗೆ […]

Advertisement

Wordpress Social Share Plugin powered by Ultimatelysocial