ಹುಣಸೂರು ಕೃಷ್ಣಮೂರ್ತಿ ಕನ್ನಡ ಚಿತ್ರರಂಗದ ‘ಅಪ್ಪಾಜಿ’ ಎಂದು ಪ್ರಖ್ಯಾತರು.

ಹುಣಸೂರು ಕೃಷ್ಣಮೂರ್ತಿಗಳು ‘ಸತ್ಯ ಹರಿಶ್ಚಂದ್ರ’ ಅಂತಹ ಶ್ರೇಷ್ಠ ಚಿತ್ರ ನಿರ್ದೇಶಿಸಿದವರು; ‘ಬಂಗಾರದ ಮನುಷ್ಯ’, ‘ಭೂತಯ್ಯನ ಮಗ ಅಯ್ಯು’ ಅಂತಹ ಚಿತ್ರಗಳಿಗೆ ಚಿತ್ರ ಸಾಹಿತ್ಯ ರಚಿಸಿದವರು; ‘ಬೊಂಬೆಯಾಟವಯ್ಯ’, ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ’, ‘ಮಾನವ ಮೂಳೆ ಮಾಂಸದ ತಡಿಕೆ’, ‘ನಗು ನಗುತಾ ನಲಿ’ ಅಂತಹ ಹಲವಾರು ಶ್ರೇಷ್ಠ ಹಾಡುಗಳನ್ನು ಬರೆದವರು; ರಾಜ್ ಕುಮಾರ್, ಉದಯಕುಮಾರ್, ನರಸಿಂಹರಾಜು, ದ್ವಾರಕೀಶ್ ಅಂತಹ ಕಲಾವಿದರಿಂದ ಶ್ರೇಷ್ಠ ಮಟ್ಟದ ಅಭಿನಯ ಹೊರಹೊಮ್ಮಿಸಿದ ಧೀಮಂತ ದಿಗ್ದರ್ಶಕರು.ಕನ್ನಡ ಚಿತ್ರರಂಗದಲ್ಲಿ ಹುಣಸೂರು ಕೃಷ್ಣಮೂರ್ತಿಯವರ ಶ್ರೇಷ್ಠ ಕಲಾಕೃತಿಗಳಲ್ಲಿ ಒಂದಾದ ‘ಸತ್ಯ ಹರಿಶ್ಚಂದ್ರ’ದ ಬಗ್ಗೆ ಬಣ್ಣಿಸದೆ ಕನ್ನಡ ಚಿತ್ರರಂಗದ ಚರಿತ್ರೆಯೇ ಅಪೂರ್ಣವೆನಿಸುತ್ತದೆ. ಈ ಚಿತ್ರದ ಮೂಲಕ ಹುಣಸೂರರು ಪೌರಾಣಿಕ ಚಿತ್ರದ ಮಾದರಿಯೊಂದನ್ನು ರೂಪಿಸಿದರು. ಜೊತೆಗೆ ದೃಶ್ಯ ಸಂಯೋಜನೆ, ಕಲಾವಿದರ ಅಭಿನಯ, ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವ ನಿರೂಪಣೆ, ಅತ್ಯಂತ ಭಾವತೀವ್ರತೆಯ ಸನ್ನಿವೇಶಗಳಲ್ಲಿ ವಾಸ್ತವ ಬದುಕನ್ನು ಪಕ್ಕದಲ್ಲೇ ತಂದು ನಿಲ್ಲಿಸುವ ಕೌಶಲ್ಯದಿಂದ ಚಿತ್ರದ ಸೊಗಸನ್ನು ಹೆಚ್ಚಿಸಿದರು. ಪೌರಾಣಿಕ ವ್ಯಕ್ತಿಯೊಬ್ಬನ ಬದುಕಿನ ಏಳು-ಬೀಳುಗಳನ್ನು ವೈಭವೀಕರಿಸುವ ಬದಲು