ಹುತಾತ್ಮರಾದ ನಮ್ಮ ದೇಶದ ಕಲಿಗಳು

ಮಾರ್ಚ್ 23, 1931ರ ವರ್ಷದಲ್ಲಿ ನಮ್ಮ ಭಾರತದ ಯುವ ಕಲಿ ಭಗತ್ ಸಿಂಗ್ ಮತ್ತು ಆತನ ಗೆಳೆಯರಾದ ಸುಖದೇವ್ ಮತ್ತು ರಾಜಗುರು ಅವರುಗಳು ನಮ್ಮ ದೇಶಕ್ಕಾಗಿ ನಗುನಗುತ್ತಾ ತಮ್ಮ ಕೊರಳೊಡ್ಡಿ ನೇಣುಗಂಬಕ್ಕೆ ಏರಿದರು ಎಂಬ ಘಟನೆ ನೆನೆದಾಗಲೆಲ್ಲಾ ಹೃದಯ ತುಂಬಿ ಬರುತ್ತದೆ. ಆಗ ಭಗತ್ ಸಿಂಗರಿಗೆ ಕೇವಲ 23 ವರ್ಷ ಎಂಬುದು ಮತ್ತೂ ಅಚ್ಚರಿ ಮೂಡಿಸುತ್ತದೆ. ಆ ವಯಸ್ಸಿನಲ್ಲಿ ಅವರಿಗಿದ್ದ ಅಪಾರ ಹುಮ್ಮಸ್ಸು ವಿಶ್ವದ ಬಗೆಗಿನ ಜ್ಞಾನ, ಓದುವ ಆಸಕ್ತಿ, ದೇಶಭಕ್ತಿ ಇದೆಲ್ಲಾ ನೆನೆದರೆ ಮನಸ್ಸು ಮೂಕವಾಗುತ್ತದೆ.
ಭಗತ್ ಸಿಂಗ್ ಅದೆಷ್ಟು ಶ್ರೇಷ್ಠ ಪುಸ್ತಕಗಳನ್ನು ಓದುತ್ತಿದ್ದರೆಂದರೆ ಸಾಯುವ ದಿನದಲ್ಲಿ ಅವರನ್ನು ನೇಣುಗಂಬಕ್ಕೆ ಕರೆದೊಯ್ಯಲು ಬಂದಾಗ ಕೂಡಾ “ಒಂದು ಕ್ಷಣ ತಡಿ ಮಹಾನ್ ಕ್ರಾಂತಿಕಾರ ಲೆನಿನ್ ಬಗ್ಗೆ ಇನ್ನೊಂದೆರಡು ವಾಕ್ಯ ಓದಿ ಬಿಡುತ್ತೇನೆ” ಎಂದು ಹೇಳಿ ಒಂದೆರಡು ಕ್ಷಣದ ನಂತರ “ನಡೆಯಿರಿ ಹೋಗೋಣ” ಎಂದರಂತೆ.
ಭಗತ್ ಸಿಂಗ್ ತಮ್ಮಹದಿಮೂರನೆಯ ವಯಸ್ಸಿನಲ್ಲಿಯೇ ಗಾಂಧಿಜಿಯವರ ಅನುಯಾಯಿಯಾದರು. ಗಾಂಧೀಜಿಯವರ ಅಸಹಕಾರ ಚಳುವಳಿ ಈ ಯುವಕರಿಗೆ ಆಶಾದಾಯಕವಾಗಿ ಕಂಡಿತ್ತು. ಆದರೆ ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಂಡಾಗ ಈ ಯುವಕರಿಗೆ ಸ್ವಾತಂತ್ರ್ಯದ ಕನಸು ಭ್ರಮನಿರಸನ ಎಂಬ ಭಾವ ಮೂಡಿಸಿತು. ಜಲಿಯನ್ ವಾಲಾಬಾಗ್ ವಿಚಾರದಲ್ಲಿ ಬ್ರಿಟಿಷ್ ಸರ್ಕಾರ ನಡೆದುಕೊಂಡ ಅಮಾನುಷ ವರ್ತನೆ ಈ ಹುಡುಗರ ಬಿಸಿರಕ್ತವನ್ನು ರೊಚ್ಚಿಗೆಬ್ಬಿಸಿತು. ನಮ್ಮ ದೇಶದಲ್ಲಿ ನಡೆಯುತ್ತಿರುವ ಅಮಾನುಷ ಸರ್ಕಾರೀ ವರ್ತನೆಗೆ ಪ್ರತಿಭಟನೆ ತೋರಲೇ ಬೇಕೆಂಬ ಪ್ರಬಲ ಇಚ್ಚೆ ಈ ಯುವಮನಸ್ಸುಗಳಲ್ಲಿ ಮೂಡಿತು.
