ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿವಾತಾತ್ಮಕ ಹೇಳಿಕೆ ಇಂದು ವಿಧಾನ ಪರಿಷತ್ ನಲ್ಲಿ!

ಬೆಂಗಳೂರು, ಫೆ.17- ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿವಾತಾತ್ಮಕ ಹೇಳಿಕೆ ಇಂದು ವಿಧಾನ ಪರಿಷತ್ ನಲ್ಲಿ ಪ್ರತಿಧ್ವನಿಸಿ ಕಲಾಪ ರಣಾಂಗಣವಾಗಿ ಮಾರ್ಪಟ್ಟಿತ್ತಲ್ಲದೆ, ಪ್ರತಿಪಕ್ಷದ ಧರಣಿ, ಆಡಳಿತ ಪಕ್ಷದ ಸಮರ್ಥನೆಯಿಂದ ಗೊಂದಲದ ಗೂಡಾಗಿ, ಮಧ್ಯಾಹ್ನಕ್ಕೆ ಮುಂದೂಡಿಕೆಯಾಗಿದೆ.ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ, ಬಂಧಿಸಬೇಕು, ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಿನ್ನೆಯಿಂದ ಪ್ರತಿಭಟನೆ ನಡೆಸುತ್ತಿದೆ.ಇಂದು ಬೆಳಗ್ಗೆ ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ತಮ್ಮ ಬೇಡಿಕೆಯನ್ನು ಮರು ಪ್ರಸ್ತಾಪಿಸಿದರು. ಕಾಂಗ್ರೆಸ್ ಮುಖ್ಯಸಚೇತಕ ಪ್ರಕಾಶ್ ರಾಥೋಡ್, ಸಲಿಂ ಅಹಮ್ಮದ್ ಇದಕ್ಕೆ ಧ್ವನಿಗೂಡಿಸಿದರು.ಸರ್ಕಾರದ ಪರವಾರಿ ಸಮರ್ಥನೆಗೆ ಇಳಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಈಶ್ವರಪ್ಪ ಅವರ ಹೇಳಿಕೆಯಲ್ಲಿ ರಾಷ್ಟ್ರಧ್ವಜಕ್ಕೆ ಅಗೌರವವಾಗುವಂತಹ ಮಾತುಗಳಿಲ್ಲ. ಮಾಧ್ಯಮದವರು ಕೇಳಿದ ಮಾತು ಮುನ್ನೆಡೆಸುವ (ಲಿಡಿಂಗ್) ಪ್ರಶ್ನೆಗೆ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೊಂದು ದಿನ ಕೆಂಪುಕೋಟೆಯ ಮೇಲೆ ಧ್ವಜ ಹಾರಬಹುದು ಎಂದಿದ್ದಾರೆ. ನ್ಯಾಯಾಲಯಗಳಲ್ಲೂ ಲಿಡಿಂಗ್ ಪ್ರಶ್ನೆಗಳನ್ನು ಕೇಳಬಾರದು ಎಂಬ ನಿಯಮ ಇದೆ. ಮಾಧ್ಯಮದವರು ಕೇಳಿದ ಲಿಡಿಂಗ್ ಪ್ರಶ್ನೆಗೆ ಈಶ್ವರಪ್ಪ ಉತ್ತರ ನೀಡಿದ್ದಾರೆ.ಇದು ಅವರ ಹೇಳಿಕೆ ಅಲ್ಲ. ಅನಗತ್ಯವಾಗಿ ಈಶ್ವರಪ್ಪ ಅವರನ್ನು ಹಿಂಡಿ ಹಿಪ್ಪೆ ಮಾಡಬೇಡಿ, ಒಂದು ವಿಷಯ ಇಟ್ಟುಕೊಂಡು ಒಬ್ಬ ಮನುಷ್ಯ ಹಿಂಡಿ ಎಷ್ಟು ರಸ ತೆಗೆಯುತ್ತೀರಾ. ಸಾಕು ಬಿಟ್ಟು ಬಿಡಿ. ಮುಂದಿನ ಕಲಾಪ ನಡೆಸಲು ಸಹಕಾರ ನೀಡಿ. ಅಧಿವೇಶನವನ್ನು ಕರೆಯಬೇಕು ಎಂದು ಒತ್ತಡ ತರುತ್ತೀರಾ, ಕರೆದರೆ ಈ ರೀತಿ ವಿವಾದಗಳ ಮೂಲಕ ಸಮಯ ಹಾಳು ಮಾಡುತ್ತಿರಾ ಎಂದು ಅಸಮದಾನ ವ್ಯಕ್ತ ಪಡಿಸಿದರು.