ಎಂ.ವಿ. ರಾಜಮ್ಮನವರು

ಎಂ.ವಿ. ರಾಜಮ್ಮನವರು ಚಿತ್ರರಂಗದ ಪ್ರಸಿದ್ಧ ಅಭಿನೇತ್ರಿ, ಚಿತ್ರರಂಗದ ಪ್ರಥಮ ನಿರ್ಮಾಪಕಿ ಹಾಗೂ ಕನ್ನಡ ವೃತ್ತಿ ರಂಗಭೂಮಿಯ ಅಭಿನಯ ಶಾರದೆ ಎಂದು ಖ್ಯಾತರಾಗಿದ್ದವರು.
ಎಂ.ವಿ. ರಾಜಮ್ಮನವರು 1921ರ ಮಾರ್ಚ್ 10ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಗ್ದೊಂಡನಹಳ್ಳಿಯಲ್ಲಿ ಜನಿಸಿದರು. ತಂದೆ ಜಮೀನ್ದಾರರಾಗಿದ್ದ ನಂಜಪ್ಪ. ತಾಯಿ ಸುಬ್ಬಮ್ಮ. ಬಾಲ್ಯದಿಂದಲೇ ಅಭಿನಯದ ಗೀಳು ಹತ್ತಿಸಿಕೊಂಡಿದ್ದ ರಾಜಮ್ಮನವರು ಶಾಲಾ ರಂಗಭೂಮಿಯಿಂದಲೇ ರಂಗ ಪ್ರವೇಶ ಪಡೆದರು. ಶಾಲೆಯ ವಾರ್ಷಿಕೋತ್ಸವದಲ್ಲಿ ‘ಕೃಷ್ಣಲೀಲಾ’ ನಾಟಕದಲ್ಲಿ ಕೃಷ್ಣನ ಪಾತ್ರ ಮಾಡಿ ಜನಮೆಚ್ಚುಗೆ ಪಡೆದ ಬಾಲನಟಿ.
ರಾಜಮ್ಮನವರು ಆಂಧ್ರದ ಹೆಸರಾಂತ ನಟ ವೇಮೂರಿ ಗಗ್ಗಯ್ಯನವರು ವಹಿಸುತ್ತಿದ್ದ ಯಮಧರ್ಮರಾಯ, ಕಂಸ, ಜರಾಸಂಧ, ಶಿಶುಪಾಲ, ದಕ್ಷ, ಮೈರಾವಣ ಮೊದಲಾದ ದೈತ್ಯ ಪಾತ್ರಗಳನ್ನು, ವೀರಾವೇಶದ ಅಭಿನಯವನ್ನು ನೋಡಿ ಸ್ಪೂರ್ತಿಗೊಂಡು ರಂಗಭೂಮಿಗೆ ಪಾದಾರ್ಪಣ ಮಾಡಿದರು. ಅಂದಿನ ದಿನಗಳಲ್ಲಿ ಸ್ತ್ರೀ ಪಾತ್ರಧಾರಿಗಳು ದೊರಕದೆ ಪುರುಷರೇ ನಾಟಕಗಳಲ್ಲಿ ಸ್ತ್ರೀಪಾತ್ರ ನಿರ್ವಹಿಸುತ್ತಿದ್ದ ಕಾಲ. ಅಂತಹ ಕಾಲದಲ್ಲಿ ದಿಟ್ಟತನದಿಂದ ರಂಗಭೂಮಿಗೆ ಆಗಮಿಸಿದ ಎಂ.ವಿ. ರಾಜಮ್ಮನವರು ಮಹಮದ್ ಪೀರ್ ಅವರ ಶ್ರೀ ಚಂದ್ರಕಲಾ ನಾಟಕ ಮಂಡಲಿಯಿಂದ ಅಭಿನಯದ ಆಹ್ವಾನವನ್ನು ಸ್ವೀಕರಿಸಿದರು. ‘ಸಂಸಾರ ನೌಕ’, ‘ಗೌತಮಬುದ್ಧ’ ನಾಟಕಗಳಲ್ಲಿ ‘ಸರಳ’ ಮತ್ತು ‘ಯಶೋಧರ’ ಪಾತ್ರಗಳನ್ನು ನಿರ್ವಹಿಸಿದರು. ರಾಜಮ್ಮನವರ ಭಾವಪ್ರಧಾನ ಅಭಿನಯದಿಂದ ರಂಗಭೂಮಿಯ ಪ್ರೇಕ್ಷಕವರ್ಗ ಮೂಕವಾಗಿತ್ತು. ಅಭಿನಯ ಲಾಲಿತ್ಯ, ಗೀತೆಗಳ ಮಾಧುರ್ಯ, ವೇಷಭೂಷಣಗಳಿಂದ ಜನ ಮೆಚ್ಚುಗೆ ಗಳಿಸಿದ ರಾಜಮ್ಮನವರು ಶ್ರೇಷ್ಠನಟಿ ಪಟ್ಟವನ್ನು ಅಲಂಕರಿಸಿದ್ದರು. ಆರಂಭದಲ್ಲಿ ಚಂದ್ರಕಲಾ ನಾಟಕ ಮಂಡಳಿಯಲ್ಲಿ ನಟಿಯಾಗಿದ್ದಾಗಲೇ ವೀರಪ್ಪ ಅವರನ್ನು ಮದುವೆಯಾದರು. ನಂತರ ಮದರಾಸಿಗೆ ಹೋಗಿ ನೆಲೆಸಿದರು.
