‘ಗೋಕಾಕ್ ಚಳುವಳಿ’. ಬಹುಷಃ ಭಾಷಾ ಹೋರಾಟದ ವಿಷಯದಲ್ಲಿ ಅತ್ಯಂತ ಯಶಸ್ವಿಯಾದ ಚಳುವಳಿ.

‘ಗೋಕಾಕ್ ಚಳುವಳಿ’. ಬಹುಷಃ ಭಾಷಾ ಹೋರಾಟದ ವಿಷಯದಲ್ಲಿ ಅತ್ಯಂತ ಯಶಸ್ವಿಯಾದ ಚಳುವಳಿ.ಪ್ರತಿಯೊಂದು ಹೋರಾಟಗಳಿಗೂ ಮಾದರಿಯಾಗಿರಬೇಕಾದಂತೆ ಬಡವ,ಮಧ್ಯಮ,ಸಿರಿವಂತರೆನ್ನದೇ ಯಾವುದೇ ಜಾತಿ,ಮತ,ಧರ್ಮವೆನ್ನದೇ, ಉತ್ತರ,ದಕ್ಷಿಣ,ಕರಾವಳಿಯೆನ್ನದೇ ಇಡೀ ಕರ್ನಾಟಕವೇ ಒಗ್ಗಟ್ಟಾಗಿ ಹೋರಾಡಿದ ಏಕೈಕ ಚಳುವಳಿ.ಕನ್ನಡ ಭಾಷೆ ಹಿಂದಿ,ಇಂಗ್ಲೀಷ್,ಸಂಸ್ಕೃತಗಳ ಹಿಡಿತಕ್ಕೆ ಸಿಲುಕಿ ನಲುಗುತ್ತಿರುವಾಗ,ಒಬ್ಬ ವಿಧ್ಯಾರ್ಥಿ ಅದೂ ಕರ್ನಾಟಕದಲ್ಲಿ ತನ್ನ ಪ್ರೌಢ ಶಿಕ್ಷಣವನ್ನ ಕನ್ನಡದ ಅಧ್ಯಯನ ನಡೆಸದೇ ಪೂರ್ಣಗೊಳಿಸುವಂತಹ ಸ್ಥಿತಿಗೆ ತಲುಪಿದಾಗ 1980ರ ದಶಕದಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜ್ ಅರಸುರವರು ಅಂದಿನವರೆಗೂ ತೃತೀಯ ಭಾಷೆಯಾಗಿದ್ದ ಕನ್ನಡವನ್ನ ಪ್ರಾಥಮಿಕ ಭಾಷೆಯಾಗಿ ಬದಲಾಯಿಸಿದರು.ಆದರೆ ದೇವರಾಜ್ ಅರಸುರವರ ತದನಂತರ ಮುಖ್ಯಮಂತ್ರಿಯಾದ R.ಗುಂಡೂರಾವ್ ಮತ್ತೆ ಸಂಸ್ಕೃತ ಭಾಷೆಯನ್ನ ಪ್ರಥಮ ಭಾಷೆಯಾಗಿ ಬದಲಾಯಿಸಹೊರಟಾಗ ಅಕ್ಷರಶಃ ಇಡೀ ಕರ್ನಾಟಕವೇ ತಿರುಗಿಬಿದ್ದಿತು.ಇದನ್ನ ಸಮರ್ಪಕವಾಗಿ ನಿರ್ವಹಿಸಲು ಅಂದಿನ ಸರ್ಕಾರ ನಾಡಿನ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾಗಿದ್ದ ವಿ.ಕೃ ಗೋಕಾಕ್ ನೇತೃತ್ವದಲ್ಲಿ ಸಮಿತಿ ರಚಿಸಿ ಸಲಹೆ ನೀಡಲು ಆಹ್ವಾನಿಸಿತು.ಜನವರಿ 1981ರಲ್ಲಿ ಗೋಕಾಕ್ ಸಮಿತಿ ನೀಡಿದ ವರದಿಯಲ್ಲಿ ‘ಪ್ರಾರ್ಥಮಿಕ ಹಾಗೂ ಪ್ರೌಡ ಶಿಕ್ಷಣದ ಸಮಯದಲ್ಲಿ ಕನ್ನಡವೇ ಮೊದಲ ಭಾಷೆಯೆಂದು ತೀರ್ಮಾನಿಸಿ,ಕನ್ನಡ ಭಾಷಾ ಕಲಿಕೆಯನ್ನ ಕಡ್ಡಾಯಗೊಳಿಸಬೇಕೆಂಬ ಸಲಹೆ ನೀಡಿತು.ಅಂದಿನ ಸರ್ಕಾರ ಆ ಸಲಹೆಗಳನ್ನ ಕಾರ್ಯರೂಪಕ್ಕೆ ತರಲು ಮೀನಮೇಷ ಎಣಿಸುತಿದ್ದಂತೆ ಜನಗಳ ಪ್ರತಿಭಟನೆಯ ಕಾವು ಹೆಚ್ಚಾಯಿತು.ನಾಡಿನ ಸಾಮಾನ್ಯ ಜನಗಳಲ್ಲದೇ,ಸಾಹಿತಿಗಳು,ಸಿನಿಮಾನಟರೆಂಬಂತೆ ದಿಗ್ಗಜರೇ ಹೋರಾಟದ ಅಂಕಣಕ್ಕಿಳಿದು ಇದೆಲ್ಲಕ್ಕೂ ಕಳಶವಿಟ್ಟಂತೇ ಆ ಸಮಯದ ಜನರ ನೆಚ್ಚಿನ ತಾರೆ ಡಾ.ರಾಜಕುಮಾರ್ ಹೋರಾಟದ ನೇತೃತ್ವ ವಹಿಸುತಿದ್ದಂತೇ ಹೋರಾಟಕ್ಕೆ ಹೊಸದೊಂದು ವೇಗವೇ ಸಿಕ್ಕಿತು. ಅಂತಿಮವಾಗಿ ಸರ್ಕಾರ ಗೋಕಾಕ್ ವರದಿಯನ್ನ ಸಂಪೂರ್ಣವಾಗಿ ಒಪ್ಪಿಕೊಂಡಿತು.ಕರ್ನಾಟಕದಲ್ಲಿ ಕನ್ನಡವೇ ಮೊದಲ ಭಾಷೆಯಾಯಿತು.ಕನ್ನಡಿಗರ ಹೋರಾಟಕ್ಕೆ ಜಯವಾಯಿತು.ಈ ‘ಹಿಂದಿ ದಿವಸ್’ ಎಂಬ ಕೇಂದ್ರ ಸರ್ಕಾರದ ಕಾರ್ಯಕ್ರಮದ ಸಮಯದಲ್ಲೇ ಗೋಕಾಕ್ ಚಳುವಳಿಯನ್ನ ನೆನಪು ಮಾಡಿಕೊಳ್ಳಲು ಬಹಳಷ್ಟು ಕಾರಣಗಳಿವೆ.ಮೊದಲನೆಯದು,ಕನ್ನಡದ ಕಡೆಗಣನೆ ಹಾಗೂ ಹಿಂದಿ ಹೇರಿಕೆ.ಹಿಂದಿಭಾಷೆಯನ್ನ ಕೇಂದ್ರೀಯ ಆಡಳಿತದ ದೃಷ್ಟಿಯಿಂದ ಆಡಳಿತ ಭಾಷೆಯಾಗಿ ಗುರುತಿಸಲಾಗಿದೆಯೇ ಹೊರತು, ಹಿಂದಿಭಾಷೆ ರಾಷ್ಟ್ರೀಯಭಾಷೆಯೆಂಬುದು ಬರೀ ತಪ್ಪುಕಲ್ಪನೆ.ಆ ಲೆಕ್ಕದಲ್ಲಿ ಸಂವಿಧಾನದ ಪರಿಚ್ಛೇದ 8ರಲ್ಲಿ ಅಡಕವಾಗಿರುವ ಎಲ್ಲಾ 22 ಅನುಸೂಚಿತ ಭಾಷೆಗಳೂ ರಾಷ್ಟ್ರಭಾಷೆಗಳೇ.ಹಾಗಂತ ಕನ್ನಡ ಭಾಷೆಯನ್ನ ಬೇರಾವುದೇ ರಾಜ್ಯದಲ್ಲಿ ಹೊತ್ತುಮೆರೆಸುವಂತಹ ಯಾವುದೇ ಕಾರ್ಯಕ್ರಮಗಳು ಎಲ್ಲೂ ನಡೆಯುವುದಿಲ್ಲವಲ್ಲ.?ಕೇಂದ್ರ ಸರ್ಕಾರದ ಕಾರ್ಯಕ್ರಮಗಳಲ್ಲಿ,ಯೋಜನೆಗಳಲ್ಲಿ ಕನ್ನಡ ಭಾಷೆಯೆಂಬುದು ಫಲಕಗಳಲ್ಲಿ,ಕಾರ್ಯಕಲಾಪಗಳಲ್ಲಿ ಕಾಣೆಯಾಗುವಂತಹ ಪರಿಸ್ಥಿತಿ ರಾಜ್ಯದ ಅಧಿಕೃತ ಹಾಗೂ ಸರ್ವಜನರಿಗೂ ಒಪ್ಪುವಂತಹ ಕನ್ನಡ ಭಾಷೆಗೆ ಮಾರಕವಲ್ಲವೇ.?ಉತ್ತರದ ರಾಜ್ಯಗಳಲ್ಲಿ ಹಿಂದಿಯ ಬಳಕೆಯಿದೆಯೇ ಹೊರತು, ದ್ರಾವಿಡ ರಾಜ್ಯಗಳಲ್ಲಿ ಹಿಂದಿ ಸಂಪರ್ಕ ಭಾಷೆಯಾಗಿ ಗುರುತಿಸಿಕೊಂಡಿಲ್ಲ.ಹಾಗಾಗಿ ಕರ್ನಾಟಕದಲ್ಲಿ ‘ಹಿಂದಿ ದಿವಸ್’ ನ ಅವಶ್ಯಕತೆಯೇನು ಎಂಬ ಪ್ರಶ್ನೆ ಮೂಡುವುದು ಸಹಜವೇ.ಪರವಿರೋಧಗಳ ಚರ್ಚೆ ಸಮಯದಲ್ಲಿ ಕೇಳಿಬರೋ ಸಾಮಾನ್ಯ ಪ್ರಶ್ನೆಯಿಷ್ಟೇ. ಹಿಂದಿಗಷ್ಟೇ ಏಕೆ ನಿಮ್ಮ ವಿರೋಧ.? ಇಂಗ್ಲೀಷ್,ತಮಿಳು,ತೆಲುಗು,ಉರ್ದುಗಳಿಗೆಲ್ಲ ಯಾಕೆ ನಿಮ್ಮ ವಿರೋಧವಿಲ್ಲ ಎಂಬುದು.ಉತ್ತರ ಇಷ್ಟೇ. ಇಂಗ್ಲೀಷ್ ಜಾಗತಿಕ ಭಾಷೆ,ಪ್ರಪಂಚದ ಎಲ್ಲೆಡೆಯೂ ರೂಡಿಯಲ್ಲಿರುವ ಹಾಗೂ ಸಾರ್ವಕಾಲಿಕವಾಗಿ ಬಳಸುವ ಭಾಷೆ.ಅದನ್ನ ಕಲಿಯೋದರಲ್ಲಿ ತಪ್ಪೆನ್ನುವಂತದ್ದಿಲ್ಲ. ಇನ್ನು ತಮಿಳು,ತೆಲುಗು,ಉರ್ದುಗಳ ವಿಚಾರಕ್ಕೆ ಬಂದರೆ, ಬಳಕೆಗೂ,ಹೇರಿಕೆಗೂ ಅಪಾರ ವ್ಯತ್ಯಾಸವಿದೆ.ಒಂದು ವೇಳೆ ಹಿಂದಿಯನ್ನೂ ಬೇರೆ ಭಾಷೆಗಳ ತರ ಬಳಸುವುದಾದರೆ ಬಳಸಿ ಇಲ್ಲದಿದ್ದರೆ ತೊಂದರೆಯೇನಿಲ್ಲ ಎಂಬ ವಿಚಾರಗಳು ಮೂಡಿಬಂದರೆ ನಮ್ಮದೇನೂ ಅಭ್ಯಂತರವಿರುವುದಿಲ್ಲ.ಅದೇರೀತಿ ಬೇರೆ ಭಾಷೆಗಳನ್ನೂ ನೀವು ಬಳಸಲೇಬೇಕೆಂಬ ಒತ್ತಡದ ಹೇರಿಕೆಯುಂಟಾದರೆ ಅದನ್ನ ವಿರೋಧಿಸಲೇಬೇಕಾದದ್ದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ.ಗೋಕಾಕ್ ಚಳುವಳಿಯೊಂದಿಗೆ ಹೋಲಿಸಿಕೊಳ್ಳಬೇಕಾದ ಇನ್ನೊಂದು ವಿಚಾರವೇನೆಂದರೆ ಅದು ‘ನಾಯಕತ್ವ ಹಾಗೂ ಜನಬೆಂಬಲ’.ಗೋಕಾಕ್ ಚಳುವಳಿ ಸಮಯದಲ್ಲಿ ಡಾ.ರಾಜ್ ನೇತೃತ್ವ ವಹಿಸಿದಂತೆ ಹಿಂದಿ ಹೇರಿಕೆಯ ವಿರುದ್ಧ ದನಿಗೂಡಿಸಲು ಸಮರ್ಥ ನಾಯಕತ್ವ ಕೊರತೆಯಿದೆ.ಅಂತಹ ಒಬ್ಬ ನಾಯಕ ಮತ್ತೆ ಇಲ್ಲಿಯವರೆಗೂ ಉದಯಿಸಲೇ ಇಲ್ಲ.