ಮಾರ್ಸೆಲ್ಲೊ ಮ್ಯಾಲ್‍ಪಿಘಿ

 
ಮಾರ್ಸೆಲ್ಲೊ ಮ್ಯಾಲ್ಪಿಘಿ ಇಟಲಿಯ ಶರೀರ ಕ್ರಿಯಾವಿಜ್ಞಾನಿ. ಅಂಗರಚನಾ ವಿಜ್ಞಾನ (ಮೈಕ್ರೋಸ್ಕೋಪಿಕ್ ಅನಾಟಮಿ ಹಿಸ್ಟಾಲಜಿ) ಜನಕನೆಂದು ಈತ ಪರಿಗಣಿಸಲ್ಪಟ್ಟಿದ್ದಾನೆ.
ಮಾರ್ಸೆಲ್ಲೊ ಮ್ಯಾಲ್ಪಿಘಿ 1628ರ ಮಾರ್ಚ್ 10ರಂದು ಬೊಲೋನಾ ನಗರದಲ್ಲಿ ಜನಿಸಿದ. ವಿಶ್ವವಿದ್ಯಾಲಯ ವ್ಯಾಸಂಗವನ್ನು ಅಲ್ಲಿಯೇ ಪ್ರಾರಂಭಿಸಿ ವೈದ್ಯಕೀಯ ವ್ಯಾಸಂಗಕ್ಕೆ ಬಂದು ಎಂ.ಡಿ. ಮತ್ತು ಪಿಎಚ್.ಡಿ. ಪದವಿಗಳನ್ನು ಪಡೆದ (1650). ಮುಂದೆ 1656ರಲ್ಲಿ ಪೀಸಾ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಪ್ರಾಧ್ಯಾಪಕನಾಗಿ ನೇಮಿತನಾದ. ಆದರೆ ಆ ನಗರದ ಹವೆ ಒಗ್ಗದೆ 1659 ರಲ್ಲಿ ಬೊಲೋನಾಕ್ಕೆ ವಾಪಸ್ಸಾಗಿ ಅಲ್ಲಿ 1662ರ ತನಕ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಉಪನ್ಯಾಸಕನಾಗಿದ್ದ. ಅನಂತರ ಹೆಸ್ಸೀನ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಮುಖ್ಯ ಪ್ರಾಧ್ಯಾಪಕನಾಗಿ ನೇಮಕಗೊಂಡು ಅಲ್ಲಿಗೆ ತೆರಳಿದ. 1666ರಲ್ಲಿ ಪುನಃ ಬೊಲಾನಾಕ್ಕೆ ವಾಪಸಾಗಿ ಅಲ್ಲಿ ಪ್ರಾಯೋಗಿಕ ವೈದ್ಯದ ಪ್ರಾಧ್ಯಾಪಕನಾಗಿ 25 ವರ್ಷ ಸೇವೆ ಸಲ್ಲಿಸಿದ. ಈ ಕಾಲದಲ್ಲಿ ಇವನು ಲಂಡನ್ನಿನ ರಾಯಲ್ ಸೊಸೈಟಿಗೆ ಬೊಲೋನಾ ವಿಶ್ವವಿದ್ಯಾಲಯದ ಅಧಿಕೃತ ಬಾತ್ಮೀದಾರನಾಗಿದ್ದು ನಿಕಟ ಸಂಪರ್ಕ ಪಡೆದಿದ್ದ.
