‘ಎಂ.ಪಿ. ಪ್ರಕಾಶ್‌-82’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರು: ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಎರಡೂ ಅಪಾಯದಲ್ಲಿವೆ. ಅವುಗಳ ಉಳಿವಿಗಾಗಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಬೇಕಾದ ಅನಿವಾರ್ಯ ಇದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಎಂ.ಪಿ. ಪ್ರಕಾಶ್‌ ಅವರ 82ನೇ ಜನ್ಮದಿನದ ಪ್ರಯುಕ್ತ ಎಂ.ಪಿ. ಪ್ರಕಾಶ್‌ ಪ್ರತಿಷ್ಠಾನ, ರಂಗಭಾರತಿ, ಎಂ.ಪಿ. ಪ್ರಕಾಶ್‌ ಸಮಾಜಮುಖಿ ಟ್ರಸ್ಟ್‌ ಮತ್ತು ಭಾರತ ಯಾತ್ರಾ ಕೇಂದ್ರ ಸಹಯೋಗದಲ್ಲಿ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಸೋಮವಾರ ಆಯೋಜಿಸಿದ್ದ ‘ಎಂ.ಪಿ. ಪ್ರಕಾಶ್‌-82’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಪಕ್ಷಾಂತರದ ಪಿಡುಗಿನಿಂದಾಗಿ ದೇಶದ ಪ್ರಜಾಪ್ರಭುತ್ವ ಸಂಕಷ್ಟಕ್ಕೆ ಸಿಲು ಕಿದೆ. 2008ರಲ್ಲಿ ಬಿಜೆಪಿ ಆರಂಭಿಸಿದ ‘ಆಪರೇಷನ್‌ ಕಮಲ’ ಈಗ ದೊಡ್ಡ ಪಿಡುಗಾಗಿ ಬೆಳೆದಿದೆ. ಗೋವಾದಲ್ಲಿ 11 ಕಾಂಗ್ರೆಸ್‌ ಶಾಸಕರ ಪೈಕಿ ವಿರೋಧ ಪಕ್ಷದ ನಾಯಕರೂ ಸೇರಿದಂತೆ ಎಂಟು ಮಂದಿ ಬಿಜೆಪಿ ಸೇರಲು ಹೊರಟಿದ್ದಾರೆ. ಪಕ್ಷಾಂತರ ಮಾಡುವವರು 10 ವರ್ಷ ಚುನಾವಣೆಗೆ ಸ್ಪರ್ಧಿಸುವುದನ್ನು ನಿಷೇಧಿಸುವುದಕ್ಕೆ ಪೂರಕವಾಗಿ ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ತರಬೇಕು’ ಎಂದರು.

ಜನಪರ ರಾಜಕಾರಣ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್‌. ಶಂಕರ್‌ ಮಾತನಾಡಿ, ‘ಸಮಾಜವಾದಿಗಳಿಗೆ ದೇಶದ ರಾಜಕಾರಣವನ್ನು ಜನಪರ ದಿಕ್ಕಿಗೆ ಬದಲಿಸುವ ಶಕ್ತಿ ಇದೆ. ಇಂದಿರಾ ಗಾಂಧಿಯವರ ಸರ್ಕಾರದಲ್ಲೂ ಉತ್ತಮ ನಿರ್ಧಾರಗಳ ಹಿಂದೆ ಸಮಾಜವಾದಿಗಳ ಪ್ರಭಾವವೇ ಇತ್ತು. ಕಾಂಗ್ರೆಸ್‌ ಸೇರಿ ಇತರರ ಅಭಿಪ್ರಾಯಗಳು ಏನೇ ಇದ್ದರೂ, ಶೋಷಿತರ ಪರ ಹೋರಾಟದ ವಿಚಾರದಲ್ಲಿ ಸಮಾಜವಾದಿಗಳ ಪಾತ್ರ ದೊಡ್ಡದು’ ಎಂದು ಹೇಳಿದರು.

