ತಪ್ಪು ಮಾಡಿದವರು ಹೊರಗೆ ಬರಬೇಕು. ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ.

ಶಿವಮೊಗ್ಗ: ತಪ್ಪು ಮಾಡಿದವರು ಹೊರಗೆ ಬರಬೇಕು. ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಈ ಷಡ್ಯಂತ್ರದ ರೂವಾರಿಗಳು ಯಾರು? ವ್ಯಕ್ತಿಯೋ, ಸಂಸ್ಥೆಯೋ, ಪಕ್ಷವೋ ಎಂದು ಹೊರಗೆ ಬರಬೇಕು. ಆಗ ನಿಜಕ್ಕೂ ಮೃತ ಸಂತೋಷ್ ಆತ್ಮಕ್ಕೆ ಶಾಂತಿ‌ ಸಿಗುತ್ತದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಮೃತ ಹುಡುಗನ ಬಗ್ಗೆ ನನಗೂ ಸಹ ಒಂದು ರೀತಿಯ ಕರುಣೆಯಿದೆ. ಆ ಹುಡುಗನನ್ನು ಯಾರಾದರೂ ದುರುಪಯೋಗ ಮಾಡಿಕೊಂಡರೇ ಎಂಬ ಬಗ್ಗೆ ತನಿಖೆ ಆದ ನಂತರವೇ ಹೊರ ಬರಲಿದೆ. ಈ ಬಗ್ಗೆ ನ್ಯಾಯ ಹೊರಗೆ ಬರಬೇಕು ಎಂದರು.

ಒಪ್ಪಿಗೆ ಪಡೆದು ರಾಜೀನಾಮೆ: ಇಡೀ ರಾಜ್ಯದ ಜನ, ನನ್ನ ಕ್ಷೇತ್ರದಲ್ಲಿ ಗೆಲ್ಲಿಸಿದ ಜನ ನಮ್ಮ ಪರಿವಾರದ ಹಿರಿಯರು, ರಾಜ್ಯ ಹಾಗೂ ರಾಷ್ಟ್ರದ ನಾಯಕರು, ಮಂತ್ರಿಗಳು, ಶಾಸಕರು ಯಾರಿಗೂ ಕೂಡಾ ಇರಿಸುಮುರಿಸು ಆಗಬಾರದೆಂದು ಎಲ್ಲಾ ಹಿರಿಯರ ಒಪ್ಪಿಗೆ ಪಡೆದು ರಾಜೀನಾಮೆ ಕೊಟ್ಟಿದ್ದೇನೆ ಎಂದರು.

ರಾಜೀನಾಮೆ ಕೊಡುವ ವೇಳೆ ಬಲಪ್ರದರ್ಶನ ಅಲ್ಲ. ನಾನು ರಾಜೀನಾಮೆ ಕೊಡುತ್ತೇನೆಂದು ಹೇಳಿದಾಗ ನನ್ನ ಜೊತೆ ಬರುತ್ತೇನೆ ಎಂದಿದ್ದರು. ಒಂದು 3-4 ಕಾರಿನಲ್ಲಿ ಬರುತ್ತಾರೆ ಅಂದುಕೊಂಡಿದ್ದೆ. ಆದರೆ, ನೂರಾರು ಕಾರಿನಲ್ಲಿ ಬರುತ್ತಾರೆಂದು ಗೊತ್ತಿರಲಿಲ್ಲ. ಅವರ ಅಭಿಮಾನ, ಸ್ನೇಹ, ಬಾಂಧವ್ಯ, ಬೆಂಗಳೂರಿನವರೆಗೆ ಬಂದು ಬೆಂಬಲ ಕೊಟ್ಟಿದ್ದು ನನಗೂ ಸಂತೋಷವಾಗಿದೆ ಎಂದರು.