ಸೂಕ್ಷ್ಮದರ್ಶಕವನ್ನು ರೂಢಿಯಾಗಿ ಬಳಸಿ ಅಧ್ಯಯನ ಮಾಡಿದ ಮೊದಲಿಗರಲ್ಲಿ ಮ್ಯಾಲ್ಪಿಘಿ ಒಬ್ಬ. ಸಸ್ಯ ಹಾಗೂ ಪ್ರಾಣಿ ಅಂಗಗಳ ಸೂಕ್ಷ್ಮರಚನೆ ನೋಡಿ ಅವುಗಳ ಕ್ರಿಯೆಗಳನ್ನು ಅರ್ಥವತ್ತಾಗಿ ಗ್ರಹಿಸುವುದರಲ್ಲಿ ಚತುರನಾದ. ಫುಪ್ಪುಸಗಳಲ್ಲಿ ಅಪಧಮನಿಯ ಅತ್ಯಂತ ಕಿರಿಕವಲುಗಳು ಅಭಿಧಮನಿಗಳ ಅತ್ಯಂತ ಕಿರಿಕವಲುಗಳಿಗೆ ಹೇಗೋ ಸಂಪರ್ಕಿಸಿರಲೇಬೇಕು, ಈ ರೀತಿ ರಚನೆಯಿಂದಲೇ ಫುಪ್ಪುಸಗಳಿಗೆ ಹರಿದುಹೋದ ರಕ್ತ ಪುನಃ ಹೃದಯಕ್ಕೆ ಬಂದು ಸೇರುತ್ತದೆ ಎಂದು ವಿಲಿಯಮ್ ಹಾರ್ವೆ 1628ರಲ್ಲಿ ಪ್ರತಿಪಾದಿಸಿದ್ದ. ಆದರೆ ಫುಪ್ಪುಸದಲ್ಲಿದ್ದ ಸಂಪರ್ಕ ಯಾವ ರೀತಿಯದು ಎಂದು ಗುರುತಿಸಿರಲಿಲ್ಲ. ಮ್ಯಾಲ್ಪಿಘಿ ಸೂಕ್ಷ್ಮದರ್ಶಕದಲ್ಲಿ ಕಪ್ಪೆಯ ಪುಪ್ಪುಸದ ರಚನೆಯನ್ನು ವೀಕ್ಷಿಸುತ್ತಿದ್ದಾಗ ಅತ್ಯಂತ ಕಿರಿನಾಳಗಳ ಜಾಲ ಅಪಧಮನಿಗಳ ಕವಲುಗಳನ್ನೂ ಅಭಿಧಮನಿ ಕವಲುಗಳನ್ನೂ ಜಂಟಿಸುವುದು ಕಂಡುಬಂತು. ಈ ಜಾಲ ಫುಪ್ಪುಸದ ವಾಯು ಬುಡ್ಡೆಗಳನ್ನು ಕೂಡ ಆವರಿಸಿತ್ತು. ಅಪಧಮನಿಗಳನ್ನೂ ಅಭಿಧಮನಿಗಳನ್ನೂ ನೇರವಾಗಿ ಕೂಡಿಸುವ ಇವುಗಳಿಗೆ ಲೋಮನಾಳಗಳು ಅಥವಾ ಕೇಶನಾಳಗಳು (ಕ್ಯಾಪಿಲ್ಲರಿ) ಎಂದು ಹೆಸರಾಯಿತು. ಇವುಗಳ ಪತ್ತೆ 1661ರಲ್ಲಿ ಆಯಿತು. ಅಷ್ಟುಹೊತ್ತಿಗೆ ಹಾರ್ವೆ ಕಾಲವಾಗಿ ನಾಲ್ಕು ವರ್ಷ ಸಂದಿದ್ದುವು. ಅಂತೂ ಅವನು ತರ್ಕಿಸಿದ್ದಂತೆ ಅಪಧಮನಿಗಳಿಗೂ ಅಭಿಧಮನಿಗಳಿಗೂ ಕೂಡುನಾಳಗಳಿರುವುದು ಮ್ಯಾಲ್ಪಿಘಿಯಿಂದ ಸ್ಥಿರೀಕರಿಸಲ್ಪಟ್ಟಿತು. ಆದರೆ ಇವನಿಗೆ ಸ್ತನಿಗಳಲ್ಲಿ ಇವನ್ನು ಪತ್ತೆಮಾಡುವುದಕ್ಕಾಗಲಿಲ್ಲ. ನೈಸರ್ಗಿಕವಾಗಿ ಕಿರಿದರ್ಜೆ ಪ್ರಾಣಿಯಲ್ಲಿರುವ ರಚನೆ ಮೇಲ್ದರ್ಜೆ ಪ್ರಾಣಿಯಲ್ಲಿ ಉತ್ತಮಗೊಂಡಿರದಿದ್ದರೂ ಕನಿಷ್ಠ ಪಕ್ಷ ತದ್ವತ್ತಾಗಿಯಾಗಿಯಾದರೂ ಇರಬೇಕೆಂಬುದು ಮ್ಯಾಲ್ಪಿಘಿಯ ತರ್ಕ.
