ರಾಷ್ಟ್ರೀಯ ವಿಜ್ಞಾನ ದಿನ

ರಾಷ್ಟ್ರೀಯ ವಿಜ್ಞಾನ ದಿನ
ಫೆಬ್ರುವರಿ 28 ಭಾರತೀಯ ವಿಜ್ಞಾನಕ್ಕೊಂದು ಪರ್ವ ದಿನ. 1928ರ ಇದೇ ದಿನದಂದು ಮಹಾನ್ ವಿಜ್ಞಾನಿ ಸರ್ ಸಿ ವಿ ರಾಮನ್ ಅವರು ವಿಶ್ವಪ್ರಸಿದ್ಧವಾದ ‘ರಾಮನ್ ಎಫೆಕ್ಟ್’ ಸಂಶೋಧನೆಯ ವಿವರಗಳನ್ನು ಜಗತ್ತಿಗೆ ಬಹಿರಂಗಪಡಿಸಿದರು.
ಮೆಡಿಟರೇನಿಯನ್ ಸಮುದ್ರದಲ್ಲಿ ಪಯಣಿಸುತ್ತಿದ್ದ ಸಿ ವಿ ರಾಮನ್ ಅವರು ಕಡಲಿನ ನೀಲಿ ಬಣ್ಣವನ್ನು ಕಂಡು ಆ ಸೊಬಗಿಗೆ ಪರವಶರಾದದ್ದು ಮಾತ್ರವಲ್ಲ, ಅವರಿಗೆ ನೀರಿನ ಬಣ್ಣ ಅದು ಹೇಗೆ ನೀಲಿಯಾಗಿದೆ ಎಂಬ ಸೋಜಿಗ ಕೂಡಾ ಉಂಟಾಯಿತು. ಆಕಾಶವೂ ನೀಲಿ, ಸಮುದ್ರವೂ ನೀಲಿ. ಹಾಗಾದರೆ ಆಕಾಶದ ಪ್ರತಿಫಲನ ನೀರಿನ ಮೇಲೆ ಕಾಣುತ್ತಿದೆಯೇ ಇಲ್ಲ ಇದಕ್ಕೆ ಇನ್ನೇನಾದರೂ ಕಾರಣ ಇರಬಹುದೇ ಎಂದು ತೀವ್ರವಾಗಿ ಚಿಂತಿಸಿದ ಅವರಿಗೆ “ಸೂರ್ಯನ ಬೆಳಕು ನೀರಿನ ಕಣ ಕಣದಲ್ಲೂ ಹರಡಿಕೊಳ್ಳುವುದೇ ಸಮುದ್ರವು ನೀಲಿಯಾಗಿ ಕಾಣುವುದಕ್ಕೆ ಕಾರಣ” ಎಂದು ದೃಢಪಟ್ಟಿತು. ಆ ಕ್ಷಣದಿಂದಲೇ ತಮ್ಮ ತೀವ್ರವಾದ ಸಂಶೋಧನೆಗಳನ್ನು ನಡೆಸಿದ ರಾಮನ್ ದ್ರವಗಳಲ್ಲಿ ಬೆಳಕಿನ ಸಂಚಲನೆಯ ಕುರಿತಾದ ಸುದೀರ್ಘ ಅಧ್ಯಯನವನ್ನು ಕೈಗೊಂಡು ಆ ಪ್ರಯೋಗಗಳ ಪರಿಣಾಮವನ್ನು ವೈಜ್ಞಾನಿಕ ಲೋಕದೆದುರು ತೆರೆದಿಟ್ಟರು. ಈ ಸಂಶೋಧನೆಗಾಗಿ ರಾಮನ್ ಅವರಿಗೆ ನೋಬಲ್ ಪಾರಿತೋಷಕ ಸಂದಿತು ಎಂಬುದು ನಮಗೆಲ್ಲಾ ತಿಳಿದಿರುವ ವಿಚಾರ. ರಾಮನ್ ಅವರ ಈ ಸಂಶೋಧನೆಯ ಗೌರವಾರ್ಥವಾಗಿ ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ.
ಇಂದು ಬಾಹ್ಯಾಕಾಶ, ಪರಮಾಣು ವಿಜ್ಞಾನ, ಮಾಹಿತಿ ವಿಜ್ಞಾನ, ಜೈವಿಕ ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರಗಳಲ್ಲೂ ಸೇರಿದಂತೆ ದೇಶದ ವಿಜ್ಞಾನಿಗಳು ಕೊಟ್ಟಿರುವ ಕೊಡುಗೆ ಮಹತ್ವದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಎಲ್ಲವನ್ನೂ ಹಾಲು ಕರೆಯುವ ಹಸು ಎಂದು ಕಾಣುವಂತಹ ಇಂದಿನ ವ್ಯಾಪಾರೀ ಮನೋಧರ್ಮದಲ್ಲಿ ಹೊಸ ಪೀಳಿಗೆಯ ತಲೆಮಾರುಗಳು ಸಂಶೋಧನಾ ಕ್ಷೇತ್ರಗಳತ್ತ ಮೊಗ ಮಾಡುತ್ತಿರುವುದು ಕಡಿಮೆಯಾಗುತ್ತಿದೆ ಎಂಬುದು ಸುಳ್ಳಲ್ಲ. ಹಾಗೆ ಆಸಕ್ತರಿದ್ದರೂ ಅವರು ಅನಿವಾರ್ಯವೆಂಬಂತೆ ಅಮೆರಿಕಕ್ಕೆ ಜಾರುತ್ತಾರೆ.
