ಜಿ. ಎನ್. ರಂಗನಾಥರಾವ್

ಜಿ. ಎನ್. ರಂಗನಾಥರಾವ್
ಜಿ. ಎನ್. ರಂಗನಾಥರಾವ್ ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯ ಲೋಕದಲ್ಲಿ ಪ್ರಸಿದ್ಧರು.
ಜಿ. ಎನ್. ರಂಗನಾಥರಾವ್ 1942ರ ಜನವರಿ 12ರಂದು ಹಾರೋಹಳ್ಳಿಯಲ್ಲಿ ಜನಿಸಿದರು. ಹಾರೋಹಳ್ಳಿ, ತಾವರೇಕೆರೆ, ಕೃಷ್ಣರಾಜಪುರ, ಮಂಚನಬೆಲೆ, ಅಣೆಕೆಂಪಯ್ಯನದೊಡ್ಡಿ, ಚಿಕ್ಕಸೂಲಿಕೆರೆ, ಲಕ್ಷ್ಮೀಪುರ, ಮಾಗಡಿ, ಜಡಿಗೇನಹಳ್ಳಿ, ಹೊಸಕೋಟೆ ಇತ್ಯಾದಿ ಕಡೆ ಇವರ ಬಾಲ್ಯ ಕಳೆಯಿತು. ಸ್ಕೂಲಿದ್ದಲ್ಲಿ ಓದು, ಇಲ್ಲದಿದ್ದಲ್ಲಿ ದನಕಾಯುವುದು, ಹಿಟ್ಟಿಗೆ ಅಂಬಲಿಗೆ ಹೊನ್ನೆಸೊಪ್ಪು ಕಿತ್ತು ತರುವುದು, ಸುಗ್ಗಿ ಕಣದಲ್ಲಿ ಒಂದು ಮೊರ ರಾಗಿಗಾಗಿ, ಬ್ರಾಹ್ಮಣನಾಗಿ ‘ಐನೋರ ಕಾಣಿಕೆ’ಗೆ ಕಾಯುತ್ತ ನಿಲ್ಲುವುದು ಹೀಗೆ ತಂದೆಗೆ ವರ್ಗವಾದ ಹಳ್ಳಿಗಾಡಲ್ಲೆಲ್ಲ ಬಾಲ್ಯದ ಇವರ ಪಯಣ ಸಾಗಿತ್ತು.
ಜಿ. ಎನ್. ರಂಗನಾಥರಾವ್ ಎಸ್ಎಸ್ಎಲ್ಸಿ ನಂತರ ಮಿನಿಸ್ಟೀರಿಯರಲ್ ಟ್ರೈನಿಂಗ್ ಮತ್ತು ಟೈಪಿಂಗ್ ಕೋರ್ಸ್ ಮಾಡಿದರು. ಸಬ್ ರಿಜಿಸ್ಟ್ರಾರ್ ಆಫೀಸು, ಡಿ.ಸಿ.ಆಫೀಸು ಇತ್ಯಾದಿ ಕಡೆ ಕೆಲಸ ಮಾಡಿದರು. ತಮ್ಮ ತಂದೆಯವರು ಕಲಿಸಿಕೊಟ್ಟ ಮೌಲ್ಯಯುತ ನೆಲೆಗಳಲ್ಲಿ ಅಲ್ಲಿನ ವೃತ್ತಿ ನಡೆಸುವುದು ಸಾಧ್ಯವಿಲ್ಲವೆನಿಸಿ ಹೊರಬಂದರು. ನೆಲೆ ಇಲ್ಲದೆ ಕುಟಂಬದ ಬದುಕು ಕಷ್ಟದಲ್ಲಿ ಸಾಗಿತು. ಕಾರ್ಲ್ ಮಾಕ್ಸ್, ಶೇಕ್ಸ್ ಪಿಯರ್, ಕೀಟ್ಸ್, ಲೋಹಿಯಾ, ಅನಕೃ, ಕಾರಂತ, ಕುವೆಂಪು, ಅಡಿಗ, ಎಲಿಯೆಟ್ಟು, ಕಾಮು, ಕಾಫ್ಕ, ಲಾರೆನ್ಸ್ ಇತ್ಯಾದಿ ಓದುತ್ತಾ ಬಂದರು. ನಿಲ್ಲದ ತವಕ, ಆತಂಕ, ಸ್ಥಿರ ಸ್ಥಾವರವಾಗುವ ಹೆದರಿಕೆ-ಹೊಯ್ದಾಟಗಳ ಅಭಿವ್ಯಕ್ತಿಗೆ ಇವರಿಗೆ ಪೆನ್ನು ಆಸರೆಯಾಗಿ ಬಂತು.
