ಎಚ್.ಎಂ. ಚನ್ನಯ್ಯ

ಪ್ರೊ. ಎಚ್.ಎಂ. ಚನ್ನಯ್ಯ ಕಾವ್ಯ ಮೀಮಾಂಸೆ ಮತ್ತು ಪಾಶ್ಚಾತ್ಯ ಸಾಹಿತ್ಯ ವಿಮರ್ಶೆಯಲ್ಲಿ ನಿಷ್ಣಾತರೆನಿಸಿದ್ದವರು.
ಚನ್ನಯ್ಯನವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ 1935ರ ಫೆಬ್ರುವರಿ 22ರಂದು ಜನಿಸಿದರು. ತಂದೆ ಎಚ್‌.ಜಿ. ಮಹದೇವಯ್ಯ. ತಾಯಿ ಗಂಗಮ್ಮ. ಜಡೆ, ತೀರ್ಥಹಳ್ಳಿ, ಸಂತೆಬೆನ್ನೂರು, ಹೊನ್ನಾಳಿ, ಶಿರಾಳ ಕೊಪ್ಪ ಮುಂತಾದೆಡೆ ಶಾಲಾ ಶಿಕ್ಷಣ ನಡೆಯಿತು. ಕವಿ ಸುಮತೀಂದ್ರ ನಾಡಿಗರು ಇವರ ಸಹಪಾಠಿ.
ಚನ್ನಯ್ಯನವರು ಹೈಸ್ಕೂಲಿನಲ್ಲಿದ್ದಾಗಲೇ ಕವನಗಳ ರಚನೆ ಆರಂಭಿಸಿದರು. ಇಂಟರ್ ಮೀಡಿಯೆಟ್‌ ಓದಿದ್ದು ಶಿವಮೊಗ್ಗದಲ್ಲಿ. ವಿಜ್ಞಾನ ವಿದ್ಯಾರ್ಥಿಯಾಗಿದ್ದರೂ ಕನ್ನಡ ಸಾಹಿತ್ಯದ ಪರಿಸರ, ಸ್ನೇಹಿತರ ಸಹವಾಸದಿಂದ ಪ್ರೇರಿತರಾಗಿ ಮೈಸೂರು ಮಹಾರಾಜ ಕಾಲೇಜು ಸೇರಿ ಬಿ.ಎ. (ಆನರ್ಸ್) ಹಾಗೂ ಎಂ.ಎ. ಪದವಿಗಳನ್ನು ಗಳಿಸಿದರು. ತೀನಂಶ್ರೀ, ಡಿ.ಎಲ್‌.ಎನ್‌, ಸುಜನಾ, ಜಿ.ಎಸ್‌.ಎಸ್‌, ಮುಂತಾದವರುಗಳ ಶಿಷ್ಯರಾಗಿ ಅವರ ಪ್ರಭಾವಕ್ಕೊಳಗಾದರು. ಮಹಾರಾಜ ಕಾಲೇಜಿನಲ್ಲಿಯೇ ಉಪನ್ಯಾಸಕರಾಗಿ ವೃತ್ತಿ ಜೀವನವನ್ನಾರಂಭಿಸಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಸ್ಥಾನದವರೆಗೆ ವಿವಿಧ ಜವಾಬ್ದಾರಿ ಸ್ಥಾನಗಳನ್ನಲಂಕರಿಸಿ 1995ರಲ್ಲಿ ನಿವೃತ್ತರಾದರು. ಡಬ್ಲ್ಯು. ಬಿ.ಏಟ್ಸ್‌, ಟಿ.ಎಸ್‌. ಎಲಿಯಟ್‌, ಎಜ್ರಾಪೌಂಡ್‌ ಮುಂತಾದ ಇಂಗ್ಲಿಷ್‌ ಕವಿಗಳ ಕಾವ್ಯ ಮತ್ತು ಸಾಹಿತ್ಯ ವಿಮರ್ಶೆಯನ್ನೂ ಅಧ್ಯಯನ ಮಾಡಿ ಕಾವ್ಯ ಕೃಷಿ ಪ್ರಾರಂಭಿಸಿದ ಚನ್ನಯ್ಯನವರ ಕವಿತೆಗಳು ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ‘ಸಾಕ್ಷಿ’ ಪತ್ರಿಕೆಯಲ್ಲಿ ಪ್ರಕಟಗೊಂಡವು. ಇತರ ಪತ್ರಿಕೆಗಳಲ್ಲಿಯೂ ಹಲವಾರು ಕವಿತೆಗಳು ಪ್ರಕಟವಾದವು. ನಂತರ ಹೊರತಂದ ಪ್ರಥಮ ಕವನ ಸಂಕಲನ ‘ಕಾಮಿ’, ನಂತರ ಪ್ರಕಟವಾದದ್ದು ‘ಆಮೆ’. ಕನ್ನಡ ಸಾಹಿತ್ಯದ ನವ್ಯ ಚಳುವಳಿಯ ಸಂದರ್ಭದಲ್ಲಿ ಪ್ರಕಟಗೊಂಡ ಇವರ ಕವನ ಸಂಕಲನಗಳು ಡಾ.