ಈತ ಮೆಸ್ಸೀನದಲ್ಲಿದ್ದಾಗ ಸಾಗರಜೀವಿಗಳ ಅಂಗರಚನೆಯನ್ನು ವ್ಯಾಸಂಗಿಸಿದ. ಪ್ರಾಣಿಗಳಲ್ಲಿ ನಾಲಗೆಯ ಸೂಕ್ಷ್ಮ ರಚನೆ ವಿವರಿಸುತ್ತ ಅವುಗಳ ಚರ್ಮದಲ್ಲಿ ಒರಟು ಮೇಲ್ಪದರವೂ ಇದರ ಅಡಿಯಲ್ಲಿ ಕೋಶಯುಕ್ತ ಮೃದುಪದರವೂ ಇರುವುದನ್ನು ವಿವರಿಸಿದ. ಕೋಶಯುಕ್ತ ಪದರಕ್ಕೆ ಮ್ಯಾಲ್ಪಿಘಿಯನ್ ಪದರವೆಂದೇ ಹೆಸರು. ನಾಲಗೆಯ ಮೇಲೆ ಬಗೆಬಗೆಯ ಅತಿ ಸಣ್ಣ ಚಾಚುಗಳಿರುವುದನ್ನೂ ಆದ್ದರಿಂದಲೇ ಅದು ಉಪ್ಪುಕಾಗದದಂತೆ ಗಡಸುತನಗಳಿಂದ ಹೊದ್ದಲ್ಪಟ್ಟಂತೆ ಸ್ಪರ್ಶಾನುಭವಕ್ಕೆ ಬರುವುದನ್ನೂ ವಿವರಿಸಿದ. ಅನೇಕ ಚಾಚುಗಳ ಮೇಲುತುದಿಯಲ್ಲಿ ರಂಧ್ರವಿದ್ದು ಅದರೊಳಗಿನಿಂದ ಆಹಾರ ಪದಾರ್ಥವನ್ನು ಲೀನವಾಗಿಸಿಕೊಂಡಿರುವ ಜೊಲ್ಲು ಇಳಿದು ರುಚಿ ಅನುಭವಕ್ಕೆ ಬರುವುದೆಂದು ಸೂಚಿಸಿದ.
