ತಮಿಳುನಾಡಿನಲ್ಲಿ ಕದ್ದುಮುಚ್ಚಿ ಬೂಸ್ಟರ್ ಡೋಸ್ ಪಡೆದರಾ ವೈದ್ಯರು?

ಚೆನ್ನೈ, ಡಿಸೆಂಬರ್ 24: ಭಾರತದಲ್ಲಿ ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಮೂರನೇ ಅಲೆಯ ಭೀತಿಯನ್ನು ಸೃಷ್ಟಿಸುತ್ತಿದೆ. ಈಗಾಗಲೇ ನೀಡಿರುವ ಎರಡು ಡೋಸ್ ಲಸಿಕೆ ಸಾಮರ್ಥ್ಯವನ್ನು ಮೀರಿ ಸೋಂಕು ಹರಡುತ್ತದೆ ಎಂದು ಸೂಕ್ಷ್ಮಾಣುರೋಗಶಾಸ್ತ್ರಜ್ಞರು ಹಾಗೂ ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಓಮಿಕ್ರಾನ್ ಹರಡುವಿಕೆ ಭೀತಿ ನಡುವೆ ತಮಿಳುನಾಡಿನಲ್ಲಿ ಈಗಾಗಲೇ ಹಲವು ವೈದ್ಯರು ಗೌಪ್ಯವಾಗಿ ಬೂಸ್ಟರ್ ಡೋಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಸರ್ಕಾರದ ಇನ್ನೂ ಅಧಿಕೃತವಾಗಿ ಘೋಷಿಸುವುದಕ್ಕೂ ಮೊದಲೇ ಗೌಪ್ಯವಾಗಿ ಬೂಸ್ಟರ್ ಡೋಸ್ ವಿತರಣೆ ನಡೆದಿದೆ.

ರಾಜ್ಯದಲ್ಲಿ ಬಹುತೇಕ ವೈದ್ಯರು ಖಾಸಗಿ ಆಸ್ಪತ್ರೆ ಆಸ್ಪತ್ರೆಗಳಲ್ಲಿ ಕೊವಿಡ್-19 ಲಸಿಕೆಯ ಬೂಸ್ಟರ್ ಡೋಸ್ ಅನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವು ವೈದ್ಯರು ಸರ್ಕಾರಿ ಆಸ್ರತ್ರೆಗಳಲ್ಲಿಯೇ ಬಳಕೆ ಆಗದೇ ಉಳಿದಿರುವ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ಪಡೆದುಕೊಳ್ಳುತ್ತಿದ್ದಾರೆ ಎಂದು ಐಎಎನ್‌ಎಸ್ ವರದಿ ಮಾಡಿದೆ.

ಬೂಸ್ಟರ್ ಡೋಸ್ ಬಗ್ಗೆ ಜಾಗತಿಕ ಅಧ್ಯಯನಗಳಲ್ಲಿ ಬಹಿರಂಗ
 “ಕೊವಿಡ್-19 ಲಸಿಕೆಯ ಬೂಸ್ಟರ್ ಡೋಸ್ ಬಗ್ಗೆ ಸೂಕ್ಷ್ಮಾಣುರೋಗಶಾಸ್ತ್ರಗಳು ಮತ್ತು ತಜ್ಞರು ನಡೆಸಿದ ಅಧ್ಯಯನಗಳ ವರದಿಗಳನ್ನು ಜಾಗತಿಕ ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದೆ. ಕೊವಿಡ್-19 ಲಸಿಕೆಯನ್ನು ಪಡೆದುಕೊಂಡ ನಂತರದಲ್ಲಿ ಎಷ್ಟು ದಿನಗಳ ಬಳಿಕ ರೋಗ ನಿರೋಧಕ ಶಕ್ತಿಯು ಇಳಿಮುಖವಾಗುತ್ತದೆ ಎಂಬುದನ್ನು ವರದಿಗಳಲ್ಲಿ ಬಹಿರಂಗಪಡಿಸಲಾಗಿದೆ. ಎರಡನೇ ಡೋಸ್ ಪಡೆದು ಬಹಳ ದಿನ ಕಳೆದಿರುವುದರ ಹಿನ್ನೆಲೆ ರೋಗ ನಿರೋಧಕ ಶಕ್ತಿಯ ಪ್ರಮಾಣವು ಕಡಿಮೆಯಾಗಿದೆ. ಈ ಹಂತದಲ್ಲಿ ಬೂಸ್ಟರ್ ಡೋಸ್ ಲಸಿಕೆಯು ತೀರಾ ಅಗತ್ಯವಾಗಿರುತ್ತದೆ,” ಎಂದು ಚೆನ್ನೈ ಖಾಸಗಿ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಹೇಳಿದ್ದಾರೆ.

