ಮೌಲ್ಯಗಳ ಪರಿಚಯ -ಡಾ. ಗುರುರಾಜ ಕರ್ಜಗಿ

ಮೌಲ್ಯಗಳ ಪರಿಚಯ
-ಡಾ. ಗುರುರಾಜ ಕರ್ಜಗಿ
ನನಗಿಂತ ಹಿರಿಯರೊಬ್ಬರು ಒಂದು ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದವರು ನಮ್ಮ ಮನೆಯ ಹತ್ತಿರವೇ ಇದ್ದಾರೆ. ಒಂದು ದಿನ ಭಾನುವಾರ ಮನೆಗೆ ಬಂದರು. ಆ ಮಾತು, ಈ ಮಾತು ಆದ ಮೇಲೆ ವಿಚಾರ ಮೌಲ್ಯಗಳ ಕಡೆಗೆ ತಿರುಗಿತು. ಅವರು ಬಹಳ ದುಃಖದಿಂದ, `ಈಗ ಮೌಲ್ಯಗಳ ಬಗ್ಗೆ ಮಾತನಾಡುವುದೇ ಕಷ್ಟ.
ಯಾರಿಗೂ ಅದರ ಬಗ್ಗೆ ಚಿಂತೆ ಇಲ್ಲ` ಎಂದು ಹೇಳಿ ತಮ್ಮ ಮನೆಯಲ್ಲೇ ಆದ ಘಟನೆಯೊಂದನ್ನು ವಿವರಿಸಿದರು. ಅವರಿಗೆ ಹರಿಶ್ಚಂದ್ರನ ಕಥೆ ತುಂಬ ಇಷ್ಟ. ತಮ್ಮ ಮೊಮ್ಮಗನಿಗೆ ಹರಿಶ್ಚಂದ್ರನ ಕಥೆಯ ಚಲನಚಿತ್ರ ತೋರಿಸಿ ಅವನ ಜೀವನದ ಮೌಲ್ಯವನ್ನು ತಿಳಿಸಬೇಕೆಂಬಾಸೆ. ಆದರೆ ಹುಡುಗನಿಗೆ ಆಸಕ್ತಿ ಇಲ್ಲ. ಕೊನೆಗೆ ಒತ್ತಾಯ ಮಾಡಿ ಒಂದು ಭಾನುವಾರ ಅವನನ್ನು ಚಿತ್ರಮಂದಿರಕ್ಕೆ ಕರೆದೊಯ್ದರು. ಅಲ್ಲಿ ಬಹಳ ಜನ ಇರಲಿಲ್ಲ.
ಬಾಲ್ಕನಿಯಲ್ಲಿ ಅಜ್ಜ, ಮೊಮ್ಮಗ ಕುಳಿತರು. ಚಿತ್ರ ಪ್ರಾರಂಭವಾಯಿತು. ಹರಿಶ್ಚಂದ್ರನ ಕಷ್ಟದ ಪರಂಪರೆ ಬೆಳೆಯಿತು. ಅಜ್ಜನಿಗೆ ದುಃಖ ತಡೆದುಕೊಳ್ಳುವುದು ಅಸಾಧ್ಯ. ಅವರ ಕಣ್ಣೀರು ಹರಿಯಿತು. ಮೊಮ್ಮಗ ಒಮ್ಮೆ ಪರದೆ, ಮತ್ತೊಮ್ಮೆ ಅಜ್ಜನ ಮುಖ ನೊಡುತ್ತ ಕುಳಿತ. ಸಿನಿಮಾ ಮುಗಿದ ಮೇಲೆ ಕಣ್ಣೊರೆಸಿಕೊಂಡು ಅಜ್ಜ, `ನೀನೂ ಹಾಗೇ ಆಗಬೇಕಪ್ಪ` ಎಂದರು. ಹುಡುಗ, `ಯಾರ ಹಾಗೆ` ಎಂದು ಕೇಳಿದ. `ಯಾರ ಹಾಗೆ ಅಂದರೇನಪ್ಪ.
ನೀನೂ ಆ ಹರಿಶ್ಚಂದ್ರನ ತರಹವೇ ಆಗಬೇಕಲ್ಲವೇ` ಎಂದರು ಅಜ್ಜ. ಥಟ್ಟನೇ ಮೊಮ್ಮಗ ಉತ್ತರಿಸಿದ, `ಖಂಡಿತ ಇಲ್ಲ. ನಾನು ಅವನ ಹಾಗೆ ಆಗುವುದಿಲ್ಲ. ನೋಡಲಿಲ್ಲವೇ ಸಿನಿಮಾದ ಮೊದಲನೇ ರೀಲಿನಿಂದ ಕೊನೆಯವರೆಗೂ ಅಳ್ತಾನೇ ಇದ್ದ. ನಾನು ವಿಶ್ವಾಮಿತ್ರನ ತರಹ ಆಗ್ತೇನೆ` ಎಂದ. ಅಜ್ಜನ ಗುಂಡಿಗೆ ಒಡೆಯಿತು. ಇದನ್ನೇ ನನ್ನ ಹತ್ತಿರ ಹೇಳಿಕೊಂಡರು. ನಾನು ಅವರಿಗೆ ಹೇಳಿದೆ, `ನಿಮ್ಮ ಮೊಮ್ಮಗನನ್ನು ಮುಂದಿನ ಭಾನುವಾರ ನನ್ನೆಡೆಗೆ ಕರೆದುಕೊಂಡು ಬನ್ನಿ, ಮಾತನಾಡುತ್ತೇನೆ`. ಅಂತೆಯೇ ಹುಡುಗ ಭಾನುವಾರ ಬಂದ.
