ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ

ಅರಣ್ಯಪರ್ವ – ಹತ್ತೊಂಬತ್ತನೆಯ ಸಂಧಿ
ರಾಯ್ದಳವನು ಮುರಿದು ಕೌರವ
ರಾಯನನುಜರು ಶೈತ ಗಗನಕೆ
ಹಾಯಿದನು ಗಂಧರ್ವಪತಿ ಸುರಪತಿಯ ನೇಮದಲಿ
ಕೇಳು ಜನಮೇಜಯ ಧರಿತ್ರೀ
ಪಾಲ ವನಪಾಲಕರ ಜಗಳದೊ
ಳಾಳು ನೊಂದುದು ಧರೆಗೆ ಬಿದ್ದುದು ತೋಟಿ ತೋಹಿನಲಿ
ಆಲಿಗಳ ಕೀಳ್ನೋಟದೊಲಹಿನ
ಮೌಳಿಯುಬ್ಬೆಯ ಸುಯ್ಲುದುಗುಡದ
ಜಾಳಿಗೆಯ ಜಡಮನದಲಿದ್ದನು ಕೌರವರ ರಾಯ ೧
ಜೀಯ ದುಗುಡವಿದೇಕೆ ದಿವಿಜರ
ರಾಯ ಶಿಖಿ ಯಮ ನಿರುತಿ ಜಲಧಿಪ
ವಾಯು ಧನದ ಶಿವಾದಿಗಳ ಸಾಹಸಕೆ ಮೂವಡಿಯ
ರಾಯ ಭಟರಿದೆ ನೇಮಿಸಾ ಸುರ
ರಾಯನೂರಿನ ಹಾಡುಗರ ಹುಲು
ನಾಯಕರಿಗಿನಿತೇಕೆ ಖತಿ ಬೆಸಸೆಂದನಾ ಕರ್ಣ ೨
ನೇಮವಾಯಿತು ಸುಭಟರೊಳಗೆ ಸ
ನಾಮರೆದ್ದರು ಕರ್ಣ ಸೌಬಲ
ಭೂಮಿಪತಿಯನುಜಾತ ಬಾಹ್ಲಿಕ ಶಲ್ಯನಂದನರು
ಸೋಮದತ್ತನ ಮಗ ಕಳಿಂಗ ಸು
ಧಾಮ ಚಿತ್ರ ಮಹಾರಥಾದಿಮ
ಹಾಮಹಿಮರನುವಾಯ್ತು ಗಜಹಯರಥನಿಕಾಯದಲಿ ೩
ನೂಕಿದರು ಮುಂಗುಡಿಯವರು ಬನ
ದಾಕೆಯಲಿ ಹೊಯ್ದರು ವಿರೋಧಿ ದಿ
ವೌಕಸರನಿಕ್ಕಿದರು ಸಿಕ್ಕಿದರುರುವ ಸಬಳದಲಿ
ಆಕೆವಾಳರು ಕರ್ಣ ಶಕುನಿಗ
ಳೇಕೆ ನಿಲುವರು ಬಿರಿದು ಪಾಡಿನ
ನೇಕ ಭಟರೊಳಹೊಕ್ಕು ತಿವಿದರು ಬೆರಸಿ ಸುರಬಲವ ೪
ಮತ್ತೆ ಮುರಿದುದು ದೇವಬಲ ಬೆಂ
ಬತ್ತಿ ತಿವಿದರು ಕೌರವನ ಭಟ
ರೆತ್ತಿ ಹಾಯ್ಕಿದರದಟ ಗಂಧರ್ವರ ಭಟ ವ್ರಜವ
ತೆತ್ತಿಸಿದ ಸರಳೇರಿ ಸುರಿಗರು
ಳೊತ್ತುಗೈಗಳ ತಾಳಿಗೆಯ ತಲೆ
ಹೊತ್ತು ರಕ್ತದ ರಹಿಯಲೋಡಿತು ಸೇನೆ ಸುರಪುರಕೆ ೫
ಹೊಯ್ಯಲಾದುದು ಚಿತ್ರಸೇನನ
ಬಯ್ಯಲೇತಕೆ ಬೇರೆಗಾಯದ
ಮೈಯಬಿಸುಟಾಯುಧದ ಬೆನ್ನಲಿ ಬಿಟ್ಟಮಂಡೆಗಳ
ಸುಯ್ಯ ಬಹಳದ ಭಟರು ತೊದಳಿಸು
ತೊಯ್ಯನೆಂದರು ಜೀಯ ಕರ್ಣನ
ಕೈಯಲಮರರ ಜೀವವಿದೆ ಜಾರುವುದು ಹಿತ ನಿಮಗೆ ೬
ಸುರಪನಾ ನುಡಿಗೇಳಿ ಶಿವ ಶಿವ
ನರರ ಕೈಯಲಿ ಘಾಸಿಯಾದರೆ
ಸುರರೆನುತ್ತವೆ ಚಿತ್ರಸೇನನ ನೋಡಲವನಂದು
ಅರಸ ನೇಮವೆ ತನಗೆ ತಂದಾ
ಕುರುಪತಿಯನೊಡಹುಟ್ಟಿದರ ಸಹಿ
ತೊರಗಿಸುವೆ ನಿಮ್ಮಡಿಯ ಚರಣದೊಳೆನುತ ಬೀಳ್ಕೊಂಡ ೭
ಕಳವಳಿಸದಿರಿ ಧನುವ ತಾ ಹೆ
ಬ್ಬಲವ ಕರೆಕರೆ ಹುಲುಮನುಷ್ಯರ
ಬಲುಹು ಗಡ ಬಯಲಾಯ್ತು ಗಡ ಗಂಧರ್ವರಾಟೋಪ
ನೆಲದೊಳೊಕ್ಕೊಡೆ ಶೋಣಿತಕೆ ರಾ
ಟಳವ ಹಿಡಿ ಬರಹೇಳು ಶಾಕಿನಿ
