ಕವಿತಾ ಲಂಕೇಶ್ ನಟಿ

 

ಕವಿತಾ ಲಂಕೇಶ್ ಚಿತ್ರ ನಿರ್ದೇಶನದಲ್ಲಿ ತಮ್ಮ ಪ್ರತಿಭೆ ಸಾಧನೆಗಳಿಂದ ಪ್ರತಿಷ್ಟಿತ ಸ್ಥಾನ ಪಡೆದಿದ್ದಾರೆ.
ಕವಿತಾ ಲಂಕೇಶ್ ಅವರ ಜನ್ಮ ದಿನ ಡಿಸೆಂಬರ್ 13. ಕವಿತಾ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕಲಾ ವಿಭಾಗದ ಪದವಿ, ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಜಾಹೀರಾತು ಅಧ್ಯಯನದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ.
ಕವಿತಾ ಅವರು, 1994ರಲ್ಲಿ ಪ್ರದರ್ಶನ ಕಲೆಯ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಚಲನಚಿತ್ರಗಳನ್ನು, ಸಾಮಾಜಿಕ – ಸಾಂಸ್ಕೃತಿಕ ನೆಲೆಗಳ ಕಿರುಚಿತ್ರಗಳನ್ನು ಜೊತೆಗೆ ಹಲವಾರು ಸಂಸ್ಥೆಗಳಿಗೆ ಜಾಹೀರಾತು ಚಿತ್ರಗಳನ್ನೂ ನಿರ್ಮಿಸುತ್ತಾ ಗಣನೀಯ ಸಾಧನೆ ಮಾಡುತ್ತಾ ಬಂದಿದ್ದಾರೆ. ತಮ್ಮ ಚಿತ್ರಗಳಿಗೆಲ್ಲ ಚಿತ್ರಕಥೆ ರಚನೆ ಮತ್ತು ನಿರ್ದೇಶನಗಳನ್ನೂ ಮಾಡಿದ್ದಾರೆ.
ತಮ್ಮ ಶ್ರದ್ಧೆ ಸಾಮರ್ಥ್ಯಗಳಿಂದ ಕರ್ನಾಟಕ ರಾಜ್ಯ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲದೆ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಸಹಾ ನಿರಂತರವಾಗಿ ಪ್ರಶಸ್ತಿ, ಪುರಸ್ಕಾರ ಮತ್ತು ಮೆಚ್ಚುಗೆಗಳನ್ನು ಪಡೆಯುತ್ತಿರುವ ಕವಿತಾ ಅವರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಿತಿ, ಕೇರಳ ರಾಜ್ಯದ ಪ್ರಶಸ್ತಿ ಸಮಿತಿ, ಮಕ್ಕಳ ಚಿತ್ರಗಳಿಗಾಗಿನ ಸಂಘಟನೆಯಲ್ಲಿ ಕ್ರಿಯಾಶೀಲ ಭಾಗವಹಿಕೆ ಹೀಗೆ ಹಲವು ರೀತಿಗಳಲ್ಲಿ ಗಣ್ಯತೆ ಗಳಿಸಿದ್ದಾರೆ.
ಕವಿತಾ ಅವರ ನಿರ್ದೇಶನದ ಚಿತ್ರಗಳೆಂದರೆ ‘ದೇವೀರಿ’, ‘ಅಲೆಮಾರಿ’, ‘ಬಿಂಬ’, ‘ಪ್ರೀತಿ ಪ್ರೇಮ ಪ್ರಣಯ’, ‘ತನನಂ ತನನಂ; ‘ಅವ್ವ’, ‘ಕ್ರೇಜಿಲೋಕ’, ‘ಕರಿಯ ಕಣ್ ಬಿಟ್ಟ’, ತಮಿಳಿನ ‘ಕಾದಲ್ ಮಳೈ’ ಮತ್ತು ಇಂಗ್ಲಿಷಿನಲ್ಲಿ ‘ಸಮ್ಮರ್ ಹಾಲಿಡೇಸ್’. ಜೊತೆಗೆ ರಾಷ್ಟ್ರೀಯ ದೂರದರ್ಶನ ಚಾನೆಲ್ಲಿಗಾಗಿ ‘ಮಾಲ್ಗುಡಿ ಡೇಸ್’ನ ಹದಿನೈದು ಕಂತುಗಳ ಕತೆಗಳನ್ನೂ ನಿರ್ದೇಶಿಸಿದ್ದಾರೆ. ಲಂಕೇಶರ ‘ಅಕ್ಕ’ ಕತೆಯನ್ನು ಆಧರಿಸಿದ ‘ದೇವೀರಿ’ ಚಿತ್ರ 1999ರ ವರ್ಷದ ಒಂದು ಅಂತರರಾಷ್ಟ್ರೀಯ ಪ್ರಶಸ್ತಿ, ಎರಡು ರಾಷ್ಟ್ರ ಪ್ರಶಸ್ತಿ ಮತ್ತು ಒಂಬತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆಯಿತು. ‘ಬಿಂಬ’, ‘ಪ್ರೀತಿ ಪ್ರೇಮ ಪ್ರಣಯ’, ‘ಅವ್ವ’ ಚಿತ್ರಗಳು ಸಹಾ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಪಡೆದರೆ ‘ತನನಂ ತನನಂ’ ಚಿತ್ರ ಫಿಲಂಫೇರ್ ಪ್ರಶಸ್ತಿ ಗಳಿಸಿತು. ‘ಅವ್ವ’ ಚಿತ್ರ ಲಂಕೇಶರ ‘ಮುಸ್ಸಂಜೆಯ ಕಥಾ ಪ್ರಸಂಗ’ ಕಥೆಯನ್ನು ಆಧರಿಸಿದೆ. ಅವರ ‘ಪ್ರೀತಿ ಪ್ರೇಮ ಪ್ರಣಯ’ ಚಿತ್ರ ಶತದಿನೋತ್ಸವ ಆಚರಿಸಿತು. 2012 ವರ್ಷ ಕ್ರೇಜಿ ಸ್ಟಾರ್ ರವಿಚಂದ್ರನ್ ನಟನೆಯಲ್ಲಿ ‘ಕ್ರೇಜಿ ಲವ್’ ಎಂಬ ಚಿತ್ರವನ್ನು ನಿರ್ದೇಶಿಸಿದರು . 2013 ವರ್ಷ ‘ಕರಿಯ ಕಣ್ ಬಿಟ್ಟ’ ಚಿತ್ರ ನಿರ್ದೇಶಿಸಿದರು. ಆ ಚಿತ್ರಕ್ಕೆ ಶ್ರೇಷ್ಠ ಬಾಲಕಲಾವಿದ ಪ್ರಶಸ್ತಿ ಬಂತು. 2017 ವರ್ಷ ‘ಸಮ್ಮರ್ ಹಾಲಿಡೇಸ್’ ಎಂಬ ಇಂಗ್ಲಿಷ್ ಮಕ್ಕಳ ಚಿತ್ರ ನಿರ್ದೇಶಿಸಿದರು. ಹೀಗೆ ಸಾಮಾಜಿಕ ಕಾಳಜಿ, ಕಲಾತ್ಮಕ ಚಿತ್ರ, ಮಕ್ಕಳ ಚಿತ್ರ ಮತ್ತು ಪ್ರಧಾನ ವಾಹಿನಿಯ ಚಿತ್ರ ಹೀಗೆ ಎಲ್ಲಾ ನೆಲೆಗಳಲ್ಲೂ ಕವಿತಾ ತಮ್ಮ ಹೆಜ್ಜೆ ಗುರುತುಗಳನ್ನು ಸಮರ್ಥವಾಗಿ ಮೂಡಿಸಿದ್ದಾರೆ.
ಪೂರ್ಣ ಪ್ರಮಾಣದ ಚಿತ್ರಗಳಲ್ಲದೆ ಕಿರುಚಿತ್ರ ನಿರ್ಮಾಣದಲ್ಲಿ ಕೂಡಾ ಸಾಕಷ್ಟು ಶ್ರಮಿಸಿರುವ ಕವಿತಾ ಲಂಕೇಶ್, ತಾವು ನಿರ್ಮಿಸಿದ ಆದಿವಾಸಿ ಮಹಿಳೆಯ ಕುರಿತಾದ ‘ತುಳಸಿ’ ಕಿರುಚಿತ್ರಕ್ಕೆ ‘ಇಂದಿರಾ ಪ್ರಿಯದರ್ಶಿನಿ ರಾಷ್ಟ್ರೀಯ ಪುರಸ್ಕಾರ’ ಗಳಿಸಿದರು. ಅವರ ‘ಸಿದ್ಧಿ’ ಕಿರುಚಿತ್ರ, ಕರ್ನಾಟಕದಲ್ಲಿ ಇರುವ ಆಫ್ರಿಕನ್ ಮೂಲದ ಜನಾಂಗದ ಕುರಿತದ್ದಾಗಿದೆ. ‘ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ’ ಮತ್ತು ಬೆಂಗಳೂರು ಮಹಾನಗರ ಪಾಲಿಕೆಗಾಗಿ ನಿರ್ಮಿಸಿದ ನಗರ ನೈರ್ಮಲ್ಯೀಕರಣ ಪ್ರೇರಕ ‘ಕ್ಲೀನ್ ಸಿಟಿ’ ಕಿರುಚಿತ್ರಗಳು ಸಾಮಾಜಿಕ ಕಾಳಜಿಯ ಕುರಿತದ್ದಾಗಿವೆ. ಮಕ್ಕಳಿಗಾಗಿ ‘ನೈಸರ್ಗಿಕ ಶಿಬಿರ’ಗಳ ಕುರಿತಾದ ಭೋದಪ್ರದ ಕಿರುಚಿತ್ರ ಕೂಡ ಮಾಡಿದ್ದಾರೆ. ‘ಯಕ್ಷಗಾನ’, ‘ನೀನಾಸಂ’, ‘ಹಸೆ ಕಲೆ’, ‘ಆರು ಜನ ಪ್ರಶಸ್ತಿ ವಿಜೇತ ಕರ್ನಾಟಕದ ಮಹಿಳಾ ಕಲೆಗಾರರು’, ‘ಜಾನಪದ ಗಾನಕೊಗಿಲೆಗಳು’ ಇವು ಸಾಂಸ್ಕೃತಿಕ ತಳಹದಿಯ ಕಿರುಚಿತ್ರಗಳು. ಕೇರಳ ರಾಜ್ಯಕ್ಕೆ ಸಂಬಂಧಿಸಿದಂತೆ ಅಮೇರಿಕಾದ ದೂರದರ್ಶನ ಚಾನೆಲ್ ಒಂದಕ್ಕೆ ‘Coming Full Circle’ ಎಂಬ ವಾರ್ತಾ ಚಿತ್ರವನ್ನು ನಿರ್ಮಿಸಿ ಕೊಟ್ಟಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸ್ಮಿತಾ ಪಾಟೀಲ್ ಭಾರತೀಯ ಚಿತ್ರರಂಗ ಕಂಡ ಅಮೋಘ ಪ್ರತಿಭೆ.