ಜಿ. ಎನ್. ರಂಗನಾಥರಾವ್ ಕಥೆ, ಕಾದಂಬರಿ, ವಿಮರ್ಶೆ ಇತ್ಯಾದಿ ಬರೆಯುತ್ತ ಸಾಗಿದರು. ‘ವಿನೋದ’ದಲ್ಲಿ ಒಂದೆರಡು ಲೇಖನಗಳು ಪ್ರಕಟವಾದವು. ‘ಬಂಗಾರದ ಕನಸು’, ‘ನಂಬಿ ಕೆಟ್ಟವರು’ ಕಾದಂಬರಿಗಳ ಹಸ್ತ ಪ್ರತಿಗಳು ಪ್ರಕಾಶಕರ ಕೈ ಸೇರಿ, ಪ್ರಕಟಿಸುವ ವಚನವಿತ್ತು ತಿಂಗಳುಗಳಾದರೂ ಬೆಳಕು ಕಂಡಿರಲಿಲ್ಲ. ಮೂರನೆಯ ಕಾದಂಬರಿ ‘ಸುಮಂಗಲಿ’ ‘ನಗುವ ನಂದ’ದಲ್ಲಿ ಧಾರಾವಾಹಿಯಾಗಿ ಪ್ರಕಟಣೆಗೆ ಸ್ವೀಕೃತವಾಗಿ ಐವತ್ತು ರೂಪಾಯಿ ಮುಂಗಡ ಸಂಭಾವನೆಯೂ ದೊರೆತದ್ದು ಇವರಲ್ಲಿ ಭರವಸೆ ಮತ್ತೆ ಚಿಗುರಿಸಿತು. ಸಾಹಿತಿ ಮತ್ತು ಪತ್ರಕರ್ತ ‘ಇಂದಿರಾತನಯ’ರು ಪತ್ರಿಕಾ ವೃತ್ತಿಯ ಓಂನಾಮ ಹೇಳಿಕೊಟ್ಟರು. ಸದಾಶಿವರಂತಹ ಗೆಳೆಯರ ಮೂಲಕ ಇಂಗ್ಲಿಷ್ ಸಾಹಿತ್ಯದ ಓದಿನ ದಿಗಂತವೂ ವಿಸ್ತರಿಸತೊಡಗಿತು. ‘ಸಾಕ್ಷಿ’, ‘ಸಂಕ್ರಮಣ’ಗಳಲ್ಲಿ ಇವರ ವಿಮರ್ಶಾ ಲೇಖನಗಳು ಪ್ರಕಟವಾಗುತ್ತಿದ್ದವು.
ಜಿ. ಎನ್. ರಂಗನಾಥರಾವ್ ಕೆಲಕಾಲ ತಾಯಿನಾಡು ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿ, 1962ರಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದರು. ಮುಂದೆ ಅವರು ಸುದೀರ್ಘಕಾಲ ‘ಪ್ರಜಾವಾಣಿ’ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು. ‘ಪ್ರಜಾವಾಣಿ’ಯಲ್ಲಿ ಸುದ್ದಿ ವಿಭಾಗ, ವರದಿ ವಿಭಾಗ, ಸಂಪಾದಕೀಯ ಬರಹ, ಸಾಪ್ತಾಹಿಕ ಪುರವಣಿ, ದೀಪಾವಳಿ ವಿಶೇಷಾಂಕ ಹೀಗೆ ಎಲ್ಲ ರೀತಿಯಲ್ಲಿ ಕೆಲಸ ಮಾಡಿದ ಇವರು ಪತ್ರಕರ್ತರಾಗಿ, ಸಾಹಿತ್ಯ -ಚಲನಚಿತ್ರ- ರಂಗಭೂಮಿ ವಿಮರ್ಶಕರಾಗಿ ಬೆಳೆದರು. 1990ರಲ್ಲಿ ಸಹ ಸಂಪಾದಕರಾದ ನಂತರ ಬಹುತೇಕ ನಿವೃತ್ತರಾಗುವವರೆಗೆ ಮೂರನೆಯ ಸಂಪಾದಕೀಯವನ್ನು ಬರೆದರು. ಇವರ ಆಯ್ದ ಮೂರನೆಯ ಸಂಪಾದಕೀಯ ʼಚಿಲಿಪಿಲಿ’ ಲಲಿತ ವಾಚಿಕೆಗಳು ಅಭಿಧಾನದಲ್ಲಿ 1999ರಲ್ಲಿ ಪ್ರಕಟವಾಯಿತು.