ಕುಲವ ಡಾಕಿನಿಯರನು ನೆತ್ತರಗುಡುಹಿಗೈನೆಯರ ೮
ಏನ ಹೇಳುವೆನರಸ ದಿವಿಜರ
ಸೇನೆಯಲ್ಲಾ ಛತ್ರ ಚಮರವಿ
ತಾನದಲಿ ನಭವಿಲ್ಲ ನೆಗಹಿದ ಸಬಳ ಸೆಲ್ಲಹಕೆ
ಮೈನುಸುಳ ಕಾಣೆನು ಸಮೀರನ
ಭಾನು ಕಿರಣದ ಸುಳಿವನೀಶ್ವರ
ತಾನೆ ಬಲ್ಲನು ಶಿವ ಶಿವೆನೆ ಜೋಡಿಸಿತು ನಿಮಿಷದಲಿ ೯
ತಿನ್ನಡಗ ಕೊಯ್ನೆಣನ ಮನುಜರ
ಬೆನ್ನಲುಗಿ ತನಿಗರುಳನಕಟಾ
ಕುನ್ನಿಗಳಿರುದ್ಯಾನವನು ನೆರೆಕೆಡಿಸಿ ಕಳೆದಿರಲಾ
ಮುನ್ನ ಮುರಿದವರಾರೆನುತಲಾ
ಪನ್ನರನು ತೊಲಗಿಸುತ ಸುರಪನ
ಮನ್ನಣೆಯ ಗಂಧರ್ವಬಲ ಬೆರೆಸಿದುದು ಪರಬಲವ ೧೦
ಹೊಯ್ದರೊಳಬಿದ್ದವರ ಮುಂದಲೆ
ವಾಯ್ದು ತಿವಿದರು ಮುರಿದ ಮೂಳೆಯ
ಹಾಯ್ದ ಕರುಳಿನ ಮಿದುಳ ಜೋಡಿನ ಬಸಿವ ಶೋಣಿತದ
ಕೈದುಗಳ ಖಣಿಖಟಿಲ ಹೊಯ್ಲಿನ
ಬಾಯ್ದಣಿಯ ಬೈಗುಳಿನಲುಭಯದ
ಕೈದುಗಾರರು ನೀಗಿದರು ನಿಜಪತಿಯ ಹಣ ಋಣವ ೧೧
ಬಿಟ್ಟ ಸೂಟಿಯ ಕುದುರೆಗಾರರ
ನಿಟ್ಟೆಡೆಯಲೌಕುವ ಮದೇಭದ
ಥಟ್ಟುಗಳನುಬ್ಬೆದ್ದು ಗಗನವನಡರ್ವ ತೇರುಗಳ
ಬಿಟ್ಟನಾರಾಚದ ವಿಘಾತದೊ
ಳಿಟ್ಟ ಸೆಲ್ಲೆಹ ಸಬಳ ಬಿಟ್ಟೇ
ರಿಟ್ಟೆಗಳ ಮಳೆ ನಾದಿದವು ಕಾದಿದರು ಚೂಣಿಯಲಿ ೧೨
ಮುರಿದು ಚೂಣಿಯ ಭಟರು ತಂದರು
ಬಿರುಸಿ ನರನೆಲೆಗಿದು ನಿಹಾರದೊ
ಳಿರಿದು ನೆರೆ ಸೊಪ್ಪಾಗಿ ಸಾರಿತು ಸರಿದು ಹಿನ್ನೆಲೆಗೆ
ಸುರಿಯಲರುಣಾಂಬುಗಳ ನದಿ
ಹೊರಮರಿಯೆ ದೊರೆಗಿಕ್ಕಿದರು ಬೊ
ಬ್ಬಿರಿದಿರವ ಧನ ಧಟ್ಟಿಸಿತು ನಿಸ್ಸಾಳಹತಿ ದನಿಯ ೧೩
ನೂಕಿದರೆ ಕರ್ಣಾದಿ ದೊರೆಗಳ
ಡಾಕನಾನುವರಾರು ದಿವಿಜಾ
ನೀಕದಲಿ ಧಕ್ಕಡರು ದೂವಾಳಿಸಿತು ಯಮಪುರಕೆ
ತೋಕಿದವು ನಾರಾಚ ದಶದಿಶೆ
ಯೋಕರಿಸಿದವೊ ಸರಳನೆನೆ ಸ
ವ್ಯಾಕುಳರ ಹಿಂದಿಕ್ಕಿ ಹಿಂಡಿದವಸುವನತಿಬಲರ ೧೪
ಮುರಿದುದಾ ಗಂಧರ್ವ ಬಲ ಹೊ
ಕ್ಕಿರಿದು ಕೌರವರಾಯ ದಳದಲಿ
ಕುರುಹಿನವರಪ್ಪಿದರು ಖಚರೀಜನದ ಕುಚಯುಗವ
ಉರುಬಿತರನೆಲೆ ಚಿತ್ರಸೇನನ
ಸೆರಗ ಹಿಡಿದರು ಸಮರ್ ಅಹೊಯ್ ಹೊಯ್
ಕುರಿಮನದ ಕುನ್ನಿಗಳನೆನುತೇರಿದನು ಮಣಿರಥವ ೧೫
ಧನುವ ಕೊಂಡನು ತನ್ನ ತೂಕದ
ವಿನುತ ಭಟರೊಗ್ಗಾಯ್ತು ವಾದ್ಯ
ಧ್ವನಿಯ ಧಟ್ಟಣೆ ಧಾತುಗೆಡಿಸಿತು ಜಗದ ಜೋಡಿಗಳ
ಮನುಜರಿವದಿರ ಮುರಿದು ಬಹ ಭಟ
ರನಿಮಿಷರು ಬಯಲಾಯಿತಕಟಾ
ದನುಜರಿಪುಗಳ ದೆಸೆಗಳಳಿದವೆ ಶಿವ ಶಿವಾಯೆಂದ ೧೬
ನೂಕಿದನು ಗಂಧರ್ವ ಸೇನೆಯೊ
ಳಾಕೆವಾಳರ ಮುಂದೆ ತಾನವಿ
ವೇಕಿಯೇ ದೊರೆತನದಲಿದ್ದನು ಸಕಲ ದಳ ಸಹಿತ