Fri Dec 23 , 2022
  ಸ್ಮಿತಾ, ಪಾಟೀಲ್ ಅವರು 1955ರ ಅಕ್ಟೋಬರ್ 17ರಂದು ಪುಣೆಯಲ್ಲಿ ಜನಿಸಿದರು. ತಂದೆ ಮಹಾರಾಷ್ಟ್ರದ ಸಚಿವರಾಗಿದ್ದ ಶಿವಾಜಿರಾವ್ ಪಾಟೀಲ್. ತಾಯಿ ವಿದ್ಯಾಪಾಟೀಲ್. ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರು, ಸಮಾಜವಾದೀ ಪಕ್ಷದಲ್ಲಿದ್ದವರು. ಸ್ಮಿತಾ ಕಲಿತದ್ದು ಪುಣೆಯ ಭಾವೆ ಶಾಲೆ, ಫರ್ಗ್ಯೂಸನ್ ಕಾಲೇಜು, ಮುಂಬಯಿಯ ಎಲ್ಫಿನ್‍ಸ್ಟನ್ ಕಾಲೇಜು ಮತ್ತು ಸೇಂಟ್ ಕ್ಸೇವಿಯರ್ ಕಾಲೇಜುಗಳಲ್ಲಿ. ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಕಲಿಯುವ ಆಸೆ ಹೊತ್ತಿದ್ದ ಸ್ಮಿತಾ ಪಾಟೀಲ್ ದೂರದರ್ಶನದಲ್ಲಿ ವಾರ್ತಾವಾಚಕಿಯಾಗಿದ್ದಾಗ ಶಾಮ್ ಬೆನಗಲ್ ಅವರ ಕಣ್ಣಿಗೆ […]

Advertisement

Wordpress Social Share Plugin powered by Ultimatelysocial