ಈಶ್ವರಪ್ಪ ನೇರವಾದ ಮನುಷ್ಯ, ತಮ್ಮ ಹೇಳಿಕೆಯನ್ನು ಎಲ್ಲಿಯೂ ತಿರುಚಿಲ್ಲ. ಈಶ್ವರಪ್ಪ ಆಗಲಿ, ನಮ್ಮ ಪಕ್ಷದ ಯಾರೇ ಆದರೂ ರಾಷ್ಟ್ರಗೀತೆಗೆ, ರಾಷ್ಟ್ರಧ್ವಜಕ್ಕೆ ಅಗೌರವಿಸುವ ಪ್ರಶ್ನೆಯೇ ಇಲ್ಲ. ರಾಜ್ಯದ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಬೇಕು ಎಂದು ಪ್ರತಿಭಟನೆ ನಡೆಸಿ ಗೋಲಿಬಾರ್ ನಲ್ಲಿ ಗುಂಡೇಟು ತಿಂದ ಪಕ್ಷ ನಮ್ಮದು. ಕಾಶ್ಮೀರದಲ್ಲಿ ಉಗ್ರರು ಸವಾಲು ಹಾಕಿದಾಗ ದೈರ್ಯವಾಗಿ ಅದನ್ನು ಎದರಿಸಿ ರಾಷ್ಟ್ರಧ್ವಜ ಹಾರಿಸಿದವರು ನಾವು. ನಮ್ಮನ್ನು ಏಕೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿರಿ. ರಾಷ್ಟ್ರ ಪ್ರೇಮದ ಸಿದ್ಧಾಂತವನ್ನೇ ಮೈಗೂಡಿಸಿಕೊಂಡ ನಮ್ಮ ಪಕ್ಷ ನಿಮ್ಮಿಂದ ಮಾತುಕೇಳುವಂತಾಯಿತು ಎಂದು ಮಾಧುಸ್ವಾಮಿ ವಿಷಾದಿಸಿದರು.ಇದಕ್ಕೆ ಉತ್ತರ ನೀಡಿದ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ನೀವು ಬಿಜೆಪಿಗೆ ಹೊಸಬರು. ನಿಮಗೆ ಬಹಳಷ್ಟು ವಿಷಯಗಳು ಗೋತ್ತಿಲ್ಲ. ನಾನು ಇತಿಹಾಸ ಹೇಳಿದರೆ ಮತ್ತೆ ಇಲ್ಲಿ ಗಲಾಟೆಯಾಗಲಿದೆ. ಆರ್ ಎಸ್ ಎಸ್ ನ ಮುಖವಾಣಿ ಆರ್ಗನೈಜರ್ ಪತ್ರಿಕೆಯ ಸಂಪಾದಕೀಯದಲ್ಲಿ ರಾಷ್ಟ್ರಧ್ವಜವನ್ನು ವಿರೋಧಿಸಿ ಬರೆಯಲಾಗಿದೆ.ಮೂರು ಬಣ್ಣ ಅಪಶಕುನ ಎಂಬ ಮಾತುಗಳನ್ನು ಉಲ್ಲೇಖಿಸಿದ್ದಾರೆ. ಈಶ್ವರಪ್ಪ ಅವರ ಮಾತುಗಳು ಸಂವಾದ ಸ್ವರೂಪದಲ್ಲಿ ಇಲ್ಲ, ಅದು ಸ್ಪಷ್ಟವಾಗ ಹೇಳಿಕೆ. ಹಾಗಾಗಿ ಸರ್ಕಾರ ಅವರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಲಿ, ಈ ಸದನಕ್ಕೆ ಮುಖ್ಯಮಂತ್ರಿಯವರು ಬಂದಿದ್ದಾರೆ. ಅವರು ಈಶ್ವರಪ್ಪ ಅವರನ್ನು ಸಂಪುಟದಿಂದ ಕೈ ಬಿಡುವ ನಿರ್ಧಾರ ಪ್ರಕಟಿಸಲಿ ಎಂದು ಒತ್ತಾಯಿಸಿದರು. ಸಂವಿಧಾನಾತ್ಮಕ ಪೀಠದಲ್ಲಿ ಕುಳಿತಿರುವ ಸಭಾಪತಿ ಅವರು ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಹೇಳಿದರು.ಸಭಾಪತಿ ಅವರು ಆಡಳಿತ ಮತ್ತು ಪ್ರತಿಪಕ್ಷಗಳ ವಾದಗಳನ್ನು ಕೇಳಿದ್ದೇನೆ. ವಿರೋಧ ಪಕ್ಷ ವಿವಾದವನ್ನು ಇಲ್ಲಿಗೆ ಬಿಟ್ಟು ಮುಂದಿನ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಲ್ಲದೆ, ಪ್ರಶ್ನೋತ್ತರವನ್ನು ಕೈಗೆತ್ತಿಕೊಂಡರು.