ಸೋಕಬಹುದೇ ಕರ್ಣ ಕೆಲಬಲ
ದಾಕೆವಾಳರ ಕೊಂಬನೇ ನೆರೆ
ತೋಕಿದನು ಗಂಧರ್ವ ಬಲಜಲಧಿಯನು ನಿಮಿಷದಲಿ ೧೭
ಗಾಯವಡೆದರು ಕೆಲರು ನೆಲದಲಿ
ಲಾಯ ನೀಡಿತು ಕೆಲಬರಿಗೆ ಪೂ
ರಾಯದೆಸುಗೆಗೆ ಹಸುಗೆಯಾದರು ಭಟರು ದೆಸೆದೆಸೆಗೆ
ಆಯುಧದ ಮೆದೆಯೊಡ್ಡಿತಾಕ
ರ್ಣಾಯತಾಸ್ತ್ರವ ಕೆಣಕಿ ಖೇಚರ
ರಾಯದಳ ನುಗ್ಗಾಯ್ತು ದೊರೆಹೊಕ್ಕನು ಮಹಾಹವವ ೧೮
ತೊಲಗು ಮರ್ತ್ಯರಿಗೀಸು ದರ್ಪದ
ಗೆಲವುತನವೇ ನಿಮಿಷ ಸೈರಿಸು
ಹುಲುಭಟರ ಹುರಿದೀ ಪ್ರತಾಪಾನಳನ ಸೆಗಳಿನಲಿ
ಅಳುಕುವುದೆ ಖಚರೇಂದ್ರ ಜಲಧರ
ನೆಲವೊ ತೋರಾ ಚಾಪವಿದ್ಯಾ
ಕಲೆಯ ನೋಡುವೆನೆನುತ ಬೊಬ್ಬಿರಿದೆಚ್ಚನಿನಸುತನ ೧೯
ಹೇಳಬಹುದೆ ಸುರೇಂದ್ರಭವನದ
ಸೂಳೆಯರ ಸೂಳಾಯತಾ ವಾ
ಚಾಳತನಕೇನೊರೆವೆ ನಟರಿಗೆ ಮುಖ್ಯವಿದ್ಯೆಯಲ
ಆಳುತನದಂಗದಲಿ ಬಹೊಡೆ ಶ
ರಾಳಿಯಲಿ ಮಾತಾಡೆನುತ ಕೆಂ
ಗೋಲಿನಲಿ ಸಲೆ ಹೂಳಿದನು ಉದ್ಯಾನವನ ತಳವ ೨೦
ಪೂತು ಮಝ ಮರ್ತ್ಯರಲಿ ಬಿಲ್ವಿ
ದ್ಯಾತಿಶಯ ಕಿರಿದುಂಟಲಾ ತಾ
ನೀತ ಕರ್ಣನೆ ಕೌರವೇಂದ್ರಗೆ ಬೇಹ ಭಟನಿವನೆ
ಆತುಕೊಳ್ಳಾದಡೆಯೆನುತ ದಿಗು
ಜಾತವಂಬಿನಲಡಗೆರಿಪುಶರ
ಜಾತವನು ಹರೆಗಡಿದು ಕರ್ಣನ ಧನುವ ಖಂಡಿಸಿದ ೨೧
ಇದು ಶರಾವಳಿಯಹುದು ಸರಿಗಮ
ಪದನಿಗಳ ಸರವಲ್ಲಲಾ ಸೇ
ರಿದ ಧನುರ್ವಿದ್ಯಾತಿಶಯ ಯೋಗ್ಯತೆ ವಿಶೇಷವಲ
ಇದು ಮನುಷ್ಯರ ಕಲುಹೆ ನೋಡೆನು
ತೊದರಿ ಹೊಸ ಚಾಪದಲಿ ಕಲಿ ಚಿ
ಮ್ಮಿದನು ಚಾಮೀಕರ ಸುರೇಖಾವಳಿ ಶಿಲೀಮುಖವ ೨೨
ಕಡಿದು ಗಂಧರ್ವನ ಶರೌಘವ
ನಡಸಿ ನೆಟ್ಟವು ಕರ್ಣಶರ ಸೈ
ಹೆಡಹಿದವು ಕಿಂಪುರುಷ ಗುಹ್ಯಕ ಯಕ್ಷರಾಕ್ಷಸರ
ಹೊಡಕರಿಸಿ ಹೊದರೆದ್ದು ಬಲ ಸಂ
ಗಡಸಿ ತಲೆವರಿಗೆಯಲಿ ಕರ್ಣನ
ಬಿಡು ಸರಳ ಬೀದಿಯಲಿ ಬೆದರದೆ ನೂಕಿತಳವಿಯಲಿ ೨೩
ಸಂಧಿಸಿತು ಪಡೆ ಚಿತ್ರಸೇನನ
ಹಿಂದೆ ನಿಲಿಸಿ ವಿರೋಧಿಶರ ಹತಿ
ಗಂದವಳಿಯದೆ ಮುತ್ತಿದುದು ಕಟ್ಟಲವಿಯಲಿ ರಥವ
ಮುಂದುಗೆಟ್ಟನು ಕರ್ಣನೆನೆ ಕೈ
ಗುಂದಿದರು ಸೌಬಲ ಸುಯೋಧನ
ನಂದನರು ದುಶ್ಯಾಸನಾದಿ ಸಮಸ್ತ ಪರಿವಾರ ೨೪
ನೊರಜಿನೆರಕೆಯ ಗಾಳಿಯಲಿ ಹೆ
ಮ್ಮರದ ಮೊದಲಳುಕುವುದೆ ಘಡಕಾ
ತರಿಸದಿರಿ ಕೌರವರೆನುತ ಕಲಿಕರ್ಣ ಬೊಬ್ಬಿರಿದು
ಶರನಿಧಿಗೆ ಬಡಬಾಗ್ನಿ ಮುನಿವವೊ
ಲುರವಣಿಪ ಹೆಬ್ಬಲವನೊಂದೇ
ಸರಳಿನಲಿ ಸವರಿದನು ಸುಳಿಸಿದನೌಕಿ ನಿಜರಥವ ೨೫
ಗೆದ್ದುದೇ ರಣವೆಲವೊ ದಿವಿಜರ