1936ರಲ್ಲಿ ‘ಸಂಸಾರ ನೌಕ’ ಚಲನಚಿತ್ರದಲ್ಲಿ ಅಭಿನಯಿಸುವುದರೊಂದಿಗೆ ಎಂ. ವಿ. ರಾಜಮ್ಮನವರ ಬಣ್ಣದ ಬದುಕಿನಲ್ಲಿ ಹೊಸ ಅಧ್ಯಾಯವೊಂದು ತೆರೆದುಕೊಂಡಿತು. ಬಿ.ಆರ್. ಪಂತುಲು, ಎಚ್.ಎಲ್.ಎನ್. ಸಿಂಹ, ಡಿಕ್ಕಿ ಮಾಧವರಾವ್ ಮೊದಲಾದ ಕಲಾವಿದರ ನಿಕಟವರ್ತಿಯಾಗಿದ್ದ ಅವರು ಕನ್ನಡವೇ ಅಲ್ಲದೆ ತೆಲುಗು ತಮಿಳು ಚಿತ್ರರಂಗಗಳಲ್ಲೂ ತಮ್ಮ ಕಾರ್ಯಕ್ಷೇತ್ರವನ್ನು ವ್ಯಾಪಿಸಿಕೊಂಡಿದ್ದರು. ಪಂತಲು – ರಾಜಮ್ಮ ಅವರ ತಾರಾಜೋಡಿ ಎರಡು ದಶಕಗಳ ಕಾಲ ಹೆಸರು ಮಾಡಿತ್ತು. 60ಕ್ಕೂ ಹೆಚ್ಚು ಕನ್ನಡಚಿತ್ರ, 80ಕ್ಕೂ ಹೆಚ್ಚು ತಮಿಳು ಹಾಗೂ 20ಕ್ಕೂ ಹೆಚ್ಚು ತೆಲುಗು ಹಾಗೂ 1 ಹಿಂದಿ ಚಿತ್ರದಲ್ಲಿ ನಟಿಸಿದ್ದ ರಾಜಮ್ಮನವರು ಬಹುಭಾಷಾ ನಟಿಯಾಗಿದ್ದರು. ರಾಜ್ಕುಮಾರ್, ಶಿವಾಜಿ ಗಣೇಶನ್, ಎಂ ಜಿ ರಾಮಚಂದ್ರನ್ ಅಂತಹ ತಾರೆಯರಿಗೆ ಪ್ರಸಿದ್ಧ ಚಿತ್ರಗಳಲ್ಲಿ ತಾಯಿಯಾಗಿ ನಟಿಸಿದ ಪ್ರಖ್ಯಾತಿ ರಾಜಮ್ಮನವರದು.
ಕನ್ನಡ ಚಿತ್ರಗಳಾದ ರತ್ನಗಿರಿ ರಹಸ್ಯ, ಮೊದಲತೇದಿ, ಸ್ಕೂಲ್‌ಮಾಸ್ಟರ್, ಚಿನ್ನದಗೊಂಬೆ, ಮಕ್ಕಳರಾಜ್ಯ, ಕಿತ್ತೂರು ಚೆನ್ನಮ್ಮ, ಸತಿಶಕ್ತಿ, ದುಡ್ಡೇ ದೊಡ್ಡಪ್ಪ, ಎಮ್ಮೆ ತಮ್ಮಣ್ಣ, ಮಾಲತಿ ಮಾಧವ, ಶ್ರೀಕೃಷ್ಣದೇವರಾಯ, ದಾರಿ ತಪ್ಪಿದ ಮಗ ಮುಂತಾದ ಚಿತ್ರಗಳಲ್ಲಿ ನಿರ್ವಹಿಸಿದ ಪಾತ್ರಗಳಿಗಾಗಿ ರಾಜಮ್ಮನವರಿಗೆ ಅಪಾರವಾದ ಕೀರ್ತಿ ಸಂದಿತು. 1943ರಲ್ಲಿ ‘ರಾಧಾರಮಣ’ ಚಿತ್ರವನ್ನು ನಿರ್ಮಿಸಿದ ಎಂ. ವಿ. ರಾಜಮ್ಮನವರು ಚಿತ್ರರಂಗದ ಪ್ರಥಮ ನಿರ್ಮಾಪಕಿ ಎನಿಸಿದರು. ಈ ಚಿತ್ರದ ಮೂಲಕ ಜಿ.ವಿ. ಅಯ್ಯರ್, ಬಾಲಕೃಷ್ಣ ಅವರಂತಹ ಮಹಾನ್ ಪ್ರತಿಭೆಗಳು ಚಿತ್ರರಂಗಕ್ಕೆ ಸಂದವು. ಆ ನಂತರ ಪದ್ಮಿನಿ ಪಿಕ್ಚರ್ಸ್ ಸಹಯೋಗದಲ್ಲಿ ಇವರು ನಿರ್ಮಿಸಿದ ‘ಮಕ್ಕಳರಾಜ್ಯ’ ಜನಪ್ರಿಯತೆ ಗಳಿಸಿತು. ಆದರೆ, ಗಲ್ಲಾಪೆಟ್ಟಿಗೆಯಲ್ಲಿ ಸೋಲುಂಡ ಅವರು, ಚಿತ್ರನಿರ್ಮಾಣವನ್ನು ಕೈಬಿಟ್ಟು ಅಭಿನಯದಲ್ಲಿ ಮುಂದುವರೆದರು. ಸ್ಕೂಲ್‌ಮಾಸ್ಟರ್, ಕಿತ್ತೂರು ಚೆನ್ನಮ್ಮ ಅಭಿನಯಕ್ಕಾಗಿ ಪ್ರಶಸ್ತಿ, ರಾಷ್ಟ್ರಾಧ್ಯಕ್ಷರ ಪದಕಗಳು ಅವರಿಗೆ ಸಂದವು.

