ಜನಪರ ಕಾರ್ಯಕ್ರಮ ನೀಡುವ ‘ಕೈ’ ಜೊತೆ‌ ಕೈ‌ಜೋಡಿಸಿ!

ಹಾಸನ: ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯದಂತಹ ಜನಪರ ಕಾರ್ಯಕ್ರಮ ನೀಡುವ ಕೈಗೆ ನೀವು ಅಧಿಕಾರ ನೀಡಬೇಕು. ದಾನ ಧರ್ಮ ಮಾಡುವ ಕೈ ಜತೆ ಕೈ ಜೋಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.

ಸಕಲೇಶಪುರದ ಪ್ರಜಾಧ್ವನಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ‌ ಅವರು, ಕಳೆದ ಬಾರಿ ನಮ್ಮ ಸರ್ಕಾರ ಇದ್ದಾಗ ಎತ್ತಿನಹೊಳೆ ಯೋಜನೆ ಮಾಡಿದೆವು.

ಅನ್ನಭಾಗ್ಯ ಯೋಜನೆ ನೀಡಿದೆವು. ರೈತರಿಗೆ 7 ತಾಸು ವಿದ್ಯುತ್ ನೀಡಿದೆವು. ಹಾಲು ಉತ್ಪಾದಕರಿಗೆ 5 ರೂ. ಪ್ರೋತ್ಸಾಹ ಧನ ನೀಡಿದೆವು. ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ನೀಡಿದೆವು. ಎಸ್.ಎಂ. ಕೃಷ್ಣಾ ಅವರ ಕಾಲದಲ್ಲಿ ಮೋಟಮ್ಮ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದರು. ಮಹಿಳೆಯರಿಗೆ ಶಕ್ತಿ ತುಂಬಲು ಸ್ತ್ರೀ ಶಕ್ತಿ ಸಂಘಗಳಿಗೆ ಉತ್ತೇಜನ ನೀಡಲಾಯಿತು. ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆ ನೀಡಲಾಯಿತು. ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದವರಿಗೆ ಜಮೀನು ನೀಡುವ ಕಾನೂನು ತಿದ್ದುಪಡಿ ಮಾಡಿದೆವು. ದೇವರಾಜ ಅರಸು ಅವರ ಕಾಲದಲ್ಲಿ ಉಳುವವನೇ ಭೂಮಿಯ ಒಡೆಯ ಎಂದು ಜಮೀನು ನೀಡಿದೆವು. ಇಂದಿರಾ ಗಾಂಧಿ ಅವರ ಕಾಲದಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣ, ಪಿಂಚಣಿ ಯೋಜನೆ ಜಾರಿ ಮಾಡಿದ್ದೆವು ಎಂದು ಕಾಂಗ್ರೆಸ್ ಪಕ್ಷದ ಅಧಿಕಾರಾವಧಿಯಲ್ಲಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಬೆಳಕು ಚೆಲ್ಲಿದರು.

ಈ ಭಾಗದಲ್ಲಿ ಕಾಡಾನೆ ದಾಳಿಯಿಂದ ಆಸ್ತಿ ಹಾನಿ ಜತೆಗೆ 78 ಜನ ಸತ್ತಿದ್ದು, ಇದಕ್ಕೆ ಸರ್ಕಾರ ಯಾವ ರೀತಿ ಪರಿಹಾರ ನೀಡಿದೆ? ಕೋವಿಡ್ ಬಂದ ಸಂದರ್ಭದಲ್ಲಿ ಶಾಸಕರು, ಸರ್ಕಾರದಿಂದ ಏನಾದರೂ ಸಹಾಯ ಸಿಕ್ಕಿತಾ? ಬೀದಿ ವ್ಯಾಪಾರಿಗಳಿಗೆ ಹಣ ಕೊಟ್ಟರಾ? ಆಸ್ಪತ್ರೆ ಖರ್ಚು, ಸತ್ತವರಿಗೆ ಪರಿಹಾರ ಕೊಟ್ಟರಾ? ಕೋವಿಡ್ ಸಮಯದಲ್ಲಿ ಜನ ನರಳುತ್ತಿರುವಾಗ ರೈತರ ಬೆಳೆಗೆ ಬೆಲೆ ನಿಗದಿ ಮಾಡಲು ಆಗಲಿಲ್ಲ. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 36 ಮಂದಿ ಸತ್ತಾಗ ಒಬ್ಬ ಮಂತ್ರಿ, ಅಧಿಕಾರಿ ಹೋಗಿ ಭೇಟಿ ಮಾಡಲಿಲ್ಲ. ನಾವು ಭೇಟಿ, ಪರಿಶೀಲನೆ ಮಾಡಿ ಅವರಿಗೆ ಪಕ್ಷದ ವತಿಯಿಂದ 1 ಲಕ್ಷ ಪರಿಹಾರ ನೀಡಿ ಸಾಂತ್ವಾನ ಹೇಳಿದೆವು. ನಂತರ ನಮ್ಮ ಸರ್ಕಾರ ಬಂದಾಗ ನಿಮಗೆ ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದೆವು. ಈ ಸರ್ಕಾರಕ್ಕೆ ಕಿವಿ, ಕಣ್ಣು, ಹೃದಯವಿಲ್ಲ. ಈ ಸರ್ಕಾರ ನಿಮಗೆ ಬೇಕಾ? ಎಂದು ಪ್ರಶ್ನಿಸಿದರು.