ದೊದ್ದೆಯಲಿ ಸೂಳೆಯರ ಜಾತಿಯ
ಬಿದ್ದಿನರ ವೀಳೆಯದ ಬದೆಗರು ಭಟರ ಮೋಡಿಯಲಿ
ಹೊದ್ದಿದರೆ ಹುರುಳಹುದೆ ಭಯರಸ
ದದ್ದುಗೆಯ ಮಂಜಿಡಿಕೆ ಮನದವ
ರಿದ್ದು ಫಲವೇನೆನುತ ಕೈ ಮಾಡಿದನು ಕಲಿ ಕರ್ಣ ೨೬
ನೊಂದುದಾತನ ಪೊರೆಯ ಸುಭಟರ
ಸಂದಣಿಗಳಿಕ್ಕಲಿಸಿ ಬಿದ್ದುದು
ಮುಂದೆ ಬಲು ಗಂಧರ್ವಬಲವಿನಸುತನ ಶರಹತಿಗೆ
ಒಂದು ನಿಮಿಷಕೆ ಮತ್ತೆ ಪಡಿಬಲ
ಬಂದುದಗಣಿತ ಯಕ್ಷರಾಕ್ಷಸ
ವೃಂದ ಮುಕ್ಕುರುಕಿದುದು ಕರ್ಣನ ರಥದ ಮುಂಕಣಿಯ ೨೭
ಅರಸ ಕೇಳೀಚೆಯಲಿ ಕೌರವ
ರರಸ ಬಂದನು ಸರ್ವದಳ ಸಹಿ
ತೆರಡು ಬಲದುಬ್ಬರದ ಬೊಬ್ಬೆಗೆ ಬಿರಿದುದವನಿತಳ
ನರ ವೃಕೋದರ ನಕುಲ ಸಹದೇ
ವರು ಕುತೂಹಲದಿಂದ ಸುತ್ತಣ
ಮೊರಡಿಗಳ ಮೇಲಿದ್ದು ನೋಡಿದರಾ ಮಹಾಹವವ ೨೮
ತೆಗೆಸಿದನು ನೃಪನಿನಸುತನ ಮು
ತ್ತಿಗೆಯನೆರಡೊಡ್ಡಿನಲಿ ಸೂಸುವ
ಹೊಗರಗಣೆಗಳ ಹೊಯ್ವಡಾಯುಧ ಕಡಿವ ಪರಶುಗಳ
ಬಗಿವ ಸಬಳದ ಲೋಟಿಸುವ ಲೌ
ಡಿಗಳ ಚಿಮ್ಮುವ ಸುರಗಿಗಳ ಕಾ
ಳಗದ ರೌದ್ರಾಟೋಪವಂಜಿಸಿತಮರರಾಲಿಗಳ ೨೯
ನೂಕಿದುದು ತೋಪಿನ ತುದಿಗೆ ಮಗು
ಳೌಕಿದುದು ಪಾಳೆಯಕೆ ಮುರಿದು ದಿ
ವೌಕಸರು ಜಾರುವರು ಜೋಡಿಸಿ ಮತ್ತೆ ಕುರುಬಲವ
ತೋಕುವರು ಗಂಧರ್ವರು ಭಯಾ
ನೀಕದೋಹರಿ ಸಾಹರಿಯ ಸ
ವ್ಯಾಕುಲರ ನೀಕ್ಷಿಸುತಲಿದ್ದುದು ಪವನಜಾದಿಗಳು ೩೦
ಈಸು ಕೊಂಡಾಡಿದರೆ ಸುರರುಪ
ಹಾಸ ಮಾಡುವರೆಮ್ಮ ನೆನುತ ಮ
ಹಾಸಗರ್ವರು ಚಿತ್ರಸೇನನ ಮನ್ನಣೆಯ ಭಟರು
ಪಾಶ ಚಕ್ರ ಮುಸುಂಡಿ ಪರಿಘ
ಪ್ರಾಸ ಪರಶು ಕೈಪಾಣ ಸಬಳ ಶ
ರಾಸನಾದಿಯ ಕೈದುಗಾರರು ಕದನಕನುವಾಯ್ತು ೩೧
ಜೋಡುಮಾಡಿತು ಖಚರ ಬಲ ಕೈ
ಮಾಡಿ ಕವಿದುದು ಚಿತ್ರಸೇನನ
ಜೋಡಿಯಲಿ ಜರ್ಝಾರರಿರಿದರು ಮುಂದೆ ಮುಂಗುಡಿಯ
ಓಡಿದರೆ ಹಾವಿಂಗೆ ಹದ್ದಿನ
ಕೂಡೆ ಮರುಕವೆ ಫಡಯೆನುತ ಕೈ
ಮಾಡಿದರು ರಿಪುಭಟರು ನಿಂದರು ನಿಮಿಷ ಮಾತ್ರದಲಿ ೩೨
ಗಿಳಿಯ ಹಿಂಡಿನ ಮೇಲೆ ಗಿಡುಗನ
ಬಳಗ ಕವಿವಂದದಲಿ ಸೂಟಿಯೊ
ಳಳವಿಗೊಡ್ಡಿನ ಚಾತುರಂಗವನಿಕ್ಕಡಿಯ ಮಾಡಿ
ಎಲೆ ಸುಯೋಧನ ಬೀಳು ಕೈದುವ
ನಿಳುಹಿ ಖೇಚರರಾಯನಂಘ್ರಿಯೊ
ಳೆಲವೊ ರವಿಸುತ ಹೋಗೆನುತ ಹೊಕ್ಕಿರಿದರುರವಣಿಸಿ ೩೩
ಹೊಡಕರಿಸಿ ಹೊದರೆದ್ದು ಬಲ ಸಂ
ಗಡಿಸಿ ತಲೆವರಿಗೆಯಲಿ ಕರ್ಣನ
ಬಿಡುಸರಳ ಬೆದರಿಕೆಗೆ ಬೆದರದೆ ನೂಕಿತಳವಿಯಲಿ
ಫಡ ಸುಯೋಧನ ತೊಲಗು ಕರ್ಣನ
ಕಡುಹಿನಲಿ ಫಲವೇನು ನಿನ್ನಯ