ರಾಜ್ಯದಲ್ಲಿ ಎಲ್ಲರೂ ನನಗೆ ಬೆಂಬಲ ಕೊಡುತ್ತಿದ್ದಾರೆ. ಒಂದೇ ಒಂದು ನನ್ನ ಬಗ್ಗೆ ಒಡಕು ಧ್ವನಿ‌ ಇಲ್ಲ. ಎಲ್ಲರದ್ದು ಒಂದೇ ಧ್ವನಿ‌, ಇದರಲ್ಲಿ ನಿಮ್ಮ ಯಾವುದೇ ತಪ್ಪು ಇಲ್ಲ. ಷಡ್ಯಂತ್ರ ಇದೆ. ಈ ಷಡ್ಯಂತ್ರದಿಂದ ನೀವು ಹೊರಗೆ ಬರುತ್ತೀರಾ ಎಂಬ ಮಾತನ್ನು ಎಲ್ಲರೂ ಹೇಳುತ್ತಿದ್ದಾರೆ ಎಂದರು.

ಅನುಮಾನವಿದೆ: ನಾನು ಅವರಿಗೆ (ಸಂತೋಷ್) ನ್ಯಾಯಾಲಯದ ಮೂಲಕ ನೋಟೀಸ್ ಕೊಟ್ಟಾಗ ಹೆದರಿಕೊಂಡು ಈ ರೀತಿ ಮಾಡಿಕೊಂಡಿದ್ದಾರೆಂದುಕೊಂಡಿದ್ದೆ. ಆದರೆ ಆಮೇಲೆ ನನಗೆ ಒಂದೊಂದೇ ಅನುಮಾನ ಬರುತ್ತಿದೆ. ಇದು ಆತ್ಮಹತ್ಯೆಯೋ, ಕೊಲೆಯೋ ಎಂಬ ಅನುಮಾನ ಬರುತ್ತಿದೆ. ಕೊಲೆ ಎನ್ನುವ ಅಂಶಗಳ ಬಗ್ಗೆ ಬೇರೆ ಬೇರೆಯವರ ಜೊತೆ ಮಾತನಾಡಿದಾಗ ಅನೇಕ ಅಂಶ ಮಾತನಾಡಿದ್ದಾರೆ. ಈ ಬಗ್ಗೆ ಆದಷ್ಟು ಬೇಗ ತನಿಖೆ ವರದಿ ಬರಬೇಕು ಅಂತಾ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದೇನೆ ಎಂದು ಈಶ್ವರಪ್ಪ ಹೇಳಿದರು.

ಇದು ಆತ್ಮಹತ್ಯೆಯೋ, ಕೊಲೆಯೋ ಎಂದು ಗೊತ್ತಿಲ್ಲ. ಏನೂ ಗೊತ್ತಿಲ್ಲದೇ ಸರಕಾರ ಸಹ ಏನು ಮಾಡಲು ಸಾಧ್ಯವಿಲ್ಲ. ತನಿಖೆಯ ವರದಿ ಬಂದ ನಂತರ ಸಿಎಂ ಜೊತೆ ಮಾತನಾಡುತ್ತೇನೆ. ತನಿಖೆ ನಡೆಯುವ ಸಂದರ್ಭದಲ್ಲಿ ಇದರ ಹಿಂದೆ ಡಿಕೆಶಿ‌ ಇದ್ದಾರೋ, ಇಲ್ಲವೋ ಎಂಬ ಬಗ್ಗೆ ಈಗಲೇ ಹೇಳಲ್ಲ. ವರದಿಯ ಬಳಿಕ ಗೊತ್ತಾದರೆ ಆಗ ಹೇಳುತ್ತೇನೆ. ತನಿಖೆಯ ವರದಿ ತಿಳಿದುಕೊಳ್ಳದೇ ಏನು ಹೇಳಲು ಇಷ್ಟಪಡುವುದಿಲ್ಲ ಎಂದರು.

