ಹರಿಹರಪ್ರಿಯ ಅಗಾಧವಾಗಿ ಕನ್ನಡ, ತೆಲುಗು ಸಾಹಿತ್ಯ ಓದಿದವರು.

ಹರಿಹರಪ್ರಿಯ ಅಗಾಧವಾಗಿ ಕನ್ನಡ, ತೆಲುಗು ಸಾಹಿತ್ಯ ಓದಿದವರು, ಲಕ್ಷಾಂತರ ಪುಸ್ತಕಗಳ ದೊಡ್ಡ ಸಂಗ್ರಹಮಾಡಿರುವವರು, ಪ್ರಗತಿಶೀಲರಾಗಿ ಬರವಣಿಗೆ, ಸಾಹಿತ್ಯ ಉಪನ್ಯಾಸಗಳಲ್ಲಿ ಮತ್ತು ಸಮಾಜಪರ ಚಟುವಟಿಕೆಗಳಲ್ಲಿ ನಿರಂತರ ಕ್ರಿಯಾಶೀಲರಾಗಿರುವವರು.ಆಂಧ್ರಮೂಲದ ಸಾತವಲ್ಲಿ ವೇಂಕಟವಿಶ್ವನಾಥಭಟ್ಟ ಅವರು ಹರಿಹರಪ್ರಿಯ ಎಂದೇ ಪರಿಚಿತರು. 1952ರ ಜನವರಿ 20ರಂದು ಮೈಸೂರಿನಲ್ಲಿ ಜನಿಸಿದ ಅವರು ಬೆಳೆದದ್ದು ಮಂಡ್ಯದಲ್ಲಿ. ತಂದೆ ಆಂಜನೇಯ ಗುಡಿಯ ಅರ್ಚಕರಾಗಿದ್ದರು. ತುಂಡು ಹೊಲವೊಂದು ಇದ್ದರೂ, ಪುಂಡ ಜನಗಳ ನಡುವೆ ಬೇಸಾಯ ಮಾಡುವುದು ಆಗದೆ, ಊರೂರು ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮೈಸೂರು, ಮಂಡ್ಯ, ಕೃಷ್ಣರಾಜಪೇಟೆ, ನಾಗಮಂಗಲ, ಕಿಕ್ಕೇರಿ, ಹೊಳೆನರಸೀಪುರ, ಕೊನೆಗೆ ಬೆಂಗಳೂರು, ಹೀಗೆ ತಿರುಗುತ್ತ ಕೊಟ್ಟವರ ಮನೆಯಲ್ಲಿ ಊಟ ಮಾಡುತ್ತ, ಹರಿಹರಪ್ರಿಯರು ತಮ್ಮ ಶಿಕ್ಷಣವನ್ನು ಹನ್ನೊಂದನೆಯ ತರಗತಿಯವರೆಗೆ ಪೂರೈಸಿದರು. ಮುಂದೆ ’ಕನ್ನಡ ಜಾಣ’ದಲ್ಲಿ ಉನ್ನತಮಟ್ಟದ ಯಶಸ್ಸು ಸಾಧಿಸಿದರು. ಹರಿಹರಪ್ರಿಯ ಮಾಡದ ವೃತ್ತಿ ಇಲ್ಲ. ಸೊಸೈಟಿ ಗುಮಾಸ್ತೆಗಿರಿ, ಪತ್ರಿಕಾ ವರದಿಗಾರ, ವಾಚನಾಲಯದಲ್ಲಿ ಸಹಾಯಕ, ಮುದ್ರಣಾಲಯದಲ್ಲಿ ಪ್ರೂಫ್ ರೀಡರ್, ಹಲವು ಸಾಹಿತಿಗಳ ಬಳಿ ಶುದ್ಧ ಪ್ರತಿ ತಯಾರಕ, ಚಲನಚಿತ್ರ ನಿರ್ಮಾಣದಲ್ಲಿ ಸಹಾಯಕ ಹೀಗೆ , ಹೊಟ್ಟೆಪಾಡಿಗಾಗಿ ಹತ್ತು ಹಲವು ಕೆಲಸಗಳಲ್ಲಿ ಕೈಯಾಡಿಸಿದರು.

