ಗಂಗೂಬಾಯಿ ಹಾನಗಲ್

ಗಂಗೂಬಾಯಿ ಹಾನಗಲ್ ಹಿಂದೂಸ್ಥಾನಿ ಸಂಗೀತದ ಗಾನಸಾಮ್ರಾಜ್ಞಿ ಎನಿಸಿದ್ದವರು.
ಗಂಗೂಬಾಯಿ ಹಾನಗಲ್ ಅವರು ಹುಟ್ಟಿದ ದಿನ ಮಾರ್ಚ್ 5. ಅಂದಿನ ದಿನದಲ್ಲಿ ಮೈಸೂರಿನಲ್ಲಿ ಬದುಕನ್ನು ಕಳೆದ ನಮಗೆ ಹಿಂದೂಸ್ಥಾನಿ ಸಂಗೀತದ ಹೆಚ್ಚು ಪರಿಚಯವಿರಲಿಲ್ಲ. ದಸರೆಯ ಸಂದರ್ಭದಲ್ಲಿ ಮೈಸೂರಿನ ಅರಮನೆಯಲ್ಲಿ ದೀಪಗಳೆಲ್ಲಾ ಜಗಮಗಿಸುತ್ತಿದ್ದ ಒಂದು ದಿನ ಆ ಇಡೀ ವಾತಾವರಣವನ್ನೆಲ್ಲಾ ತಮ್ಮ ದೇವಗಾನದಲ್ಲಿ ತುಂಬಿಸುತ್ತಿದ್ದ ಗಂಗೂಬಾಯಿ ಹಾನಗಲ್ಲರ ಮೋಡಿ ನಮ್ಮನ್ನೆಲ್ಲಾ ಮೈಮರೆಸಿದ್ದು ಇಂದು ನೆನೆದರೂ ರೋಮಾಂಚನವೆನಿಸುತ್ತಿದೆ. ಈ ಭಾವದಲ್ಲಿ ಚಿಂತಿಸುವಾಗ ಹಿಂದೊಮ್ಮೆ ಓದಿದ ಗಂಗೂಬಾಯಿ ಹನಗಲ್ ಅವರ ಜೀವನದ ನೈಜ ಘಟನೆಯೊಂದು ನೆನಪಾಗುತ್ತಿದೆ.
ಆಕಾಶವಾಣಿ ದೆಹಲಿ ಕೇಂದ್ರ. ಸಾಮಾನ್ಯ ವೇಷದ ಗಂಗೂಬಾಯಿಯವರು ಡ್ಯೂಟಿ ರೂಮಿನಲ್ಲಿ ಕುಳಿತಿದ್ದರು. ಅಲ್ಲಿಗೆ ಬಂದ ಪರಿಚಾರಕ ಕೊಂಚ ಅಸಡ್ಡೆಯಿಂದ ಏನು ಎತ್ತ ಎಂದು ವಿಚಾರಿಸದೆ ಅಸಡ್ಡೆತನದಿಂದ ಹೊರಗಡೆಗೆ ಬೆಂಚಿನ ಮೇಲೆ ಕಾದು ಕುಳಿತುಕೊಳ್ಳಲು ಹೇಳಿದ. ಕಾರ್ಯಕ್ರಮ ನಿಗದಿಯಾದ ಹೊತ್ತಿಗೆ ಸರಿಯಾಗಿ ಗಂಗೂಬಾಯಿ ಅವರು ಸ್ಟುಡಿಯೋ ಪ್ರವೇಶಿಸಿದರು. ಅಲ್ಲಿದ್ದವ ಕೂಡಾ ಅದೇ ಒರಟುತನದಿಂದ ಪ್ರಶ್ನಿಸಿದ.
‘ಯಾಕ್ರೀ ಇಷ್ಟು ತಡಾ?’
