ಕಂಗನಾ ರನೌತ್

 
ಕಗನಾ ರನೌತ್ ಚಿತ್ರರಂಗದಲ್ಲಿಂದು ಹಲವು ವಿಭಿನ್ನ ಪಾತ್ರಗಳ ಸಮರ್ಥ ನಿರ್ವಹಣೆಯಿಂದ ಪ್ರಸಿದ್ಧರಾಗಿದ್ದಾರೆ. ಅನಿಸಿದ್ದನ್ನು ಯಾವ ಹಿಂಜರಿಕೆ, ಮುಲಾಜು ಮತ್ತು ಭಯಗಳಿಲ್ಲದೆ ಹೇಳಿ ಸದಾ ಸುದ್ಧಿಯಲ್ಲಿದ್ದಾರೆ. ಕೇವಲ ಮಾತಿನಿಂದ ಜೀವಿಸದೆ ಕಲಾಭಿವ್ಯಕ್ತಿಯಲ್ಲಿ ಸಾಮರ್ಥ್ಯಶಾಲಿ ಎನಿಸಿದ್ದಾರೆ.
ಕಂಗನಾ ರನೌತ್ 1987ರ ಮಾರ್ಚ್ 23ರಂದು ಹಿಮಾಚಲ ಪ್ರದೇಶದ ಮನಾಲಿ ಜಿಲ್ಲೆಯ ಭಂಬ್ಲಾ ಎಂಬಲ್ಲಿ ಜನಿಸಿದರು. ತಂದೆ ಅಮರದೀಪ್ ರನೌತ್ ವ್ಯಾಪಾರಿ. ತಾಯಿ ಆಶಾ ರನೌತ್ ಶಾಲಾ ಶಿಕ್ಷಕಿ. ಚಿಕ್ಕಂದಿನಿಂದಲೇ ಫ್ಯಾಷನ್ ಉಡುಪು ಧರಿಸುತ್ತಾ ತಮ್ಮ ಸುತ್ತಲಿನವರ ಕಣ್ಣಿಗೆ ವಿಭಿನ್ನರಾಗಿ ಕಾಣುವ ಧೈರ್ಯವನ್ನು ಚಿಕ್ಕಂದಿನಿಂದ ರೂಡಿಸಿಕೊಂಡಿದ್ದರು.
ಚಂಡೀಗಡದ ಡಿಎವಿ ಶಾಲೆಯಲ್ಲಿ ಓದಿದ ಕಂಗನಾ ವೈದ್ಯರಾಗಬೇಕೆಂದು ತಂದೆ ತಾಯಿ ಆಸೆ ಪಟ್ಟಿದ್ದರೆ, ಪಿಯುಸಿ ಓದುವಾಗ ರಸಾಯನ ಶಾಸ್ತ್ರದಲ್ಲಿನ ಟೆಸ್ಟಿನಲ್ಲಿ ಕಡಿಮೆ ಅಂಕ ಬಂದಾಗ ಬದುಕಿನಲ್ಲಿ ತನ್ನದೇ ಸ್ವಾತಂತ್ರ್ಯ ಮತ್ತು ರೀತಿ ನೀತಿಯಲ್ಲಿ ಬದುಕಬೇಕೆಂಬ ದೃಢನಿರ್ಧಾರದಿಂದ 16ನೇ ವಯಸ್ಸಿಗೆ ದೆಹಲಿಗೆ ಬಂದರು.
ಕಂಗನಾಗೆ ಗೊತ್ತು ಗುರಿಯಿಲ್ಲದೆ ಬದುಕುವುದಕ್ಕೆ ಅಪ್ಪ ಹಣ ನೀಡುವುದಿಲ್ಲ ಎಂದರು. ಮಾಡೆಲಿಂಗ್ ಅವಕಾಶ ಸಿಕ್ಕಿತು. ಅಲ್ಲಿ ಹಲವು ಮಾಡುವಾಗ ಯಾಕೋ ಸೃಜನಶೀಲತೆ ಅದರಲ್ಲಿಲ್ಲ ಎನಿಸಿ ಅರವಿಂದ್ ಗೌರ್ ಅವರ ಮಾರ್ಗದರ್ಶನದಲ್ಲಿ ಅಸ್ಮಿತ ಥಿಯೇಟರ್ ಗ್ರೂಪ್ನಲ್ಲಿ ಅಭಿನಯ ಕಲಿತರು. ಗಿರೀಶ್ ಕಾರ್ನಡರ ‘ತಲೆದಂಡ’ ಸೇರಿ ಅನೇಕ ರಂಗಪ್ರಯೋಗಗಳಲ್ಲಿ ಅಭಿನಯಿಸಿದರು. ಒಮ್ಮೆ ಮುಖ್ಯ ಪುರುಷ ಪಾತ್ರಧಾರಿ ಬರದಿದ್ದಾಗ ತಮ್ಮ ಪಾತ್ರದೊಂದಿಗೆ ಪುರುಷ ಪಾತ್ರವನ್ನೂ ನಿರ್ವಹಿಸಿ ಮೆಚ್ಚುಗೆ ಬಂದಾಗ ಆತ್ಮವಿಶ್ವಾಸ ಹೆಚ್ಚಿ ಮುಂಬೈನಲ್ಲಿ ಚಲನಚಿತ್ರ ತರಬೇತಿಗೆ ಸೇರಿದರು. ಆಗಿನ ದಿನಗಳಲ್ಲಿ ಬ್ರೆಡ್ಡು ಉಪ್ಪಿನಕಾಯಿಯಲ್ಲಿ ಜೀವಿಸಿ ದಿನ ತಳ್ಳಿದರು. ತಂದೆಯ ಹಣಕಾಸಿನ ನೆರವೇ ಬೇಡ ಎಂದರು. ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಚಿತ್ರರಂಗಕ್ಕೆ ಬಂದರು.