ಪಡೆಯು ಬಂದರೆ ಕೆಡದೆಯೆಂದುದು ಕೂಡೆ ಸುರಸೇನೆ ೩೪
ಗರುವರೇ ನೀವೆಲವೊ ಸುರಪನ
ಪುರದ ನಟ್ಟವಿಗರು ಸುಯೋಧನ
ನರಮನೆಯನಟ್ಟವಿಗಳಿಗೆ ಪಾಡಹಿರಿ ತುಡುಕುವೊಡೆ
ಅರಸು ಪರಿಯಂತೇಕೆ ನಿಮಗೆನು
ತರಿಭಟರಿಗಾಗ್ನೇಯ ವಾರುಣ
ನಿರುತಿ ಮೊದಲಾದಸ್ತ್ರಚಯವನು ಕವಿಸಿದನು ಕರ್ಣ ೩೫
ಸವೆದವಿನಸುತನಂಬು ಖೇಚರ
ನವಗಡಿಸಿ ಕವಿದೆಚ್ಚನೀತನ
ಸವಗ ಸೀಸಕ ಜೋಡು ತೊಟ್ಟವು ಸರಳ ಜೋಡುಗಳ
ಕವಿದುದೆಡ ಬಲವಂಕದಲಿ ಸುರ
ನಿವಹ ಸೂಟಿಯ ಸರಳ ಸೋನೆಯ
ಲವಗಡಿಸಿತಡಿಗಡಿಗೆ ಕರ್ಣನ ರಥದ ವಾಜಿಗಳು ೩೬
ಸವೆದವಿನಸುತನಂಬು ಖೇಚರ
ನವಗಡಿಸಿ ಕವಿದೆಚ್ಚನೀತನ
ಸವಗ ಸೀಸಕ ಜೋಡು ತೊಟ್ಟವು ಸರಳ ಜೋಡುಗಳ
ಕವಿದುದೆಡ ಬಲವಂಕದಲಿ ಸುರ
ನಿವಹ ಸೂಟಿಯ ಸರಳ ಸೋನೆಯ
ಲವಗಡಿಸಿತಡಿಗಡಿಗೆ ಕರ್ಣನ ರಥದ ವಾಜಿಗಳು ೩೭
ಜೋಡು ಹರಿದುದು ಸೀಸಕದ ದಡಿ
ಬೀಡೆ ಬಿರಿದುದು ತಲೆಯ ಚಿಪ್ಪಿನ
ಜೋಡು ಜರಿದುದು ಮನಕೆ ಸುರಿದುದು ಸೊಗಡು ರಣರಸದ
ಖೋಡಿ ಖೊಪ್ಪರಿಸಿದುದು ಧೈರ್ಯವ
ನೀಡಿರಿದುದಪದೆಸೆ ವಿಟಾಳಿಸಿ
ಖೇಡತನ ಭುಲ್ಲವಿಸುತಿರ್ದುದು ಭಾನುನಂದನನ ೩೮
ಮತ್ತೆಕೊಂಡನು ಬಿಲು ಸರಳ ನಭ
ಕೊತ್ತಿದನು ರಣಭಯವನಹಿತನ
ಕುತ್ತಿದನು ಕಣ್ಣಿನಲಿ ಕಡಿದನು ಮನದೊಳರಿಭಟನ
ಕೆತ್ತಿದನು ಕೂರಲಗಿನಲಿ ಮುಳು
ಮುತ್ತ ಹೂತಂದದಲಿ ಹುದುಗಿದ
ನೆತ್ತರಿನ ನೆಣವಸೆಯೊಳೆಸೆದನು ರಥದೊಳಾ ಖಚರ ೩೯
ನೊಂದದುಬ್ಬಿತು ದರ್ಪಶಿಖಿ ಖತಿ
ಯಿಂದ ಮನದುಬ್ಬಿನಲಿ ಘಾತದ
ಕಂದುಕದವೋಲ್ ಕುಣಿದುದಂತಃಖೇದ ಕೊಬ್ಬಿನಲಿ
ನೊಂದುದಿನಿಸಿಲ್ಲಕಟ ದೈತ್ಯರ
ದಂದುಗದಲಾವಿಮ್ದು ಮರ್ತ್ಯರು
ಬಂದಿವಿಡಿದರೆ ಬಲುಹನೆನುತೋರಂತೆ ಚಿಂತಿಸಿದ ೪೦
ಖತಿಯಲುಗಿದನು ದಿವ್ಯ ಬಾಣ
ಪ್ರತತಿಯನು ರಥಸೂತ ಹಯ ಸಂ
ತತಿ ಶರಾಸನ ಕೇತು ದಂಡಚ್ಛತ್ರ ಚಾಮರವ
ಹುತವಹನೊಳೊಟ್ಟಿದನು ಸಮರ
ವ್ಯತಿಕರದೊಳಾಗ್ನೇಯ ಶರ ಚಿ
ಮ್ಮಿತು ಛಡಾಳಿಸಿ ಕೆಂಡಗೆದರಲು ಕರ್ಣ ಬೆರಗಾದ ೪೧
ವಿರಥನಾದನು ಹಲಗೆ ಖಡ್ಗದ
ಲರಿಭಟನ ಪಡಿಮುಖಕೆ ಚಿಮ್ಮಿದ
ನೆರಡನೊಂದಂಬಿನಲಿ ಕಡಿದನು ಜಡಿದನಿನಸುತನ
ತಿರುಗಿ ಹಾಯ್ದನು ಕರ್ಣನಾತನ
ಮುರಿವ ಕಂಡು ವಿಕರ್ಣ ತನ್ನಯ
ವರ ರಥವ ಚಾಚಿದನು ಬೋಳೈಸಿದನು ಭಾನುಜನ ೪೨
ಪೈಸರಿಸಿತೋ ಕುರು ಚತುರ್ಬಲ
ಘಾಸಿಯಾದನು ಕರ್ನನಿದು ದೊರೆ
ಗೈಸಲೇ ದುಮ್ಮಾನವೆನುತಲ್ಲಲ್ಲಿ ಕುರುಸೇನೆ
ಓಸರಿಸಿದುದು ಸಮರಮುಖದಲಿ