ಈಗ ಹಿಂದಿ ಹೇರಿಕೆಯನ್ನ ವಿರೋಧಿಸಿ ಟ್ವೀಟ್,ಹೇಳಿಕೆಗಳನ್ನ ಕೊಡೋ ನಾಯಕರು ಮುಂದೆ ತಾವು ಅಧಿಕಾರಕ್ಕೆ ಬಂದಾಗ ಮತ್ತೆ ನಡೆಸೋದು ಅದೇ ಹಿಂದಿ ಓಲೈಕೆ.ಹಿಂದಿಹೇರಿಕೆಯ ವಿರುದ್ಧ ಹೋರಾಟ ಇದೀಗ ಕೇವಲ ಒಂದು ಪಕ್ಷ ಅಥವಾ ಸಿದ್ಧಾಂತದ ವಿರುದ್ಧದ ಹೋರಾಟವಾಗಿ ಬಿಂಬಿತಗೊಳ್ತಿದೆ.ಆದರೆ ಅದು ಹಾಗಲ್ಲ.ಹಿಂದಿನ ಸರ್ಕಾರವಿದ್ದಾಗಲೂ ಹಿಂದಿಹೇರಿಕೆಯ ವಿರುದ್ಧ ಹೋರಾಟಗಳು ಬಹಳಷ್ಟು ನಡೆದಿವೆ.ಅಸಲಿಗೆ ಈ ಹಿಂದಿ ದಿವಸ್ ಎನ್ನುವ ಆಚರಣೆಯನ್ನ ಮೊದಲು ಹರಡಿಸಿದ್ದೇ ಅಂದಿನ ನೆಹರೂ ಸರ್ಕಾರ.ಪಕ್ಷ ಸಿದ್ಧಾಂತದ ಬೇರನ್ನ ಬಿಟ್ಟು ಹೊರಬಂದು ಕನ್ನಡಿಗರಾಗಿ ಯೋಚಿಸಿದರಷ್ಟೇ ಇದಕ್ಕೊಂದು ಪರಿಹಾರ ಸಿಗಲು ಸಾಧ್ಯ.ಒಟ್ಟಿನಲ್ಲಿ ಅಂತಿಮವಾಗಿ ಹೇಳಬೇಕೆಂದರೆ, ಕನ್ನಡನಾಡಿನಲ್ಲಿ ಕನ್ನಡಭಾಷೆಯೇ ಮೊದಲು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಅಹೋರಾತ್ರಿ ಧರಣಿ!

Sat Feb 19 , 2022
ಬೆಂಗಳೂರು : ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಈಗ ಕಾಂಗ್ರೆಸ್ ಹೈಕಮಾಂಡ್ ನಿಂದಲೂ ಅಭಯ ಸಿಕ್ಕಿದೆ. ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೂ ಸ್ಥಗಿತಗೊಳಿಸಬೇಡಿ ಎಂಬ ಸೂಚನೆ ಸಿಕ್ಕಿದೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಈಗ ಮೂರನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯ ಸರಕಾರದ ವಿರುದ್ಧ ಹೋರಾಟ ನಡೆಸುವುದಕ್ಕೆ ಇದು ಮಹತ್ವದ ಅಸ್ತ್ರ ವಾಗಿದ್ದು, ಸಚಿವರ ರಾಜೀನಾಮೆಯವವರೆಗೂ ಹೋರಾಟ ನಡೆಸಿ. ಒಂದೊಮ್ನೆ […]

Advertisement

Wordpress Social Share Plugin powered by Ultimatelysocial