ಮಹೇಶ್ ಭಟ್ ಅವರ ‘ಗ್ಯಾಂಗ್ಸ್ಟರ್’ ಚಿತ್ರದ ಮೂಲಕ ಅಭಿನಯಿಸತೊಡಗಿ ಕ್ರಮೇಣವಾಗಿ ಮೇಲೇರಿದರು. ಸಿನಿಮಾರಂಗ ಹೇಗೆ ತನ್ನನ್ನು ನಡೆಸಿಕೊಂಡಿತು ಎಂದು ಅವರು ಅನೇಕ ಬಾರಿ ಹೇಳಿದ್ದಾರೆ. ಪ್ರಥಮ ಚಿತ್ರದಲ್ಲೇ ಫಿಲಂಫೇರ್ ಉದಯೋನ್ಮುಖ ಪ್ರತಿಭೆ ಪ್ರಶಸ್ತಿ ಪಡೆದರು.
ಕಂಗನಾ ಅವರ ವೋಹ್ ಲಮ್ಹೆ, ಲೈಫ್ ಇನ್ ಎ ಮೆಟ್ರೋ ಮತ್ತು ಮೊದಲ ಬಾರಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ತಂದ ಪೋಷಕ ಪಾತ್ರಾಭಿನಯದ ‘ಫ್ಯಾಷನ್’ ಚಿತ್ರದ ನಿರ್ವಹಣೆಗಳು ಮೆಚ್ಚುಗೆ ಗಳಿಸಿದವು.
‘ರಾಸ್: ದ ಮಿಸರಿ ಕಂಟಿನ್ಯೂಸ್’, ‘ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ’ ಚಿತ್ರಗಳು ಗಳಿಕೆಯಲ್ಲಿ ಯಶಸ್ವಿಯಾದರೂ, ಒಂದೇ ತರಹದ ಪಾತ್ರಗಳಲ್ಲಿ ಟೈಪ್ ಕಾಸ್ಟ್ ಆಗಿದ್ದಾರೆ ಎಂಬ ಟೀಕೆ ಹರಿದಾಡಿತು. ಅವರು ವಿಭಿನ್ನ ಶೈಲಿಯಲ್ಲಿ ಹಾಸ್ಯ ಪಾತ್ರದಲ್ಲಿ ಅಭಿನಯಿಸಿದ ‘ತನು ವೆಡ್ಸ್ ಮನು’ ಜನಪ್ರಿಯಗೊಂಡಿತು. ‘ಕ್ರಿಷ್ 3’ ಎಂಬ ಅತಿ ಯಶಸ್ವೀ ಚಿತ್ರದಲ್ಲಿ ಅಭಿನಯಿಸಿದರು.
2014ರಲ್ಲಿ ಕಂಗನಾ ನಿರ್ವಹಿಸಿದ ‘ಕ್ವೀನ್’ ಚಿತ್ರ ಮತ್ತು 2015ರಲ್ಲಿ ‘ತನು ವೆಡ್ಸ್ ಮನು ರಿಟರ್ನ್ಸ್’ ಚಿತ್ರಗಳು ಸತತವಾಗಿ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದವು. 2019ರಲ್ಲಿ ‘ಮಣಿಕರ್ಣಿಕಾ – ದ ಕ್ವೀನ್ ಆಫ್ ಝಾನ್ಸಿ’ ಮತ್ತು 2020ರಲ್ಲಿ ಬಂದ ಕ್ರೀಡಾ ತಳಹದಿಯ ಚಿತ್ರ ‘ಪಂಗಾ’ಗಳಲ್ಲಿ ನೀಡಿದ ಅಭಿನಯಕ್ಕಾಗಿ ಅವರು ನಾಲ್ಕನೇ ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2021ರಲ್ಲಿ ಜಯಲಲಿತ ಅವರ ಬದುಕಿನ ತಳಹದಿಯುಳ್ಳ ‘ತಲೈವಿ’ ಚಿತ್ರದಲ್ಲಿ ನಟಿಸಿದರು.
ನಾಲ್ಕು ರಾಷ್ಟ್ರೀಯ ಪುರಸ್ಕಾರ, ಐದು ಫಿಲಂಫೇರ್, ಪದ್ಮಶ್ರೀ ಪ್ರಶಸ್ತಿಗಳೇ ಅಲ್ಲದೆ ಫೋರ್ಬ್ಸ್ ಗಣ್ಯಸಾಧಕರ ಪಟ್ಟಿಯಲ್ಲಿ ಆರು ಬಾರಿ ಸ್ಥಾನ ಗಳಿಸಿದ ಕಂಗನಾ ರನೌತ್ ತಾವು ಹೇಗೆ ವಿಶಿಷ್ಟರು ಎಂದು ಪದೇ ಪದೇ ಸಾಧಿಸಿ ನಿರೂಪಿಸಿದ್ದಾರೆ. ಚಿತ್ರರಂಗದಲ್ಲಿ ಮತ್ತು ಬದುಕಿನಲ್ಲಿ ಹೀಗೂ ಉಂಟೆ ಎಂಬಷ್ಟು ಈಕೆ ಧೈರ್ಯವಂತೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