ಮನುಷ್ಯ ಸಮಾಜದ ವಿವಿಧ ನೋಟಗಳನ್ನು ಅವರು ಕಟ್ಟಿಕೊಟ್ಟರು. ಪ್ರಭುತ್ವ ಕಟ್ಟಿಕೊಂಡಿರುವ ಭ್ರಮಾತ್ಮಕ ಲೋಕವನ್ನು ಛಿದ್ರಗೊಳಿಸಿ ಸಾಮಾನ್ಯ ಬದುಕಿನ ನಿಜರೂಪಗಳನ್ನು ದರ್ಶನ ಮಾಡಿಸಿದರು. ಅರಮನೆ ಮತ್ತು ಸ್ಮಶಾನಗಳ ನಡುವೆ ನಿಜ ಯಾವುದಿರಬಹುದು ಎಂದು ಕ್ಷಣಕಾಲ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚಿದ ಮೊದಲ ಚಿತ್ರವಿದು. ಹಾಗೆಯೇ ದೃಶ್ಯಗಳ ಸರಣಿಯನ್ನು ನಿರ್ಮಿಸಿ ಮಾಯಾ ಜಗತ್ತಿನ ತೆರೆಯನ್ನು ಸರಿಸಿ ನೋಡುವಂಥ ಅಪೂರ್ವವಾದ ಪ್ರಯತ್ನ ಈ ಚಿತ್ರದಲ್ಲಿದೆ. ಈ ಚಿತ್ರಗಳ ಹಾಡುಗಳನ್ನು , ಈ ಹಾಡಿನಲ್ಲಿ ಹುಣಸೂರರ ಸಾಹಿತ್ಯವನ್ನು ಇಷ್ಟಪಡದ ಕನ್ನಡಿಗರುಂಟೆ?ಕನ್ನಡ ಚಿತ್ರರಂಗದ ಆರಂಭದಿಂದಲೂ ಅದರ ಬೆಳವಣಿಗೆಯಲ್ಲಿ ಪಾತ್ರವಹಿಸಿರುವ ಹುಣಸೂರು ಕೃಷ್ಣಮೂರ್ತಿಯವರು ಸಂಭಾಷಣೆ, ಹಾಡುಗಳು, ಚಿತ್ರಕಥೆ ರಚನೆ, ನಟನೆ, ನಿರ್ಮಾಣ, ನಿರ್ದೇಶನ ಹೀಗೆ ಹಲವಾರು ಕ್ಷೇತ್ರಗಳಲ್ಲಿ ದುಡಿದವರು.ಹುಣಸೂರಿನಲ್ಲಿ 1914ರ ಫೆಬ್ರವರಿ 9ರಂದುಜನಿಸಿದ ಹುಣಸೂರು ಕೃಷ್ಣಮೂರ್ತಿಯವರು ಮೈಸೂರಿನ ಶಾರದಾ ವಿಲಾಸ ಸಂಸ್ಥೆಯಲ್ಲಿ ಓದುತ್ತಿರುವ ದಿನಗಳಲ್ಲೇ ನಾಟಕಗಳತ್ತ ಆಕರ್ಷಿತರಾದರು. ಅವರ ನಟನೆ ಮತ್ತು ನಾಟಕ ರಚನೆಯ ಹುಚ್ಚು ಅವರನ್ನು ಅಂದಿನ ಚಿತ್ರನಿರ್ಮಾಣ ಕೇಂದ್ರವೆನಿಸಿದ್ದ ಮುಂಬೈನತ್ತ ಸೆಳೆಯಿತು. ಆಗ ಹಿಂದೀ ಚಲನಚಿತ್ರರಂಗದಲ್ಲಿ ಖ್ಯಾತರಾಗಿದ್ದ ನಿರ್ದೇಶಕ ಹಿಮಾಂಷು ರಾಯ್, ವಿ. ಶಾಂತಾರಾಂ ಹಾಗೂ ಕಲಾವಿದರಾದ ದೇವಿಕಾರಾಣಿ, ಅಶೋಕ್ ಕುಮಾರ್ ಮುಂತಾದವರ ಸಹವಾಸ ಅವರಿಗೆ ದೊರಕಿತು. ಅಲ್ಲಿನ ಬಾಲಗಂಧರ್ವ ಸಭಾದಲ್ಲಿ ಕೆಲಸಕ್ಕೆ ಸೇರಿ ತಬಲ, ಹಾರ್ಮೋನಿಯಮ್ ವಾದ್ಯಗಳಲ್ಲಿ ಪರಿಶ್ರಮ ಪಡೆದರು. ಅಂದಿನ ಪ್ರಸಿದ್ಧ ನಾಟಕ ಸಂಸ್ಥೆಗಳಾದ ಪೆಂಡಾರ್ಕರ್ ಮತ್ತು ಸುರ್ ನಾಯಕ್ ಅವರ ಕಲಾಮಂಡಳಿಗೆ ಸೇರಿ ಅಭಿನಯ ಮತ್ತು ನಾಟಕರಂಗದ ಇತರ ವಿಭಾಗಗಳಲ್ಲೂ ಅನುಭವ ಗಳಿಸಿದರು. ಅನಂತರ ಹುಬ್ಬಳ್ಳಿಗೆ ಬಂದು ಗರುಡ ನಾಟಕ ಕಂಪನಿ, ಪೀರ್ ಸಾಹೇಬ್ ಅವರ ಚಂದ್ರಕಲಾ ನಾಟಕ ಮಂಡಳಿ ಮತ್ತು ಗುಬ್ಬಿ ನಾಟಕ ಕಂಪನಿಗಳಲ್ಲೂ ಕಾರ್ಯನಿರ್ವಹಿಸಿದರು. ಗುಬ್ಬಿ ಕಂಪನಿಯವರಿಗಾಗಿ ಅವರು ರಚಿಸಿದ `ರಾಜಾ ಗೋಪಿಚಂದ್’ ನಾಟಕವು ಸತತ ಐದುನೂರು ದಿನಗಳ ಪ್ರದರ್ಶನ ಕಂಡು ಆ ಕಾಲಕ್ಕೆ ದಾಖಲೆ ನಿರ್ಮಿಸಿತ್ತು
ತಮ್ಮ ಮೊದಲ ನಾಟಕದ ಯಶಸ್ಸಿನಿಂದ ಪ್ರೇರಣೆಗೊಂಡ ಹುಣಸೂರರು ಚಿತ್ರಕಥಾ ರಚನೆಗೆ ಮೊದಲು ಮಾಡಿದರು. ಗುಬ್ಬಿ ಫಿಲಂಸ್ ತಯಾರಿಸಿದ ‘ಹೇಮರೆಡ್ಡಿ ಮಲ್ಲಮ್ಮ’ (1943) ಅವರು ಸಾಹಿತ್ಯ ರಚಿಸಿದ ಮೊದಲ ಚಿತ್ರ. ಅನಂತರ ಮಹಾತ್ಮ ಪಿಕ್ಚರ್ಸ್ ಅವರ ಚೊಚ್ಚಲ ನಿರ್ಮಾಣವಾದ ‘ಕೃಷ್ಣಲೀಲಾ’ ಚಿತ್ರದ ಕತೆ, ಚಿತ್ರಕತೆ ಮತ್ತು ಸಂಭಾಷಣೆಗಳ ಮೂಲಕ ಪೂರ್ಣ ಪ್ರಮಾಣದ ಚಿತ್ರ ಸಾಹಿತಿಯಾಗಿ ಹೊರಹೊಮ್ಮಿದರು. ಕೆಂಪರಾಜ ಅರಸು ಅವರು ನಾಯಕರಾಗಿದ್ದ ‘ಮಹಾನಂದ’, ‘ರಾಜಾವಿಕ್ರಮ’ ಮತ್ತು `ನಳ ದಮಯಂತಿ’ ಮುಂತಾದ ಚಿತ್ರಗಳಿಗೆ ಸಂಭಾಷಣೆ ಬರೆದು ಬಹುಬೇಡಿಕೆಯ ಸಾಹಿತಿಯಾದರು. ‘ಮಹಾನಂದ’ (1947) ಚಿತ್ರದ ಪ್ರಧಾನ ನಿರ್ಮಾಪಕರು ಸಹ ಹುಣಸೂರರೇ! ಮಹಾತ್ಮಾ ಪಿಕ್ಚರ್ಸ್ ಅವರ ಆರಂಭದ ಚಿತ್ರಗಳಿಗೆ ಇವರು ಖಾಯಂ ಸಾಹಿತಿಯಾಗಿದ್ದರು. ‘ಕೆ.