ಚರ್ಚೆಗೆ ಪಟ್ಟು ಹಿಡಿದ ಕಾಂಗ್ರೆಸ್ ಸದಸ್ಯರು ಸಭಾಪತಿ ಅವರ ಪೀಠದ ಮುಂದಿನ ಭಾವಿಗಿಳಿದು ಧರಣಿ ಆರಂಭಿಸಿದರು. ದೇಶದ್ರೋಹಿ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು, ಅವರ ವಿರುದ್ಧ ದೇಶದ್ರೋಹದ ಅಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಘೋಷಣೆ ಕೂಗಿದ್ದಲ್ಲದೆ, ಭಿತ್ತಿಪತ್ರಗಳನ್ನು ಪ್ರದರ್ಶನ ಮಾಡಿದರು.ಈ ಗದ್ದಲದ ನಡುವೆಯೇ ಪ್ರಶ್ನೋತ್ತರ ಮುಂದುವರೆಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಶಿವರಾಮ್ ಹೆಬ್ಬಾರ್ ಅವರು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿದರು. ಕಾಂಗ್ರೆಸ್ ಸದಸ್ಯರು ಧರಣಿ ನಡೆಸುತ್ತಿದ್ದರಿಂದ ಪ್ರಶ್ನೋತ್ತರದಲ್ಲಿ ಭಾಗವಹಿಸಲಿಲ್ಲ.ಪ್ರಶ್ನೋತ್ತರದ ನಡುವೆ ಜೆಡಿಎಸ್ ಸದಸ್ಯ ಮರಿತಿಬ್ಬೆಗೌಡ ಅವರು, ಸದನ ಕ್ರಮಬದ್ದವಾಗಿಲ್ಲದ ವೇಳೆ ಪ್ರಶ್ನೋತ್ತರ ನಡೆಯುತ್ತಿದೆ. ಇದು ಸದನ ನಡೆಸುವ ರೀತಿಯಲ್ಲ. ಸರ್ಕಾರಕ್ಕೆ ಸಮಸ್ಯೆಯನ್ನು ಬಗೆ ಹರಿಸುವ ತಾಕತ್ತಿಲ್ಲ. ಇದು ನೀತಿಗೆಟ್ಟ ಸರ್ಕಾರ. ಜನರ ತೆರಿಗೆ ಹಣವನ್ನು ಪೋಲು ಮಾಡಿ ಈ ರೀತಿ ಗದ್ದಲದ ಅಧಿವೇಶನ ನಡೆಸುವ ಬದಲು ಮುಂದೂಡಿ ಬಿಡಿ ಎಂದು ಕಿಡಿಕಾರಿದರು.ಬಿ.ಕೆ.ಹರಿಪ್ರಸಾದ್ ಅವರು, ಸದನ ಕ್ರಮ ಬದ್ಧವಾಗಿಲ್ಲದ ವೇಳೆ ಕಲಾಪ ನಡೆದಿದ್ದರಿಂದ ಮುಖ್ಯಮಂತ್ರಿ ಮತ್ತು ಸಚಿವರು ಅದಲು ಬದಲು ಉತ್ತರಗಳನ್ನು ನೀಡಿದ್ದಾರೆ. ಈ ರೀತಿ ಅಧಿವೇಶನವನ್ನು ನಡೆಸುವ ಬದಲು ಮುಂದೂಡಿಕೆ ಮಾಡಿ ಎಂದು ಒತ್ತಾಯಿಸಿದರು.ಪ್ರಶ್ನೋತ್ತರದ ಬಳಿಕ ಸಭಾಪತಿ ಅವರ ಸೂಚನೆಯ ಮೇರೆಗೆ ಚುಕ್ಕೆ ರಹಿತ ಗುರುತಿನ ಪ್ರಶ್ನೆಗಳಿಗೂ ಸಭಾನಾಯಕ ಕೋಟಾಶ್ರೀನಿವಾ ಪೂಜಾರಿ ಉತ್ತರ ಮಂಡಿಸಿದರು. ಪ್ರಶ್ನೋತ್ತರದಲ್ಲಿ ಯಾವುದೇ ಗೊಂದಲಗಳಾಗಿಲ್ಲ. ಒಂದು ಪ್ರಶ್ನೆಗೆ ಮಾತ್ರ ಉತ್ತರ ಬದಲಾಗಿದೆ. ಉಳಿದಂತೆ ಎಲ್ಲವೂ ಸರಿ ಇದೆ ಎಂದರು. ಈ ನಡುವೆ ಗದ್ದಲ ಗಲಾಟೆ ಮುಂದುವರೆದಾಗ ಸಭಾಪತಿ ಅವರು ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೌಲ್ಯಾಗೆ ಪ್ರತೀಕ್‌ ಕೊಟ್ಟ ರೇಟಿಂಗ್‌ 3..! ಯಾಕೆ..?

Thu Feb 17 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://plಇay.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial