ಮಾಲತಿ ಶರ್ಮ

ಮಾಲತಿ ಶರ್ಮ ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ತಮ್ಮ ಸಿರಿಕಂಠದ ಮೂಲಕ ಸುಗಮ ಸಂಗೀತ ಪ್ರೇಮಿಗಳ ಹೃದಯಲ್ಲಿ ರಾರಾಜಿತರಾಗಿದ್ದಾರೆ.
ಮಾಲತಿ ಶರ್ಮ 1951 ಮಾರ್ಚ್ 2ರಂದು ಜನಿಸಿದರು.
ಮಾಲತಿ ಶರ್ಮ ಅವರು ಆಕಾಶವಾಣಿ ಮತ್ತು ದೂರದರ್ಶನದ ಪ್ರಥಮ ದರ್ಜೆ ಕಲಾವಿದರೆಂಬ ಖ್ಯಾತಿ ಪಡೆದವರು. ಕನ್ನಡದ ಸುಪ್ರಸಿದ್ಧ ಸುಗಮ ಸಂಗೀತ ಗಾಯಕಿ ತಮ್ಮ ಅತ್ತಿಗೆ ರತ್ನಮಾಲಾ ಪ್ರಕಾಶರ ಜೊತೆಯಲ್ಲಿ ಮಾಲತಿಶರ್ಮ ಅವರು ಭಾರತದೆಲ್ಲೆಡೆ ಹಾಗೂ ವಿಶ್ವದ ಅನೇಕ ಕಡೆಗಳಲ್ಲಿ ಕನ್ನಡ ಮತ್ತು ಕನ್ನಡ ಸಂಸ್ಕೃತಿಯ ಹಿರಿಮೆಯನ್ನು ಪ್ರಸ್ತುತಪಡಿಸುವ ಸುಗಮ ಸಂಗೀತ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದ್ದಾರೆ. ಮಾಲತಿ ಶರ್ಮ ಅವರು ಆಕಾಶವಾಣಿಯಲ್ಲಿ ನಡೆಸಿಕೊಡುತ್ತಿದ್ದ ‘ಭಾವನಾ’ ಕಾರ್ಯಕ್ರಮ ಎಷ್ಟೊಂದು ಜನಪ್ರಿಯವಾಗಿತ್ತೆಂದರೆ ಬಹಳಷ್ಟು ಜನ ಅವರನ್ನು ಭಾವನಾ ಎಂದೇ ಸಂಬೋಧಿಸುತ್ತಿದ್ದುದುಂಟು.
ವಿಶ್ವಪ್ರಸಿದ್ಧ ಬೇಲೂರು ಹಳೆಬೀಡಿನ ಕುರಿತು ಮೂಡಿಬಂದ ಜನಪ್ರಿಯ ಕಾರ್ಯಕ್ರಮವಾದ ‘ನೆಕ್ಟರ್ ಅಂಡ್ ಸ್ಟೋನ್’ ಎಂಬ ವಾರ್ತಾಚಿತ್ರದಲ್ಲಿ ಮಾಲತಿ ಶರ್ಮ ಅವರು ನಿರೂಪಕರಾಗಿ ಮತ್ತು ಪ್ರಧಾನ ಗಾಯಕಿಯಾಗಿ ನೀಡಿದ ಕೊಡುಗೆ ಅಪೂರ್ವವಾದದ್ದು. ಬೆಂಗಳೂರು ದೂರದರ್ಶನವು ನಿರ್ಮಿಸಿದ ಈ ವಾರ್ತಾಚಿತ್ರವು ರಾಷ್ತ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ಗೌರವಗಳನ್ನು ತನ್ನದಾಗಿಸಿಕೊಂಡಿದೆ. ಚಲನಚಿತ್ರ ಕ್ಷೇತ್ರದಲ್ಲಿ ಕೂಡಾ ತಮ್ಮ ಧ್ವನಿಯನ್ನು ಧಾರೆ ಎರೆದಿರುವ ಮಾಲತಿ ಶರ್ಮ ಅವರ ಕೊಡುಗೆಗಳು