ಎಂ. ಹುಣಸೂರು’, ‘ಗೌತಮ’ ಹೆಸರುಗಳಲ್ಲಿಯೂ ಅವರು ಸಂಭಾಷಣೆ, ಗೀತೆಗಳನ್ನು ರಚಿಸಿದರು. ಸಿನಿಮಾ ಸಂಭಾಷಣೆ ರಚನೆಯಲ್ಲಿ ಇವರು ಎಷ್ಟು ಬೇಡಿಕೆಯ ಸಾಹಿತಿಯಾಗಿದ್ದರೆಂದರೆ 1953ರಲ್ಲಿ ಬಿಡುಗಡೆಯಾದ ಎಂಟು ಚಿತ್ರಗಳಲ್ಲಿ ಆರು ಚಿತ್ರಗಳಿಗೆ ಇವರೇ ಸಾಹಿತ್ಯ ಒದಗಿಸಿದ್ದರು. ‘ಮಂಗಳಗೌರಿ’ (1953) ಚಿತ್ರವನ್ನು ಇವರೇ ನಿರ್ದೇಶಿಸಿದ್ದರೂ, ನಿರ್ದೇಶಕರ ಹೆಸರು ಟಿ.ಆರ್. ಸುಂದರಂ ಎಂದು ಪ್ರಕಟಿಸಲಾಯಿತು. ಹುಣಸೂರು ಕೃಷ್ಣಮೂರ್ತಿ ಅವರು ಸಾಹಿತ್ಯ ಒದಗಿಸಿದ ಹಲವಾರು ಚಿತ್ರಗಳ ನಿರ್ದೇಶಕರು ಇದ್ದದ್ದು ನೆಪಮಾತ್ರಕ್ಕೆ. ಉಳಿದಂತೆ ಇವರೇ ಚಿತ್ರ ನಿರ್ದೇಶಿಸುತ್ತಿದ್ದರೆಂದು ಹಲವಾರು ಹಿರಿಯರು ನೆನಪಿಸಿಕೊಳ್ಳುತ್ತಾರೆ. ‘ಮಾಡಿದ್ದುಣ್ಣೋ ಮಹರಾಯ'(1954) ಚಿತ್ರದಲ್ಲಿ ನಾಯಕನಟರಾಗಿ ಅಭಿನಯಿಸಿದ ಹುಣಸೂರರು ಮುಂದೆ ತಮ್ಮ ಸ್ವಂತ ನಿರ್ಮಾಣದ ‘ವೀರಸಂಕಲ್ಪ’ (1964) ಚಿತ್ರದಲ್ಲೂ ನಾಯಕನ ಪಾತ್ರ ವಹಿಸಿದ್ದರು.1960ರಲ್ಲಿ ತಯಾರಾದ `ಆಶಾಸುಂದರಿ’ ಚಿತ್ರದ ಮೂಲಕ ಅಧಿಕೃತವಾಗಿ ಸ್ವತಂತ್ರ ನಿರ್ದೇಶಕರಾದ ಹುಣಸೂರರು ಮುಂದೆ ಸುಮಾರು 20 ಚಿತ್ರಗಳನ್ನು ನಿರ್ದೇಶಿಸಿದರು. ‘ಮದುವೆ ಮಾಡಿನೋಡು’ ಮತ್ತು `ಅಡ್ಡದಾರಿ’ ಚಿತ್ರಗಳನ್ನು ಹೊರತುಪಡಿಸಿದರೆ ಅವರ ನಿರ್ದೇಶನದ ಬಹುತೇಕ ಚಿತ್ರಗಳು ಪೌರಾಣಿಕ, ಜಾನಪದ ಇಲ್ಲವೇ ಸಂತರ ಬದುಕನ್ನು