ಜಿ.ಎನ್. ಆರ್. ‘ಪ್ರಜಾವಾಣಿ’ಯಿಂದ ನಿವೃತ್ತಿ ಹೊಂದಿದ ನಂತರದಲ್ಲಿ ಭಾರತೀಯ ವಿದ್ಯಾ ಭವನದ ಕಾಲೇಜಿನಲ್ಲಿ ಹಾಗೂ ಸರ್ಕಾರಿ ಕಲಾ ಕಲೇಜಿನಲ್ಲಿ ಪತ್ರಿಕಾ ವ್ಯವಸಾಯ ಮತ್ತು ಸಂವಹನ ಕಲೆ ಕುರಿತು ಬೋಧಿಸಿದರು. ಕೆಲವು ವರ್ಷ ‘ಕಸ್ತೂರಿ’ ಮಾಸ ಪತ್ರಿಕೆಯ ಸಂಪಾದಕತ್ವವನ್ನು ನಿರ್ವಹಿಸಿದರು.
ರಂಗನಾಥರಾವ್ ‘ನವರಂಗ’ ಕಾವ್ಯನಾಮದಿಂದ ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧಗಳನ್ನು ರಚಿಸಿದರು. ಅವರು ಮಹತ್ವದ ಸಾಹಿತ್ಯ ವಿಮರ್ಶಕರು. ಅವರು ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಮಹತ್ವದ ಕೃತಿಗಳನ್ನೂ ರಚನೆ ಮಾಡಿದ್ದಾರೆ. ಅವರು ‘ನೇಸರ ನೋಡು ನೇಸರ ನೋಡು’ ಎಂಬಂತಹ ಅಂಕಣಗಳನ್ನೂ ಬರೆಯುತ್ತಿದ್ದರು. ಇವರ ಕೃತಿಗಳಲ್ಲಿ ಹೊಸ ತಿರುವು, ಮಾಸ್ತಿಯವರ ನಾಟಕಗಳು, ಒಳನೋಟ, ಹಿಂದಣ್ಣ ಹೆಜ್ಜೆ, ಅನ್ಯೋನ್ಯ, ಗುಣ- ದೋಷ ಮುಖ್ಯ ಮುಂತಾದವು ವಿಮರ್ಶಾ ಕೃತಿಗಳು. ಶೇಕ್ಸ್ ಪಿಯರ್ನ ರೋಮಿಯೋ ಜೂಲಿಯಟ್ ಮತ್ತು ಆಂಟನಿ ಕ್ಲಿಯಾಪಾಟ್ರ, ಬ್ರೆಕ್ಟಮ ಕಕೇಷಿಯನ್ ಚಾಕ್ ಸರ್ಕಲ್, ಅನ್ವಿಯ ಅಂತಿಗೊನೆ, ಜೀನ್ ಜೆನೆಯ ದಿ ಬ್ಲ್ಯಾಕ್ಷ್, ಟಾಲ್ ಸ್ಟಾಯ್ನ ಡೆತ್ ಆಫ್ ಇವಾನ್ ಇಲಿಚ್, ಸೋಲ್ಜೆನಿತ್ಸಿನ್ನ ಇವಾನ್ ದೆನಿಸೊವಿಚ್, ಕಾಫ್ಕ ಕತೆಗಳು, ಓ ಹೆನ್ರಿ ಕತೆಗಳು, ಜೆ.ಡಿ ಬರ್ನಾಲ್ನ ಸೋಶಿಯಲ್ ಸೈನ್ಸ್ ಇನ್ ಹಿಸ್ಟರಿ, ರಾಮಚಂದ್ರ ಗುಹ ಅವರ ಇಂಡಿಯಾ ಆಫ್ಟರ್ ಗಾಂಧಿ (ಬಾಪೂ ನಂತರದ ಭಾರತ), ಮೇಕರ್ಸ್ ಆಫ್ ಮಾಡರ್ನ್ ಇಂಡಿಯಾ (ನವಭಾರತದ ನಿರ್ಮಾಪಕರು), ಪೇಟ್ರಿಯೆಟ್ಸ್ ಅಂಡ್ ಪಾರ್ಟಿಸಾನ್ಸ್ (ದೇಶಪ್ರೇಮಿಗಳು ಮತ್ತು ಪಕ್ಷಪಾತಕರು), ಗಾಂಧಿ ಬಿಫೋರ್ ಇಂಡಿಯಾ (ಗಾಂಧಿ ಮಹಾತ್ಮರಾದುದು) ಮತ್ತು ಕಾಲಾತೀತ ವಿಖ್ಯಾತ ಖಲೀಲ್ ಗಿಬ್ರಾನ್ ಮುಂತಾದವು ಇವರ ಅನುವಾದಗಳಲ್ಲಿ ಸೇರಿವೆ.