‘ನಾನು ಬಂದು ಅರ್ಧಾ ತಾಸು ಆತು. ನಿಮ್ಮ ಪರಿಚಾರಕ ಒಳಗೆ ಬಿಡಲಿಲ್ಲ’.
ಆತ ಮತ್ತೆ ಕೇಳಿದ-
‘ಸರಿ. ಯಾವ ಪಟ್ಟಿ ನಿಮ್ಮದು? ಅಲ್ಲಿ ತಂಬೂರಿ ಇದೆ, ತಗೋರಿ’
ಗಂಗೂಬಾಯಿ ಅಲ್ಲಿದ್ದ ತಂಬೂರಿ ತೆಗೆದುಕೊಂಡು ಶ್ರುತಿ ಮಾಡಿಕೊಂಡು ಹಾಡಲು ಸನ್ನದ್ಧರಾದರು. ಸ್ಟುಡಿಯೋದಲ್ಲಿ ಕೆಂಪು ದೀಪ ಉರಿಯತೊಡಗಿತು. ಹಾಡತೊಡಗಿದರು. ರಾಗ ಪೂರಿಯಾ! ಅಮೋಘ ಸಂಗೀತವೆಂದು ಕೇಳಿದ ಎಲ್ಲರಿಗೂ ಅರ್ಥವಾಗುತ್ತಿತ್ತು. ಕಿರಣಾ ಘರಾಣೆಯ ಶುದ್ಧ ಶೈಲಿಯ ಹಾಡುಗಾರಿಕೆ! ದೆಹಲಿಯ ನಿಲಯ ನಿರ್ದೇಶಕರು ಅಕಸ್ಮಾತ್ ಹಾಡುಗಾರಿಕೆಯನ್ನು ಕೇಳಿದರು. ಆಗೆಲ್ಲ ಆಕಾಶವಾಣಿಯಲ್ಲಿ ನೇರಪ್ರಸಾರದ ಕಾರ್ಯಕ್ರಮಗಳೇ ಹೆಚ್ಚು. ರೆಕಾರ್ಡಿಂಗ್ ಮಾಡುವ ಅನುಕೂಲ ಅಷ್ಟಾಗಿ ಇರಲಿಲ್ಲ. ಸುಶ್ರಾವ್ಯವಾಗಿ ಮೂಡಿಬರುತ್ತಿರುವ ಕಾರ್ಯಕ್ರಮವನ್ನು ಕೇಳಿ ನಿಲಯದ ನಿರ್ದೇಶಕರು ತಕ್ಷಣ ಸ್ಟುಡಿಯೋಗೆ ಧಾವಿಸಿದರು. ಆ ಮಹಿಳೆ ಹಾಡುತ್ತಿದ್ದ ಹಾಡುಗಾರಿಕೆಯನ್ನು ಮನಸಾರೆ ಕೇಳಿ ಆನಂದಿಸಿದರು. ಕಾರ್ಯಕ್ರಮ ಮುಗಿದ ಮೇಲೆ ಕೇಳಿದರು-
‘ತಾವು?’
ಆಕೆ ನಗುತ್ತ ಹೇಳಿದರು -‘ಗಂಗೂಬಾಯಿ ಹಾನಗಲ್ಲ’.
ಮರುದಿನ ಮತ್ತೆ ಕಾರ್ಯಕ್ರಮ. ಹಿಂದಿನ ದಿನ ಒರಟಾಗಿ ನಡೆದುಕೊಂಡವರೆಲ್ಲ ಇಂದು ವಿಧೇಯರಾಗಿದ್ದರು! ಕಿರಾಣಾ ಘರಾಣೆಯ ಸ್ವರ ಸಾಮ್ರಾಜ್ಞಿಗೆ ಅತಿಗಣ್ಯರಿಗೆ ದೊರೆಯುವ ಉಪಚಾರ ದೊರಕಿತ್ತು. ಹಿಂದಿನ ದಿನ, ಇವರ ಸಾದಾಸೀದಾ ವ್ಯಕ್ತಿತ್ವ ಕಂಡವರು ಬೇಸ್ತು ಬಿದ್ದಿದ್ದರು.