ಮೇದೋಜೀರಕಾಂಗ, ಲಾಲಾಗ್ರಂಥಿ, ವೃಷಣ ಇವುಗಳ ನಾಳಗಳು ಗ್ರಂಥಿಯ ಒಳಗೆ ಹೇಗೆ ಕವಲಾಗಿ ಕೊನೆಗೆ ಗ್ರಂಥಿಯ ಸ್ರಾವಭಾಗಗಳಲ್ಲಿ ಅಂತ್ಯವಾಗುವುವು ಎಂಬುದನ್ನು ವಿವರಿಸಿದ. ಗ್ರಂಥಿಯ ಒಳಕ್ಕೆ ಹೋಗುವ ಅಪಧಮನಿಯ ರಕ್ತದಿಂದ ವಿಶಿಷ್ಟ ಪದಾರ್ಥಗಳು ಬೇರ್ಪಟ್ಟು ಗ್ರಂಥಿಯ ಸ್ರಾವಭಾಗಕ್ಕೆ ಸೇರುವುವೆಂದು ಹೇಳಿದ. ಸ್ರಾವಭಾಗದಲ್ಲಿ ಹೀಗೆ ಸಂಚಯನವಾಗುವ ವಸ್ತುಗಳು ಅಪಧಮನಿ ಕವಲುಗಳ ಮೂಲಕ ಹೊರಬರುವಂತೆ ಆದರೆ ಅಭಿಧಮನಿ ಕವಲುಗಳೊಳಕ್ಕೆ ತೂರಿ ಹೋಗದಂತೆ ಇರುವುದೆಂಬ ತರ್ಕವನ್ನು ಮಂಡಿಸಿದ. ಆದ್ದರಿಂದ ಗ್ರಂಥಿಯಲ್ಲಿ ಸ್ರಾವವಾಗುವ ವಿಧಾನ ರಕ್ತವನ್ನು ಜರಡಿಯಲ್ಲಿ ಸೋಸಿದಂತೆ ಮಾತ್ರ, ಇನ್ನು ಯಾವ ಬಲವಂತಿಕೆಯೂ ಇಲ್ಲ ಎಂದು ಹೇಳಿ ಅಪಧಮನಿಗಳ ಗ್ರಂಥಿಯ ಸ್ರಾವಭಾಗಕ್ಕೂ ಪರಸ್ಪರ ಸಂಪರ್ಕವಿರುವುದರಿಂದ ಇದು ಸಾಧ್ಯವಾಗುವುದೆಂದು ವಿಶದೀಕರಿಸಿದ. ಆದರೆ ಈ ಸಂಪರ್ಕವನ್ನು ಸೂಕ್ಷ್ಮದರ್ಶಕದ ಮೂಲಕ ತೋರಿಸಲು ಸಾಧ್ಯವಾಗಲಿಲ್ಲ. ಮೂತ್ರಜನಕಾಂಗದಲ್ಲಿ ಅಪಧಮನಿ ಕವಲೊಡೆದು ಕೇಶಗುಚ್ಛವಾಗಿ ಅನಂತರ ಅಭಿಧಮನಿಯ ಕವಲುಗಳಾಗುವುದನ್ನೂ ಕೇಶಗುಚ್ಛ ಕವಚಾಚ್ಛಾದಿತವಾಗಿರುವುದನ್ನೂ ಮೂತ್ರಜನಕಾಂಗದಲ್ಲಿ ಲಕ್ಷಗಟ್ಟಲೆ ಇಂಥ ರಚನೆಗಳಿರುವುದನ್ನೂ ಮ್ಯಾಲ್ಪಿಘಿ ಈಗಾಗಲೇ ವಿವರಿಸಿದ್ದ. ಮೂತ್ರಜನಕಾಂಗಕ್ಕೆ ವರ್ಣದ್ರವ್ಯವನ್ನು ಚುಚ್ಚುಮದ್ದಾಗಿ ಒಳಹುಗಿಸಿದರೆ ಅದು ಶೀಘ್ರವಾಗಿಯೇ ಅಪಧಮನಿಗಳ ಕವಲಿನಲ್ಲಿಯೂ ಕೋಶಗುಚ್ಛದಲ್ಲಿಯೂ ಮೂತ್ರನಾಳಗಳ ಕವಲುಗಳಲ್ಲಿಯೂ ಕಾಣಬರುವುದೆಂದೂ ಇವುಗಳ ನಡುವೆ ಸಂಪರ್ಕವಿಲ್ಲದಿದ್ದರೆ ಹೀಗಾಗುತ್ತಿರಲಿಲ್ಲವೆಂದೂ ವಿಶದೀಕರಿಸಿದ. ಮೂತ್ರಜನಕಾಂಗದಲ್ಲಿ ಲಕ್ಷಗಟ್ಟಲೆ ಇರುವ ಕವಚ್ಛಾದಿತ ಕೇಶಗುಚ್ಛಗಳಿಗೆ ಮ್ಯಾಲ್ಪಿಘಿಯ ಕಣಗಳೆಂದು ಹೆಸರು.
