ಕು. ಶಿ. ಹರಿದಾಸ ಭಟ್ಟರು

 
ಪ್ರೊ. ಕು.ಶಿ.ಹರಿದಾಸ ಭಟ್ಟರು ಸಾಹಿತಿ, ಜಾನಪದ ವಿದ್ವಾಂಸ, ಶ್ರೇಷ್ಠ ಶಿಕ್ಷಕ, ಸಂಶೋಧಕ, ಮತ್ತು ಸಾಂಸ್ಕೃತಿಕ ಪ್ರತಿನಿಧಿಗಳೆನಿಸಿದ್ದವರು.
ಕು.ಶಿ.ಹರಿದಾಸ ಭಟ್ಟರು 1924ರ ಮಾರ್ಚ 17ರಂದು ಉಡುಪಿಯಲ್ಲಿ ಜನಿಸಿದರು. ತಂದೆ ಶಿವಗೋಪಾಲ ಭಟ್ಟರು ಗದಗು ಪಟ್ಟಣದಲ್ಲಿ ಚಹದಂಗಡಿ ನಡೆಸುತ್ತಿದ್ದರು. ಹರಿದಾಸ ಭಟ್ಟರ ಪ್ರಾರಂಭಿಕ ಶಿಕ್ಷಣ ಕಡಿಯಾಳಿನಲ್ಲಾಯಿತು. ಅಲ್ಲಿಂದ ಉಡುಪಿ ಬೋರ್ಡ್ ಹೈಸ್ಕೂಲಿನಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿದರು. ಬಡತನದಿಂದಾಗಿ ಕಾಲೇಜಿಗೆ ಹೋಗಲಾಗಲಿಲ್ಲ. ಮಂಗಳೂರಿನಲ್ಲಿ ಎರಡು ವರ್ಷದ ಶಿಕ್ಷಕರ ತರಬೇತಿ ಪಡೆದರು. ಅದೇ ಸಮಯದಲ್ಲಿ ‘ಕನ್ನಡ ಜಾಣ’ ಹಾಗು ಹಿಂದಿ ಪರೀಕ್ಷೆಗಳಲ್ಲಿಯೂ ಉತ್ತೀರ್ಣರಾದರು. ಮದ್ರಾಸು ವಿಶ್ವವಿದ್ಯಾಲಯದಿಂದ ಕನ್ನಡ ಹಾಗು ಸಂಸ್ಕೃತ ‘ವಿದ್ವಾನ್’ ಪದವಿ ಪಡೆದರು. 1946ರಲ್ಲಿ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿ ಸೇರಿಕೊಂಡು 1949ರಲ್ಲಿ ಬಿ.ಎ(ಆನರ್ಸ್) ಪದವಿ ಪಡೆದರು.
ಮದರಾಸಿಗೆ ಕಲಿಯಲು ಹೋಗುವದಕ್ಕೆ ಮೊದಲು 1942ರಲ್ಲಿ ಹರಿದಾಸ ಭಟ್ಟರು ಕಡಿಯಾಳಿನ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಕಾಲೇಜು ಶಿಕ್ಷಣಕ್ಕಾಗಿ ಈ ಕೆಲಸ ತ್ಯಜಿಸಿದ ಹರಿದಾಸ ಭಟ್ಟರು, ಬಿ.ಎ ಪದವಿಯನ್ನು ಪಡೆದ ಬಳಿಕ 1950ರಲ್ಲಿ ಮಹಾತ್ಮಾ ಗಾಂಧಿ ಮೆಮೊರಿಯಲ್ ಕಾಲೇಜಿನ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದರು. ಎಂಜಿಎಂ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರಾಗಿ, ಅದೇ ಕಾಲೇಜಿನ ಪ್ರಾಂಶುಪಾಲರಾಗಿದ್ದ ಭಟ್ಟರ ಗರಡಿಯಲ್ಲಿ ಪಳಗಿದ ಸಾವಿರಾರು ವಿದ್ಯಾರ್ಥಿಗಳು, ತಾವು ಭಟ್ಟರ ವಿದ್ಯಾರ್ಥಿಗಳೆಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತಾರೆ.
ಉಡುಪಿಯಲ್ಲಿಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹರಿದಾಸ ಭಟ್ಟರು ಕೇಂದ್ರಬಿಂದುವಾಗಿದ್ದವರು. ಅವರು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಂಶೋಧನೆಗಳಿಗೆ ಸೂಕ್ತವಾದ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು. ಯಕ್ಶಗಾನ ಕೇಂದ್ರ, ರಾ.ಗೋವಿಂದ ಪೈ ಸಂಶೋಧನಾ ಕೇಂದ್ರ, ಪ್ರಾದೇಶಿಕ ಜನಪದ ರಂಗಕಲೆಗಳ ಅಧ್ಯಯನ ಕೇಂದ್ರ ಇವುಗಳಲ್ಲಿ ಪ್ರಮುಖವಾದವು. ಜೊತೆ ಜೊತೆಯಲ್ಲಿ ಸಮ್ಮೇಳನ, ರಂಗಪ್ರಯೋಗ ಮೊದಲಾದವುಗಳು ಹರಿದಾಸ ಭಟ್ಟರ ನೆರವಿನಿಂದಾಗಿ ಕಳೆಗೊಂಡವು. ಯಕ್ಷಗಾನ ಕಲೆಯನ್ನು ಕಡಲಾಚೆಯಲ್ಲೂ ಹರಡಲು ರಷ್ಯಾ, ಜರ್ಮನಿ, ಬ್ರಿಟನ್‌ ಹಾಗೂ ಅಮೆರಿಕೆಗಳಿಗೆ ಭಾರತದ ಸಾಂಸ್ಕೃತಿಕ ಪ್ರತಿನಿಧಿಯಾಗಿ ಪ್ರವಾಸ ಮಾಡಿದ್ದರು.
