ಕಪಿಲ್ ದೇವ್ ಕಳೆದ ಶತಮಾನದ ಭಾರತೀಯ ಕ್ರಿಕೆಟ್ ಆಟಗಾರ

ಕಪಿಲ್ ಕ್ರಿಕೆಟ್ ಆಡುವವರೆಗೆ ಟೆಸ್ಟ್ ಕ್ರಿಕೆಟ್ಟಿನಲ್ಲಿ ಅವರೇ ಅತ್ಯದಿಕ ವಿಕೆಟ್ ಗಳಿಸಿದ್ದವರು. ಮುಂದೆ ಆ ದಾಖಲೆಯನ್ನು ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್, ಅನಿಲ್ ಕುಂಬ್ಳೆ, ಮೆಕ್ದಾಗ್ರಾಥ್, ವಾಲ್ಷ್ ಮುಂತಾದವರು ದಾಟಿದರು. ಅವರು ಟೆಸ್ಟ್ ಆಟದಲ್ಲಿ ನಾನೂರು ವಿಕೆಟ್ಟುಗಳು ಮತ್ತು ಐದು ಸಾವಿರ ರನ್ನುಗಳನ್ನೂ ಪೂರೈಸಿದ ವಿಶ್ವದ ಏಕೈಕ ಆಟಗಾರ ಕೂಡಾ. ಭಾರತಕ್ಕೆ ಯುವ ಸಂಚಲನವನ್ನು ತಂದು ಎಳೆ ಹುಡುಗರ ತಂಡದ ಮೂಲಕ ಸ್ಫೂರ್ತಿ ಇದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿ ಎಂಬಂತೆ ಭಾರತಕ್ಕೆ ಪ್ರಪ್ರಥಮ ವಿಶ್ವ ಕಪ್ ಪ್ರಶಸ್ತಿ ತಂದು ಕೊಟ್ಟ ಧೀಮಂತನೀತ.
ಕಪಿಲ್ ಇದ್ದಾರೆ ಎಂದರೆ ಅಂದಿನ ದಿನದಲ್ಲಿ ಅದೆಂತದ್ದೋ ಭರವಸೆ. ಅಂತಹ ‘ಆಲ್ ರೌಂಡರ್’ ಎಂದು ಕರೆಯಲಾಗುವ ಸರ್ವಾಂಗೀಣ ಕ್ರಿಕೆಟ್ಟಿಗ ವಿಶ್ವದಲ್ಲಿ ವಿರಳ. ಈಗಂತೂ ಇಲ್ಲವೇ ಇಲ್ಲ ಎಂದರೂ ತಪ್ಪಿಲ್ಲ. ಕಪಿಲ್ ಆಡಲು ಬಂದಾಗ ಆತನನ್ನು ಒಬ್ಬ ಹಳ್ಳಿಯ ಮುಕ್ಕ ಎಂದು ಜನ ಭಾವಿಸಿದ್ದರು. ಆದರೆ ಆತ ಮುಂದೆ ತೋರಿದ ಶ್ರದ್ಧೆ, ಸ್ಥೈರ್ಯ, ಸಾಮರ್ಥ್ಯಗಳು ಭಾರತೀಯ ಕ್ರಿಕೆಟ್ಟಿಗೆ ಹೊಸ ಭಾಷ್ಯ ಬರೆದವು. ಭಾರತೀಯನೊಬ್ಬ ಅಂದಿನ ದಿನ ಕ್ರಿಕೆಟ್ಟಿಗೆ ಬಂದಾಗ, ಮುಂಬೈಯವ ಆದರೆ ಪ್ರಥಮ ಪ್ರಾಶಸ್ತ್ಯ, ಮದರಾಸಿನವನಿಗೆ ಎರಡನೇ ಪ್ರಾಶಸ್ತ್ಯ, ಈ ಎರಡು ಊರಲ್ಲಿ ಬಂದ ಆಟಗಾರರು ಶೋಚನೀಯವಾಗಿ ಆಡಿ ಪತ್ರಿಕೆಗಳು ಟೀಕಿಸಿದರೆ ಉಳಿದ ಬೆಂಗಳೂರು, ಹೈದರಾಬಾದು, ದಿಲ್ಲಿ ಕ್ರಿಕೆಟ್ಟಿಗರಿಗೆ ಅವಕಾಶ ಇಂತಹ ಪರಿಸ್ಥಿತಿ ದೇಶದಲ್ಲಿತ್ತು. ಹೀಗಿದ್ದ ದಿನಗಳಲ್ಲಿ ಅಚಾನಕ್ಕಾಗಿ ಮೂಡಿದ ಕಪಿಲ್ ತನ್ನ ಪ್ರತಿಭೆಮಾತ್ರದಿಂದ ಭಾರತೀಯ ಕ್ರಿಕೆಟ್ ತಂಡಕ್ಕೆ ತಾನು ಅನಿವಾರ್ಯವೆನ್ನುವಂತೆ ಮಾಡಿದ. ಜೊತೆಗೆ ಅಧಿಕಾರಶಾಹಿಗಳಿಗೆ ಪ್ರತಿಭೆ ಎಂಬುದು ಕೇವಲ ಒಂದು ಊರಿನ ಸ್ವತ್ತಲ್ಲ ಎಂಬುದನ್ನು ಮನದಟ್ಟು ಮಾಡಿಕೊಟ್ಟ. ಅಂದಿನ ದಿನದವರೆಗೆ ಭಾರತ ಒಂದಿಷ್ಟು ಸಾಧನೆ ತೋರಬೇಕೆಂದರೆ ಅದು ಉತ್ತಮ ಸ್ಪಿನ್ ಆಗುವ ಮೈದಾನವೇ ಆಗಿರಬೇಕೆಂಬ ನಾಣ್ಣುಡಿಯನ್ನು ಬದಲಾಯಿಸಲಾರಂಭಿಸಿದ.
1983ರ ವಿಶ್ವಕಪ್ ತಂಡದ ನಾಯಕತ್ವ ಕಪಿಲ್ ದೇವ್ ಕೈಗೆ ಬಂದಾಗ ಆತನ ಜೊತೆಯಲ್ಲಿದ್ದ ಬಹಳಷ್ಟು ಆಟಗಾರರು ಕ್ರಿಕೆಟ್ ರಂಗದಲ್ಲಿ ಅತೀವ ಕಡಿಮೆ ಸಾಧನೆ ಮಾಡಿದವರು. ಅಂತಹವರನ್ನು ಹುರಿದುಂಬಿಸಿ ತಂಡಕ್ಕೆ ಅವಶ್ಯಕತೆ ಇದ್ದಾಗಲೆಲ್ಲಾ ತಾನೇ ಪ್ರಮುಖ ಪಾತ್ರ ವಹಿಸಿ ತನ್ನ ತಂಡ ವಿಶ್ವ ಕಪ್ ಪ್ರಶಸ್ತಿಯನ್ನೇ ಗಳಿಸುವಂತೆ ಮಾಡಿ, ಭಾರತೀಯ ಕ್ರಿಕೆಟ್ ರಂಗವನ್ನು ಅತ್ಯಂತ ಶ್ರೀಮಂತಗೊಳಿಸುವ ಹಾದಿಯಲ್ಲಿ ಪ್ರಥಮ ಭಾಷ್ಯ ಬರೆದರು. ಆ ಸರಣಿಯಲ್ಲಿ ಜಿಂಬಾವ್ವೆ ವಿರುದ್ಧದ ಪಂದ್ಯದಲ್ಲಿ ಕೇವಲ ಮೊದಲ ಓವರುಗಳಲ್ಲಿ ಇಪ್ಪತ್ತು ರನ್ನುಗಳಿಗೆ 5 ವಿಕೆಟ್ಟುಗಳನ್ನು ಕಳೆದುಕೊಂಡು ತಮ್ಮ ತಂಡ ದುಸ್ಥಿತಿಯಲ್ಲಿದ್ದಾಗ ಕೆಳಹಂತದ ಆಟಗಾರರೊಡನೆ ನಿಂತು ವಿಶ್ವದಾಖಲೆಯ ಅಮೋಘ ಆಟವಾಡಿ 175ರನ್ನುಗಳನ್ನು ಪೇರಿಸಿ ಆ ಪಂದ್ಯವನ್ನು ಜಯಗಳಿಸುವಂತೆ ಮಾಡಿದ್ದು ಇಡೀ ತಂಡಕ್ಕೆ ವಿಶ್ವಕಪ್ ಗೆಲ್ಲುವ ಬಗ್ಗೆ ಆತ್ಮವಿಶ್ವಾಸ ತುಂಬಿದ ವಿಶೇಷ ಘಟನೆ ಎಂದು ಇಡೀ ಕ್ರಿಕೆಟ್ ವಿಶ್ವ ನಂಬಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಯಂತಿ ಚಲನಚಿತ್ರಲೋಕದ ಮಹತ್ವದ ಕಲಾವಿದೆ