ಸೂಸಿದರು ಸಮರಥರು ಸೋಲವ
ನಾ ಸುಯೋಧನ ನಗುತ ಕಂಡನು ನೋಡಿ ಕೆಲಬಲನ ೪೩
ಅವನಿಪನ ಮೊಗಸನ್ನೆಯಲಿ ಸೂ
ಳವಿಸಿದವು ನಿಸ್ಸಾಳಕೋಟಿಗ
ಳವಚಿದುದು ಬಹುವಿಧದ ವಾದ್ಯಧ್ವನಿ ದಿಶಾಮುಖವ
ತವತವಗೆ ಧುರ ತೋರಹತ್ತರು
ತವಕಿಸುತ ಹುರಿಯೇರಿದರು ಕೌ
ರವರು ಕರ್ಣನ ಹರಿಬದಾಹವವೆನಗೆ ತನಗೆನುತ ೪೪
ಮುರಿದ ಬಲ ಸಂವರಿಸಿ ಪಡಿಮುಖ
ಕುರುಬಿದುದು ದುರ್ಯೋಧನಾನುನ
ರರಸಿದರು ಗಂಧರ್ವನಾವೆಡೆ ತೋರು ತೋರೆನುತ
ತರುಬುವುದು ಜಯವೊಮ್ಮೆ ಮನದಲಿ
ಕರುಬುವುದು ಮತ್ತೊಮ್ಮೆ ತಪ್ಪೇ
ನಿರಿದಸಹಸವ ತೋರೆನುತ ಬೆರಸಿದರು ಪರಬಲವ ೪೫
ಅರಸನನುಜರೆ ನೀವು ಕರ್ಣನ
ಹರಿಬದವರೇ ಹರಹರೆಮಗಿ
ನ್ನರಿದಲೈ ನಿಮಗೀಸು ಖತಿ ಝೋಂಪಿಸಿತು ಬಳಿಕೇನು
ತರಹರವು ತಮಗಿಲ್ಲಲಾ ಪೂ
ತುರೆಯೆನುತ ಪಡಿತಳಿಸಿ ಗಂಧ
ರ್ವರ ಚಮೂಪರು ನೂಕಿದರು ತರುಬಿದರು ಪರಬಲವ ೪೬
ಎಚ್ಚರಿರಿದರು ಹೊಯ್ದರಿಟ್ಟರು
ಚುಚ್ಚಿದರು ಸೀಳಿದರು ನೂಕಿದ
ನಿಚ್ಚಟರ ಸೇದಿದರು ದಡಿವಲೆ ಕಣ್ಣಿವಲೆಗಳಲಿ
ಕೊಚ್ಚಿದರು ನುಗ್ಗಿದರು ಕೊಯಿದರು
ನುಚ್ಚುನುರಿ ಮಾಡಿದರು ಹರಿಬಕೆ
ಹೆಚ್ಚಿ ಹೊಗುವ ಮಹೀಶನನುಜರ ಮನ್ನಣೆಯ ಭಟರ ೪೭
ಗಾಯವಡೆಯದರಿಲ್ಲ ಸಾಯದೆ
ನೋಯದವರಿಲ್ಲೆರಡು ಬಲದಲಿ
ಬೀಯವಾದರು ಸುಭಟರೆನೆ ಗಂಧರ್ವಪತಿ ಮುಳಿದು
ರಾಯನನುಜರನಟ್ಟಿದನು ದೀ
ರ್ಘಾಯುವನು ಹಿಡಿದನು ವಿಕರ್ಣನ
ನೋಯಲೆಚ್ಚನು ಕೆದರಿದನು ಕೌರವ ಚತುರ್ಬಲವ ೪೮
ಫಡಯೆನುತ ಕುರುರಾಯನಾತನ
ಪಡಿಮುಖಕೆ ನೂಕಿದನು ಜೋಡಿಸಿ
ಜಡಿವ ನಿಸ್ಸಾಳಾಯತದ ಕಹಲೆಗಳ ಕಳಕಳದ
ಬಿಡುರಥದ ಧಟ್ಟಣೆಯ ಧಾಳಿಯ
ಕಡುಗುದುರೆಗಳ ನೆತ್ತಿಯಂಕುಶ
ದೆಡೆಯಘಟೆಯಾನೆಗಳ ದಳ ಸಂದಣಿಸಿತೊಗ್ಗಿನಲಿ ೪೯
ನುಗ್ಗನಿವ ಕೈಕೊಂಬನೇ ರಣ
ದಗ್ಗಳದ ಮೌಳಿಯಲಿ ಕದನದ
ಹುಗ್ಗಿಗರ ಸಾಕಿದನು ಶಾಕಿನಿ ಡಾಕಿನೀ ಜನವ
ಒಗ್ಗಿಕವಿದರನಿಂದ್ರಲೋಕದ
ಸುಗ್ಗಿಯಲಿ ಸೇರಿಸಿದನಾಹವ
ದುಗ್ಗಡವನೇನೆಂಬೆನೈ ಗಾಂಧರ್ವ ವಿಕ್ರಮದ ೫೦
ಮೀಟೆನಿಪ ಗಂಧರ್ವರೊಂದೇ
ಕೋಟಿ ಕವಿದುದು ಕುರುಬಲಕೆ ಪಡಿ
ಕೋಟೆಯಾದುದು ನೃಪತಿ ಸಿಲುಕಿದನವರ ವೇಡೆಯಲಿ
ದಾಟಿತರಸನ ಧೈರ್ಯ ಕೈದುಗ
ಳಾಟ ನಿಂದುದು ಕರದ ಹೊಯ್ಲಲಿ
ನೋಟಕರು ಘೋಳೆಂದರಿತ್ತಲು ಪಾಂಡವರ ವನದ ೫೧
ಮುತ್ತಿದರಿಬಲ ಜಾಲವನು ನಭ
ಕೊತ್ತಿ ದಿವ್ಯಾಸ್ತ್ರದಲಿ ಸೀಳಿದ
ನೆತ್ತ ಮುರಿದೋಡಿದರೆ ರಥವನು ಹರಿಸಿ ಬೇಗದಲಿ