ಕರ್ನಾಟಕದ ಜಾನಪದ ಕಲೆಯನ್ನು ವಿಶ್ವಾದ್ಯಂತ ಪರಿಚಯಿಸಿ, ಅದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದ ಕೀರ್ತಿ ಭಟ್ಟರಿಗೆ ಸಲ್ಲುತ್ತದೆ. 1988-89ರ ಸಾಲಿನಲ್ಲಿ ಅಮೆರಿಕದ ಫೋರ್ಡ್‌ ಫೌಂಡೇಷನ್‌ ಸಹಯೋಗದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಸಮ್ಮೇಳನ ವಿಶ್ವದ ಗಮನವನ್ನೇ ಸೆಳೆಯಿತು.
ಈ ಎಲ್ಲ ಚಟುವಟಿಕೆಗಳ ನಡುವೆಯೂ ಬಹುಮುಖ ವ್ಯಕ್ತಿತ್ವವನ್ನು ಕಾಯ್ದುಕೊಂಡ ಹರಿದಾಸ ಭಟ್ಟರು ಗದ್ಯ ಲೇಖಕರೆಂದೇ ಹೆಸರಾದವರು. ಇವರ ಪ್ರಬಂಧಗಳಲ್ಲಂತೂ ವೈಶಿಷ್ಟ್ಯ ಪೂರ್ಣ ವೈವಿಧ್ಯತೆಯನ್ನು ಕಾಣಬಹುದು.1950ರಲ್ಲಿ ಭಟ್ಟರು ಬರೆದ ‘ಅರ್ಥಶಾಸ್ತ್ರ’ ಅವರ ಮೊದಲ ಶಾಸ್ತ್ರೀಯ ಗ್ರಂಥ. ಕಾದಂಬರಿ, ಕತೆ, ಕವನ, ಇತಿಹಾಸ, ಸಂಶೋಧನೆ ಹೀಗೆ ಎಲ್ಲ ಪ್ರಕಾರಗಳಲ್ಲೂ ಕೃತಿ ರಚಿಸಿರುವ ಭಟ್ಟರು, ಸಮಗ್ರ ಯಕ್ಷಗಾನ ಪರಂಪರೆ ಮತ್ತು ಪ್ರಯೋಗ, ‘ಪುಸ್ತಕ ಪುರಾಣ ’ (ಪ್ರಬಂಧ ಸಂಕಲನ), ‘ಇಟಾಲಿಯಾ ನಾ ಕಂಡಂತೆ’ (ಪ್ರವಾಸ ಕಥನ), ‘ಕಾರಂತ ಪ್ರಪ್ರಂಚ’ ಮುಂತಾದ 35ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವರು ಆರು ಬೃಹತ್‌ ಸಂಪುಟಗಳಲ್ಲಿ ಪ್ರಕಟವಾದ ತುಳು ನಿಘಂಟಿನ ಸಂಪಾದಕರಾಗಿದ್ದರು.
‘ಜಗದಗಲ’, ‘ಒಮ್ಮೆ ರಶಿಯಾ ಇನ್ನೊಮ್ಮೆ ಇತಾಲಿಯಾ’, ‘ರಂಗಾಯನ’, ‘ವರ್ತಮಾನ ಕಾಲದ ನಾಲ್ವರು ಮಹಾನುಭಾವರು’, ‘ಯುಗವಾಣಿ’, ‘ಕಡಲಿನ ಸಂಪತ್ತು’, ‘ಕಾಲವೇ ಬದಲಾಗಿದೆ’, ‘ಸ್ವಾತಂತ್ರ್ಯ ಮತ್ತು ಸಂಸ್ಕೃತಿ’, ‘ಶಿಕ್ಷಣ ಮತ್ತು ಜೀವನದ ಅರ್ಥ’, ‘ಪ್ರಜಾತಂತ್ರದ ಹೆದ್ದಾರಿ’, ‘ಏಶಿಯಾದ ಸಂಪತ್ತು’, ‘ಕನ್ನಡ ಕಟ್ಟಿದವರು’, ‘ಕಟ್ಟಂಗೇರಿ ಕೃಷ್ಣ ಹೆಬ್ಬಾರ’, ‘ಬದುಕುವ ದಾರಿ’ ಮುಂತಾದವು ಕು. ಶಿ. ಹರಿದಾಸ ಭಟ್ಟರ ಇನ್ನಿತರ ಪ್ರಮುಖ ಬರಹಗಳು.
ಪ್ರೇಮಚಂದರ ‘ಗಬನ್’ ಕೃತಿಯ ಕನ್ನಡ ರೂಪ ‘ರಮಾನಾಥ’, ಅಮೆರಿಕದ ಆರು ಕತೆಗಳು, ಇಟಾಲಿಯನ್ ಬರಹಗಾರ ಇನ್ಯತ್ಸಿಯೋನ ಅನುವಾದ ‘ಘಂಟಮಾರಾ’, ಆರ್ಥರ್ ಕ್ಲೋಸರನ ಅನುವಾದ ‘ನಡುಹಗಲಿನಲ್ಲಿ ಕಗ್ಗತ್ತಲೆ’, ಲಕ್ಮೀನಾರಾಯಣ ಆಚಾರ್ಯರಜೊತೆಗೂಡಿ ಅಲೆಕ್ಸಿಸ್ ಕೆರಲ್ ಅವರ ಅನುವಾದ ‘ಮ್ಯಾನ್ ದ ಅನ್ ನೋನ್’ ಮುಂತಾದವು ಕು. ಶಿ. ಹರಿದಾಸ ಭಟ್ಟರ ಪ್ರಮುಖ ಭಾಷಾಂತರ ಕೃತಿಗಳು.
ಕು.ಶಿ.ಹರಿದಾಸ ಭಟ್ಟರು ಬರೆದ ಕೆ.ಕೆ.ಹೆಬ್ಬಾರ ರವರ ಜೀವನ ಚರಿತ್ರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 1988ನೆಯ ಸಾಲಿನ ಬಹುಮಾನ ಲಭಿಸಿತು. ಇದಲ್ಲದೆ 1985ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 86ರಲ್ಲಿ ಫಿನ್‌ಲ್ಯಾಂಡ್‌ಪ್ರಶಸ್ತಿ ಹಾಗೂ 1989ರಲ್ಲಿ ಪ್ರತಿಷ್ಠಿತ ವಿಶ್ವ ಮಾನವ ಪ್ರಶಸ್ತಿ ಮುಂತಾದ ಗೌರವಗಳು ಕೂಡಾ ಭಟ್ಟರಿಗೆ ಸಂದಿದ್ದವು.
ಈ ಮಹಾನ್ ಸಾಂಸ್ಕೃತಿಕ ಮಹಾನುಭಾವರು ಆಗಸ್ಟ್ 2000ದಲ್ಲಿ ಈ ಲೋಕವನ್ನಗಲಿದರು. ಅವರು ಉಳಿಸಿ ಹೋಗಿರುವ ಸಾಂಸ್ಕೃತಿಕ ಸೌಗಂಧ ಚಿರಂತನವೆನಿಸಿದೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಾಕಿಸ್ತಾನದ 'ಟೆಸ್ಟ್ ಫೈರ್ಸ್' ಕ್ಷಿಪಣಿ, ಗುರಿ ತಲುಪಲು ವಿಫಲವಾಗಿದೆ, ಸಿಂಧ್ನಲ್ಲಿ ಇಳಿದಿದೆ!

Sat Mar 19 , 2022
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜಮ್‌ಶೋರೊ ನಿವಾಸಿಗಳು ಗುರುವಾರ ಅಪರಿಚಿತ ಹಾರುವ ವಸ್ತುವೊಂದು ಆಕಾಶದಿಂದ ಕಾಂಟ್ರಾಲ್‌ನೊಂದಿಗೆ ಬೀಳುವುದನ್ನು ಗಮನಿಸಿದ್ದಾರೆ ಎಂದು ವರದಿ ಮಾಡಿದೆ. ಇದು ರಾಕೆಟ್ ಅಥವಾ ಕ್ಷಿಪಣಿಯನ್ನು ಹೋಲುತ್ತದೆ ಎಂದು ಪಾಕಿಸ್ತಾನ ಮೂಲದ ಸುದ್ದಿವಾಹಿನಿಗಳನ್ನು ಉಲ್ಲೇಖಿಸಿ ವರದಿ ಹೇಳಿದೆ. ಪಾಕಿಸ್ತಾನ ಮೂಲದ ರಕ್ಷಣಾ ವಿಶ್ಲೇಷಕರು, ಸುದ್ದಿ ಸಂಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮಗಳ ವರದಿಗಳನ್ನು ಉಲ್ಲೇಖಿಸಿ ಈ ವಸ್ತುವು ಕ್ಷಿಪಣಿ ಎಂದು ಊಹಿಸಲಾಗಿದೆ, ಇದು ಸಿಂಧ್ ಪರೀಕ್ಷಾ ಶ್ರೇಣಿಯಿಂದ ಪಾಕಿಸ್ತಾನದಿಂದ ಪರೀಕ್ಷೆಗೆ […]

Advertisement

Wordpress Social Share Plugin powered by Ultimatelysocial