ನಮ್ಮ ಗುರೂಜಿ ಹೇಳುತ್ತಾರೆ. “ನಾವು ದೇವಸ್ಥಾನದಲ್ಲಿ ಗಂಟೆ ಬಾರಿಸುವುದು ದೇವರನ್ನು ಎಚ್ಚರಿಸಲಿಕ್ಕಲ್ಲ. ನಮ್ಮನ್ನು ದೈವ ಪ್ರಜ್ಞೆಗೆ ಎಚ್ಚರಿಸಿಕೊಳ್ಳುವುದಕ್ಕೆ” ಎಂದು. ನಾವು ಮಾಡುವ ಒಂದು ಹೋರಾಟ ಒಂದು ವ್ಯವಸ್ಥೆಯ ವಿರುದ್ಧವಾಗಿರುವಂತೆ ಕಂಡರೂ ಅದರಲ್ಲಾಗುವ ಪರಿವರ್ತನೆ ಸ್ವಯಂ ಪರಿವರ್ತನೆಯಾಗಿರುತ್ತದೆ. ಭಗತ್ ಸಿಂಗ್, ಸುಖದೇವ್, ರಾಜಗುರು ಮತ್ತು ಅವರ ಇತರ ಗೆಳೆಯರಾದ ಚಂದ್ರಶೇಖರ ಆಜಾದ್ ಮುಂತಾದ ಹೋರಾಟಗಾರರು ತಮ್ಮ ಹೋರಾಟದ ಹಾದಿಯಲ್ಲೇ ಋಷಿ ಸಾದ್ರಶ್ಯ ಮನೋಧರ್ಮಗಳನ್ನು ರೂಢಿಸಿಕೊಂಡವರು. ಈ ಒಂದು ಸ್ವಯಂ ಪರಿವರ್ತನೆ ಪರಿಸರದಲ್ಲಿ ಮೂಡಿಸುವ ಜಾಗೃತಿ ವಿಶಿಷ್ಟವಾದದ್ದು. ಇದರಿಂದ ಭಾರತೀಯ ಜನಜೀವನದಲ್ಲಿ ಉಂಟಾದ ಜಾಗೃತಿ ಅಪ್ರತಿಮವಾದದ್ದು.
ವಿವಿಧ ಪ್ರಾಂತ್ಯ, ಭಾಷೆ, ಆಡಳಿತಗಳಲ್ಲಿ ಹಂಚಿಹೋಗಿ ನಮ್ಮದು ಒಂದು ಸಮಗ್ರ ದೇಶ ಎಂಬ ಕಲ್ಪನೆ ಜನರಲ್ಲಿ ನಶಿಸಿಹೋಗಿದ್ದ ಕಾಲವದು. ಸ್ವಾತಂತ್ರ್ಯ ಪಡೆಯಬೇಕು ಎಂಬ ಮನೋಧರ್ಮ ಅಂದಿನ ಭಾರತೀಯ ಮನೋಧರ್ಮದ ಕೊರತೆಯಾಗಿತ್ತು. ಈ ನಿಟ್ಟಿನಲ್ಲಿ ಭಗತ್ ಸಿಂಗ್, ಸುಖದೇವ್, ರಾಜಗುರು, ಚಂದ್ರಶೇಖರ ಅಜಾದ್ ಮತ್ತಿತರರ ಸ್ವಯಂ ಬಲಿದಾನಗಳು ಮತ್ತು ಅದರ ಹಿಂದಿನ ತೀವ್ರ ಹೋರಾಟಗಳು ಭಾರತೀಯ ಸಮಾಜವನ್ನು ಹೊಸ ಚಿಂತನೆಯತ್ತ ಪ್ರೇರೇಪಿಸುವಂತೆ ಮಾಡಿದ್ದರಲ್ಲಿ ಯಾವುದೇ ಸಂಶಯವಿಲ್ಲ.
ಒಂದೇ ಒಂದು ದುಃಖದ ಸಂಗತಿ ಎಂದರೆ ಈ ಯುವ ಜೀವಗಳು ತಮ್ಮ ಜೀವವನ್ನೇ ತಮ್ಮ ನಾಡಿನ ಉಳಿವಿಗಾಗಿ ಮಾಡಬೇಕಾಗಿ ಬಂದದ್ದು. ಈ ಯುವಕರು ನೀಡಿದ ಬಲಿದಾನಗಳಿಗೆ ನಾವು ಅವರಿಗೆ ಮಾತಿನ ಗೌರವ ಸೂಚಿಸುವುದು ಮಾತ್ರವಲ್ಲ, ಅವರು ಹೀಗೆ ಸಂಪಾದಿಸಿಕೊಟ್ಟ ಜಾಗೃತಿ, ಸ್ವಾತಂತ್ರ್ಯಕ್ಕೆ ಯೋಗ್ಯರಾಗಿ ಬಾಳುತ್ತಿದ್ದೇವೆಯೇ ಎಂಬುದು ಕೂಡಾ ಮುಖ್ಯವಾಗುತ್ತದೆ. ನಾವು ಹಾಗೆ ನಡೆಸುವ ಶ್ರೇಷ್ಠ ಬದುಕು ಮಾತ್ರವೇ ನಾವು ಅವರಿಗೆ ಸಲ್ಲಿಸುವ ಶ್ರೇಷ್ಠ ಗೌರವವಾದೀತು.