ಚರ್ಚೆಗೆ ಹೋಗಿದ್ದ ನಾನು ಮರಳಲಿಲ್ಲ: ಪ್ರಸಕ್ತ ಸಾಲಿನ ಎಂ.ಪಿ. ಪ್ರಕಾಶ್‌ ಗೌರವ ಸ್ವೀಕರಿಸಿದ ರಾಜ್ಯಸಭಾ ಸದಸ್ಯ (ಬಿಹಾರದಿಂದ ಆಯ್ಕೆಯಾಗಿರುವ ಕನ್ನಡಿಗ) ಅನಿಲ್‌ ಪ್ರಸಾದ್ ಹೆಗ್ಡೆ, ‘ಸಮಾಜವಾದಿ ಸಿದ್ಧಾಂತಕ್ಕೆ ಮನಸೋತು ರಾಜಕೀಯಕ್ಕೆ ಬಂದವನು ಆರೇಳು ವರ್ಷ ಮನೆಗೆ ಹೋಗಿರಲಿಲ್ಲ. ಪಕ್ಷದ ಸಂಘಟನಾ ಕಾರ್ಯದರ್ಶಿ ಹುದ್ದೆ ದೊರಕಿದ ಬಳಿಕ ಮನೆಗೆ ಮರಳಿದ್ದೆ’ ಎಂದು ಪ್ರಕಾಶ್‌ ಅವರೊಂದಿಗಿನ ಒಡನಾಟ ಸ್ಮರಿಸಿದರು.

‘1994ರಲ್ಲಿ ಡಂಕೆಲ್‌ ಪ್ರಸ್ತಾವದ ಕುರಿತ ಚರ್ಚೆಗೆ ಸಿದ್ದರಾಮಯ್ಯ ಮತ್ತು ಬಿ.ಆರ್‌. ಪಾಟೀಲ ಅವರೊಂದಿಗೆ ದೆಹಲಿಗೆ ಹೋಗಿದ್ದೆ. ಜಾರ್ಜ್‌ ಫರ್ನಾಂಡಿಸ್‌ ಅವರ ಒತ್ತಾಸೆಗೆ ಕಟ್ಟುಬಿದ್ದು ಅಲ್ಲಿಯೇ ಉಳಿದೆ’ ಎಂದರು.

ವಿಧಾನ ಪರಿಷತ್‌ ಸದಸ್ಯ ಕೆ.ಎ. ತಿಪ್ಪೇಸ್ವಾಮಿ, ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಮಾತನಾಡಿದರು. ಮಾಜಿ ಸಚಿವ ಅಂಜನಮೂರ್ತಿ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಡಾ.ಎಂ.ಪಿ. ನಾಡಗೌಡ, ಎಂ.ಪಿ. ಪ್ರಕಾಶ್‌ ಅವರ ಪತ್ನಿ ರುದ್ರಾಂಬ, ಮಕ್ಕಳಾದ ಸುಮಾ ವಿಜಯ್‌, ವೀಣಾ ಮಹಾಂತೇಶ್‌ ಉಪಸ್ಥಿತರಿದ್ದರು.

‘ನಾನು ಪ್ರಯತ್ನದಿಂದ ಸಿಎಂ ಆಗಿದ್ದು’

‘ಎಂ.ಪಿ. ಪ್ರಕಾಶ್‌ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕಿತ್ತು. ಅವರಿಗೆ ಸಾಧ್ಯವಾಗಲಿಲ್ಲ. ನಾನು ಮುಖ್ಯಮಂತ್ರಿಯಾದೆ’ ಎಂದು ಸಿದ್ದರಾಮಯ್ಯ ಹೇಳಿದರು. ಆಗ ಸಭಿಕರ ಸಾಲಿನಲ್ಲಿದ್ದ ಚಿತ್ರಕಲಾ ಪರಿಷತ್‌ ಉಪಾಧ್ಯಕ್ಷ ಟಿ. ಪ್ರಭಾಕರ್‌, ‘ಅವರ ಹಣೆಯಲ್ಲಿ ಬರೆದಿರಲಿಲ್ಲ’ ಎಂದರು.

‘ಏಯ್‌ ಪ್ರಭಾಕರ, ಹಣೆಯಲ್ಲೂ ಬರೆಯೊಲ್ಲ, ಬೆನ್ನಲ್ಲೂ ಬರೆಯೊಲ್ಲ ಕಣಯ್ಯ. ಪ್ರಯತ್ನದಿಂದ ಆಗಬೇಕು. ಅವರಿಗೆ ಆಗಲಿಲ್ಲ, ನಾನು ಸಿಕ್ಕ ಅವಕಾಶವನ್ನು ಬಳಸಿಕೊಂಡು ಮುಖ್ಯಮಂತ್ರಿ ಆದೆ. 1989ರಲ್ಲೇ ನೀನು ಶಾಸಕ ಆಗಬೇಕಿತ್ತು. ನಾನೇ ಆಗ ಹಟ ಹಿಡಿದು ಟಿಕೆಟ್‌ ತಪ್ಪಿಸಿ ಆರ್‌. ಕೃಷ್ಣಪ್ಪನಿಗೆ ಅವಕಾಶ ಕೊಡಿಸಿದೆ. ನಿನ್ನ ಹಣೆಬರಹ ಕಾರಣ ಅಲ್ಲ, ನಾನು ತಪ್ಪಿಸಿದ್ದು’ ಎಂದೂ ಹೇಳಿದರು.

‘ಪ್ರಭಾಕರ ಒಳ್ಳೆಯ ಮನುಷ್ಯ. ಆದರೆ, ನಾನೇ ಟಿಕೆಟ್‌ ತಪ್ಪಿಸಿದ್ದು ಎಂದು ಹೇಳಿದ್ದೇನೆ. ಆತ ಯಾವತ್ತೂ ಬೇಸರಿಸಿಕೊಳ್ಳಲಿಲ್ಲ’ ಎಂದು ಸಿದ್ದರಾಮಯ್ಯ ನೆನಪಿಸಿಕೊಂಡರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಚಾಮರಾಜಪೇಟೆ ಸಂಪೂರ್ಣ ಬಂದ್‌; ಪ್ರತಿಭಟನಾಕಾರರನ್ನ ವಶಕ್ಕೆ ಪಡೆದ ಖಾಕಿ

Tue Jul 12 , 2022
ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದ ವಿವಾದ ಸಂಬಂಧ ಇಂದು ನಾಗರಿಕ ಒಕ್ಕೂಟ ಚಾಮರಾಜಪೇಟೆ ಬಂದ್ ಗೆ ಕರೆ ನೀಡಿದ್ದರು. ಇದೀಗ ಚಾಮರಾಜಪೇಟೆ ಸಂಪೂರ್ಣ ಬಂದ್‌ ಆಗಿದೆ. ಚಾಮರಾಜಪೇಟೆಯ 7 ವಾರ್ಡ್‌ ಗಳು ಬಂದ್‌ ವಾತಾವರಣ ಸೃಷ್ಟುಯಾಗಿದೆ. ಪಾದರಾಯನಪುರ, ಆಜಾದ್‌ ನಗರದಲ್ಲಿ ಸಂಪೂರ್ಣ ಬಂದ್‌ ಆಗಿದೆ. ಇನ್ನು ಅಲ್ಲಿ ಜ್ಯೂಸ್‌ ಅಂಗಡಿ ತೆರೆದಿತ್ತು. ಹೀಗಾಗಿ ಜಮೀರ್‌ ಆಪ್ತರಿಂದ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ […]

Advertisement

Wordpress Social Share Plugin powered by Ultimatelysocial