ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಜೀವನ ಚರಿತ್ರೆ!

‘ಗಾನಕೋಗಿಲೆ’ ಎಂಬ ಮಾತನ್ನು ಬಹಳಷ್ಟು ಗಾಯಕರ ಬಗ್ಗೆ ಹೇಳುತ್ತೇವೆ. ನಮ್ಮ ದೇಶದ ನರನಾಡಿಗಳಲ್ಲಿ ಗಾನದ ಹೃದಯನಾದವನ್ನು ಮಿಡಿದ ಮಹಾನ್ ಗಾಯಕಿ ಲತಾಮಂಗೇಶ್ಕರ್ ಅವರು ಕೋಗಿಲೆಯ ಸರ್ವಶ್ರೇಷ್ಠತೆಗೆ ಅನುರೂಪವಾಗಿದ್ದವರು.

‘ಲತಾಜಿ’ ಎಂದು ಸಂಗೀತ ಲೋಕದಲ್ಲಿ ಸರ್ವಮಾನ್ಯರಾದ ಈ ಹಿರಿಯಕ್ಕ ಲತಾ ಮಂಗೇಶ್ಕರ್ 2022ರ ಫೆಬ್ರವರಿ 6 ದಿನವಾದ ಇಂದು ನಿಧನರಾಗಿದ್ದಾರೆ.ಲತಾ ಮಂಗೇಶ್ಕರ್ ಜನಿಸಿದ್ದು 1929ರ ಸೆಪ್ಟೆಂಬರ್ 28ರಂದು. ಶಾಸ್ತ್ರೀಯ ಸಂಗೀತಕಾರ ಮತ್ತು ರಂಗನಟ ಪಂಡಿತ್ ದೀನನಾಥ ಮಂಗೇಶ್ಕರ್ ಅವರ ಪುತ್ರಿಯಾದ ಲತಾ ಅವರ ಮೊದಲ ಹೆಸರು ‘ಹೇಮಾ’ ಎಂದಿತ್ತು. ತಂದೆಯವರಿಗೆ ತಮ್ಮ ಮಗಳ ಬಹುಮುಖ ಪ್ರತಿಭೆಯ ಕುರಿತು ಅತ್ಯಂತ ಹೆಮ್ಮೆ ತುಂಬಿತ್ತು. ‘ಭಾವ್ ಬಂಧನ್’ ಎಂಬ ನಾಟಕದಲ್ಲಿ ಮಾಡಿದ ಅಭಿನಯನದ ನಂತರ ಅವರ ಹೆಸರು ‘ಹೇಮಾ’ ಬದಲು ‘ಲತಾ’ ಎಂದಾಯಿತು. ಲತಾಗೆ ಔಪಚಾರಿಕ ಶಿಕ್ಷಣವೇನೂ ದೊರೆಯಲಿಲ್ಲ. ಒಂದು ದಿನ ಶಾಲೆಗೆ ಹೋಗಿದ್ದರು. ಮರುದಿನ ತಮ್ಮ ತಂಗಿ ಆಶಾಳ ಜೊತೆ ಶಾಲೆಗೆ ಹೋದಾಗ ಶಿಕ್ಷಕರು ಗದರಿದರಂತೆ. ಸರಿ. ಲತಾ ಮುಂದೆಂದೂ ಶಾಲೆಯ ಮೆಟ್ಟಿಲು ಹತ್ತುವುದಿಲ್ಲವೆಂದು ಪಣತೊಟ್ಟು, ತಂದೆ ನಡೆಸುತ್ತಿದ್ದ ನಾಟಕಗಳಲ್ಲಿನ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳತೊಡಗಿದರು.ಒಮ್ಮೆ ‘ಸಂಗೀತ್ ಸೌಭದ್ರ್’ ನಾಟಕದ ನಾರದನ ಪಾತ್ರಧಾರಿ, ಏನೋ ಕಾರಣದಿಂದ ಬರಲಿಲ್ಲ. ಲತಾ ತಮ್ಮ ತಂದೆಯವರಿಗುಂಟಾದ ತೊಂದರೆ ನಿವಾರಿಸಲು ತಾವೇ ಆ ಪಾತ್ರವನ್ನು ಮಾಡಿದರು. 8 ವರ್ಷದ ಬಾಲೆ ಲತಾ ಎಲ್ಲರ ಮನಗೆದ್ದು ಒನ್ಸ್ ಮೊರ್ ಗಿಟ್ಟಿಸಿಕೊಂಡರು. ತಂದೆಯೇ ಅವರ ಪ್ರಥಮ ಗುರು. ನಂತರ, ‘ರಾಮಕೃಷ್ಣ ಬುವಾವಚೆ’ ಮತ್ತು, ‘ಉಸ್ತಾದ್ ಅಮಾನತ್ ಖಾನ್’ ಅವರಿಂದ ಸಂಗೀತ ಶಿಕ್ಷಣ ಪಡೆದರು. ಲತಾ ಅವರಿಗೆ ಶಾಸ್ತ್ರೀಯಸಂಗೀತದ ಗಾಯಕಿಯಾಗುವ ಹಂಬಲವಿತ್ತು. ಆದರೆ ತಂದೆ ತೀರಿಕೊಂಡ ಸಮಯದಲ್ಲಿ 4 ಜನ ತಂಗಿಯರು ಮತ್ತು ಒಬ್ಬ ತಮ್ಮ, ಇವರುಗಳ ದೊಡ್ಡ ಪರಿವಾರವನ್ನು ನೋಡಿಕೊಳ್ಳಬೇಕಾದ ಜವಾಬ್ಧಾರಿ ಇನ್ನೂ 12-13 ವರ್ಷದ ಬಾಲಕಿ ಲತಾ ಹೆಗಲಿಗೆ ಬಂತು.