ಪುಸ್ತಕ ಸಂಗ್ರಹಕಾರ, ಸಾಹಿತಿ, ಕವಿ, ವಿಮರ್ಶಕ, ಭಾಷಣಕಾರ ಹೀಗೆ ಹಲವು ರೀತಿಗಳಲ್ಲಿ ಏಕೀರ್ಭವಿಸಿರುವ ಹರಿಹರಪ್ರಿಯರು ತಮ್ಮನ್ನು ಒಬ್ಬ ಸಾಮಾಜಿಕ-ಸಾಂಸ್ಕೃತಿಕ ಬರಹಗಾರ ಎಂದು ಕಂಡುಕೊಳ್ಳಲು ಆಶಿಸುತ್ತಾರೆ.
’ಪುಸ್ತಕಮನೆ’ ಎನ್ನುವುದು ಅವರ ಅಪರೂಪದ ಪುಸ್ತಕ ಸಂಗ್ರಹ. ಸತತ ಐದು ವರ್ಷಗಳ ಕಾಲ ಪುಸ್ತಕ ಪ್ರದರ್ಶನ ನಡೆಸಿದ ದಾಖಲೆ ಅವರದು. ಅಪರೂಪದ ಸಾಹಿತ್ಯ ಕೃತಿಗಳ ಮತ್ತು ವ್ಯಕ್ತಿಗಳ ಬಗ್ಗೆ ಅಧಿಕೃತ ಮಾಹಿತಿ ನೀಡಬಲ್ಲ ಮಾಹಿತಿಕೋಶ ಎಂದೇ ಅವರು ಖ್ಯಾತರು. ಯಾರಿಗಾದರೂ, ಎಲ್ಲೂ ಕಂಡಿರದ ಪುಸ್ತಕವನ್ನು ನೋಡಲೇಬೇಕು-ಓದಲೇಬೇಕು, ಅಧ್ಯಯನಕ್ಕೆ ಬೇಕೇಬೇಕು ಎಂದೆನಿಸಿದಾಗ ಥಟ್ಟನೆ ನೆನಪಿಗೆ ಬರುವುದು ಪುಸ್ತಕಮನೆ. ಹೆಚ್ಚೆಚ್ಚು ಪುಸ್ತಕಗಳನ್ನು ಯಾರು ಬೇಕಾದರೂ ಸಂಗ್ರಹಿಸಿಯಾರು, ಆದರೆ ಕನ್ನಡ ಪುಸ್ತಕಗಳ- ಕನ್ನಡ ಪತ್ರಿಕೆಗಳ ಸಮಗ್ರತೆಯ, ವ್ಯವಸ್ಥಿತ ಜೋಡಣೆಯ ವಿಶ್ವರೂಪ ದರ್ಶನ ಪಡೆಯಬೇಕಾದರೆ ಹರಿಹರಪ್ರಿಯ ಅವರ ಪುಸ್ತಕಮನೆ ನೋಡಬೇಕು ಎಂಬುದು ಪ್ರಖ್ಯಾತ ಮಾತು.
ಹರಿಹರಪ್ರಿಯರು ಹಲವು ವಿಧಗಳಲ್ಲಿ ಸಾಂಸ್ಕೃತಿಕ ಚಳುವಳಿಗಳಲ್ಲಿ ನಿರಂತರ ಪಾತ್ರವಹಿಸಿದವರು. ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟ, ಜೆ.ಪಿ.ಚಳುವಳಿ, ಬಂಡಾಯ ಸಾಹಿತ್ಯ ಸಂಘಟನೆ, ಕರ್ನಾಟಕ ವಿಕಾಸ ವೇದಿಕೆ, ದಲಿತ ಸಂಘರ್ಷ ಸಮಿತಿ, ಪ್ರಜಾಸಾಹಿತಿ ಬಳಗ ಹೀಗೆ ಹಲವು ಸಂಘಟನೆಗಳಲ್ಲಿ ಅವರು ಸಕ್ರಿಯ ಪಾತ್ರ ವಹಿಸಿದ್ದಾರೆ. ಕೆನ್ ಕಲಾಶಾಲೆ, ಕಲಾಮಂದಿರಗಳಲ್ಲಿ ಸಾಹಿತ್ಯ, ಕಲಾಚರಿತ್ರೆ ಕುರಿತು ಗೌರವ ಅಧ್ಯಾಪಕರಾಗಿ ಬೋಧಿಸಿದ್ದಾರೆ. 1976ರಲ್ಲಿ “ಕುವೆಂಪು ದರ್ಶನ” ಎಂಬ ದ್ವೈಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದರು. ಆನಂತರ ಕಾಗಿನೆಲೆಯ ಕನಕ ಪ್ರತಿಷ್ಠಾನದ “ಕನಕ ಸ್ಫೂರ್ತಿ” ಮಾಸಪತ್ರಿಕೆಯ ಗೌರವ ಸಂಪಾದಕರು ಹಾಗೂ ರಂಗಭೂಮಿ ಕುರಿತಾದ “ಈ ಮಾಸ ನಾಟಕ” ಪತ್ರಿಕೆಗೂ ಗೌರವ ಸಂಪಾದಕರಾಗಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಬಿ.ವಿಠ್ಠಲಾಚಾರ್ಯ ಚಲನಚಿತ್ರೋದ್ಯಮದಲ್ಲಿ ದೊಡ್ಡ ಹೆಸರು.

Sun Jan 22 , 2023
ಬಿ.ವಿಠ್ಠಲಾಚಾರ್ಯ ಚಲನಚಿತ್ರೋದ್ಯಮದಲ್ಲಿ ದೊಡ್ಡ ಹೆಸರು. ಕನ್ನಡಿಗರಾದ ಅವರು ತೆಲುಗು ಮತ್ತು ಕನ್ನಡ ಚಲನಚಿತ್ರಗಳ ಜನಪ್ರಿಯ ನಿರ್ದೇಶಕ ಮತ್ತು ನಿರ್ಮಾಪಕರಾಗಿ ಪ್ರಸಿದ್ಧರಾದವರು.ವಿಠ್ಠಲ ಆಚಾರ್ಯರು 1920ರ ಜನವರಿ 20ರಂದು ಅಂದಿನ ಉಡುಪಿ ತಾಲೂಕಿನ ಉದ್ಯಾವರದಲ್ಲಿ ಜನಿಸಿದರು. ಅವರಿಗೆ ಬಾಲ್ಯದಿಂದಲೂ ನಾಟಕ, ಬಯಲಾಟ ಮತ್ತು ಯಕ್ಷಗಾನಗಳಲ್ಲಿ ಅಪಾರ ಆಸಕ್ತಿ. ಅವರ ತಂದೆ ಉಚಿತವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಒಬ್ಬ ಹೆಸರಾಂತ ಆಯುರ್ವೇದ ವೈದ್ಯರಾಗಿದ್ದರು.ವಿಠ್ಠಲಾಚಾರ್ಯರು ಓದಿದ್ದು ಮೂರನೆ ತರಗತಿವರೆಗೆ ಮಾತ್ರಾ. ಒಂಬತ್ತು ವರ್ಷ ವಯಸ್ಸಿನವರಾಗಿದ್ದಾಗ ಮನೆಬಿಟ್ಟು […]

Advertisement

Wordpress Social Share Plugin powered by Ultimatelysocial