ಯು.ಆರ್. ಅನಂತಮೂರ್ತಿ, ಕೆ. ಸದಾಶಿವ, ಗೋಪಾಲಕೃಷ್ಣ ಅಡಿಗ, ಜಿ.ಎಚ್‌. ನಾಯಕ, ಮುಂತಾದ ಕಾವ್ಯಾಸಕ್ತರಲ್ಲಿ ಚರ್ಚೆಯ ವಿಷಯವಾಗಿತ್ತು. ಪಾಶ್ಚಾತ್ಯ ವಿಮರ್ಶೆಯ ಪ್ರಭಾವಕ್ಕೊಳಗಾಗಿ ರಚಿಸಿದ್ದು ‘ಜಿಜ್ಞಾಸೆ’, ಹಾಗೂ ‘ಪ್ರಾಸಂಗಿಕ’ ವಿಮರ್ಶಾ ಕೃತಿಗಳು. ಕಾವ್ಯ ಹಾಗೂ ವಿಮರ್ಶೆಯ ಜೊತೆಗೆ ಇವರನ್ನು ಆಕರ್ಷಿಸಿದ ಮತ್ತೊಂದು ಕ್ಷೇತ್ರ ನಾಟಕ ಹಾಗೂ ನಟನೆ. ಸಮಾನ ಮನಸ್ಕರಾದ ವಿಶ್ವನಾಥ ಮಿರ್ಲೆ, ದ್ವಾರಕಾನಾಥ್‌, ಸಿಂಧುವಳ್ಳಿ ಅನಂತಮೂರ್ತಿಯವರೊಡನೆ ಸೇರಿ ‘ಸಮತೆಂತೋ’ ನಾಟಕ ಸಂಸ್ಥೆ ಸ್ಥಾಪಿಸಿದರು. ಈ ಸಂದರ್ಭದಲ್ಲಿ ರಚಿಸಿದ ನಾಟಕ ‘ಎಲ್ಲರಂತಲ್ಲ ನನ್ನ ಗಂಡ’. ಈ ನಾಟಕವನ್ನು ತಾವೇ ನಿರ್ದೇಶಿಸಿದರು. ಸುಮಾರು 40 ನಾಟಕಗಳಲ್ಲಿ ಅಭಿನಯಿಸಿದ ಚನ್ನಯ್ಯನವರು ಕುವೆಂಪುರವರ ‘ರಕ್ತಾಕ್ಷಿ’, ಪೂರ್ಣಚಂದ್ರತೇಜಸ್ವಿಯವರ ‘ಯಮಳ ಪ್ರಶ್ನೆ’, ನ.ರತ್ನರವರ ‘ಎಲ್ಲಿಗೆ?’, ಮೃಚ್ಛಕಟಿಕ ಮುಂತಾದ ನಾಟಕಗಳಲ್ಲಿ ಅಭಿನಯಿಸಿದರು. ನಾಟಕರಂಗದಲ್ಲಿಯೂ ಕ್ರಾಂತಿಕಾರಕ ಬದಲಾವಣೆಗಳಾಗಿ ನವ್ಯನಾಟಕಗಳೆನಿಸಿದ ಅಸಂಗತ ನಾಟಕಗಳಲ್ಲಿಯೂ ಅಭಿನಯಿಸಿದರು. ಅವುಗಳಲ್ಲಿ ಚದುರಂಗರ ‘ಇಲಿಬೋನು’, ನ.ರತ್ನರವರ ‘ಗೋಡೆ ಬೇಕೆ ಗೋಡೆ’, ಚಂದ್ರಶೇಖರ ಪಾಟೀಲರ ‘ಕೊಡೆಗಳು’ ಪ್ರಮುಖವಾದವುಗಳು. ಸಮುದಾಯ ತಂಡಕ್ಕಾಗಿ ‘ತಾಯಿ’ ನಾಟಕವನ್ನು ನಿರ್ದೇಶಿಸಿ ಪ್ರತಿಭಾವಂತ ನಿರ್ದೇಶಕರೆನಿಸಿಕೊಂಡರು. ಇವರು ರಚಿಸಿದ ಇನ್ನೆರಡು ನಾಟಕಗಳು ‘ಹುಯ್ಯಲವೋ ಡಂಗುರವ’ ಹಾಗೂ ‘ಅಯಾಸ್‌’ (ಅನುವಾದ) ನಾಟಕ.
ಚನ್ನಯ್ಯನವರು 1968ರಲ್ಲಿ ಕವಿಗೋಪಾಲಕೃಷ್ಣ ಅಡಿಗರಿಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ಅರ್ಪಿಸಿದ ಗೌರವ ಗ್ರಂಥ ‘ಸಂವೇದನೆ’ಗೆ ಜಿ.ಎಚ್‌. ನಾಯಕರೊಡನೆ ಸಂಪಾದಕರಾಗಿದ್ದರು. ನಾಟಕದಿಂದ ಚಲನಚಿತ್ರದ ಕಡೆಗೂ ವಾಲಿದ ಚನ್ನಯ್ಯನವರು ಪಿ. ಲಂಕೇಶರ ‘ಎಲ್ಲಿಂದಲೋ ಬಂದವರು’ ಚಲನಚಿತ್ರದಲ್ಲೂ ಅಭಿನಯಿಸಿದರು. ಇಂಗ್ಲಿಷ್‌ ಹಾಗೂ ಕನ್ನಡ ಭಾಷೆ ಎರಡರಲ್ಲೂ ಮಹತ್ವದ ಲೇಖನಗಳನ್ನೂ ಬರೆದಿರುವ ಚನ್ನಯ್ಯನವರ ಹಲವಾರು ಕವನಗಳು ಇತರರು ಸಂಪಾದಿಸಿರುವ ಸಂಗ್ರಹಗಳಲ್ಲಿಯೂ ಸೇರ್ಪಡೆಯಾಗಿ, ಅನೇಕ ಕವನಗಳು ಪಠ್ಯ ಪುಸ್ತಕಗಳಲ್ಲೂ ಸೇರಿವೆ.
ಪ್ರೊ. ಚನ್ನಯ್ಯನವರಿಗೆ 1994ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಿತು.
ಚನ್ನಯ್ಯನವರು 2004ರ ಸೆಪ್ಟೆಂಬರ್ 22ರಂದು ನಿಧನರಾದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಧುಬಾಲಾ

Thu Feb 24 , 2022
ಭಾರತೀಯ ಚಲನಚಿತ್ರರಂಗವನ್ನು ತನ್ನ ಅಪೂರ್ವ ಪ್ರತಿಭೆ ಮತ್ತು ಸೌಂಧರ್ಯಗಳಿಂದ ಬೆಳಗಿನ ಕಲಾವಿದರಲ್ಲಿ ಮಧುಬಾಲಾ ಪ್ರಮುಖ ಹೆಸರು. ಇಂದು ಅವರ ಸಂಸ್ಮರಣೆ ದಿನ. ಮಧುಬಾಲಾ 1933ರ ಫೆಬ್ರುವರಿ 14ರಂದು ಜನಿಸಿದರು. ಇಂದಿನ ಪಾಕಿಸ್ಥಾನದ ಭಾಗವಾಗಿರುವ ಪ್ರದೇಶದಿಂದ ಬದುಕನ್ನು ಅರಸಿ ಮುಂಬೈಗೆ ಬಂದ ಕುಟುಂಬಕ್ಕೆ ಸೇರಿದ ಮಧುಬಾಲಾ, ಸಂಸಾರ ನಿರ್ವಹಣೆಯ ಸಲುವಾಗಿ ಪುಟ್ಟ ವಯಸ್ಸಿನಿಂದಲೇ ಚಲನಚಿತ್ರಗಳಲ್ಲಿ ಅಭಿನಯಿಸತೊಡಗಿದರು. ಆ ಕಾಲದ ಎಲ್ಲ ಪ್ರಸಿದ್ಧ ನಟರಾದ ಅಶೋಕ್ ಕುಮಾರ್, ಭರತ್ ಭೂಷಣ್, ದಿಲೀಪ್ ಕುಮಾರ್, […]

Advertisement

Wordpress Social Share Plugin powered by Ultimatelysocial