ಆಧರಿಸಿದಂಥವು. ‘ಸತ್ಯ ಹರಿಶ್ಚಂದ್ರ’, ‘ಬಬ್ರುವಾಹನ’, ‘ಭಕ್ತಕುಂಬಾರ’, ‘ಭಕ್ತ ಸಿರಿಯಾಳ’, ‘ಕನ್ನಿಕಾಪರಮೇಶ್ವರಿ ಕತೆ’, ‘ವೀರಸಂಕಲ್ಪ’, ‘ದೇವರ ಗೆದ್ದ ಮಾನವ’, ‘ಜಗಮೆಚ್ಚಿದ ಮಗ’ – ಇವು ಹುಣಸೂರರು ನಿರ್ದೇಶಿಸಿದ ಪ್ರಮುಖ ಯಶಸ್ವೀ ಚಿತ್ರಗಳು. ಅಭಿನಯ, ಸಂಭಾಷಣೆಯಿಂದಲೇ ಜನಪ್ರಿಯ ಚಿತ್ರಗಳನ್ನು ರೂಪಿಸುತ್ತಿದ್ದದ್ದು ಹುಣಸೂರರ ಸಾಮರ್ಥ್ಯ. ‘ವೀರಸಂಕಲ್ಪ’ ಚಿತ್ರದಲ್ಲಿ ನೀಡಿದ ವೀರಾವೇಶದ ಅಭಿನಯ ಅವರ ನಟನಾ ಪ್ರತಿಭೆಗೆ ಸಾಕ್ಷಿಯಾಗಿತ್ತು. ಆದರೆ ಹುಣಸೂರರು ಕಲಾವಿದರ ಅಭಿನಯ ಪ್ರತಿಭೆಯನ್ನು ದುಡಿಸುವುದರಲ್ಲಿಯೇ ಹೆಚ್ಚು ಒಲವು ಬೆಳೆಸಿಕೊಂಡರು. ರಾಜ್ ಕುಮಾರ್ ಅಂಥವರಿಂದ ಉತ್ತಮ ಅಭಿನಯ ತೆಗೆಸುವುದರಲ್ಲಿ ಸಿದ್ಧಹಸ್ತರಾಗಿದ್ದರು. ‘ಸತ್ಯ ಹರಿಶ್ಚಂದ್ರ’, ‘ಕನ್ನಿಕಾ ಪರಮೇಶ್ವರಿ ಕತೆ’, ‘ಭಕ್ತ ಕುಂಬಾರ’, ‘ಬಬ್ರುವಾಹನ’, ‘ಜಗ ಮೆಚ್ಚಿದ ಮಗ’ ಚಿತ್ರದಲ್ಲಿ ರಾಜ್ ಅವರ ಅಭಿನಯ ರಸಿಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.ಎವರ್ ಗ್ರೀನ್ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಹುಟ್ಟುಹಾಕಿ ಅನೇಕ ಚಿತ್ರಗಳನ್ನು ತಯಾರಿಸಿದ ಹುಣಸೂರರು ಹಲವಾರು ಕಲಾವಿದರನ್ನು ಪರಿಚಯಿಸಿದ್ದಾರೆ. ಎಂ.ಪಿ.ಶಂಕರ್ (ರತ್ನ ಮಂಜರಿ), ದ್ವಾರಕೀಶ್, ಬಿ.ಎಂ.ವೆಂಕಟೇಶ್, ವಾಣಿಶ್ರೀ (ವೀರಸಂಕಲ್ಪ) ಮುಂತಾದ ಕಲಾವಿದರು ಹುಣಸೂರರ ಗರಡಿಯಿಂದ ತಯಾರಾದವರು. ಮೊದಲ ಮೂವರು ತಮ್ಮ ಗುರುವಿನಂತೆ ತಾವೂ ಸಹಾ ಚಿತ್ರ ನಿರ್ಮಿಸಿ ಮತ್ತಷ್ಟು ಕಲಾವಿದರು, ತಂತ್ರಜ್ಞರಿಗೆ ಅವಕಾಶ ಕಲ್ಪಿಸಿದರು.