ಸಂಪ್ರದಾಯ, ಗುರುಸಾರ್ವಭೌಮ ರಾಘವೇಂದ್ರ ಕರುಣೆ, ಕೊಟ್ರೇಶಿ ಕನಸು ಮುಂತಾದ ಹಲವಾರು ಚಿತ್ರಗಳಲ್ಲಿ ಎದ್ದುಕಾಣುತ್ತವೆ. ಕನ್ನಡಕ್ಕೆ ವಿಶೇಷವಾದ ಸುಗಮ ಸಂಗೀತ ಮಾಧ್ಯಮದಲ್ಲಿ ಕನ್ನಡದ ಪ್ರಸಿದ್ಧ ಕವಿಗಳ ಕವಿತೆಗಳು ಮಾಲತಿ ಶರ್ಮರ ಗಾಯನದಲ್ಲಿ ನೂರಾರು ಸಂಖ್ಯೆಯಲ್ಲಿ ವಿಜ್ರಂಭಿಸಿವೆ. ‘ಭಾವ ಸಂಗಮ’ದಂತಹ ಕ್ಯಾಸೆಟ್ಟುಗಳಲ್ಲಿನ ಅವರ ನಿರೂಪಣೆಗಳು ಕೇಳುಗನ ಕಿವಿಗಳಲ್ಲಿ ನಿತ್ಯ ಝೇಂಕರಿಸುತ್ತಾ ಬಂದಿವೆ. ನೂರಾರು ಧ್ವನಿಸುರುಳಿಗಳಲ್ಲಿ ಮೈಸೂರು ಅನಂತಸ್ವಾಮಿ, ಸಿ ಅಶ್ವಥ್, ಪದ್ಮಚರಣ್, ಎಚ್. ಕೆ. ನಾರಾಯಣ ಮುಂತಾದ ಸಂಗೀತ ನಿರ್ಧೆಶಕರ ಮಾರ್ಗದರ್ಶನದಲ್ಲಿ ಮಾಲತಿ ಶರ್ಮರು ತಮ್ಮ ಗಾಯನವನ್ನು ಮೂಡಿಸಿದ್ದಾರೆ. ಜಿ. ವಿ. ಅತ್ರಿಯವರ ಜೊತೆಗೂಡಿ ಮೊಟ್ಟ ಮೊದಲಿಗೆ ದೂರದರ್ಶನದಲ್ಲಿ ಕನ್ನಡ ಅಂತ್ಯಾಕ್ಷರಿ ಕಾರ್ಯಕ್ರಮವನ್ನು ನಡೆಸುತ್ತಿದ್ದ ಕೀರ್ತಿ ಕೂಡಾ ಮಾಲತಿ ಶರ್ಮ ಅವರದ್ದೇ.
ಮಾಲತಿ ಶರ್ಮ ಅವರು ಹಾಡಿರುವ ಗೀತೆಗಳಲ್ಲಿ ತಕ್ಷಣ ನೆನೆಪಿಗೆ ಬರುವ ಗೀತೆಗಳೆಂದರೆ ಸಂಜೆ ಬಾನಿನಂಚಿನಿಂದ ಬಿದ್ದ ಬಿದಿಗೆ ಚಂದಿರ, ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ ಬೇಗ ಸಖಿ, ವಸಂತದೊಡಲಿನಿಂದ, ಯಾರ ದನಿಯಿದು, ಯಾಕೆ ಹರಿಯುತಿದೆ ಈ ನದಿ, ವಿಶ್ವವಿನೂತನ ವಿದ್ಯಾಚೇತನ. ಬಾ ಬಾಳಿನ ಕತ್ತಲಲಿ, ಎಳೆ ಬೆಳದಿಂಗಳು, ಹಾರಿ ಹಾರೈಸುವೆ ಮುಂತಾದವು. ಭಾರತೀಯ ವಿದ್ಯಾಭವನದ ಗೀತಗೋವಿಂದ ಮತ್ತು ವಚನ ವೈಭವದಂತಹ ಅನೇಕ ಸುಂದರ ಕನ್ನಡ ಮತ್ತು ಸಂಸ್ಕೃತದ ಧ್ವನಿಮುದ್ರಿಕೆಗಳಲ್ಲಿ ಸಹಾ ಮಾಲತಿ ಶರ್ಮರ ಗಾಯನ ಮತ್ತು ಭವ್ಯ ನಿರೂಪಣೆಯನ್ನು ಕೇಳಿದ ನೆನಪಾಗುತ್ತದೆ.