ನಮ್ಮೀ ದೇಶಭಕ್ತರ ಆತ್ಮ ಸನ್ನಿದಾನದಲ್ಲಿ ಸಾಷ್ಟಾಂಗ ನಮಿಸಿ ಅಂತಹ ಮಹಾನುಭಾವರ ಬಳಿ ಅವರ ಧೀಮಂತ ಶಕ್ತಿಯ ಆಶೀರ್ವಾದ ಬೇಡೋಣ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಟೈಗರ್ ಶ್ರಾಫ್ ಅವರ ಮೊದಲ ಈದ್ ಬಿಡುಗಡೆಯ ಬಗ್ಗೆ ಉತ್ಸುಕರಾಗಿದ್ದಾರೆ - ಹೀರೋಪಾಂಟಿ 2

Fri Mar 25 , 2022
ನಟ ಟೈಗರ್ ಶ್ರಾಫ್ ಅವರು ತಮ್ಮ ಚಿತ್ರ `ಹೀರೋಪಂತಿ 2` ಅನ್ನು 2022 ರ ಈದ್‌ನಲ್ಲಿ ಬಿಡುಗಡೆ ಮಾಡಲು ಉತ್ಸುಕರಾಗಿದ್ದಾರೆ. “ಹೀರೋಪಂತಿ 2 ನನ್ನ ಮೊದಲ ಈದ್ ಬಿಡುಗಡೆಯಾಗಿದೆ, ಇದು ಸಲ್ಮಾನ್ ಸರ್ ಅವರ ಬ್ಲಾಕ್‌ಬಸ್ಟರ್ ಚಲನಚಿತ್ರ ಬಿಡುಗಡೆಗಳ ಕಾರಣಕ್ಕೆ ಸಮಾನಾರ್ಥಕವಾಗಿದೆ. ಶೂಗಳು ತುಂಬಲು ತುಂಬಾ ದೊಡ್ಡದಾಗಿದೆ ಎಂದು ನನಗೆ ತಿಳಿದಿದೆ ಆದರೆ ಈ ರೀತಿಯ ಹಬ್ಬದ ಸಮಯದಲ್ಲಿ ಪ್ರೇಕ್ಷಕರನ್ನು ರಂಜಿಸಲು ನನಗೆ ಈ ಅವಕಾಶ ಸಿಕ್ಕಿದ್ದಕ್ಕಾಗಿ ನನಗೆ ಸಂತೋಷವಾಗಿದೆ. […]

Advertisement

Wordpress Social Share Plugin powered by Ultimatelysocial