ಕೆ. ಎಸ್. ಅಶ್ವಥ್ ಚಲನಚಿತ್ರ ನಟ.

ಚಲನಚಿತ್ರರಂಗವನ್ನು ನೋಡಿದಾಗ ಇವರು ‘ನಮ್ಮಂತೆಯೇ ಇರುವ ನಮ್ಮ ಪ್ರತಿನಿಧಿ’ ಎಂಬ ಭಾವವನ್ನು ಹುಟ್ಟಿಸುವ ಮಂದಿ ತುಂಬಾ ಕಡಿಮೆ. ಅದು ಚಿತ್ರರಂಗದ ಜನರ ತಪ್ಪು ಎನ್ನುವುದಕ್ಕಿಂತ ಬಣ್ಣದ ಲೋಕವನ್ನು ನೋಡಿದಾಗ, ಅದು ನಮ್ಮಲ್ಲಿ ಮೂಡಿಸುವ ಭ್ರಮೆ ಅದಕ್ಕೆ ಕಾರಣವಿರಬೇಕು. ಹೀಗಿದ್ದೂ ಚಿತ್ರರಂಗದಲ್ಲಿ ಎಲ್ಲ ರೀತಿಯಿಂದಲೂ ಸಂಭಾವಿತರು ಎಂಬ ಹೃದ್ಭಾವ ಹುಟ್ಟಿಸಿದ ವಿರಳರಲ್ಲಿ ವಿರಳರು ಕೆ. ಎಸ್. ಅಶ್ವಥ್. ಬಹುಶಃ ಅವರು ನಿರ್ವಹಿಸಿದ ಸಂಭಾವಿತ ಪಾತ್ರಗಳು, ನಮ್ಮಲ್ಲಿ ಅವರ ಬಗ್ಗೆ ಈ ರೀತಿಯ ಸಂಭಾವ್ಯತೆ ಹುಟ್ಟಿರುವುದಕ್ಕೆ ಪ್ರಮುಖ ಕಾರಣ. ಅತೀ ಚೆಲ್ಲು ಚೆಲ್ಲಾದ ಪಾತ್ರಗಳನ್ನಾಗಲಿ, ಕ್ರೂರಿಯಾದ ಪಾತ್ರಗಳನ್ನಾಗಲಿ ನಾವು ಅವರಲ್ಲಿ ಕಂಡದ್ದಿಲ್ಲ. ಹಾಗೆ ಅವರು ಅಂತಹ ಪಾತ್ರ ಮಾಡಿರಬಹುದಾದ ಸಾಧ್ಯತೆ ಇದ್ದರೂ ಅವರು ನಟಿಸಿದ ಮುನ್ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅವನ್ನು ನಾವು ಗಮನಿಸದ ಹಾಗೆ ಎಲ್ಲೆಲ್ಲೆಲ್ಲೋ ಹುದುಗಿಕೊಂಡುಬಿಟ್ಟಿರುತ್ತವೆ. ಅವರು ಎಂದಿಗೂ ಆಪ್ತ ವ್ಯಕ್ತಿಯಾಗಿಯೇ ಕನ್ನಡ ಚಿತ್ರಪ್ರೇಕ್ಷಕರ ಮನದಲ್ಲಿ ಪ್ರತಿಷ್ಠಾಪಿತರು.ಬಣ್ಣದ ಲೋಕದಲ್ಲಿನ ಪಾತ್ರಗಳ ಆಚೆಗೆ, ತಾವು ನಡೆಸಿದ ಬದುಕಿನ ರೀತಿಯಲ್ಲಿ ಕೂಡ ಅಶ್ವಥ್ ಸಾಮಾನ್ಯ ಮಧ್ಯಮವರ್ಗದ ಜನರಿಗೆ ಎಲ್ಲ ರೀತಿಯಲ್ಲೂ ಹತ್ತಿರದ ರೀತಿಯವರು. ಅದು ಬದುಕಿನ ಸುಂದರ ಕ್ಷಣಗಳಿಗೆ ಮಾತ್ರ ಅನ್ವಯಿಸದೆ, ಬದುಕಿನ ಏರಿಳಿತಗಳು, ಕಾಳಜಿಗಳು, ಕಾಯಿಲೆಗಳು, ಅನಿಶ್ಚಿತತೆಗಳು, ನೋವುಗಳು, ಭಯ ಭೀತಿಗಳು, ಜವಾಬ್ಧಾರಿಗಳು, ಅಸಹಾಯಕತೆಗಳು ಹೀಗೆ ಪ್ರತಿಯೊಂದರಲ್ಲೂ ಅವರ ಬದುಕು ‘ಮೇಲಕ್ಕೆ ಏರಿ ಬದುಕಲಾಗದ, ಕೆಳಕ್ಕೆ ಇಳಿಯಲೂ ಆಗದ ವಿಚಿತ್ರ ಅಸಹಾಯಕ ಸ್ಥಿತಿಯ ಮಧ್ಯಮ ವರ್ಗದ ಬದುಕಿನದು’.
ನನಗೆ ಅಶ್ವಥ್ ಅವರ ‘ನಮ್ಮ ಮಕ್ಕಳು’ ಚಿತ್ರ ತುಂಬಾ ತುಂಬಾ ಅತ್ಮೀಯವಾದುದು. ಅದು ಅಂದಿನ ದಿನಗಳಲ್ಲಿ ನೂರಾರು ಕನಸುಗಳನ್ನು ಹೊತ್ತು ಬೆಳೆಯುತ್ತಿದ್ದ ಮಕ್ಕಳಾಗಿದ್ದ ನಮ್ಮಂತವರ, ನಮ್ಮನ್ನು ಸಾಕುತ್ತಿದ್ದ ನಮ್ಮ ಪೋಷಕರ, ನಮ್ಮ ಸಂಸ್ಕೃತಿಗಳ, ನಮ್ಮ ಬದುಕಿನ ರೀತಿಯ ಯಥಾವತ್ತಾದ ಚಿತ್ರಣ. ನಾನು ಆ ಚಿತ್ರದಲ್ಲಿ ಕಥೆಗಿಂತ ಮಿಗಿಲಾದ ಆ ಕಥೆಯ ಪಾತ್ರಗಳ ಬಗ್ಗೆ ಹೇಳುತ್ತಿದ್ದೇನೆ. ಆ ನಿಟ್ಟಿನಲ್ಲಿ ನಮಗೆ ಬಹಳ ಹತ್ತಿರವಾದವರು ‘ನಮ್ಮ ಮಕ್ಕಳು’ ಚಿತ್ರದ ಅಶ್ವಥ್, ಪಂಡರಿಬಾಯಿ ಮತ್ತು ಆ ಚಿತ್ರದಲ್ಲಿನ ಅವರ ಮೂರು ಮಕ್ಕಳು.
ಅವರು ಜನಿಸಿದ ದಿನ ಮಾರ್ಚ್ 25, 1925. ಅಶ್ವಥ್ ಚಿತ್ರರಂಗದಲ್ಲಿ ಹೆಚ್ಚು ಇದ್ದದ್ದು 1955 ರಿಂದ 1995ರ ಅವಧಿಯಲ್ಲಿ. ಆ ನಂತರ ಜೀವನವನ್ನು ನೆಮ್ಮದಿಯಲ್ಲಿ ಕಳೆಯುತ್ತೇನೆ ಎಂದು ಭಾವಿಸಿಕೊಂಡು ನಿವೃತ್ತರಾದ ಅವರಿಗೆ ಅವರು ಕನಸಿದ್ದ ಜೀವನಕ್ಕಿಂತ ವಿಭಿನ್ನ ವೃದ್ಧಾಪ್ಯದ ಜೀವನ ಸಿಕ್ಕಿದ್ದು ದುರದೃಷ್ಟಕರ. ಆದರೆ ಒಂದು ರೀತಿಯಲ್ಲಿ ಅದೇ ಬದುಕು. ಇಲ್ಲಿ ಅಶ್ವಥ್ ಅವರ ಬಗ್ಗೆ ಮೇಲೆ ಹೇಳಿದ ಕೆಲವು ಮಾತುಗಳಂತೆ ಅವರು ಮಾನವನ ಈ ಬದುಕಿನ ಘಟ್ಟದ ಬಹು ಮುಖ್ಯ ಪ್ರಾತಿನಿಧಿಕರು ಕೂಡಾ ಹೌದು. ಅಶ್ವಥ್ ಅವರು ಚಿತ್ರರಂಗದಲ್ಲಿ ಕ್ರಿಯಾಶೀಲರಾಗಿದ್ದ ದಿನಗಳಲ್ಲಿ, ಅವರನ್ನು ಅವರ ಊರಾದ ನಮ್ಮ ಮೈಸೂರಿನಲ್ಲಿ ನೋಡುವುದು ಕಷ್ಟವೇ ಇರಲಿಲ್ಲ. ಇಂದಿನ ಕಾಲದಲ್ಲಿ ಎಲ್ಲರೂ ಕಾರಿನಲ್ಲಿ ಓಡಾಡುತ್ತಾರೆ. ಅಂದಿನ ದಿನದಲ್ಲಿ ಅಶ್ವಥ್ ಒಂದು ಟಾಂಗಾವನ್ನು ಶಾಶ್ವತವಾಗಿ ಬಾಡಿಗೆಗೆ ಗೊತ್ತು ಮಾಡಿಕೊಂಡಿದ್ದರು. ಅದೊಂದು ಸುಂದರ ಗಾಡಿ. ಅದರಲ್ಲಿ ಅಶ್ವಥ್ ಅವರ ದಿನನಿತ್ಯದ ಪಯಣ. ಹಾಗಾಗಿ ಅವರನ್ನು ಮೈಸೂರಿಗರು ನೋಡಬಹುದಾದದ್ದು ಸರ್ವೇಸಾಮನ್ಯವಾಗಿತ್ತು.