28 ಪ್ರಯಾಣಿಕರಿದ್ದ ಖಾಸಗಿ ಬಸ್ಗೆ ಬೆಂಕಿ ಹೊತ್ತಿಕೊಂಡಿದೆ!

Fri Mar 25 , 2022
ಪುಣೆಯಿಂದ ಮಲ್ಕಾಪುರಕ್ಕೆ 28 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಐಷಾರಾಮಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಆಘಾತಕಾರಿ ಘಟನೆ ಔರಂಗಾಬಾದ್ ಜಿಲ್ಲೆಯ ಜಲಗಾಂವ್ ಹೆದ್ದಾರಿಯ ಅಜಿತಾ ರಸ್ತೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಆದರೆ ಚಾಲಕ ಸಮಯಕ್ಕೆ ಸರಿಯಾಗಿ ಸ್ಪಂದಿಸಿದ್ದರಿಂದ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ. ಬೆಂಕಿ ಅವಘಡದಲ್ಲಿ ಯಾರೂ ಸಾವನ್ನಪ್ಪಿಲ್ಲ ಅಥವಾ ಗಾಯಗೊಂಡಿಲ್ಲ. ಆದರೆ, ಈ ವೇಳೆ ಬಸ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಸಿಕ್ಕಿರುವ ಮಾಹಿತಿ ಪ್ರಕಾರ, ಸಾಯಿ ಟ್ರಾವೆಲ್ಸ್ ನ ಐಷಾರಾಮಿ ಬಸ್ (MH12.EQ.9007) […]

Advertisement

Wordpress Social Share Plugin powered by Ultimatelysocial