ಹುಣಸೂರರ ಪ್ರತಿಭೆಯನ್ನು ಸಮರ್ಥವಾಗಿ ಉಪಯೋಗಿಸಿ ಕೊಂಡವರಲ್ಲಿ ಸಿದ್ಧಲಿಂಗಯ್ಯ ಅಗ್ರಗಣ್ಯರು. ‘ಬಂಗಾರದ ಮನುಷ್ಯ’, ‘ಬೂತಯ್ಯನ ಮಗ ಅಯ್ಯು’ ಮುಂತಾದ ಚಿತ್ರಗಳ ಯಶಸ್ಸಿನಲ್ಲಿ ಹುಣಸೂರರ ಸಂಭಾಷಣೆ ಮತ್ತು ಹಾಡುಗಳ ಕಾಣಿಕೆಯನ್ನು ಮರೆಯುವಂತಿಲ್ಲ. ಹಾಡುಗಳಲ್ಲಿ ಪ್ರಾಸದ ಹಂಗನ್ನು, ವೈಭವದ ಸಾಲುಗಳನ್ನು, ವಿಶೇಷಣಗಳ ಮೆರವಣಿಗೆಯನ್ನು ತ್ಯಜಿಸಿದವರಲ್ಲಿ ಅವರೇ ಮೊದಲಿಗರು. ಚಿತ್ರದ ವಸ್ತು ಪುರಾತನವಾದರೂ, ಸಮಕಾಲೀನ ಚಿಂತನೆಗಳನ್ನು ಬೆರೆಸುತ್ತಿದ್ದ ಅವರ ಕ್ರಿಯಾಶೀಲತೆ ನವೀನವೆನಿಸುತ್ತಿತ್ತು. ಅವರು ರಚಿಸಿದ ‘ಬೊಂಬೆಯಾಟವಯ್ಯ’ (ಕೃಷ್ಣಗಾರುಡಿ), ‘ನಗು ನಗುತಾ ನಲಿ’, ‘ಬಾಳಬಂಗಾರ ನೀನು’ (ಬಂಗಾರದ ಮನುಷ್ಯ), ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ…’ (ಸತ್ಯ ಹರಿಶ್ಚಂದ್ರ), ‘ಮಾನವ ದೇಹವು…’ (ಭಕ್ತ ಕುಂಬಾರ), ‘ಏಕೋ ಈ ಕೋಪ ಶಂಕರ…’, `ಶಿವ ಶಿವ ಎಂದರೆ ಭಯವಿಲ್ಲಾ…’ (ಭಕ್ತ ಸಿರಿಯಾಳ), ‘ಅಮೃತಮಯವೀ ಪ್ರೇಮ’ (ಆಶಾಸುಂದರಿ), ‘ನಿಂತಲ್ಲೇ ಅವಳು ಕುಳಿತಲ್ಲೆ ಅವಳು’ (ಕನ್ನಿಕಾ ಪರಮೇಶ್ವರಿ ಕತೆ), ‘ಹಾಡು ಬಾ ಕೋಗಿಲೆ…’ (ವೀರಸಂಕಲ್ಪ) ಮುಂತಾದ ಹಾಡುಗಳು ಮಾಧುರ್ಯ ಮತ್ತು ಅರ್ಥಗರ್ಭಿತ ಸಾಲುಗಳಿಂದ ಅಮರವಾಗಿವೆ.ಸಿನಿಮಾಗಳಲ್ಲಿ ಛೇಡಿಸುವ ಹಾಡುಗಳನ್ನು ಜನಪ್ರಿಯಗೊಳಿಸಿದ ಕೀರ್ತಿ ಕೂಡಾ ಹುಣಸೂರರಿಗೇ ಸಲ್ಲಬೇಕು. ‘ರಾಜಲಕ್ಷ್ಮಿ’ ಚಿತ್ರದ ‘ಮಾರನಂಥ ರೂಪ ಕಂಡು ಮಾರುಹೋದೆ…’, ‘ಸಿಟ್ಯಾಕೊ ಸಿಡಿಕ್ಯಾಕೋ ನನ ಜಾಣ…’ (ವೀರ ಸಂಕಲ್ಪ), ‘ಹಣ್ಣು… ಹಣ್ಣು… ಗಂಜಾಂ ಮಾವಿನ ಹಣ್ಣು’ (ದೇವರ ಗೆದ್ದ ಮಾನವ), ‘ಗಂಡಿನ ಕಡೆಯ ನೆಂಟರು ನೀವು…’ (ಕನ್ನಿಕಾ ಪರಮೇಶ್ವರಿ ಕತೆ), ‘ಗಿಲಿ ಗಿಲಿ ಗಿಲಕ್ಕ ಕಾಲುಗೆಜ್ಜೆ ಥಣಕ್ಕಾ… ರಂಗೆದ್ದಿತೋ’ (ರತ್ನಮಂಜರಿ), ‘ಏರಿ ಮೇಲೆ ಏರಿ ಮೇಲೆ ಕೆಳಗೆ ಹಾರಿ…’ (ಜಗಮೆಚ್ಚಿದ ಮಗ), ‘ಮದುವೆ ಮಾಡಿಕೊಂಡು ಮನೆಯ ಹೂಡಿಕೊಂಡು…’ (ಮದುವೆ ಮಾಡಿ ನೋಡು), ‘ನನ್ನ ನೀನು, ನಿನ್ನ ನಾನು ಕಾದುಕೊಂಡು…’ (ಸತ್ಯ ಹರಿಶ್ಚಂದ್ರ) ಮುಂತಾದ ಹಾಡುಗಳ ಮೂಲಕ ಚಿತ್ರಕ್ಕೆ ಪ್ರೇಕ್ಷಕ ಸಮೂಹವನ್ನು ಸೆಳೆಯುವ ಚಮತ್ಕಾರವನ್ನು ಅಳವಡಿಸಿದವರು ಹುಣಸೂರರು. ಈ ತಂತ್ರವನ್ನು ಮುಂದೆ ಅನೇಕ ನಿರ್ದೇಶಕರು ಅನುಕರಿಸಿದರು.ಎಲ್ಲಕ್ಕಿಂತ ಮುಖ್ಯವಾಗಿ ವಿಷಾದ ಮತ್ತು ಜೀವನ ನಿರರ್ಥಕತೆಯ ಭಾವದ ತತ್ತ್ವಪದದಂಥ ಹಾಡುಗಳ ಮೂಲಕ ಚಿತ್ರದ ಓಟದ ಗತಿಯನ್ನು ನಿರ್ದೇಶಿಸಲು ಹುಣಸೂರರು ಅಳವಡಿಸಿದ ತಂತ್ರ ಮುಂದೆ ಅಪಾರ ಜನಪ್ರಿಯತೆ ಪಡೆಯಿತು. ಹಾಗಾಗಿ ‘ಸತ್ಯ ಹರಿಶ್ಚಂದ್ರ’ ಚಿತ್ರದ `ವಿಧಿ ವಿಪರೀತ…’, `ದಲ್ಲಾಳಿ’ ಚಿತ್ರದ ‘ಆಗಿತ್ತು ತಲೆಯ ಮೇಲೆ ಜರಿಪೇಟ…’, `ಕನ್ಯಾದಾನ’ ಚಿತ್ರದ ‘ಬಣ್ಣದಲೇನಿದೆಯೋ ಬೆಡಗು…’, ‘ಬಂಗಾರದ ಮನುಷ್ಯ’ ಚಿತ್ರದ ‘ನಗು ನಗುತಾ ನಲಿ…’, ‘ಭಕ್ತ ಕುಂಬಾರ’ ಚಿತ್ರದ `ಮಾನವ ದೇಹವು…’, ‘ಬೂತಯ್ಯನ ಮಗ ಅಯ್ಯು’ ಚಿತ್ರದ ‘ವಿರಸವೆಂಬ…’ ಮುಂತಾದ ರಚನೆಗಳು ತತ್ತ್ವಜ್ಞಾನಿಯೊಬ್ಬನ ಚಿಂತನೆಗಳಂತೆ ಕಾಣಿಸಿಕೊಂಡು ಚಿತ್ರಗಳ ಮೌಲ್ಯವನ್ನು ಹೆಚ್ಚಿಸಿವೆ.ಸಾಮಾಜಿಕ ಚಿತ್ರಗಳನ್ನು ಹೆಚ್ಚು ನಿರ್ದೇಶಿಸದಿದ್ದರೂ, ಸಮಾಜದ ಮೌಲ್ಯಗಳನ್ನು, ದಮನಿತರ ಮನೋಭಾವವನ್ನು ತಮ್ಮ ಚಿತ್ರಗಳಲ್ಲಿ ಮತ್ತು ಸಂಭಾಷಣೆಗಳಲ್ಲಿ ತಂದುಕೊಟ್ಟವರು ಹುಣಸೂರು ಕೃಷ್ಣಮೂರ್ತಿ. ತಮ್ಮೆಲ್ಲ ಶಕ್ತಿ ಸಾಮರ್ಥ್ಯಗಳನ್ನು ಧಾರೆಯೆರೆದು ರೂಪಿಸಿದ `ಸತ್ಯ ಹರಿಶ್ಚಂದ್ರ’ ಚಿತ್ರವೊಂದೇ ಅವರಿಗೆ ಕನ್ನಡ ಚಿತ್ರರಂಗ ಇತಿಹಾಸದಲ್ಲಿ ಮಹತ್ತರವಾದ ಸ್ಥಾನ ಕಲ್ಪಿಸಲು ಸಾಕು.ಹೀಗೆ ತಮ್ಮ ಅದ್ಭುತ ಸಾಧನೆಗಳಿಂದ ಜನಪ್ರಿಯರಾಗಿದ್ದ ಹುಣಸೂರರು 1989ರಫೆಬ್ರವರಿ 13ರಂದು ಈ ಲೋಕವನ್ನಗಲಿದರು. ಅವರು ಮೂಡಿಸಿದ ಅನರ್ಘ್ಯ ಚಿತ್ರರತ್ನಗಳಿಂದ ಅವರೆಂದೂ ಅಮರರು. ಈ ಮಹಾನ್ ಸಾಧಕರಿಗೆ ನಮ್ಮ ನೆನಪಿನ ನಮನಗಳು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದರ್ಶನ್ ಅವರ ಹೊಸ ಚಿತ್ರದ ನಿರ್ಮಾಪಕ ರಮೇಶ್ ‌ಪಿ ಪಿಲೈ ಅವರ ಚಿತ್ರ ತಂಡ ದರ್ಶನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯವನ್ನು ಪೋಸ್ಟರ್ ಮೂಲಕ ಕೋರಿದೆ.

Wed Feb 16 , 2022
ದರ್ಶನ್ ಅವರ ಹೊಸ ಚಿತ್ರದ ನಿರ್ಮಾಪಕ ರಮೇಶ್ ‌ಪಿ ಪಿಲೈ ಅವರ ಚಿತ್ರ ತಂಡ ದರ್ಶನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯವನ್ನು ಪೋಸ್ಟರ್ ಮೂಲಕ ಕೋರಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial