ಪಯಣದಲ್ಲಿ ಹೆಜ್ಜೆಗೆ ಹೆಜ್ಜೆಯಾಗಿ ಬಂದ ಸಂಗಾತಿಗೊಂದು ಕೃತಜ್ಞತೆಯ ಧನ್ಯವಾದ ಸಮರ್ಪಿಸುವ ಸಮಯ.

ಪ್ರಾಮಾಣಿಕವಾಗಿರಬೇಕು, ನಂಬಿಕೆ ಅಚಲವಾಗಿರಬೇಕು, ಸ್ವಾರ್ಥ ತ್ಯಜಿಸಿದ, ನಿಸ್ವಾರ್ಥ ಪ್ರೀತಿಯಷ್ಟೆ ಜೀವನದುದ್ದಕ್ಕೂ ನಮ್ಮನ್ನು ನಡೆಸಬಲ್ಲದು..ಇದುವರೆಗೆ ನಿಮ್ಮೊಂದಿಗೆ ಕಷ್ಟ, ನೋವು, ನಲಿವು ಎಲ್ಲದರಲ್ಲೂ ಭಾಗಿಯಾಗಿ ಬಾಳ ಪಯಣದಲ್ಲಿ ಹೆಜ್ಜೆಗೆ ಹೆಜ್ಜೆಯಾಗಿ ಬಂದ ಸಂಗಾತಿಗೊಂದು ಕೃತಜ್ಞತೆಯ ಧನ್ಯವಾದ ಸಮರ್ಪಿಸುವ ಸಮಯ.ಇವತ್ತು ಜಗತ್ತು ಪ್ರೇಮದಲ್ಲಿ ಮುಳುಗುತ್ತದೆ. ಪಾಶ್ಚಿಮಾತ್ಯರಿಗೆ ಪ್ರೇಮಿಗಳ ದಿನವೆನ್ನುವುದು ಆಚರಣೆ ಅಷ್ಟೆ. ಆದರೆ ಭಾರತೀಯರಿಗೆ ಹಾಗಿಲ್ಲ. ಅದು ಬದುಕು. ಈ ಹಿಂದೆ ಪ್ರೇಮಿಗಳಾಗಿದ್ದು, ಹೋಟೆಲ್, ಪಾರ್ಕ್ ಗಳಲ್ಲಿ ಕೈಕೈಹಿಡಿದು ನಲಿದಾಡಿದವರ ಪೈಕಿ ಅದೆಷ್ಟೋ ಮಂದಿ ಈಗ ಬಾಳ ಸಂಗಾತಿಗಳಾಗಿದ್ದಾರೆ. ಸಂಸಾರದ ಸಾಗರದಲ್ಲಿ ನೋವು ನಲಿವಿನ ಹಾದಿಯಲ್ಲಿ ಬಾಳ ನೌಕೆಯಲ್ಲಿ ಸಾಗುತ್ತಿದ್ದಾರೆ. ಅಂತಹವರು ತಪ್ಪದೆ ಹಿಂತಿರುಗಿ ನೋಡಿ ಆ ದಿನಗಳನ್ನು ನೆನೆಯುತ್ತಾ ಸಂಗಾತಿಗೊಂದು ಸಿಹಿ ಮುತ್ತು ನೀಡಿಬಿಡಿ.ಇಷ್ಟಕ್ಕೂ ಪ್ರೀತಿ ನಿಂತಿರುವುದು ಯಾವುದೇ ಉಡುಗೊರೆಯಲ್ಲಿ ಅಲ್ಲ. ಅದು ನಿಂತಿರುವುದು ನಿಮ್ಮೊಳಗಿನ ನಂಬಿಕೆಯಲ್ಲಿ. ಅದಕ್ಕೆ ಮೋಸ ಮಾಡಿದ ಯಾವ ಪ್ರೀತಿಯೂ, ಪ್ರೇಮಿಗಳು ಉದ್ಧಾರವಾಗಿಲ್ಲ. ಕೇವಲ ಎಂಜಾಯ್ ಮಾಡುವ, ಸ್ವಾರ್ಥ ಉದ್ದೇಶಕ್ಕಾಗಿ ಪ್ರೇಮದ ನಾಟಕವಾಡಿ ಮತ್ತೊಬ್ಬರ ಬದುಕಿಗೆ ಕೀಚಕರಾಗದೆ ನಿರ್ಮಲ ಮನಸ್ಸಿನಿಂದ ಪ್ರೀತಿಸಿ ಪ್ರೇಮದೇವರಾಗಿ ಬಿಡಿ.ಸಾಮಾನ್ಯವಾಗಿ ಮದುವೆಗೆ ಮುನ್ನ ಬರುವ ಒಂದಷ್ಟು ದಿನಗಳು ಪ್ರೇಮಿಗಳಿಗೆ ಪ್ರೇಮಕಾಲ.. ಆ ದಿನಗಳಲ್ಲಿ ಜೊತೆ ಜೊತೆಯಾಗಿ ಸುತ್ತಾಡುತ್ತಾ ಸಂಭ್ರಮಿಸುತ್ತಾ ವಿಚಾರ ವಿನಿಮಯ ಮಾಡುತ್ತಾ ಖುಷಿ ಖುಷಿಯಾಗಿ ಕಾಲ ಕಳೆಯುತ್ತಾರೆ. ಅದೊಂಥರಾ ಮಜಾ.. ಅಷ್ಟೇ ಅಲ್ಲ ಆ ದಿನಗಳು ಪ್ರೀತಿ, ಪ್ರೇಮ, ಆಕರ್ಷಣೆಯನ್ನು ಹೃದಯ, ದೇಹ, ಮನಸ್ಸುಗಳಲ್ಲಿ ತುಂಬುವ ಮತ್ತು ಸದಾ ಜೊತೆಯಾಗಿರ ಬೇಕೆಂದುಕೊಳ್ಳುವ ಸುಂದರ ಕ್ಷಣಗಳೂ ಹೌದು.ಹಾಗೆ ಸುಮ್ಮನೆ ನಮ್ಮ-ನಿಮ್ಮ ಸುತ್ತಮುತ್ತ ದೃಷ್ಠಿ ಹಾಯಿಸಿ ನೋಡಿದರೆ ಗೆಳೆಯ-ಗೆಳೆಯರ ಪ್ರೀತಿ ಪ್ರೇಮಗಳೆಷ್ಟು ಯಶಸ್ವಿಯಾಗಿವೆ? ಇನ್ನೆಷ್ಟು ಮುರಿದುಬಿದ್ದಿವೆ ಎಂಬುದರ ಲೆಕ್ಕ ಸಿಗುತ್ತದೆ. ಜತೆಗೆ ಪ್ರೀತಿಸಿ, ಎಲ್ಲ ಸಮಸ್ಯೆಯನ್ನು ಎದುರಿಸಿ ಮದುವೆಯಾದವರೆಲ್ಲರೂ ಜತೆಯಾಗಿ, ಸುಖವಾಗಿದ್ದಾರಾ? ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಪ್ರೀತಿಯನ್ನು ಅಮರಾಗಿಸುವುದು ಪ್ರತಿ ಪ್ರೇಮಿಗಳಲ್ಲಿದೆ.ಪ್ರೀತಿಸೋದು ಸುಲಭ ಆದರೆ ಹೊಂದಿ ಕೊಂಡು ಬಾಳ್ವೆ ಮಾಡಿ ಅದಕ್ಕೊಂದು ನ್ಯಾಯ ಒದಗಿಸೋದು ಕಷ್ಟವೇ.. ಇತರರಿಗೆ ಮಾದರಿಯಾಗಿ ಬದುಕೋದು ಪ್ರೇಮಿಗಳು ಪ್ರೇಮಕ್ಕೆ ಕೊಡುವ ದೊಡ್ಡ ಗೌರವವಾಗುತ್ತದೆ. ಈ ವಿಚಾರದಲ್ಲಿ ನಾವು ಎಡವಿದ್ದೇ ಆದರೆ ಪ್ರತಿ ವರ್ಷದ ಪ್ರೇಮಿಗಳ ದಿನವೂ ಕರಾಳ ದಿನವಾಗಿ ಗೋಚರಿಸುವುದರಲ್ಲಿ ಎರಡು ಮಾತಿಲ್ಲ.ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಪ್ರೇಮ ಕಥೆಗಳು ನೂರಾರು ಸಿಗುತ್ತವೆ. ಪ್ರೇಮಕ್ಕೆ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟವರು ಸಾಕ್ಷಿಯಾಗಿ ನಿಲ್ಲುತ್ತಾರೆ. ಇಷ್ಟಕ್ಕೂ ಪ್ರೇಮ ಎನ್ನುವುದು ತೋರಿಕೆಯಲ್ಲ ಅದು ಎರಡು ಹೃದಯಗಳ ವಿಷಯ. ಪ್ರೇಮ ಗಟ್ಟಿಯಾಗಬೇಕಾದರೆ ಪ್ರೇಮಿಗಳಲ್ಲಿ ನಂಬಿಕೆ ಮತ್ತು ಪ್ರಾಮಾಣಿಕತೆ ಅಗತ್ಯ. ಅದೆರಡು ಇಲ್ಲದೆ ಹೋದರೆ ಪ್ರೀತಿಸೋಕೆ ಆಗಲ್ಲ. ಒಂದು ವೇಳೆ ಪ್ರೀತಿಸಿದರೂ ಹೆಚ್ಚು ದಿನ ಬಾಳುವುದಿಲ್ಲ.ಸಾಮಾನ್ಯವಾಗಿ ಪ್ರೇಮಿಗಳು ಅಂದರೆ ಅವರಲ್ಲಿ ಅದುಮಿಡಲಾರದ ಉತ್ಸಾಹ, ಸಂಭ್ರಮ, ಉಲ್ಲಾಸ, ಕಾತರ ಇದ್ದದ್ದೇ. ಜತೆಗೆ ಒಬ್ಬರ ಮೇಲೊಬ್ಬರು ತಲೆಯಿಟ್ಟು ಏನೇನೋ ಉಸುರುವ ಅಭಿಲಾಷೆ, ಕುಣಿದು ಕುಪ್ಪಳಿಸಬೇಕೆನ್ನುವ ತವಕ. ಉಡುಗೊರೆ ನೀಡಿ ಖುಷಿ ಪಡಿಸುವ.. ನೆನಪುಗಳನ್ನು ಶಾಶ್ವತವಾಗಿಸುವ ಬಯಕೆಗಳು ಇದ್ದೇ ಇರುತ್ತವೆ. ಆದರೆ ಇವುಗಳೆಲ್ಲವೂ ಒಂದು ದಿನಕ್ಕೆ ಸೀಮಿತವಾಗದೆ ಶಾಶ್ವತವಾಗಿ ಉಳಿದು ಬೆಳೆಯುವ ವಿಶಾಲ ಪ್ರೇಮಮರವಾದರೆ ಅದೆಷ್ಟು ಖುಷಿ ಅಲ್ವಾ?ಹಾಗೆನೋಡಿದರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹುಟ್ಟಿಕೊಂಡ ಈ ಪ್ರೇಮಿಗಳ ದಿನ ಕಳೆದ ಎರಡು ದಶಕಗಳಿಂದ ಭಾರತದಲ್ಲಿ ತೀವ್ರಗತಿಯಲ್ಲಿ ಆಚರಣೆಯಾಗಿ ಬೆಳೆಯತೊಡಗಿದೆ. ಇದಕ್ಕೆ ಒಂದಷ್ಟು ಪರ-ವಿರೋಧಗಳು ಇವತ್ತಿಗೂ ಇದೆ. ಆದರೆ ಅದೆಲ್ಲವನ್ನು ಮೀರಿ ಪ್ರೇಮಿಗಳು ಪ್ರೇಮೋತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ.ಪ್ರೇಮ ನಿವೇದನೆಗೆ ದಾರಿಗಳು ಹಲವಾರುಪ್ರೇಮಪತ್ರ ನೀಡಿ, ಗುಲಾಬಿ ಹೂ ನೀಡಿ, ಪ್ರೇಮ ನಿವೇದನೆ ಮಾಡುವ ಕಾಲ ಬದಲಾಗಿದೆ. ಈಗ ಪ್ರೇಮ ನಿವೇದನೆಗೆ ದಾರಿಗಳು ಹಲವಾರು ಇವೆ. ಕೇವಲ ದೈಹಿಕ ಆಕರ್ಷಣೆಯಿಂದಲೋ ಅಥವಾ ಇನ್ಯಾವುದೋ ಸನ್ನಿವೇಶಗಳಿಂದ ಆರಂಭವಾಗುವ ಪ್ರೀತಿಗಳಿಗೆ ಆಯುಷ್ಯ ಕಡಿಮೆಯಾಗುತ್ತಿದೆ. ಜತೆಗೆ ವಂಚನೆಗೆಂದೇ ಪ್ರೇಮದ ನಾಟಕವಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಹಿಂದಿನ ಕಾಲದ ಮಡಿವಂತಿಕೆ ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಪ್ರೇಮಿಗಳು ಯಾರ ಭಯವಿಲ್ಲದೆ ವಿಹರಿಸುವ, ಪ್ರೇಮ ಸಲ್ಲಾಪಗಳ ನಡೆಸುವ ಮಟ್ಟಕ್ಕೆ ಬಂದು ನಿಂತಿದ್ದಾರೆ. ಎಲ್ಲವೂ ಅಷ್ಟೆ ಅವುಗಳಿಗೊಂದು ಚೌಕಟ್ಟಿದ್ದರೆ ಲಕ್ಷಣ ಇಲ್ಲದೆ ಹೋದರೆ ಅವಲಕ್ಷಣ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆಲವು ಹೊಡೆತಗಳು ಡಿವಿಲಿಯರ್ಸ್ನ ಕಾರ್ಬನ್ ಕಾಪಿ!, 'ಬೇಬಿ ಎಬಿ' ಡೆವಾಲ್ಡ್ ಬ್ರೆವಿಸ್ ;

Mon Feb 14 , 2022
2022 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನಲ್ಲಿ ದಕ್ಷಿಣ ಆಫ್ರಿಕಾದ U-19 ಬ್ಯಾಟ್ಸ್‌ಮನ್, ಡೆವಾಲ್ಡ್ ಬ್ರೆವಿಸ್ ಅವರನ್ನು ಮುಂಬೈ ಇಂಡಿಯನ್ಸ್ ಆಯ್ಕೆ ಮಾಡಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಮುಕ್ತಾಯಗೊಂಡ ಹರಾಜಿನಲ್ಲಿ ಅವರನ್ನು MI 3 ಕೋಟಿ ರೂಪಾಯಿಗಳಿಗೆ ಆಯ್ಕೆ ಮಾಡಿದೆ. ಬ್ರೆವಿಸ್ 84.33ರ ಸರಾಸರಿಯಲ್ಲಿ 506 ರನ್ ಗಳಿಸಿದರು. ಅವರು U-19 ವಿಶ್ವಕಪ್ 2022 ನಲ್ಲಿ ಕೇವಲ ಆರು ಪಂದ್ಯಗಳಲ್ಲಿ ಎರಡು ಶತಕ ಮತ್ತು ಮೂರು ಅರ್ಧಶತಕಗಳನ್ನು ಸಿಡಿಸಿದ್ದಾರೆ. 18ರ […]

Advertisement

Wordpress Social Share Plugin powered by Ultimatelysocial