ಗಂಗೂಬಾಯಿ ಹಾನಗಲ್ ಅವರು ತಮ್ಮ ಜೀವನಪರ್ಯಂತ ಇದೇ ತೆರನಾದ ಸೀದಾ ಸಾದಾ ವ್ಯಕ್ತಿತ್ವವನ್ನೇ ರೂಪಿಸಿಕೊಂಡು ನಡೆದರು. ಅವರಿಗೆ ಸಿಕ್ಕ ಪ್ರಶಸ್ತಿಗಳು ಅದೆಷ್ಟೋ. ಪದ್ಮವಿಭೂಷಣ, ಸುಮಾರು ಎಂಟು ವಿಶ್ವವಿದ್ಯಾಲಯಗಳ ಡಾಕ್ಟರೇಟ್ ಪದವಿಗಳು, ರಾಷ್ಟ್ರಮಟ್ಟದಲ್ಲಿ ಅವರಿಗೆ ಸಿಕ್ಕ ಮೇರುಮಟ್ಟದ ಪ್ರಶಸ್ತಿಗಳೇ ನಲವತ್ತೆಂಟು ಎಂದು ಒಂದು ಪತ್ರಿಕೆ ಬರೆದಿದೆ. ಸಾವಿರಾರು ಬಿರುದು ಸನ್ಮಾನಗಳು ಇವು ಯಾವುವೂ ಈ ಹಾಡುಹಕ್ಕಿಯ ಮಗುವಿನಂತ ಮನವನ್ನು ಕಿಂಚಿತ್ತೂ ಕದಲಿಸಲು ಸಾಧ್ಯವಾಗಲಿಲ್ಲ.
2009ರಲ್ಲಿ ತಾಯಿ ಗಂಗೂಬಾಯಿ ಹಾನಗಲ್ಲರು ನಿಧನರಾಗುವುದಕ್ಕೆ ಮುಂಚೆ ಅವರ 97ನೆ ವಯಸ್ಸಿನ ಹುಟ್ಟುಹಬ್ಬದ ದಿನವನ್ನು ಪತ್ರಿಕೆಗಳು ವರದಿ ಮಾಡಿದ್ದವು “ಗಂಗಜ್ಜಿಗೆ 97 ವರ್ಷ. ಇಂದು ಹಲವು ಅಂಗವಿಕಲ, ಬುದ್ಧಿ ಮಾಂದ್ಯ ಮಕ್ಕಳೊಂದಿಗೆ ಅವರು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲಿದ್ದಾರೆ. ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತದ ಮೂವತ್ತು ಸಾಧಕರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ಇದೆ” ಅಂತ. ಒಮ್ಮೆ ಅವರ ಬಳಿ ಪುಟ್ಟ ಹುಡುಗನಾಗಿದ್ದಾಗ ಅವರ ಮುಂದೆ ಅಡ್ಡಾಡುತ್ತಿದ್ದ ಪ್ರಸಿದ್ಧ ಚಲನಚಿತ್ರ ನಾನಾ ಪಾಟೇಕರ ಬಂದು ಅವರ ಹುಟ್ಟು ಹಬ್ಬದ ದಿನ ಸಂಭ್ರಮಿಸಿದಾಗ ಅದೆಷ್ಟು ಸವಿ ಮಾತೃ ಹೃದಯದಿಂದ ಅವನ ಬಾಲ್ಯದ ಪ್ರೀತಿ ತುಂಟಾಟಗಳನ್ನು ಪತ್ರಿಕೆಗಳೊಂದಿಗೆ ಹಂಚಿ ಸುಖಿಸಿದರು. ನಮ್ಮ ಡಾ. ಎಸ್. ಎಲ್. ಭೈರಪ್ಪನವರು ಅವರ ಸಂದರ್ಶನ ಮಾಡಿದಾಗ ಅದೆಷ್ಟು ಸೊಗಸಾಗಿ ಸರಳವಾಗಿ ಬದುಕಿನ ವೇದಾಂತ ತಿಳಿಸಿದ್ದರು. ಅವರ ನಗೆಯಲ್ಲಿ ಅದೆಂತಹ ಸ್ಪಟಿಕದಂತೆ ನಿರ್ಮಲವಾದ ಅಂತಃಕರಣದ ಆಳದ ಕೊಳವಿತ್ತು, ಹೀಗೆ ಹಲವು ನೆನಪು ನಮ್ಮ ಗಂಗಜ್ಜಿ ಅವರನ್ನು ನೆನೆದು ತುಂಬಿ ಬರುತ್ತಿದೆ.