ಈ ಮಹಾನ್ ಸಾಹಸಿ, ಕಲಾವಿದೆ ಎಂ. ವಿ. ರಾಜಮ್ಮನವರು 2000ದ ಜುಲೈ 6ರಂದು ಈ ಲೋಕವನ್ನಗಲಿದರು. ಈ ಮಹಾನ್ ಕಲಾಚೇತನಕ್ಕೆ ನಮ್ಮ ನಮನಗಳು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಿಕನ್​ ಪ್ರಿಯರಿಗೆ ಶಾಕಿಂಗ್​ ನ್ಯೂಸ್​! ಈ ಒಂದು ಕಾರಣದಿಂದ ಕೋಳಿ ಮಾಂಸದ ಬೆಲೆ ಇನ್ನಷ್ಟು ಹೆಚ್ಚಲಿದೆ

Fri Mar 11 , 2022
ಹೈದರಾಬಾದ್​: ಮಾಂಸ ಪ್ರಿಯರಿಗೆ ಅದರಲ್ಲೂ ಚಿಕನ್​ ಪ್ರಿಯರಿಗೆ ಇದು ಕಹಿ ಸುದ್ದಿಯಾಗಿದೆ. ಕೆಲವು ದಿನಗಳ ಹಿಂದೆ 200 ರೂಪಾಯಿ ಒಳಗಿದ್ದ ಚಿಕನ್​ ಬೆಲೆ ಇದೀಗ 200ರ ಗಡಿ ದಾಟಿ 300 ರೂಪಾಯಿಯ ಆಸುಪಾಸಿಗೆ ಬಂದಿದ್ದು, ಮಟನ್​ ಬೆಲೆಗೆ ಚಿಕನ್​ ಪೈಪೋಟಿ ನೀಡುತ್ತಿದೆಮಟನ್​ಗಿಂತ ಚಿಕನ್​ ತಿನ್ನುವವರ ಸಂಖ್ಯೆ ದೇಶದಲ್ಲಿ ಹೆಚ್ಚಾಗಿದ್ದು, ನಿರಂತರ ದರ ಏರಿಕೆ ಚಿಕನ್​ ಪ್ರಿಯರ ಜೇಬು ಸುಡುತ್ತಿದೆ. ಸದ್ಯ ಹಲವೆಡೆ ಒಂದು ಕೆಜಿ ಚಿಕನ್​ಗೆ 280 ರೂಪಾಯಿ ಇದೆ. […]

Advertisement

Wordpress Social Share Plugin powered by Ultimatelysocial