ಸರಳ ಸಜ್ಜನಿಕೆಯಲ್ಲಿ ಬೆಸೆದಂತಿರುವ ನಮ್ರತೆಯ ಹಿರಿಯ ಚೇತನರು ದೊಡ್ಡರಂಗೇಗೌಡರು.ಶ್ರೀಯುತ ರಂಗೇಗೌಡ!

ವಿದ್ವಾಂಸ, ಕವಿ, ಪ್ರಾಧ್ಯಾಪಕ, ಚಲನಚಿತ್ರ ಸಾಹಿತಿ, ಉಪನ್ಯಾಸಕ ಹೀಗೆ ಹಲವು ರೀತಿಯಲ್ಲಿ ಶೋಭಾಯಮಾನರಾಗಿ ಕನ್ನಡ ನಾಡಿನಲ್ಲಿ ಪ್ರಕಾಶಮಾನರಾಗಿದ್ದು, ಇವೆಲ್ಲ ಗುಣಗಳನ್ನೂ ಸವಿಪಾಕವಾಗಿ ಎಂಬಂತೆ ಸರಳ ಸಜ್ಜನಿಕೆಯಲ್ಲಿ ಬೆಸೆದಂತಿರುವ ನಮ್ರತೆಯ ಹಿರಿಯ ಚೇತನರು ದೊಡ್ಡರಂಗೇಗೌಡರು.ಶ್ರೀಯುತ ರಂಗೇಗೌಡರು ಮತ್ತು ಅಕ್ಕಮ್ಮನವರ ಮಗನಾಗಿ 1946ರ ಫೆಬ್ರುವರಿ 7ರಂದುಜನಿಸಿದ ದೊಡ್ಡರಂಗೇಗೌಡರು ಕುರುಬರ ಹಳ್ಳಿ, ಬಡವನ ಹಳ್ಳಿ, ಮಧುಗಿರಿ, ತುಮಕೂರು ಹಾಗೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ 1970ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಆನರ್ಸ್ ಪದವಿ, 1972 ರಲ್ಲಿ ಎಂ.ಎ. ಪದವಿ ಪಡೆದರು. ಸ್ನಾತಕೋತ್ತರ ಪದವಿ ಸಂದರ್ಭದಲ್ಲಿ ಜಾನಪದದ ಕುರಿತು ಅವರು ವಿಶೇಷ ಅಧ್ಯಯನ ಕೈಗೊಂಡರು. 2004 ವರ್ಷದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ‘ನವೋದಯ ಕಾವ್ಯ: ಒಂದು ಪುನರ್ ಮೌಲ್ಯಮಾಪನ’ ಎಂಬ ಮಹಾಪ್ರಬಂಧಕ್ಕಾಗಿ ಅವರು ಡಾಕ್ಟರೇಟ್ ಪದವಿಯನ್ನು ಗಳಿಸಿದರು.1972ರಿಂದ ಬೆಂಗಳೂರು ನಗರದ ಕೃಷ್ಣರಾಜಮಾರುಕಟ್ಟೆ ಬಳಿಯಲ್ಲಿನ ‘ಎಸ್.ಎಲ್.ಎನ್. ಕಲೆ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿ’ನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ದೊಡ್ಡರಂಗೇಗೌಡರು 2002ರಲ್ಲಿ ನಿವೃತ್ತರಾಗಿದ್ದಾರೆ. ಅವರು ಶೇಷಾದ್ರಿಪುರಂ ಕಾಲೇಜಿನ ಕನ್ನಡ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕರಾಗಿ ಸಹಾ ಕೆಲಸಮಾಡಿದ್ದಾರೆ. ಕನ್ನಡ ನಾಡು ಅವರನ್ನು ವಿಧಾನ ಪರಿಷತ್ತಿಗೂ ಬರಮಾಡಿಕೊಂಡಿದೆ. ರಾಜ್ಯ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳಲ್ಲೂ ಅವರ ಸೇವೆ ಸಂದಿದೆ. ದೇಶ. ಅವರಿಗೆ ಪದ್ಮಶ್ರೀ ಗೌರವ ನೀಡಿದೆ. ಕನ್ನಡ ನಾಡು ಅವರಿಗೆ ಬರಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದೆ.ವಿದ್ಯಾರ್ಥಿ ದೆಸೆಯಿಂದಲೇ ಕಥೆ, ಕವಿತೆ, ವಿಮರ್ಶೆಗಳನ್ನು ಬರೆಯುತ್ತಾ ಬಂದ ಡಾ. ದೊಡ್ಡರಂಗೇಗೌಡರು ನೂರಾರು ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟರಾಗಿ ಕಂಗೊಳಿಸಿದ್ದಾರೆ.1972 ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಗೌಡರ ಕವನ ಸಂಕಲನ ‘ಕಣ್ಣು ನಾಲಗೆ ಕಡಲು ಕಾವ್ಯ’ ಕೃತಿಗೆ ಬಹುಮಾನ ಬಂದಿದೆ. 1990ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇವರ ‘ಪ್ರೀತಿ ಪ್ರಗಾಥ’ ಕೃತಿಯು ವರ್ಷದ ಅಭಿಜಾತ ಕಾವ್ಯ ಎಂದು ವಿಮರ್ಶಕರ ಮೆಚ್ಚುಗೆ ಪಡೆದು – “ರತ್ನಾಕರವರ್ಣಿ – ಮುದ್ದಣ ಕಾವ್ಯ ಪ್ರಶಸ್ತಿ” ಗೌರವ ಗಳಿಸಿತು.ದೊಡ್ಡರಂಗೇಗೌಡರು ನವ್ಯ ಕವಿಯಾಗಿ ಕನ್ನಡ ಸಾಹಿತ್ಯದಲ್ಲಿ ವಿಶೇಷ ಛಾಪು ಮೂಡಿಸಿದ್ದು ಅವರ ಕಾವ್ಯ ಸಂಕಲನಗಳಾದ ‘ಜಗಲಿ ಹತ್ತಿ ಇಳಿದು’, ‘ಕಣ್ಣು ನಾಲಿಗೆ ಕಡಲು’, ‘ನಾಡಾಡಿ’, ‘ಮೌನ ಸ್ಪಂದನ’, ‘ಏಳು ಬೀಳಿನ ಹಾದಿ’, ‘ಕುದಿಯುವ ಕುಲುಮೆ’, ‘ಚದುರಂಗದ ಕುದುರೆಗಳು’, ‘ಯುಗವಾಣಿ’, ‘ಅವತಾರ ಐಸಿರಿ’, ‘ಬದುಕು ತೋರಿದ ಬೆಳಕು’, ‘ಹೊಸ ಹೊನಲು’, ‘ಲೋಕಾಯಣ’, ‘ನಿಕ್ಷೇಪ’, ‘ಗೆಯ್ಮೆ’ ಮುಂತಾದವು ಕನ್ನಡ ಕಾವ್ಯ ರಸಿಕರ ಮತ್ತು ವಿಮರ್ಶಕರ ನಲ್ಮೆ ಸಂಪಾದಿಸಿವೆ. ಅವರ ‘ಪ್ರೀತಿ ಪ್ರಗಾಥ’ ಮತ್ತು ‘ಹಳ್ಳಿ ಹುಡುಗಿ ಹಾಡು – ಪಾಡು’ ಪ್ರಗಾಥಗಳ ಸಾಲಿಗೆ ಸೇರಿವೆ. ಮುಕ್ತಕಗಳಲ್ಲಿ ‘ಮಣ್ಣಿನ ಮಾತುಗಳು’, ‘ಮಿಂಚಿನ ಗೊಂಚಲು’ ಪ್ರಧಾನವಾಗಿವೆ. ದೊಡ್ಡರಂಗೇಗೌಡರು ಗದ್ಯಕೃತಿಗಳಲ್ಲೂ ಸಮಾನ ಕೃಷಿ ನಡೆಸಿದ್ದು ‘ವರ್ತಮಾನದ ವ್ಯಂಗ್ಯದಲ್ಲಿ’, ‘ವಿಚಾರ ವಾಹಿನಿ’, ‘ವಿಶ್ವಮುಖಿ’, ‘ದಾರಿ ದೀಪಗಳು’ ಮುಂತಾದ ಕೃತಿಗಳನ್ನು ನೀಡಿದ್ದಾರೆ. ‘ಅನನ್ಯನಾಡು ಅಮೆರಿಕ’ ಮತ್ತು ‘ಪಿರಮಿಡ್ಡುಗಳ ಪರಿಸರದಲ್ಲಿ’ ದೊಡ್ಡರಂಗೇಗೌಡರ ಪ್ರವಾಸ ಕಥನಗಳು. ದೊಡ್ಡರಂಗೇಗೌಡರು ಅನೇಕ ಭಕ್ತಿಗೀತೆಗಳ ಸಂಕಲನವನ್ನೂ ರಚಿಸಿದ್ದಾರೆ. ಶ್ರೀಸಿದ್ದೇಶ್ವರ ಸ್ತುತಿ, ಭಕ್ತಿ ಕುಸುಮಾಂಜಲಿ, ನೂರೆಂಟು ನಮನ, ಶ್ರೀ ಗುರುಚರಣದಲ್ಲಿ, ವಚನವಾರಿದಿ ಇವುಗಳಲ್ಲಿ ಪ್ರಮುಖವಾಗಿವೆ.ಕನ್ನಡ ಚಲನಚಿತ್ರಗೀತೆಗಳಲ್ಲಿ ಜಾನಪದ, ನವ್ಯ ಸಾಹಿತ್ಯಗಳ ಸೊಬಗನ್ನು ತುಂಬಿದ ಕೀರ್ತಿವಂತರಲ್ಲಿ ದೊಡ್ಡರಂಗೇಗೌಡರು ಪ್ರಮುಖರಾಗಿ ಕಾಣುತ್ತಾರೆ. ಭಾರತೀಯ ಸಾಮಾನ್ಯನ ಆಪ್ತ ಮಾಧ್ಯಮಗಳಾದ ಸಿನಿಮಾ, ದೂರದರ್ಶನ, ರೇಡಿಯೋ ಹಾಗೂ ಶ್ರವ್ಯಮಾಧ್ಯಮಗಳಲ್ಲಿ ದೊಡ್ಡರಂಗೇಗೌಡರು ಅಪಾರ ಸಾಧನೆ ಮಾಡಿರುವುದನ್ನು ನೆನೆದಾಗ ಅವರನ್ನು ಅರಿಯದ ಕನ್ನಡಿಗನೇ ಇಲ್ಲ ಎಂಬುದು ಮನವರಿಕೆಯಾಗುತ್ತದೆ.ಎಪ್ಪತ್ತರ ದಶಕದಲ್ಲಿ ಮೂಡಿಬಂದ ‘ಮಾಗಿಯ ಕನಸು’ ಚಿತ್ರದ ‘ಬಂದಿದೆ ಬದುಕಿನ ಬಂಗಾರದಾ ದಿನ’ ಗೀತೆಯೊಂದಿಗೆ ಚಿತ್ರರಂಗಕ್ಕೆ ಬಂದ ದೊಡ್ಡರಂಗೇಗೌಡರು ಕನ್ನಡ ಚಿತ್ರರಂಗಕ್ಕೆ ಕಳೆದ ಮೂರ್ನಾಲ್ಕು ದಶಕಗಳಲ್ಲಿ ಬಂಗಾರದಂತಹ ಗೀತೆಗಳನ್ನು ನೀಡುತ್ತಾ ಬಂದಿದ್ದಾರೆ. ‘ಬಂಗಾರದ ಜಿಂಕೆ’ಯ ‘ಒಲುಮೆ ಸಿರಿಯಾ ಕಂಡು’; ‘ಪರಸಂಗದ ಗೆಂಡೆತಿಮ್ಮ’ನ ‘ತೇರ ಏರಿ ಅಂಬರದಾಗೆ’, ‘ನೋಟದಾಗೆ ನಗೆಯಾ ಮೀಟಿ’ ಮತ್ತು ‘ನಿನ್ನ ರೂಪು ಎದೆಯ ಕಲಕಿ’; ‘ಕಿಲಾಡಿ ಜೋಡಿ’ಯ ‘ಆಡಬೇಕು ಕರಾಟೆ ಆಡಬೇಕು’; ‘ಭೂಲೋಕದಲ್ಲಿ ಯಮರಾಜ’ನ ‘ಎಂದೂ ಕಾಣದ ಬೆಳಕು ಕಂಡೆ’, ‘ಪಡುವಾರಳ್ಳಿ ಪಾಂಡವ’ರ ‘ಜನ್ಮ ನೀಡಿದ ಭೂತಾಯಿಯ ನಾ ಹೇಗೆ ತಾನೆ ಮರೆಯಲಿ’, ‘ಸುವರ್ಣ ಸೇತುವೆ’ಯ ‘ಮಲೆನಾಡಿನ್ ಮೂಲೆನ್ಯಾಗೆ ಇತ್ತೊಂದು ಸಣ್ಣ ಹಳ್ಳಿ’, ‘ಅರುಣ ರಾಗ’ದ ನಾನೊಂದು ತೀರ ನೀನೊಂದು ತೀರ’, ‘ಹುಲಿ ಹೆಜ್ಜೆ’ಯ ‘ಕಂಡದ್ದು ಕಂಡ್ಹಾಂಗೆ’, ‘ಬೆಳ್ಳಿ ಕಾಲುಂಗುರ’ದ ‘ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ’, ‘ಮತ್ಸರ’ದ ‘ಹೊತ್ತಾರೆ ಸೂರ್ಯನಂಗೆ’, ‘ಶರವೇಗದ ಸರದಾರ’ನ ‘ಕನ್ನಡನಾಡಿನ ರನ್ನದ ರತುನ’, ‘ಆಲೆಮನೆ’ಯ ‘ನಮ್ಮೂರ ಮಂದಾರ ಹೂವೆ’, ‘ಎಲ್ಲ ಮೇಲು ಕೀಳು ಸುಳ್ಳು ಭೇದಭಾವ ಬಗೆದ ಮನುಜ ಕಣೋ’; ‘ಪ್ರಾಯ ಪ್ರಾಯ ಪ್ರಾಯ’ದ ‘ಭೂಮೀ ತಾಯಾಣೆ ನೀ ಇಷ್ಟ ಕಣೆ’, ‘ಟೋನಿ’ಯ ‘ಆನಂದವೇ ಮೈತುಂಬಿದೆ’ ಮತ್ತು ‘ನೀಲಿಯ ಬಾನಿಂದ’; ‘ಹೃದಯಗೀತೆ’ಯ ‘ಹೃದಯ ಗೀತೆ ಹಾಡುತಿರೆ’, ‘ಜನುಮದ ಜೋಡಿ’ಯ ‘ಕೋಲು ಮಂಡೆ ಜಂಗಮ ದೇವರು’, ‘ಅಶ್ವಮೇಧ’ದ ‘ಹೃದಯ ಸಮುದ್ರ ಕಲಕಿ’, ‘ದೊಡ್ಡಮನೆ ಎಸ್ಟೇಟಿ’ನ ‘ಮನಸಿನಾಗೆ ಕೂಗಿದೆ’ ಇತ್ಯಾದಿ ಇತ್ಯಾದಿಯಾಗಿ ದೊಡ್ಡರಂಗೇಗೌಡರ ರಂಗುರಂಗಿನ ಪ್ರಸಿದ್ಧ ಹಾಡುಗಳನ್ನೇ ಪುಟಗಟ್ಟಲೆ ಪಟ್ಟಿ ಮಾಡಬಹುದು. ಅವರು ರಚಿಸಿದ ಚಿತ್ರಗೀತೆಗಳ ಸಂಖ್ಯೆಯೇ ಆರು ಶತಕಗಳನ್ನು ದಾಟಿವೆ.‘ಮಾವು ಬೇವು’, ‘ಗೀತವೈಭವ’, ‘ಕಾವ್ಯ-ಕಾವೇರಿ’, ‘ತಂಗಾಳಿ’, ‘ಪ್ರೀತಿ ಭಾವನೆ’, ‘ಪ್ರೇಮಪಯಣ’, ‘ಹೃದಯದಹಕ್ಕಿ’, ‘ಹೋಳಿಹುಣ್ಣಿಮೆ’, ‘ಯುಗಾದಿಚೈತ್ರೋತ್ಸವ’, ‘ಮಾವು ಮಲ್ಲಿಗೆ’, ‘ಭೂಮಿ ಬಾನು’, ‘ಸಿರಿ ಸಂವರ್ಧನ’, ‘ನಲ್ಮೆ ನೇಸರ’, ‘ರಾಗರಂಗು’, ‘ಅಂತರಂಗದಹೂಬನ’ ಮುಂತಾದವು ದೊಡ್ಡರಂಗೇಗೌಡರ ಕ್ಯಾಸೆಟ್-ಸಿಡಿ ಲೋಕದ ಸುಂದರ ಕೊಡುಗೆಗಳು. ಭಕ್ತಿಗೀತೆಗಳಲ್ಲೂ ಅವರ ಕ್ಯಾಸೆಟ್-ಸಿಡಿಗಳು ಸಾಕಷ್ಟು ಧ್ವನಿಮಾಡಿವೆ.ಸಾಹಿತ್ಯ ಮತ್ತು ಸಿನಿಮಾಲೋಕಗಳೆರಡರಲ್ಲೂ ದೊಡ್ಡರಂಗೇಗೌಡರು ಕನ್ನಡ ನಾಡಿನ ಹಲವಾರು ವಿಶಿಷ್ಟ ಗೌರವಗಳಿಗೆ ಪಾತ್ರರಾಗಿದ್ದಾರೆ. ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಂದಿರುವುದು ಮತ್ತು ಮುಂಬರುವ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ಸಂದಿರುವುದು ಅವರ ಅಭಿಮಾನಿಗಳಿಗೆ ಹಿರಿದು ಸಂತಸ ತಂದಿದೆ.ಅವರ ವಿಸ್ತೃತ ಕಾರ್ಯವ್ಯಾಪ್ತಿಯ ನಡುವೆ ಉತ್ತಮ ಗುಣಮಟ್ಟ ನೀಡುವುದಕ್ಕೆ ಅವರಿಗೆ ಸಮಯ ಸಿಕ್ಕುವುದು ಹೇಗೋ ದೊಡ್ಡರಂಗೇಗೌಡರು ಮತ್ತು ಆ ಪರಮಾತ್ಮ ಇಬ್ಬರೇ ಬಲ್ಲರು. ಆ ಪರಮಾತ್ಮ ನಮಗೆ ದೊಡ್ಡರಂಗೇಗೌಡರ ಮೂಲಕ ಇಂತಹ ಕೊಡುಗೆಗಳನ್ನು ಸದಾಕಾಲ ವೃಷ್ಠಿಸುತ್ತಿರುವಂತಾಗಲಿ. ದೊಡ್ಡರಂಗೇಗೌಡರ ಬದುಕು ಸುಂದರವಾಗಿರಲಿ ಎಂದು ಹಾರೈಸುತ್ತಾ ಅವರಿಗೆ ತುಂಬು ಹೃದಯದ ಗೌರವಪೂರ್ವಕ ಹುಟ್ಟು ಹಬ್ಬದ ಶುಭ ಹಾರೈಕೆಗಳನ್ನು ಸಲ್ಲಿಸೋಣ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಲ ಜೀವನ್ ಮಿಷನ್ ಸುಮಾರು 6 ಕೋಟಿ ಗ್ರಾಮೀಣ ಕುಟುಂಬಗಳಿಗೆ ನೀರನ್ನು ಕೊಂಡೊಯ್ಯುತ್ತದೆ!!!

Wed Feb 16 , 2022
COVID-19 ಮತ್ತು ಲಾಕ್‌ಡೌನ್ ಅಡೆತಡೆಗಳ ಹೊರತಾಗಿಯೂ, 2024 ರ ವೇಳೆಗೆ ಪ್ರತಿ ಮನೆಗೆ ಶುದ್ಧ ಟ್ಯಾಪ್ ನೀರನ್ನು ಒದಗಿಸುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಯನ್ನು ಭಾಷಾಂತರಿಸಲು ಜಲ ಜೀವನ್ ಮಿಷನ್ 5.77 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರು ಸರಬರಾಜು ಮಾಡಿದೆ. ಇದರ ಪರಿಣಾಮವಾಗಿ ಇಂದು ದೇಶದ 9 ಕೋಟಿ ಗ್ರಾಮೀಣ ಕುಟುಂಬಗಳು ಶುದ್ಧ ಟ್ಯಾಪ್ ನೀರು ಸರಬರಾಜಿನ ಪ್ರಯೋಜನಗಳನ್ನು ಅನುಭವಿಸುತ್ತಿವೆ ಎಂದು ಜಲಶಕ್ತಿ ಸಚಿವಾಲಯ ಇಂದು ತಿಳಿಸಿದೆ. […]

Advertisement

Wordpress Social Share Plugin powered by Ultimatelysocial