ವೀರಶೈವ ಸಮಾಜದವರ ಹೋರಾಟ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ವೀರಶೈವ ಸಮಾಜದ ಯಾರೋ ನಾಲ್ಕು ಜನ ಫ್ಲೆಕ್ಸ್ ಹಾಕಿದ ಮಾತ್ರಕ್ಕೆ ನಾನು ಒಪ್ಪಲ್ಲ. ಸಮಾಜದವರು, ಕುಟುಂಬದವರು ಏನು ಮಾಡಬೇಕೋ ಮಾಡಲಿ. ಅದು ಅವರ ಕರ್ತವ್ಯ ಎಂದರು.

ಮೊಮ್ಮಗನ ಆರತಕ್ಷತೆ: ಕಾರ್ಯಕಾರಿಣಿ ಸಭೆಗೆ ಗೈರಾದ ಬಗ್ಗೆ ಕೇಳಲಾದ ಪ್ರಶ್ಮೆಗೆ ಉತ್ತರಿಸಿದ ಅವರು, ಇದೇ 20 ಹಾಗು 21 ರಂದು ನನ್ನ ಮೊಮ್ಮಗನ ಮದುವೆ ಸಮಾರಂಭ ಇರುವ ಕಾರಣ ಕಾರ್ಯಕಾರಿಣಿಗೆ ಹೋಗಲ್ಲ. ಈ ಬಗ್ಗೆ ರಾಜ್ಯಾಧ್ಯಕ್ಷರಿಗೆ, ಮುಖ್ಯಮಂತ್ರಿಯವರಿಗೆ ತಿಳಿಸಿದ್ದೇನೆ. ಇದೇ 19 ರಂದು ಬಳ್ಳಾರಿಯಲ್ಲಿ ಕಾರ್ಯಕ್ರಮ ಇದೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ನಮ್ಮ ಮನೆ ದೇವರು ಸಹ ಬಳ್ಳಾರಿಯಲ್ಲಿ ಇದೆ. ಮನೆ ದೇವರು ಪೂಜೆ ಮಾಡಿಕೊಂಡು ಬರುವವನಿದ್ದೇನೆ. 20 ರಂದು ನನ್ನ ಮೊಮ್ಮಗನ ಆರತಕ್ಷತೆ ಇದೆ. ಆ ಸಮಾರಂಭದಲ್ಲಿ ಸಿಎಂ ಕೂಡಾ ಭಾಗವಹಿಸುತ್ತಾರೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು ಕರಗ ಶಕ್ತ್ಯೋತ್ಸವ ಮತ್ತು ಮಹಾರಥೋತ್ಸವ ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ಭಕ್ತರು!

Sat Apr 16 , 2022
ಬೆಂಗಳೂರು, ಏ.16- ವಿಶ್ವ ವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವ ಮತ್ತು ಮಹಾರಥೋತ್ಸವ ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಕರಗ ಸಾಗುವ ಕೆಲವು ಮಾರ್ಗದಲ್ಲಿ ಸಂಚಾರ ನಿರ್ಬಂಧಿಸಿ ಪರ್ಯಾಯ ಮಾರ್ಗಗಳನ್ನು ಸಂಚಾರಿ ಪೊಲೀಸರು ಸೂಚಿಸಿದ್ದಾರೆ. ಇಂದು ಸಂಜೆ 4 ಗಂಟೆಯಿಂದ ಆರಂಭವಾಗುವ ಕರಗ ಮಹೋತ್ಸವ ನಾಳೆ ಬೆಳಗ್ಗೆ 8 ಗಂಟೆ ವರೆಗೆ ನಡೆಯಲಿದೆ. ಕರಗ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಗಣ್ಯ ವ್ಯಕ್ತಿಗಳು, ಸಾರ್ವಜನಿಕರು ಆಗಮಿಸುವ ಹಿನ್ನೆಲೆಯಲ್ಲಿ ವಾಹನಗಳ ಸುಗಮ […]

Advertisement

Wordpress Social Share Plugin powered by Ultimatelysocial