ಒತ್ತಿ ಹರಿತಹ ರಥತುರಂಗಮ
ಮುತ್ತಿದಿಭಸಂಘಾತವನು ನೃಪ
ನೊತ್ತಿ ಕಡಿದನು ಹಯವ ಗಜರಥವುಳಿದ ಕಾಲಾಳ ೫೨
ಇತ್ತ ಕೌರವರಾಯ ರಥವನು
ಎತ್ತಿ ಬಿಟ್ಟನು ಖಚರರಾಯನು
ಸುತ್ತಣಿನ ಚತುರಂಗ ಸೇನೆಯನಸಮಬಾಣದಲಿ
ತೆತ್ತಿಗರ ಕರೆ ನಿನಗೆ ನೂಕದೆ
ನುತ್ತ ಶರಸಂಧಾನ ಚಯದಲಿ
ಮೆತ್ತಿದನು ಮೊನೆಗಣೆಗಳಲಿ ಖಚರೇಂದ್ರ ಕೈಮರೆಯ ೫೩
ಮುರಿದ ಬಲಗರಿಗಟ್ಟಿ ನೋಡಿತು
ಧರಣಿಪನ ಮುಂಗುಡಿಯಲೇರಿತು
ತುರಗ ಗಜ ರಥ ಹರಿಗೆ ಸಬಳ ಮುಸುಂಡಿ ಪರಿಘದಲಿ
ಉರುಬಿದನು ಖಚರೇಂದ್ರ ಕೌರವ
ರರಸನನು ಶಕುನಿ ಸೈಂಧವ
ರಿರದೆ ಹಿಂಗಿತು ಕೌರವೇಶ್ವರ ಸಿಲುಕಿದನು ಹಗೆಗೆ ೫೪
ಇಟ್ಟಣಿಸಿದರು ಮುಟ್ಟಿ ರಾಯನ
ನಟ್ಟಲೀಸದೆ ಕುರುಚತುರ್ಬಲ
ಹೊಟ್ಟುಗಳ ತೂರಿದರು ಹಿಡಿದರು ಕೌರವಾನುಜರ
ಮುಟ್ಟಿ ಬಂದುದು ಕೇಡು ರಾಯನ
ನಟ್ಟಿಹಿಡಿದುದು ದಿವಿಜ ಬಲ ಜಗ
ಜಟ್ಟಿ ಚಿತ್ರಾಂಗದನು ನೋಡಿದ ಕೌರವೇಶ್ವರನ ೫೫
ಹಯದ ಪಡಿವಾಘೆಯಲಿ ಬಾಹು
ದ್ವಯವ ಬಿಗಿದನು ತನ್ನ ರಥದಲಿ
ಜಯ ವಿಹೀನನ ನಿರಿಸಿದನು ಕುರುರಾಯ ವಲ್ಲಭನ
ಭಯ ಭರಿತ ದುಶ್ಯಾಸನನ ದು
ರ್ಜಯನ ಚಿತ್ರಾಂಗದ ವಿಕರ್ಣನ
ನಯವಿದೂರರ ತಂದರಿಪ್ಪತ್ತೈದು ಸಹಭವರ ೫೬
ಮುಟ್ಟದಿರಿ ಪರಿವಾರ ಕೈದುವ
ಕೊಟ್ಟು ಹೋಗಲಿ ದೊರೆಗಳಾದರ
ಬಿಟ್ಟವರಿಗಮರೇಂದ್ರನಾಣೆಯೆನುತ್ತ ಸಾರಿದರು
ಕೆಟ್ಟುದೀ ಕುರುಪತಿಯ ದಳ ಜಗ
ಜಟ್ಟಿಗಳು ಕರ್ಣಾದಿಗಳು ಮುಸು
ಕಿಟ್ಟು ಜಾರಿತು ಕಂಡದೆಸೆಗವನೀಶ ಕೇಳೆಂದ ೫೭
ಖಿನ್ನನಾದನು ಪಾರ್ಥನನಿಲಜ
ನುನ್ನತೋತ್ಸವನಾದನತಿ ಸಂ
ಪನ್ನ ಸಮ್ಮದರಾದರಾ ಮಾದ್ರೀಕುಮಾರಕರು
ಇನ್ನು ಪಾಂಡವರಾಜ್ಯಸಿರಿಯೆಮ
ಗಿನ್ನು ಲೇಸಹುದಕಟ ದೈವದ
ಗನ್ನಗತಕವೆಯೆನುತ ಹಿಗ್ಗಿತು ಮುನಿಜನಸ್ತೋಮ ೫೮
ಭಾವನವರರ್ತಿಯಲಿ ಜಲಕೇ
ಳೀವಿನೋದಕೆ ಬಂದು ಗಂಧ
ರ್ವಾವಳಿಯ ಕೇಳಿಯಲಿ ಚಿತ್ತೈಸಿದರಲಾಯೆನುತ
ದೇವಿಯರು ನಸುನಗುತ ಚಿತ್ತದ
ಚಾವಡಿಯಲೋಲೈಸಿಕೊಂಡರು
ಭೂವಳಯದೇಕಾಧಿಪತ್ಯದ ಸೌಖ್ಯ ಸಂಪದವ ೫೯
ಕೇಳಿದನು ಯಮಸೂನು ದುಗುಡವ
ತಾಳಿದನು ನಳನಹುಷ ಭರತ ನೃ
ಪಾಲ ಪಾರಂಪರೆಯಲುದಿಸಿದ ಸೋಮವಂಶದಲಿ
ಕೋಳುವೋದುದೆ ಕೀರ್ತಿಯೆಮ್ಮೀ
ಬಾಳಿಕೆಯ ಸುಡಲೆನುತ ಚಿಂತಾ
ಲೋಲನಿದ್ದನು ವೀರ ನಾರಾಯಣನ ನೆನೆಯುತ್ತ ೬೦
ಸಂಕ್ಷಿಪ್ತ ಭಾವ
ಗಂಧರ್ವರಿಗೂ ಕೌರವರಿಗೂ ಯುದ್ಧ. ದುರ್ಯೋಧನನ ಅಪಹರಣ.