ಜಿ. ಎನ್. ರಂಗನಾಥರಾವ್ ಅವರಿಗೆ 2009ನೇ ಸಾಲಿನ ಖಾದ್ರಿ ಶಾಮಣ್ಣ ಪ್ರಶಸ್ತಿ ಹಾಗೂ 2018ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಕುವೆಂಪು ಭಾಷಾಭಾರತಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಫೆಲೋಷಿಪ್, ಟೀಎಸ್ಸಾರ್ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ‘ಮಹಾತ್ಮ ಗಾಂಧಿ ಒಂದು ಸತ್ಯಕಥೆ‘ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಸಾಹಿತ್ಯ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.
ಜಿ. ಎನ್. ರಂಗನಾಥರಾವ್ ಅವರು ತಮ್ಮ
ಬಾಳ ಸಂಗಾತಿ ಸರಳಾ ಅವರ ಹೆಸರಿನಲ್ಲಿ ಉದಯೋನ್ಮುಖ ಮಹಿಳಾ ಲೇಖಕಿಯರನ್ನು ಪ್ರೋತ್ಸಾಹಿಸುವ ಸಲುವಾಗಿ ಟ್ರಸ್ಟ್ ಒಂದನ್ನು ಸ್ಥಾಪಿಸಿದ್ದಾರೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಕೇಶ್ ಶರ್ಮಾ

Wed Mar 9 , 2022
ರಾಕೇಶ್ ಶರ್ಮಾ ಅಂತರಿಕ್ಷಯಾನ ಮಾಡಿದ ಪ್ರ್ರಥಮ ಭಾರತೀಯರಾಗಿ ಖ್ಯಾತರಾದವರು ರಾಕೇಶ್ ಶರ್ಮಾ. ಅವರು 1984 ವರ್ಷದ ಎಪ್ರಿಲ್ 3 ರಂದು ಸೋವಿಯತ್ ಅಂತರಿಕ್ಷ ನೌಕೆ ಸೋಯಜ್ ಟಿ-11 ರಲ್ಲಿ ಪಯಣಿಸಿ ಸುಮಾರು 8 ದಿನ ಅಂತರಿಕ್ಷದಲ್ಲಿ ಕಳೆದರು. ರಾಕೇಶ್ ಶರ್ಮಾ 1949ರ ಜನವರಿ 13ರಂದು ಪಂಜಾಬಿನ ಪಟಿಯಾಲಾ ನಗರದಲ್ಲಿ ಜನಿಸಿದರು. ಭಾರತೀಯ ವಾಯು ಸೇನೆಯಲ್ಲಿ ಪರೀಕ್ಷಕ ವೈಮಾನಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸ್ಕ್ವಾಡ್ರನ್ ಲೀಡರ್ ರಾಕೇಶ್ ಶರ್ಮಾ 1982 ವರ್ಷದ ಸೆಪ್ಟೆಂಬರ್ […]

Advertisement

Wordpress Social Share Plugin powered by Ultimatelysocial