ವಿದ್ಯಾರ್ಥಿಗಳನ್ನು ಯಾಂತ್ರಿಕವಾಗಿ ಪ್ರಶ್ನಪತ್ರಿಕೆಗಳ ವ್ಯವಸ್ಥೆಗೆ ಹೊಂದಿಕೊಳ್ಳುವಂತೆ ಮಾಡಿ ಅವರಲ್ಲಿ ಪ್ರಾಯೋಗಿಕವಾಗಿ ವಿಜ್ಞಾನದ ಚಿಂತನೆಯ ಶಕ್ತಿಯನ್ನು ಕುಂಠಿತಗೊಳಿಸುವ ಗುಡ್ಡಿಪಾಠದ ಪ್ರವೃತ್ತಿ ದೇಶದಾದ್ಯಂತ ಇಂದು ವ್ಯಾಪಿಸಿಕೊಂಡುಬಿಟ್ಟಿದೆ.
ವಿಜ್ಞಾನದ ಹೊಸ ಹೊಸ ಆವಿಷ್ಕಾರಗಳು ಬರುತ್ತಿರುವ ಹಾಗೆಲ್ಲಾ ಮನುಷ್ಯ ಅವುಗಳ ಉಪಯೋಗಕ್ಕಾಗಿ ನಿಸರ್ಗವನ್ನು ಬರಿದು ಮಾಡುತ್ತಿದ್ದಾನೆ ಎಂಬುದು ಕೂಡಾ ಸತ್ಯವಾದ ವಿಚಾರ. ಕುಡಿಯುವ ನೀರು, ಪೆಟ್ರೋಲ್, ಗಿಡ, ಮರ, ಬೆಟ್ಟ ಗುಡ್ಡಗಳನ್ನೆ ಅಲ್ಲದೆ ತನ್ನಂತೆಯೇ ಇರುವ ಇತರ ಮನುಷ್ಯ ಜೀವಿಗಳನ್ನೂ ಒಳಗೊಂಡಂತೆ ಎಲ್ಲ ತರಹದ ಜೀವಿಗಳನ್ನೂ ತನ್ನ ಅಹಮಿಕೆಯಲ್ಲಿ ಮರೆತು, ಶಕ್ತಿ ಮೀರಿ ಎಂಬಂತೆ ಪ್ರಾಕೃತಿಕ ಸಮತೋಲನವನ್ನು ಹಾಳುಗೆಡವಿ ವಿಶ್ವವನ್ನು ಬಿರುಸಿನಿಂದ ವಿನಾಶದೆಡೆಗೆ ಕೊಂಡೊಯ್ಯುತಿದ್ದಾನೆ. ತನ್ನ ಬಯಕೆಗಳ ಪೂರೈಕೆ ವಿಚಾರ ಬಂದಾಗ ವಿಜ್ಞಾನವನ್ನು ಪೂಜಿಸಿ ಆರಾಧಿಸುವ ಸೋಗು ಹಾಕುವ ಮಾನವ, ತನ್ನ ನಡವಳಿಕೆಗಳ ವಿಚಾರ ಬಂದಾಗ ಮಾತ್ರ ವೈಜ್ಞಾನಿಕ ಚಿಂತನೆಯನ್ನು ಪಕ್ಕಕ್ಕಿಟ್ಟು ಕೆಲಸ ಮಾಡುತ್ತಿದ್ದಾನೆ. ಇಂತಹ ವಿಜ್ಞಾನದ ದಿನಗಳು ವರ್ಷದ ಒಂದು ದಿನವಾಗುವುದಕ್ಕಿಂತ ಹೆಚ್ಚಾಗಿ ನಮ್ಮ ದೈನಂದಿನದಲ್ಲಿ ವೈಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ ಅಂತರ್ಗತವಾಗಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ.
ಈ ವಿಚಾರದಲ್ಲಿ ಸರ್ ಸಿ. ವಿ. ರಾಮನ್ ಅವರ ಮಾತು ಮನನಯೋಗ್ಯವಾಗಿದೆ: “ವಿಜ್ಞಾನದ ತಿಳುವಳಿಕೆಯಿರುವ ಮನುಷ್ಯ ನಿಸರ್ಗದ ಸೌಂದರ್ಯವನ್ನು ತನ್ನ ತಿಳುವಳಿಕೆಯ ಕಣ್ಣುಗಳಿಂದ ನೋಡುತ್ತಾನೆ ಮಾತ್ರವಲ್ಲ ಆ ಸೌಂದರ್ಯ ಮುದುಡಿಹೋಗದಂತೆ ಕೂಡಾ ಜಾಗರೂಕನಾಗಿರುತ್ತಾನೆ. ಜ್ಞಾನವೆಂಬುದು ನಾವು ಜಗತ್ತನ್ನು ನೋಡುವ ರೀತಿಗೆ ಹೊಸ ದೃಷ್ಟಿ ಕೊಡುವುದರ ಜೊತೆಗೆ ಸೌಂದರ್ಯವನ್ನು ಆರಾಧಿಸುವ ಮನೋಭಾವವನ್ನೂ ಸೃಜಿಸುತ್ತದೆ”. ನಾವು ಇಂತಹ ಪ್ರಾಜ್ಞತೆಯನ್ನು ಉಳಿಸಿಕೊಂಡಿದ್ದೇವೆಯೇ ಎಂಬ ಆತ್ಮಾವಲೋಕನ ಮಾತ್ರವೇ ನಿಜವಾದ ವಿಜ್ಞಾನ ದಿನದ ಆಚರಣೆಯಾದೀತು.
ಈ ಎಲ್ಲ ಚಿಂತನೆಗಳ ನಡುವೆ ನಮ್ಮ ಬದುಕನ್ನು ಹಸನು ಮಾಡಿರುವ ಸರ್ ಸಿ ವಿ ರಾಮನ್ ಅವರಂತಹ ಸಕಲ ಶ್ರೇಷ್ಠ ವಿಜ್ಞಾನ ತಪಸ್ವೀ ಋಷಿವರ್ಯರುಗಳಿಗೆ ನಮ್ಮ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸೋಣ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