Fri Jan 6 , 2023
ಚಲನಚಿತ್ರಲೋಕದ ಮಹತ್ವದ ಕಲಾವಿದೆ ಜಯಂತಿ ಅಭಿನಯ ಶಾರದೆ ಎಂದು ಪ್ರಖ್ಯಾತರಾದವರು. ಜೇನು ಗೂಡು ಕನ್ನಡ ಚಿತ್ರದಿಂದ ಪ್ರಾರಂಭಿಸಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮತ್ತು ಮರಾಠಿ ಭಾಷೆಗಳಲ್ಲಿ ಒಟ್ಟು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಈ ತಾರೆಯ ಪ್ರತಿಭೆ ಅಸಾಧಾರಣವಾದದ್ದು. ಜಯಂತಿ ಅವರು 1945ರ ಜನವರಿ 6ರಂದು ಜನಿಸಿದರು. ಬಳ್ಳಾರಿಯಲ್ಲಿ ಜನಿಸಿದ ಜಯಂತಿ ಅವರ ಅಂದಿನ ಹೆಸರು ಕಮಲಕುಮಾರಿ. ಚಿಕ್ಕಂದಿನಿಂದನಲ್ಲೇ ಜಯಂತಿ ಅವರು ತಂದೆಯಿಂದ ಬೇರ್ಪಟ್ಟು ತಾಯಿಯೊಡನೆ ಮದ್ರಾಸಿನಲ್ಲಿ […]

Advertisement

Wordpress Social Share Plugin powered by Ultimatelysocial