ಲತಾ ಅವರು 1942ರಲ್ಲಿ ಮರಾಠಿ ಚಿತ್ರ ‘ಕಿತೀ ಹಸಾಲ್’ನಲ್ಲಿ ಒಂದು ಹಾಡು ಹಾಡಿದರಾದರೂ ಆ ಹಾಡು ಚಿತ್ರಕ್ಕೆ ಸೇರ್ಪಡೆಗೊಳ್ಳಲಿಲ್ಲ. ಅವರು ‘ಮಂಗಳಗೌರ್’ ಎಂಬ ಚಿತ್ರದಲ್ಲಿ ನಟಿಸಿದ್ದರು. 1947ರಲ್ಲಿ ಮೊದಲಬಾರಿಗೆ ಹಿಂದೀ ಚಿತ್ರದಲ್ಲಿ ಹಿನ್ನೆಲೆ ಗಾಯಕಿಯಾಗಿ ಹಾಡಿದರು. ‘ಆಪ್ ಕಿ ಸೇವಾಮೆ’, ‘ಪಾಂ ಲಾಗೂ ಕರ್ ಚೋರಿರೇ..’, ‘ಹುಸ್ನ್ ಲಾಲ್ ಭಗತ್ ರಾಮ್’ ಮುಂತಾದ ಹಾಡುಗಳಲ್ಲಿ ಆಕೆಯ ಕಂಠಶ್ರೀಯನ್ನು ಕೇಳಿ ಮಾರುಹೋದ ಚಿತ್ರೋದ್ಯಮ ಅವರ ಗಾಯನದ ಪ್ರಯೋಜನ ಪಡೆಯಲು ನಾ ಮುಂದು, ತಾ ಮುಂದು ಎಂದು ಅವರ ಸುತ್ತ ತಿರುಗತೊಡಗಿತು.ಲತಾ ಅವರು ಹಾಡಿರುವ ಚಿತ್ರಗೀತೆ, ಭಕ್ತಿಗೀತೆ ಹಾಗೂ ವಿಭಿನ್ನ ರೀತಿಯ ಗೀತೆಗಳ ಸಂಖ್ಯೆಯನ್ನು ನಿಖರವಾಗಿ ಹೇಳುವುದು ಎಂಥಹ ಸಂಖ್ಯಾಶಾಸ್ತ್ರಜ್ಞನಿಗೂ ಮೀರಿದ ಸಾಹಸ. ಸಾಗರದ ಆಳ ವಿಸ್ತಾರಗಳನ್ನು ಹೇಗೆ ತಾನೇ ಅಳೆಯಲಾದೀತು. ಲತಾಜಿ ಅವರ ಗಾನದ ಸೊಗಸನ್ನು ಇಂತಿಂಥ ಹಾಡುಗಳಿಗೆ ಎಂದು ಮಾತ್ರ ನೆನೆಪಿಸಿಕೊಳ್ಳುವುದಾದರೂ ಹೇಗೆ. ಎಲ್ಲಾ ರೀತಿಯಲ್ಲೂ ಗಾನಶ್ರೇಷ್ಠತೆಯನ್ನು ಮೆರೆದ ಈ ಗಾನಗಂಗೆ ನಡೆಸಿದ ಮತ್ತು ಬದುಕಿರುವ ಸಂಗೀತ ತಪಸ್ಸು ಅನನ್ಯವಾದದ್ದು.ಈ ಗಾನಸಾಗರಕ್ಕೆ, ಗಾನವಿಶಾಲತೆಗೆ, ಗಾನತಪಸ್ವಿಗೆ, ಭಾರತರತ್ನರಾದ ಲತಾ ಮಂಗೇಶ್ಕರ್ ಇಲ್ಲ ಎಂದು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ದೇಹಕ್ಕೆ ಅಂತ್ಯವಿದೆ. ಹೀಗೆ ಸಾಧನೆ ಮಾಡಿದ ಆತ್ಮಗಳಿಗೆ ಸಾವಿಲ್ಲ.ಜಯಂತಿ ತೇ ಸುಕೃತಿನೋರಸಸಿದ್ದಾಃ ಕವೀಶ್ವರಾಃ |ನಾಸ್ತಿ ಯೇಷಾಂ ಯಶಃಕಾಯೇಜರಾಮರಣಜಂ ಭಯಮ್ ||“ಶಾಸ್ತ್ರೀಯ ಧರ್ಮಾನುಷ್ಠಾನಗಳಿಂದ ಪುಣ್ಯಶಾಲಿಗಳಾದ ಕವಿಶ್ರೇಷ್ಠರು, ವಿದ್ವಾಂಸರು, ರಸಸಿದ್ಧರೆನಿಸುವವರು ಲೋಕದಲ್ಲಿ ಶ್ರೇಷ್ಠರಾಗಿರುತ್ತಾರೆ. ಅವರುಗಳ ಕೀರ್ತಿಯೆಂಬ ಶರೀರದಲ್ಲಿ ಮುಪ್ಪು, ಸಾವುಗಳಿಂದಾಗುವ ಭಯವೆಂಬುದು ಇರುವುದೇ ಇಲ್ಲ.”ಲತಾ ಎಂಬುದು ಎಂದೂ ನಮ್ಮಹೃದಯಗಳಲ್ಲಿ ಬಾಡದ ಲತೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಧನುಷ್‌ನಿಂದ ಬೇರ್ಪಟ್ಟ ನಂತರ, ಐಶ್ವರ್ಯಾ ರಜನಿಕಾಂತ್ ಪ್ರೀತಿಯನ್ನು ಹುಡುಕುವ ಬಗ್ಗೆ ಮೌನ ಮುರಿದರು!

Wed Feb 16 , 2022
    ನವದೆಹಲಿ: ಸೌತ್ ಸೂಪರ್ ಸ್ಟಾರ್ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ತಮ್ಮ 18 ವರ್ಷಗಳ ಸುದೀರ್ಘ ದಾಂಪತ್ಯವನ್ನು ಕೆಲವು ದಿನಗಳ ಹಿಂದೆ ಕೊನೆಗೊಳಿಸುವುದಾಗಿ ಘೋಷಿಸಿದರು. ದಂಪತಿಗಳು ಒಂದು ಮಿಲಿಯನ್ ಹೃದಯಗಳನ್ನು ಮುರಿಯುವ ಜಂಟಿ ಹೇಳಿಕೆಯನ್ನು ನೀಡಿದರು. ಇತ್ತೀಚೆಗೆ ಐಶ್ವರ್ಯ ಕೂಡ ಕೋವಿಡ್ ಪಾಸಿಟಿವ್ ಎಂದು ಪರೀಕ್ಷಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಐಶ್ವರ್ಯಾ ರಜನಿಕಾಂತ್ ಜೀವನ ಮತ್ತು ಪ್ರೀತಿಯ ಬಗ್ಗೆ ತೆರೆದಿಟ್ಟರು. ಅವರು ಹಿಂದುಸ್ತಾನ್ ಟೈಮ್ಸ್ ಡಾಟ್ ಕಾಮ್‌ಗೆ ಹೇಳಿದರು, […]

Advertisement

Wordpress Social Share Plugin powered by Ultimatelysocial