ಗಂಗೂಬಾಯಿ ಹಾನಗಲ್ ಅವರು ಹುಟ್ಟಿದ್ದು ಹಾನಗಲ್ಲಿನಲ್ಲಿ. 1913ರ ಮಾರ್ಚ್ 5ರಂದು. ಬೆಳೆದಿದ್ದು ಧಾರವಾಡದಲ್ಲಿ. ಇವರ ತಂದೆ ಚಿಕ್ಕೂರಾವ್ ನಾಡಗೀರ, ತಾಯಿ ಅಂಬಾಬಾಯಿ. ಗಂಗೂಬಾಯಿಯವರ ಪ್ರಾಥಮಿಕ ಶಿಕ್ಷಣ ಧಾರವಾಡದಲ್ಲಿ ಆಲೂರು ವೆಂಕಟರಾಯರು ಸ್ಥಾಪಿಸಿದ ರಾಷ್ಟ್ರೀಯ ಶಾಲೆಯಲ್ಲಿ ಐದನೆಯ ಇಯತ್ತೆಯವರೆಗೆ ಆಯಿತು. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿಯ ವಿದ್ಯಾರ್ಥಿಗಳು “ದೇವರು ನಮ್ಮ ಈ ಧೀರೋದಾತ್ತರಾದ ದೊರೆಗಳನ್ನು ರಕ್ಷಿಸಲಿ” ಎಂದು ಪ್ರಾರ್ಥನೆ ಹೇಳುವಾಗ ರಾಷ್ಟ್ರೀಯ ಶಾಲೆಯ ವಿದಾರ್ಥಿಗಳಾದ ತಾವು “ಮಾತೃಭೂಮಿ ನಿನ್ನ ಚರಣಸೇವೆಯನ್ನು ಮಾಡುವಾ” ಹಾಗು “ವಂದೇ ಮಾತರಂ” ಹಾಡುತ್ತಿದ್ದೆವೆಂದು ಗಂಗೂಬಾಯಿಯವರು ಆಗಾಗ ನೆನಪಿಸಿಕೊಳ್ಳುತ್ತಿದ್ದರು. 1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಾಗ, ಗಂಗೂಬಾಯಿಯವರು ಮಹಾತ್ಮಾ ಗಾಂಧೀಜಿ ಅವರೆದುರಿಗೆ “ಸ್ವಾಗತವು ಸ್ವಾಗತವು ಸಕಲ ಜನ ಸಂಕುಲಕೆ” ಎಂದು ಸ್ವಾಗತಗೀತೆಯನ್ನು ಹಾಡಿ ಗಾಂಧೀಜಿಯವರ ಹಾಗೂ ಸಭಿಕರ ಮೆಚ್ಚುಗೆ ಗಳಿಸಿದ್ದರು.
ಗಂಗೂಬಾಯಿಯವರ ತಾಯಿ ಅಂಬಾಬಾಯಿಯವರು ಸ್ವತಃ ಕರ್ನಾಟಕ ಸಂಗೀತದ ಗಾಯಕಿ. ಹಿಂದುಸ್ತಾನಿ ಸಂಗೀತ ಗಾಯಕರಾದ ಹೀರಾಬಾಯಿ ಬಡೋದೆಕರ, ಅಬ್ದುಲ್ ಕರೀಮ ಖಾನರು ಧಾರವಾಡ, ಹುಬ್ಬಳ್ಳಿಗಳಿಗೆ ಬಂದಾಗಲೊಮ್ಮೆ ಅಂಬಾಬಾಯಿಯವರು ಅವರ ಹಾಡುಗಾರಿಕೆ ಕೇಳುತ್ತಿದ್ದರು. ಈ ದೆಸೆಯಿಂದ ತಮ್ಮ ಮಗಳಿಗೆ ಹಿಂದೂಸ್ಥಾನಿ ಸಂಗೀತ ಕಲಿಸುವ ಆಶಯ ಹೊಂದಿದರು. ಮೊದಲಲ್ಲಿ ದತ್ತೋಪಂತ ದೇಸಾಯಿ, ಕೃಷ್ಣಾಚಾರ್ಯ ಹುಲಗೂರ ಇವರಿಂದ ಸಂಗೀತ ಶಿಕ್ಷಣ ಪಡೆದ ಗಂಗೂಬಾಯಿ, ಬಳಿಕ ಸುಪ್ರಸಿದ್ಧ ಕಿರಾನಾ ಘರಾನಾ ಗಾಯಕರಾದ ಸವಾಯಿ ಗಂಧರ್ವ ಯಾನೆ ರಾಮಭಾವು ಕುಂದಗೋಳಕರ ಅವರ ಶಿಷ್ಯೆಯಾದರು. ಪ್ರವರ್ಧಮಾನಕ್ಕೆ ಬರುತ್ತಿರುವ ತನ್ನ ಮಗಳ ಪ್ರತಿಭೆಯ ಮೇಲೆ ತನ್ನ ಕರ್ನಾಟಕ ಸಂಗೀತ ವ್ಯತಿರಿಕ್ತ ಪರಿಣಾಮ ಬೀರದಿರಲೆಂಬಂತೆ ತಾವು ಹಾಡುವುದನ್ನೇ ನಿಲ್ಲಿಸಿಬಿಟ್ಟರು ಆ ಮಹಾನ್ ತ್ಯಾಗಮಯಿ ಅಂಬಾಬಾಯಿ ತಾಯಿ. ಇಂಥಹ ಮಹಾನ್ ತಾಯಿ 1932ರಲ್ಲಿ ನಿಧನರಾದದ್ದು ಗಂಗೂಬಾಯಿ ಅವರಿಗೆ ತೀವ್ರ ಆಘಾತ ತಂದಿತ್ತು. ಕೆಲವೇ ತಿಂಗಳಲ್ಲಿ ತಂದೆಯೂ ನಿಧನರಾದರು.
1929ರಲ್ಲಿ ಹುಬ್ಬಳ್ಳಿಯ ಗುರುನಾಥ ಕೌಲಗಿ ಎನ್ನುವ ವಕೀಲರು ಗಂಗೂಬಾಯಿಯವರ ಕೈ ಹಿಡಿದರು. 1932ರಲ್ಲಿ ಎಚ್.ಎಮ್.ವಿ. ಗ್ರಾಮಾಫೋನ್ ಕಂಪನಿಯವರ ಆಹ್ವಾನದ ಮೇರೆಗೆ ಗಂಗೂಬಾಯಿಯವರು ಮುಂಬಯಿಗೆ ತೆರಳಿದರು. ಅಲ್ಲಿಂದ ಗಂಗೂಬಾಯಿಯವರ ಸಂಗೀತ ದಿಗ್ವಿಜಯ ಪ್ರಾರಂಭವಾಯಿತು. ಮುಂಬಯಿಯಲ್ಲಿ ಕಚೇರಿಗಳನ್ನು ನೀಡಿದ ಗಂಗೂಬಾಯಿಯವರು ಮುಂಬಯಿ ಆಕಾಶವಾಣಿಯಲ್ಲಿ ಸಹ ಹಾಡತೊಡಗಿದರು. ಗಂಗೂಬಾಯಿಯವರ ಹಾಡುಗಾರಿಕೆಯನ್ನು ಆ ಕಾಲದ ಎಲ್ಲಾ ಉದ್ದಾಮ ಸಂಗೀತಕಾರರಾದ ಬಡೆ ಗುಲಾಮ ಅಲಿ ಖಾನ, ಉಸ್ತಾದ ಫಯಾಜ ಖಾನ, ಪಂಡಿತ ಓಂಕಾರನಾಥ, ಶಹನಾಯಿ ಮಾಂತ್ರಿಕ ಬಿಸ್ಮಿಲ್ಲಾ ಖಾನ ಮೊದಲಾದವರು ಮೆಚ್ಚಿಕೊಂಡರು. ಖ್ಯಾತ ಚಿತ್ರನಟಿ ನರ್ಗೀಸಳ ತಾಯಿಯಾದ ಜದ್ದನಬಾಯಿಯವರ ಪ್ರೋತ್ಸಾಹದಿಂದಲೇ ಗಂಗೂಬಾಯಿಯವರು ಕೊಲಕತ್ತಾದಲ್ಲಿಯ ಅಖಿಲ ಭಾರತ ಸಂಗೀತ ಸಮ್ಮೇಳನಕ್ಕೆ ಹೋಗಿ ಬಂದರು. ಗಾನಮುದ್ರಿಕೆ ಹಾಗು ಆಕಾಶವಾಣಿ ಕಾರ್ಯಕ್ರಮಗಳಲ್ಲದೆ, ಗಂಗೂಬಾಯಿಯವರು ಮುಂಬಯಿಯಲ್ಲಿಯ ಅನೇಕ ಸಂಗೀತ ಕಚೇರಿಗಳಲ್ಲಿ ಸಹ ಭಾಗವಹಿಸತೊಡಗಿದರು.
ಸಂಗೀತಯಾತ್ರೆ ಉತ್ಸಾಹದಿಂದಲೆ ಸಾಗಿತಾದರೂ, ಜೀವನಯಾತ್ರೆಯಲ್ಲಿ ಅನೇಕ ಎಡರು ತೊಡರುಗಳು ಎದುರಾದವು. ಗಂಗೂಬಾಯಿಯವರ ಮೂವರು ಮಕ್ಕಳಾದ ಕೃಷ್ಣಾ, ಬಾಬೂ, ನಾರಾಯಣ ಇವರು ಬೆಳೆಯತೊಡಗಿದ್ದರು. ಗಂಗೂಬಾಯಿ ಅವರ ಪತಿ ಉದ್ಯಮದಲ್ಲಿ ನಷ್ಟ ಅನುಭವಿಸಿ ಹುಬ್ಬಳ್ಳಿಯಲ್ಲಿ ಕೊಂಡ ಮನೆ ಲೀಲಾವಿಗೆ ಬಂತು. ಸುದೈವದಿಂದ ಲಿಲಾವಿನಲ್ಲಿ ಮನೆಯನ್ನು ತೆಗೆದುಕೊಂಡ ಉಪೇಂದ್ರ ನಾಯಕ ಎನ್ನುವ ಸದ್ಗೃಹಸ್ಥರು ಇವರಿಗೇ ಅದನ್ನು ಮರಳಿಸಿ, ಲಿಲಾವಿನ ಹಣವನ್ನು ಅನುಕೂಲತೆಯ ಮೇರೆಗೆ ನೀಡಲು ಹೇಳಿದರು. ಗಂಗೂಬಾಯಿಯವರ ಪತಿ ಗುರುನಾಥ ಕೌಲಗಿ ಅವರು 1966ರಲ್ಲಿ ಕೊನೆ ಉಸಿರೆಳೆದರು.
ಗಂಗೂಬಾಯಿಯವರು ದೇಶ ವಿದೇಶಗಳೆಲ್ಲೆಡೆ ಹಾಡಿ ಸಂಗೀತ ಪ್ರಿಯರನ್ನು ರಂಜಿಸಿದ್ದಲ್ಲದೆ ತಮ್ಮ ಗುರು ಸವಾಯಿ ಗಂಧರ್ವರ ಹೆಸರಿನಲ್ಲಿ ಕುಂದಗೋಳದಲ್ಲಿ ಪ್ರತೀ ವರ್ಷ ಸಂಗೀತೋತ್ಸವ ನಡೆಸುತ್ತಾ ಬಂದಿದ್ದರು. ಗಂಗೂಬಾಯಿಯವರು ತಮ್ಮ ಸಂಗೀತವನ್ನು ಶಿಷ್ಯರಿಗೆ ಧಾರೆ ಎರೆದು ಬೆಳೆಸಿದವರಲ್ಲಿ ಅವರ ಮಗಳೇ ಆದ ಕೃಷ್ಣಾ, ಸೀತಾ ಹಿರೆಬೆಟ್ಟ, ಸುಲಭಾ ನೀರಲಗಿ ಮತ್ತು ನಾಗನಾಥ ಒಡೆಯರ್ ಮುಂತಾದ ಗಣನೀಯರ ಹೆಸರುಗಳನ್ನು ನೆನೆಯಬಹುದು.
ಗಂಗೂಬಾಯಿಯವರು ರಾಷ್ಟ್ರೀಯ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಗ ವರಕವಿ ದ.ರಾ.ಬೇಂದ್ರೆಯವರು ಇವರ ಗುರುಗಳಾಗಿದ್ದರು. ಈ ಗುರು ಶಿಷ್ಯ ಸಂಬಂಧ ಬೇಂದ್ರೆಯವರ ಜೀವಿತದ ಕೊನೆಯವರೆಗೂ ಮುಂದುವರಿದಿತ್ತು.
ತೊಂಬತ್ತೆಳು ವರ್ಷದ ಬದುಕನ್ನು ನಡೆಸಿದ ಗಂಗೂಬಾಯಿ ಹಾನಗಲ್ಲರು 2009ರ ಜುಲೈ 21ರಂದು ನಿಧನರಾದರು. ಅವರ ಮನೆ ಈಗ ಸುಂದರ ಸಂಗ್ರಾಹಾಲಯವಾಗಿದೆ. ಅವರ ಹೆಸರಿನಲ್ಲಿ ಗುರುಕುಲದ ಮಾದರಿಯ ಸಂಗೀತ ಶಾಲೆ ನಿರ್ಮಾಣಗೊಂಡಿದೆ.
ಕೆಲವು ವರ್ಷಗಳ ಹಿಂದೆ ನಾನು ಮೈಸೂರಿನಲ್ಲಿ ಓದಿದ ಲಕ್ಷ್ಮೀಪುರಂ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಲ್ಲದೆ ಮುಚ್ಚಿಹೋಗುತ್ತಿದೆ ಎಂದು ನನಗೆ ದುಃಖವಾಗಿತ್ತು. ಅದೇ ಸಂದರ್ಭದಲ್ಲಿ ಆ ಶಾಲೆಯಲ್ಲಿ ಓದಿದ ಹಲವಾರು ಮಹನೀಯರ ದೆಸೆಯಿಂದ ಇಂದು ಆ ಶಾಲೆಯ ಕಟ್ಟಡ ಗಂಗೂಬಾಯಿಯವರ ಹೆಸರಿನಲ್ಲಿ ಸಂಗೀತ ವಿಶ್ವವಿದ್ಯಾಲಯದ ಕಟ್ಟಡವಾಗಿದೆ.
ತಮ್ಮ ಬದುಕಿನ ಪೂರ್ತಿ ನಿರ್ಮಲಪ್ರೇಮದ ಕಣ್ಣಾಗಿ ತಮ್ಮ ಜೀವನ ನಡೆಸಿದ್ದ ಗಂಗಜ್ಜಿ, ತಮ್ಮ ಸುಂದರ ನೇತ್ರಗಳನ್ನೂ ಈ ಲೋಕಕ್ಕೇ ದಾನಗೈದು ತಮ್ಮ ನಿರ್ಮಲ ಪ್ರೀತಿಯನ್ನು ನಮಗೆಲ್ಲ ಕೊಟ್ಟು ಹೋಗಿದ್ದಾರೆ. ಈ ಮಹಾಮಾತೆಯ ಚರಣಗಳ ಸ್ಮರಣೆಯಲ್ಲಿ ನಮಿಸುತ್ತಾ ಇಂತಹ ಭವ್ಯ ಪ್ರೀತಿಯ ನಾದಲೋಕದ ಈ ಗಂಗೆಯ ಅಮೃತ ಸಿಂಚನ ಮುಂದೂ ಲೋಕವನ್ನು ಕಾಯುತ್ತಿರಲಿ ಎಂದು ಆಶಿಸೋಣ.
(ಆಧಾರ: ಎನ್.ಕೆ.ಕುಲಕರ್ಣಿಯವರಿಂದ ನಿರೂಪಿತವಾದ ಗಂಗೂಬಾಯಿ ಹಾನಗಲ್ ಅವರ ಆತ್ಮಚರಿತ್ರೆ: “ನನ್ನ ಬದುಕಿನ ಹಾಡು” ದಿಂದಲೂ ಹಾಗೂ ಓದಿರುವ ಹಲವಾರು ವಿಷಯಗಳ ನೆನಪಿನಿಂದಲೂ ಗಂಗಜ್ಜಿಯವರ ನೆನಪನ್ನು ಮೂಡಿಸಲು ಪ್ರಯತ್ನಿಸಿದ್ದೇನೆ.)

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಿ. ಬಿ. ದೇಸಾಯಿ

Sat Mar 5 , 2022
ಡಾ. ಪಾಂಡುರಂಗ ಭೀಮರಾವ್ ದೇಸಾಯಿ ಅವರು ಕರ್ನಾಟಕ ಇತಿಹಾಸ ಸಾಹಿತ್ಯ ಸಂಸ್ಕೃತಿಗಳ ಖ್ಯಾತ ಸಂಶೋಧಕರೂ, ಶಾಸನತಜ್ಞರೂ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಚೀನ ಭಾರತೀಯ ಇತಿಹಾಸ ಸಂಸ್ಕೃತಿಗಳ ಪ್ರಾಧ್ಯಾಪಕರೂ ಆಗಿದ್ದವರು. ಮಾರ್ಚ್ 5 ಈ ಮಹನೀಯರ ಸಂಸ್ಮರಣಾ ದಿನ. ಪಾಂಡುರಂಗ ದೇಸಾಯಿಯವರು ರಾಯಚೂರು ಜಿಲ್ಲೆಯ ಕೊಪ್ಪಳದ ಬಳಿಯ ಕಿನ್ಹಾಲದಲ್ಲಿ 1910ರ ಡಿಸೆಂಬರ್ 24ರಂದು ಜನಿಸಿದರು. ತಂದೆ ಭೀಮರಾವ್. ತಾಯಿ ಭಾಗೀರಥೀಬಾಯಿ. ಪಾಂಡುರಂಗ ದೇಸಾಯಿ ಅವರ ಪ್ರಾಥಮಿಕ ಶಿಕ್ಷಣ ಸೇಡಮ್‍ನಲ್ಲೂ, ಸೆಕೆಂಡರಿ ಶಿಕ್ಷಣ ಗುಲ್ಬರ್ಗದಲ್ಲೂ […]

Advertisement

Wordpress Social Share Plugin powered by Ultimatelysocial