ಅಶ್ವಥ್ ಅವರ ವಿಚಾರದಲ್ಲಿ ನಾನು ಗಮನಿಸಿದ್ದ ಮತ್ತೊಂದು ಅಂಶವೆಂದರೆ ಅಂದಿನ ದಿನಗಳಲ್ಲಿ ನಡೆಯುತ್ತಿದ್ದ ಬಯಲು ಭಾಷಣ ಕಾರ್ಯಕ್ರಮಗಳಲ್ಲಿ, ಅನವಶ್ಯಕವಾದ ಜನಗಳ ಆಕರ್ಷಣೆ ತಮ್ಮೆಡೆಗೆ ಬೀರದಿರಲಿ ಎಂದು ಒಂದು ಮಫ್ಲರ್ ಸುತ್ತಿಕೊಂಡು ಒಂದೆಡೆ ಬಂದು ನಿಲ್ಲುತ್ತಿದ್ದರು. ಮೈಸೂರಿನ ಟೌನ್ ಹಾಲ್ ಮುಂದೆ ಅಂದಿನ ದಿನಗಳಲ್ಲಿ ಅದರಲ್ಲೂ ತುರ್ತು ಪರಿಸ್ಥಿತಿಯ ಆಸುಪಾಸಿನ ದಿನಗಳಲ್ಲಿ ಎಲ್ಲಾ ಭಾಷಣ ಕಾರ್ಯಕ್ರಮಗಳಲ್ಲಿ ಅವರನ್ನು ಕಾಣುವುದು ಸರ್ವೇ ಸಾಮಾನ್ಯವಾಗಿತ್ತು. ಹೀಗೆ ಅಶ್ವಥ್ ತಾವು ಬಣ್ಣದ ಲೋಕದಲ್ಲಿದ್ದರೂ ತಮ್ಮನ್ನು ಸರ್ವೇ ಸಾಮಾನ್ಯನನ್ನಾಗಿರಿಸಿಕೊಂಡಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗಣರಾಜ್ಯೋತ್ಸವದಂದು ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಭಯೋತ್ಪಾದಕ ದಾಳಿ.

Wed Jan 18 , 2023
ನವದೆಹಲಿ : ಗಣರಾಜ್ಯೋತ್ಸವದಂದು ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ಪಿತೂರಿ ನಡೆಸಲಾಗಿದೆ ಎಂಬುದು ಇತ್ತೀಚೆಗೆ ಬೆಳಕಿಗೆ ಬಂದಿರುವಾಗ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿ ನಡೆಯುತ್ತಿರುವ ಶ್ರೀರಾಮ ಮಂದಿರದ ನಿರ್ಮಾಣ ಸ್ಥಳದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿವೆ ಎಂಬುದು ಈಗ ಬೆಳಕಿಗೆ ಬಂದಿದೆ. ಅವರು ಇಲ್ಲಿ ಆತ್ಮಾಹುತಿ ದಾಳಿ ನಡೆಸಲು ಆಯೋಜಿಸಿದ್ದಾರೆ. ಜೈಶ್-ಎ-ಮೊಹಮ್ಮದ್ ಈ ಭಯೋತ್ಪಾದಕ ಸಂಘಟನೆಯು ಈ ಪಿತೂರಿಯನ್ನು ರೂಪಿಸಿದೆ. ಇದಕ್ಕಾಗಿ, ಆತ್ಮಾಹುತಿ […]

Advertisement

Wordpress Social Share Plugin powered by Ultimatelysocial