`ಯಾಕಪ್ಪಾ, ಸಿನಿಮಾ ಹೇಗಿತ್ತು` ಎಂದು ಕೇಳಿದೆ. `ಬರೀ ಬೋರು ಅಂಕಲ್, ಸಿನಿಮಾ ತುಂಬ ಅಳೋದೇ ಅಳೋದು. ಒಂದೂ ಫೈಟ್ ಇಲ್ಲ` ಎಂದ. `ಹೋಗಲಿ ಬಿಡು, ಹರಿಶ್ಚಂದ್ರನ ಕಷ್ಟ ಪ್ರಾರಂಭವಾಯ್ತಲ್ಲ, ಹೆಂಡತಿ ಮಗನನ್ನು ಮಾರಿಕೊಂಡ, ತಾನೇ ಸುಡುಗಾಡು ಕಾಯಲು ನಿಂತ. ಅಲ್ಲಿಂದ ಕೊನೆಗೆ ಅವನಿಗೆ ಮರಳಿ ರಾಜ್ಯ ದೊರೆಯುವವರೆಗೆ ಅದೆಷ್ಟು ಕಾಲ ಆಗಿದ್ದಿರಬೇಕು` ಎಂದು ಕೇಳಿದೆ.
ಅದಕ್ಕಾತ `ಅದನ್ನೇನೂ ತೋರಿಸಲಿಲ್ಲ` ಎಂದ. `ಅವನು ಮತ್ತೆ ರಾಜನಾದ ಮೇಲೆ ಅದೆಷ್ಟು ಕಾಲ ಚಕ್ರವರ್ತಿಯಾಗಿಯೇ ಉಳಿದ` ಎಂದು ಕೇಳಿದಾಗಲೂ ಆತ ಅದನ್ನೂ ಹೇಳಲಿಲ್ಲ. `ಬರೀ ಶುಭಂ ಎಂದು ತೋರಿಸಿ ಕಳುಹಿಸಿಬಿಟ್ಟರು` ಎಂದ. ಆಗ ನಾನು, `ಇದೇ ನಮ್ಮ ದುರ್ದೈವ. ಹರಿಶ್ಚಂದ್ರ ಕಷ್ಟಪಟ್ಟಿದ್ದು ಅವನ ಜೀವನದಲ್ಲಿ ಎರಡು ವರ್ಷ ಮಾತ್ರ. ಆಗ ವಿಧಿ ಅವನನ್ನು ಚೆನ್ನಾಗಿ ಅರೆದು ಪರೀಕ್ಷಿಸಿತು.
ಅವನು ಗಟ್ಟಿಯಾಗಿ ನಿಂತ. ಮುಂದೆ ಅವನು ಚಕ್ರವರ್ತಿಯಾಗಿ ಎಷ್ಟೋ ಸಾವಿರ ವರ್ಷ ಬದುಕಿದ ಎಂದು ಪುರಾಣ ಹೇಳುತ್ತದೆ. ಎರಡು ವರ್ಷ ಸತ್ಯವೆಂಬ ಮೌಲ್ಯವನ್ನು ಗಟ್ಟಿಯಾಗಿ ಪಾಲಿಸಿದ್ದಕ್ಕೆ ಸಾವಿರಾರು ವರ್ಷಗಳ ರಾಜ್ಯಪದವಿ ಅವನಿಗೆ ದೊರಕಿತು. ಕಷ್ಟಪಟ್ಟಿದ್ದು ಎರಡು ವರ್ಷ. ಸುಖಪಟ್ಟಿದ್ದು ಸಾವಿರಾರು ವರ್ಷ. ಹಾಗೆ ಅವನು ಪರೀಕ್ಷೆಯ ಕಾಲದಲ್ಲಿ ಗಟ್ಟಿಯಾಗಿ ನಿಂತದ್ದರಿಂದಲ್ಲವೇ ಅವನ ಹೆಸರೇ ಸತ್ಯಹರಿಶ್ಚಂದ್ರ ಎಂದಾದದ್ದು.
ಅವನ ಹಿಂದಿದ್ದ ರಾಜನ ಹೆಸರು ಮತ್ತು ಅವನ ನಂತರದ ರಾಜನ ಹೆಸರು ನಮಗೆ ಗೊತ್ತಿಲ್ಲ. ಇದು ಸತ್ಯವೆಂಬ ಮೌಲ್ಯ ಪಾಲಿಸಿದ್ದರ ಫಲ` ಎಂದು ಹೇಳಿ ಅವನ ಮುಖ ನೋಡಿದೆ. ಅವನು, `ಹಾಗಿದ್ದರೆ ಪರವಾಗಿಲ್ಲ ಅಂಕಲ್, ನಾನು ಅವನ ಹಾಗೆ ಆಗಲು ಪ್ರಯತ್ನಿಸುತ್ತೇನೆ` ಎಂದ. ಅಜ್ಜನ ಮುಖದಲ್ಲಿ ಸಂತೋಷ. ನಾವು ಮೌಲ್ಯಗಳ ಬಗ್ಗೆ ಹೇಳುವ ರೀತಿ ಹೇಗಿದೆಯೆಂದರೆ ಅವುಗಳನ್ನು ಪಾಲಿಸಿದರೆ ಕಷ್ಟ ತಪ್ಪಿದ್ದಲ್ಲ ಎನ್ನುವಂತೆ ತೋರುತ್ತದೆ.
ಅಯ್ಯೋ ಸತ್ಯ ಹೇಳಿದರೆ ಹರಿಶ್ಚಂದ್ರನಂತೆ ಸುಡುಗಾಡು ಕಾಯೋದೇ ಗತಿ ಎನ್ನುವುದಿಲ್ಲವೇ. ನಮ್ಮ ಜೀವನದಲ್ಲೂ ಮೌಲ್ಯಗಳ ಪರೀಕ್ಷೆ ನಡೆಯುತ್ತದೆ. ಯಾರು ಗಟ್ಟಿಯಾಗಿ ನಿಂತು ಅವುಗಳನ್ನು ಪಾಲಿಸುತ್ತಾರೋ ಅವರು ಜನರ ಮನಸ್ಸಿನಲ್ಲಿ ಬಹುಕಾಲ ಉಳಿಯುತ್ತಾರೆ.
ಕೇವಲ ಹದಿನಾಲ್ಕು ವರ್ಷ ವನವಾಸ ಮಾಡಿದ ರಾಮ, ರಾಜನಾಗದೇ ಉಳಿದ ಕೃಷ್ಣ, ಸದಾ ದಯೆ ತೋರಿದ ಏಸು, ಕರುಣೆಯ ಮೂರ್ತಿ ಬುದ್ಧ ಇವರೆಲ್ಲ ಇನ್ನೂ ಸಹಸ್ರಾರು ವರ್ಷಗಳ ನಂತರವೂ ದೇವರಾಗಿಯೇ ಉಳಿದಿರುವುದಿಲ್ಲವೆ. ನಾವು ಮೌಲ್ಯಗಳನ್ನು ತಿಳಿ ಹೇಳುವ ವಿಧಾನ ಬದಲಿಸಿಕೊಳ್ಳಬೇಕು.ಮೌಲ್ಯಪಾಲನೆಯಿಂದ ಸದಾ ಕಷ್ಟವೇ ಎಂಬುದೂ ಸರಿಯಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪುಷ್ಪಾ vs ವಲಿಮಾಯಿ vs ಭೀಮ್ಲಾ ನಾಯಕ್. ಅಲ್ಲು ಅರ್ಜುನ್, ಅಜಿತ್, ಪವನ್ ಕಲ್ಯಾಣ್ ಅವರನ್ನು ಹೇಗೆ ಸೋಲಿಸಿದರು?

Fri Mar 4 , 2022
ದಕ್ಷಿಣ ಭಾರತದ ಚಿತ್ರಗಳು ಅಭೂತಪೂರ್ವ ಬಾಕ್ಸ್ ಆಫೀಸ್ ದಾಖಲೆಗಳನ್ನು ನಿರ್ಮಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಅಲ್ಲು ಅರ್ಜುನ್ ಅವರ ಪುಷ್ಪ, ಪವನ್ ಕಲ್ಯಾಣ್ ಅವರ ಭೀಮ್ಲಾ ನಾಯಕ್ ಮತ್ತು ಅಜಿತ್ ಕುಮಾರ್ ಅವರ ವಲಿಮೈ ಚಿತ್ರಗಳು ವಿಶ್ವದಾದ್ಯಂತ ಥಿಯೇಟರ್‌ಗಳನ್ನು ಅಲುಗಾಡಿಸಿ ಪ್ರೇಕ್ಷಕರನ್ನು ಆಕರ್ಷಿಸಿವೆ. ಒಂದೇ ವಾರದಲ್ಲಿ, ಮೂರು ಚಿತ್ರಗಳು ಭಾರತದ ಬಹುಪಾಲು ಪರದೆಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದವು. ಆದಾಗ್ಯೂ, ನಾವು ಅವರ ಮೊದಲ ವಾರದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳನ್ನು ಹೋಲಿಸಬೇಕಾದರೆ, ಅವರೆಲ್ಲರ ನಡುವೆ […]

Advertisement

Wordpress Social Share Plugin powered by Ultimatelysocial