LPG ದರ ಏರಿಕೆ ಶಾಕ್; ವಾಣಿಜ್ಯ ಸಿಲಿಂಡರ್ ಬೆಲೆ 105 ರೂ. ಹೆಚ್ಚಳ, 2 ಸಾವಿರ ಗಡಿ ದಾಟಿದ ದರ

Tue Mar 1 , 2022
ನವದೆಹಲಿ: ಮಾರ್ಚ್ 1 ರಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌.ಪಿ.ಜಿ. ಸಿಲಿಂಡರ್‌ ಗಳ ಬೆಲೆಯನ್ನು 105 ರೂ. ಹೆಚ್ಚಿಸಲಾಗಿದೆ. ಈ ದರ ಏರಿಕೆಯೊಂದಿಗೆ ಮಂಗಳವಾರದಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 2,012 ರೂ. ಆಗಲಿದೆ. 5 ಕೆಜಿ ಸಿಲಿಂಡರ್ ಬೆಲೆಯೂ 27 ರೂ.ನಷ್ಟು ಏರಿಕೆಯಾಗಿದೆ. ಈಗ ದೆಹಲಿಯಲ್ಲಿ 5 ಕೆಜಿ ಸಿಲಿಂಡರ್ ಬೆಲೆ 569 ರೂ. ಆಗಲಿದೆ. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನಲ್ಲಿ ಯಾವುದೇ ಹೆಚ್ಚಳವಿಲ್ಲ. ಎಲ್‌ಪಿಜಿ ಸಿಲಿಂಡರ್ […]

Advertisement

Wordpress Social Share Plugin powered by Ultimatelysocial