ಈ ಭಾಗದ ಶಾಸಕ ಕುಮಾರಸ್ವಾಮಿ ಅವರು ಹಲವು ಬಾರಿ ಗೆದ್ದಿದ್ದರೂ ನಿಮಗೆ ರಕ್ಷಣೆ ನೀಡಲು ಆಗದಿದ್ದರೆ ಹೇಗೆ. ಸ್ವತಃ ಅವರೇ ನನಗೆ ಜನರ ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ಹೇಳಿದ್ದಾರೆ. ಅವರಿಗೆ ನೀವು ವಿಶ್ರಾಂತಿ ನೀಡಬೇಕು. ಅವರಿಗೆ ರೇವಣ್ಣ ಹಾಗೂ ಬಿಜೆಪಿ ಮುಂದೆ ಹೋರಾಟ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ನೀವು ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿ ಕಾಂಗ್ರೆಸ್ ಸರ್ಕಾರ ತಂದರೆ 94ಸಿ ಜಾರಿ ಆಗಲಿದೆ ಹಾಗೂ ಅರಣ್ಯ ಪ್ರದೇಶದಲ್ಲಿ ಆಗುತ್ತಿರುವ ತೊಂದರೆಯನ್ನು ತಪ್ಪಿಸುತ್ತೇವೆ. ಹೇಮಾವತಿ ಮುಳುಗಡೆ ಪ್ರದೇಶದಲ್ಲಿ ನಿಮಗೆ ಸಹಾಯವಾಗಬೇಕಿದೆ. ಎತ್ತಿನಹೊಳೆಯಲ್ಲಿ ಪರಿಹಾರ ಸರಿಯಾಗಿ ಆಗಿಲ್ಲ ಎಂಬ ಅರ್ಜಿಯನ್ನು ಕೊಟ್ಟಿದ್ದಾರೆ.

ಈ ಯಾತ್ರೆ ನಿಮಗೆ ಬದಲಾವಣೆ ತರುವ ಅವಕಾಶ ಕಲ್ಪಿಸಿದೆ. ನೀವು ಹೋರಾಟ ತ್ಯಾಗ ಮಾಡಿ ನಮಗೆ ಶಕ್ತಿ ನೀಡಬಹುದು. ಆಮೂಲಕ ಈ ಸರ್ಕಾರವನ್ನು ಕಿತ್ತುಹಾಕಬಹುದು, ನಿಮ್ಮ ಕ್ಷೇತ್ರದಲ್ಲಿ ಬದಲಾವಣೆ ತರಬಹುದು ಎಂದರು.

ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಬದುಕಿನಲ್ಲಿ ಬೆಳಕು ತರಬೇಕು ಎಂಬ ಉದ್ದೇಶದಿಂದ ಗೃಹಜ್ಯೋತಿ ಕಾರ್ಯಕ್ರಮದ ಮೂಲಕ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು. ಇದರಿಂದ ಪ್ರತಿ ತಿಂಗಳು 1500 ರೂ. ಉಳಿತಾಯವಾಗುತ್ತದೆ. ಇನ್ನು ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲು ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದ್ದೇವೆ. ಈ ಎರಡು ಯೋಜನೆ ಮೂಲಕ ವರ್ಷಕ್ಕೆ 42 ಸಾವಿರದಂತೆ 5 ವರ್ಷಕ್ಕೆ 2 ಲಕ್ಷದಷ್ಟು ಆರ್ಥಿಕ ಶಕ್ತಿ ತುಂಬಲಾಗುವುದು. ಈ ಗ್ಯಾರಂಟಿ ಯೋಜನೆಗಳಿಗೆ ನಮ್ಮ ಸಹಿ ಹಾಕಿಸಿ ಗ್ಯಾರಂಟಿ ಕಾರ್ಡ್ ನೀಡಲಾಗುವುದು. ನೀವು ಮನೆ ಮನೆಗೆ ಈ ಕಾರ್ಡ್ ತಲುಪಿಸಬೇಕು. ಅತಿ ಹೆಚ್ಚು ಮನೆಗೆ ಈ ಕಾರ್ಡ್ ತಲುಪಿಸುವವರಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.

ಬಿಜೆಪಿಯವರು ನಿಮ್ಮ ತಲೆಯಲ್ಲಿ ಕೇವಲ ಹಿಂದೂ ಮುಸ್ಲಿಂ ಎಂಬ ದ್ವೇಷದ ವಿಷಬೀಜ ಬಿತ್ತುತ್ತಿದ್ದಾರೆ. ನಾವುಕೂಡ ಹಿಂದೂಗಳು ಅಲ್ಲವೇ? ಬಿಜೆಪಿಯವರು ನಾವು ಹಿಂದೂ ನಾವು ಮುಂದು ಎನ್ನುತ್ತಾರೆ. ಆದರೆ ನಾವು ಹಿಂದೂ, ಮುಸಲ್ಮಾನರು, ಕ್ರೈಸ್ತರು, ಸಿಖ್ಖರು. ಒಕ್ಕಲಿಗರು, ಲಿಂಗಾಯತರು, ಕುರುಬರು ಎಲ್ಲ ವರ್ಗದವರು ಒಂದು ಎನ್ನುತ್ತೇವೆ. ನಾವು ಕಬ್ಬಿಣವನ್ನು ಎರಡು ರೀತಿ ಬಳಸಬಹುದು. ಬಿಜೆಪಿಯವರು ಕತ್ತರಿಯಂತೆ ನಿಮ್ಮ ಮನಸ್ಸು ಕತ್ತರಿಸಿದರೆ, ಕಾಂಗ್ರೆಸ್ ಪಕ್ಷ ನಿಮ್ಮ ಮನಸ್ಸುಗಳನ್ನು ಸೂಜಿಯಂತೆ ಒಂದುಗೂಡಿಸುತ್ತೇವೆ ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಯೆಟ್​​ನಲ್ಲಿರುವಾಗಲೇ ಪದೇ ಪದೇ ಹಸಿವು ಆಗ್ತಿದೆಯಾ?

Wed Mar 1 , 2023
ಇತ್ತೀಚಿನ ದಿನಗಳಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಅರಿವು ಹೆಚ್ಚಿದೆ. ಜನರು ಸ್ಥೂಲಕಾಯ ಮತ್ತು ತೂಕ ನಿಯಂತ್ರಣಕ್ಕೆ ಸಾಕಷ್ಟು ಕಸರತ್ತು ಮಾಡುತ್ತಿರುವುದನ್ನು ನೀವು ದೈನಂದಿನ ಜೀವನದಲ್ಲಿ ಕಾಣಬಹುದು. ವೇಟ್ ಲಾಸ್  ತೂಕ ನಿಯಂತ್ರಣ ಇದೆಲ್ಲವೂ ಒಂದು, ಎರಡು ದಿನದ್ದಲ್ಲ. ನೀವು ನಿರಂತರವಾಗಿ ಮಾಡಬೇಕಾದದ್ದು. ಹೀಗಿರುವಾಗ ಫಿಟ್ ಆಗಿರಲು ಕೆಲವರು ಡಯಟ್ ಮಾಡ್ತಾರೆ. ಇನ್ನು ಕೆಲವರು ವ್ಯಾಯಾಮ ಮಾಡುತ್ತಾರೆ. ಇನ್ನು ಕೆಲವರು ವಾಕಿಂಗ್, ಯೋಗ, ಜಿಮ್ ಹೀಗೆ ಹಲವು ಮಾರ್ಗಗಳ ಮೂಲಕ ತಮ್ಮ […]

Advertisement

Wordpress Social Share Plugin powered by Ultimatelysocial