ಯುದ್ಧ ಆರಂಭವಾಯಿತು. ಕರ್ಣ ಮುಂತಾದವರು ಮುನ್ನುಗ್ಗಿ ಗಂಧರ್ವರ ಪರಿವಾರವನ್ನು ಬಡಿದರು. ಒಂದು ಬಾರಿ ಅವರು ಗೆಲುವರು. ಮತ್ತೆ ಬಲಸಹಿತ ಬಂದು ಗಂಧರ್ವರು ಮುನ್ನುಗ್ಗುವರು. ಹೀಗೆಯೇ ಆಯಿತು. ಕೊನೆಯಲ್ಲಿ ಗಂದರ್ವರ ನಾಯಕ ಚಿತ್ರಸೇನನು ಬಹು ದೊಡ್ಡ ಸೈನ್ಯದೊಂದಿಗೆ ಬಂದನು.
ಕರ್ಣನು ಶೌರ್ಯದಿಂದ ಅವನನ್ನು ಎದುರಿಸಿದನು. ಇಡೀ ದೇವಸೈನ್ಯ ಗಂದರ್ವರ ಪರವಾಗಿ ನಿಂತಿತು. ಕರ್ಣನ ಅಟಾಟೋಪ ನಡೆಯಲಿಲ್ಲ. ಇತರ ನಾಯಕರುಗಳೂ ಒಬ್ಬೊಬ್ಬರಾಗಿ ಸೋಲುತ್ತ ಬಂದರು. ಶಸ್ತ್ರಾಸ್ತ್ರಗಳ ಪೈಪೋಟಿ ನಡೆಯಿತು. ಆಗ್ನೇಯಕ್ಕೆ ವರುಣ, ಸರ್ಪಕ್ಕೆ ಗರುಡ ಹೀಗೆ.
ಪಾಂಡವರು ತಮ್ಮ ಸ್ಥಳದಿಂದ ನಿಂತು ನೋಡುತ್ತಿದ್ದರು. ಕರ್ಣನ ಸಹಾಯಕ್ಕೆ ಸ್ವತಃ ದುರ್ಯೋಧನನೇ ಬಂದನು. ಯುದ್ಧ ಇನ್ನಷ್ಟು ಘೋರವಾಯಿತು. ಒಬ್ಬರನ್ನೊಬ್ಬರು ಮೂದಲಿಸುತ್ತ ಹೋರಾಡಿದರು. ಎರಡೂ ಕಡೆಯ ಸೈನ್ಯಕ್ಕೆ ಬಹಳ ಹಾನಿಯಾಯಿತು.
ಇಡೀ ಬಲವನ್ನು ಹುರಿದುಂಬಿಸಿ ಚಿತ್ರಸೇನನು ಮುಂದೆ ತಂದು ಕೊನೆಗೆ ದುರ್ಯೋಧನ, ಮತ್ತು ಇತರ ಇಪ್ಪತ್ತೈದು ಜನರನ್ನು ಸೆರೆ ಹಿಡಿದು ಕರೆ ತಂದು ಅವರ ಆಯುಧಗಳನ್ನು ತೆಗೆದಿರಿಸಿ ಕುಳ್ಳಿರಿಸಿದರು. ಭೀಮಾದಿಗಳಿಗೆ ಬಹಳ ಸಂತಸವಾಯಿತು. ತಮ್ಮ ವೈರಿಗಳಿಗೆ ತಕ್ಕ ಶಾಸ್ತಿಯಾಯಿತು ಎಂದು ನಕ್ಕರು.
ಆದರೆ ಇದೆಲ್ಲವನ್ನೂ ಕೇಳಿದ ಧರ್ಮಜ ದುಗುಡಕ್ಕೊಳಗಾದನು. ತನ್ನ ವಂಶದ ಕೀರ್ತಿಗೆ ಅಪಮಾನವಾಯಿತೆಂದು ನೊಂದನು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತೇಜಸ್ವಿನಿ ಅನಂತಕುಮಾರ್

Fri Mar 11 , 2022
ಅದಮ್ಯ ಚೇತನ ಎಂಬ ಸಮಾಜಮುಖಿ ಸಂಸ್ಥೆಯನ್ನು ಕಟ್ಟಿ ಅಪೂರ್ವ ರೀತಿಯಲ್ಲಿ ಬದುಕನ್ನು ನಡೆಸುತ್ತಿರುವವರು ತೇಜಸ್ವಿನಿ ಅನಂತಕುಮಾರ್. ಇಂದು ಅವರ ಜನ್ಮದಿನ. ಪತಿ ಕೇಂದ್ರ ಮಂತ್ರಿಗಳಾಗಿ ರಾಜಕಾರಣದಲ್ಲಿ ದೊಡ್ದ ಹೆಸರಾಗಿದ್ದ ಅನಂತಕುಮಾರ್. ಜೊತೆಗೆ ಸ್ವಯಂ ತಾವೇ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೂ ಸರಳತೆ ಮತ್ತು ಸಾಮಾಜಿಕ ಸೇವೆಯನ್ನು ಆಯ್ಕೆಮಾಡಿಕೊಂಡವರು ತೇಜಸ್ವಿನಿ. ತೇಜಸ್ವಿನಿ ಅನಂತ್ ಕುಮಾರ್ ಅವರು 1966ರ ಮಾರ್ಚ್ 11 ರಂದು ಬೆಳಗಾವಿ ಜಿಲ್ಲೆಯ ಹಿಡ್ಕಲ್ ಗ್ರಾಮದಲ್ಲಿ ಜನಿಸಿದರು. ತಂದೆ ಪ್ರಭಾಕರ ಎ. […]

Advertisement

Wordpress Social Share Plugin powered by Ultimatelysocial