ವೈದ್ಯರಿಗೆ ಮೊದಲ ಡೋಸ್ ಲಸಿಕೆ ವಿತರಿಸಿರುವ ಬಗ್ಗೆ ಉಲ್ಲೇಖ

ಭಾರತದಲ್ಲಿ 2021ರ ಜನವರಿ 16ರಂದು ಮೊದಲ ಬಾರಿಗೆ ಕೊರೊನಾೈರಸ್ ಲಸಿಕೆ ವಿತರಣೆ ಅಭಿಯಾನವನ್ನು ಆರಂಭಿಸಲಾಗಿತ್ತು. ಅಂದು ವೈದ್ಯಕೀಯ ಸಮುದಾಯಕ್ಕೆ ಮೊದಲ ಡೋಸ್ ಲಸಿಕೆಯನ್ನು ವಿತರಿಸಲು ಶುರು ಮಾಡಲಾಗಿತ್ತು. ಕೊವಿಡ್-19 ಲಸಿಕೆಯನ್ನು ವೈದ್ಯಕೀಯ ಸಮುದಾಯಕ್ಕೆ ಮೊದಲು ನೀಡಲು ಆರಂಭಿಸಿದ್ದು, ಎರಡೂ ಡೋಸ್ ಲಸಿಕೆಯನ್ನು ಪಡೆದುಕೊಂಡು ಸಾಕಷ್ಟು ದಿನಗಳೇ ಕಳೆದು ಹೋಗಿವೆ. ಕೊವಿಶೀಲ್ಡ್ ಲಸಿಕೆ ಅವಧಿಯೂ ಕೊಂಚ ಕಡಿಮೆ ಆಗಿರುತ್ತದೆ ಎಂದು ಹಿರಿಯ ವೈದ್ಯರು ಹೇಳಿದ್ದಾರೆ.

ಬೂಸ್ಟರ್ ಡೋಸ್ ಎಂಬುದು ಕಾನೂನು ಉಲ್ಲಂಘನೆ

“ಭಾರತದಲ್ಲಿ ಕೇವಲ ಎರಡು ಡೋಸ್ ಲಸಿಕೆಯನ್ನು ಪಡೆದುಕೊಳ್ಳುವುದಕ್ಕೆ ಮಾತ್ರ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ. ಹೆಚ್ಚುವರಿ ಆಗಿ ಬೂಸ್ಟರ್ ಡೋಸ್ ಅನ್ನು ತೆಗೆದುಕೊಳ್ಳುವುದು ಕೇಂದ್ರ ಸರ್ಕಾರದ ಮಾರ್ಗಸೂಚಿಯ ಸ್ಪಷ್ಟ ಉಲ್ಲಂಘನೆ ಆಗುತ್ತದೆ,” ಎಂದು ತಮಿಳುನಾಡಿನ ಸಾರ್ವಜನಿಕ ಆರೋಗ್ಯ ಇಲಾಖೆ ನಿರ್ದೇಶಕ ಡಾ ಟಿ ಎಸ್ ಸೆಲ್ವ ವಿನಾಯಗಂ ತಿಳಿಸಿದ್ದಾರೆ. ಇದರ ಜೊತೆ ಈಗಾಗಲೇ ಕೆಲವು ವೈದ್ಯರ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತಿದ್ದು, ಅಸ್ವಸ್ಥರಾಗುತ್ತಿದ್ದಾರೆ. ಈ ಹಂತದಲ್ಲಿ ಬೂಸ್ಟರ್ ಡೋಸ್ ಲಸಿಕೆ ವಿತರಣೆಗೆ ಕೇಂದ್ರ ಸರ್ಕಾರದ ಅನುಮೋದನೆಗಾಗಿ ಎದುರು ನೋಡಲಾಗುತ್ತಿದೆ ಎಂದು ಹೇಳಿದ್ದಾರೆ.

ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆ ಮಿಶ್ರಣ

ಈ ಮೊದಲು ಕೊವ್ಯಾಕ್ಸಿನ್ ಲಸಿಕೆ ಪಡೆದುಕೊಂಡಿರುವ ಬಹುಪಾಲು ವೈದ್ಯರು ಬೂಸ್ಟರ್ ಡೋಸ್ ಆಗಿ ಕೊವಿಶೀಲ್ಡ್ ಲಸಿಕೆಯನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಎರಡು ವಿಭಿನ್ನ ಲಸಿಕೆಗಳ ಮಿಶ್ರಣವು ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಪ್ರಮಾಣವನ್ನು ಹೆಚ್ಚಿಸುವತ್ತದೆ ಎಂದು ವೈದ್ಯಕೀಯ ಅಧ್ಯಯನಗಳು ತಿಳಿಸುತ್ತವೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯೂ ಕೂಡ ಎರಡು ಭಿನ್ನ ಲಸಿಕೆಗಳ ಮಿಶ್ರಣವು ಹೆಚ್ಚು ಉತ್ತಮ ಫಲಿತಾಂಶವನ್ನು ನೀಡಬಲ್ಲದು ಎಂದು ಹೇಳುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಇನ್​ಸ್ಪೆಕ್ಟರ್​-ಎಎಸ್​ಐ ವಿರುದ್ಧ ದಾಖಲಾಯಿತು ಎಫ್​​ಐಆರ್​

Sun Dec 26 , 2021
ಬೆಂಗಳೂರು: ಗಂಡ-ಹೆಂಡತಿಯ ಜಗಳದಲ್ಲಿ ದುರ್ಲಾಭ ಪಡೆಯಲು ಯತ್ನಿಸಿದ ಪೊಲೀಸ್ ಇನ್​ಸ್ಪೆಕ್ಟರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಎಫ್​ಐಆರ್ ದಾಖಲಿಸಿದೆ. ಬೆಂಗಳೂರಿನ ಕೆ.ಆರ್. ಪುರ ಠಾಣೆಯಲ್ಲಿ ಇನ್​ಸ್ಪೆಕ್ಟರ್ ಆಗಿದ್ದ ಜಯರಾಜ್​ ಆರೋಪಿ. ಅಲ್ಲದೆ ಎಎಸ್​ಐ ಶಿವಕುಮಾರ್ ಎಂಬವರ ವಿರುದ್ಧವೂ ಎಫ್​ಐಆರ್ ದಾಖಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಂಜು ರಾಜನ್ ಎಂಬವರ ವಿರುದ್ಧ ಆಕೆಯ ಪತ್ನಿ ದೂರು ದಾಖಲಿಸಿದ್ದರು. ಹೀಗಾಗಿ ಬಂಧನಕ್ಕೆ ಒಳಗಾಗಿದ್ದ ಸಂಜು ರಾಜನ್ ಬಳಿಕ ಜಾಮೀನಿನ ಮೇರೆಗೆ ಹೊರಬಂದಿದ್ದರು. ನಂತರ ಪ್ರತಿವಾರ […]

Advertisement

Wordpress Social Share Plugin powered by Ultimatelysocial