ಮಾಲತಿ ಶರ್ಮರ ಮತ್ತೊಂದು ಭವ್ಯ ಕೊಡುಗೆ ಸಂದಿರುವುದು ಕರ್ನಾಟಕ ರಂಗಭೂಮಿಯಲ್ಲಿ. ರಂಗಭೂಮಿಯು ಸ್ತ್ರೀಪಾತ್ರಧಾರಿಗಳ ತೀವ್ರ ಅಭಾವವನ್ನು ಎದುರಿಸುತ್ತಿದ್ದ ಕಾಲದಲ್ಲಿ ಅವರು ಇಡೀ ಕರ್ನಾಟಕದಲ್ಲಿ ತಿರುಗಿ ಕನ್ನಡ ರಂಗಭೂಮಿಯ ಮೇರುಸದೃಶರೆನಿಸಿರುವ ಬಿ. ವಿ. ಕಾರಂತರ ನಿರ್ದೇಶನದಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸಿದರು. ಬಿ. ವಿ. ಕಾರಂತರ ಗರಡಿಯಲ್ಲಿ ತಮ್ಮ ಪ್ರತಿಭೆಯನ್ನು ಪ್ರಕಾಶಿಸಿದ ಮಾಲತಿ ಶರ್ಮ ಅವರು ಬಾದಲ್ ಸರ್ಕಾರರ ‘ಏವಂ ಇಂದ್ರಜಿತ್’ ನಾಟಕದಲ್ಲಿ ನಿರ್ವಹಿಸಿದ ಪಾತ್ರ ಅವರನ್ನು ಕೀರ್ತಿಶಿಖರಕ್ಕೇರಿಸಿತ್ತು. ಈ ಮಹಾನ್ ನಿರ್ದೇಶಕರೇ ಅಲ್ಲದೆ ಎಂ. ಎಸ್. ಸತ್ಯು, ಆರ್ ನಾಗೇಶ್, ಪ್ರಸನ್ನ ಅಂತಹ ನಿರ್ದೇಶಕರ ಜೊತೆಯಲ್ಲಿ ಸಹಾ ಮಾಲತಿ ಶರ್ಮ ಕಾರ್ಯ ನಿರ್ವಹಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾವಿಭಾಗದ ಪ್ರಾಧ್ಯಾಪಕರಾಗಿದ್ದ, ನಾಟಕಕಾರ, ಕಲಾವಿದ ಸುಧೀಂದ್ರ ಶರ್ಮರು ಮಾಲತಿ ಅವರ ಪತಿ. ಪ್ರೊಫೆಸರ್ ಕೆ. ಆರ್. ಸುಧೀಂದ್ರ ಶರ್ಮರ ‘ಮಿಸ್ ಜೂಲಿ’ ನಾಟಕದಲ್ಲಿ ಮಾಲತಿ ಶರ್ಮ ಅವರು ಪ್ರಧಾನ ಭೂಮಿಕೆ ನಿರ್ವಹಿಸಿದ್ದಾರೆ.
ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ, ಸುಗಮ ಸಂಗೀತ ಸಮ್ಮೇಳನದ ಅಧ್ಯಕ್ಷತೆ ಮತ್ತು ಹಲವಾರು ಪ್ರಶಸ್ತಿಗಳೂ ಸೇರಿದಂತೆ ಮಾಲತಿ ಶರ್ಮರಿಗೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ಕನ್ನಡದ ಈ ಮಹಾನ್ ಕಲಾವಿದೆಗೆ ನಮ್ಮ ಶುಭ ಹಾರೈಕೆಗಳು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಡುಗಣವೇಷ್ಟಿತ ಚಂದ್ರಸುಶೋಭಿತ

Wed Mar 2 , 2022
ಉಡುಗಣವೇಷ್ಟಿತ ಚಂದ್ರಸುಶೋಭಿತ ದಿವ್ಯಾಂಬರ ಸಂಚಾರಿ ಕಣ್ಣನೀರಿನಲ್ಲಿ ಮಣ್ಣ ಧೂಳಿನಲಿ ಹೊರಳುತ್ತಿರುವರ ಸಹಚಾರಿ. ಕೋಟಿಸೂರ್ಯಕರ ತೇಜಃಪುಂಜತರ ವಿದ್ಯುದ್ರಾಜಿತ ರಥಗಾಮಿ ಉಳುತಿಹ ರೈತನ ನೇಗಿಲಸಾಲಿನ ಮಣ್ಣಿನ ರೇಖಾ ಪಥಗಾಮಿ. ಬಾಂದಳ ಚುಂಬಿತ ಶುಭ್ರ ಹಿಮಾವೃತ ತುಂಗ ಶೃಂಗದಲಿ ಗೃಹವಾಸಿ ದೀನ ಅನಾಥರ ದುಃಖ ದರಿದ್ರರ ಮುರುಕು ಗುಡಿಸಲಲಿ ಉಪವಾಸಿ ಸಾಹಿತ್ಯ: ರಾಷ್ಟ್ರಕವಿ ಜಿ ಎಸ್. ಶಿವರುದ್ರಪ್ಪ ಈ ಕವನದ ಕುರಿತು ಹೀಗೊಂದು ಚಿಂತನ: ಬಹಳಷ್ಟು ದೇವರುಗಳು ವೈಭೋಗಗಳಿಂದ ಕಂಗೊಳಿಸಿದರೆ ಈಶ್ವರ ನಿರಾಡಂಬರಿ ಎಂಬುದು […]

Advertisement

Wordpress Social Share Plugin powered by Ultimatelysocial