ಮ್ಯಾಲ್ಪಿಘಿಯ ಇನ್ನೊಂದು ಮುಖ್ಯ ಆವಿಷ್ಕಾರವೆಂದರೆ ಹೃದಯದಲ್ಲಿ ಕೆಲವು ವೇಳೆ ಇರುವುವೆಂದು ಈತ ವಿವರಿಸಿದ ದಪ್ಪ ಮರಳು ಗಾತ್ರದ ಬಿಳಿಯ ರಚನೆಗಳು. ಹೃದಯಮಿಡಿತ ಹಾಗೂ ಉಸಿರಾಟಗಳು ಹಠಾತ್ತನೆ ನಿಂತು ಮೃತಿಹೊಂದಿದ್ದ ವ್ಯಕ್ತಿಗಳಲ್ಲಿಯೇ ವಿಶೇಷವಾಗಿ ಈ ರಚನೆಗಳು ಕಂಡುಬರುತ್ತಿದ್ದುವು. ಇವು ರಕ್ತಗರಣೆಗಳೇ ಇರಬೇಕು ಎಂದು ಮ್ಯಾಲ್ಪಿಘಿ ಊಹಿಸಿದ. ನಿಶ್ಚಯ ಮಾಡಿಕೊಳ್ಳಲು ರಕ್ತಗರಣೆಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ನೋಡಿದ. ಗರಣೆ ಬೆಳ್ಳಗಾಯಿತು. ಅಲ್ಲದೆ ಸೂಕ್ಷ್ಮದರ್ಶಕದಲ್ಲಿ ಅದರ ರಚನೆ ಹೃದಯದಲ್ಲಿದ್ದ ಗಂಟುಗಳಂತೆಯೇ ಇತ್ತು. ತೊಳೆದ ನೀರನ್ನೆ ಸೂಕ್ಷ್ಮದರ್ಶಕದಲ್ಲಿ ನೋಡಿದಾಗ ಅದರಲ್ಲಿ ಕೆಂಪಾದ ಕಣಗಳು (ಇವು ಕೆಂಪುರಕ್ತಕಣಗಳೇ ಆಗಿದ್ದಿರಬೇಕೆಂಬುದು ವ್ಯಕ್ತ) ಕಂಡುಬಂದುವು. ಈ ವ್ಯಾಸಂಗದಿಂದ ಮ್ಯಾಲ್ಪಿಘಿ ಹೃದಯದ ಒಳಗೆ ರಕ್ತಗರಣೆ ಕಟ್ಟುವ ಸಂದರ್ಭಗಳ ಪ್ರಥಮ ಆವಿಷ್ಕರ್ತೃ ಎಂಬುದು ಸಿದ್ಧವಾಯಿತು.
ವಾಸ್ತವವಾಗಿ ಮ್ಯಾಲ್ಪಿಘಿ ಬರೆದ ಗ್ರಂಥಗಳು ಹಾಗೂ ಲೇಖನಗಳನ್ನೆಲ್ಲ ರಾಯಲ್ ಸೊಸೈಟಿಯೇ ಪ್ರಕಟಿಸಿದೆ. 1691ರಲ್ಲಿ ಪೋಪ್ 12ನೆಯ ಇನ್ನೊಸೆಂಟಿನ ಮುಖ್ಯ ವೈದ್ಯನಾಗಿ ನೇಮಕಗೊಂಡು ರೋಮಿಗೆ ತೆರಳಿದ. ಮೂರು ವರ್ಷಗಳ ಅನಂತರ 1694 ನವೆಂಬರ್ 29ರಂದು ಇಟಲಿಯ ತನ್ನ ಅಧಿಕೃತ ನಿವಾಸದಲ್ಲೇ ಮೃತನಾದ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾರುಕಟ್ಟೆ ಸೃಷ್ಟಿಸಿದ ಐಪಿಎಲ್: ಐಪಿಎಲ್ ವಿರುದ್ಧ ಪಿಎಸ್ಎಲ್ ಟ್ವೀಟ್ ಕುರಿತು ಪಾಕಿಸ್ತಾನಿ ಪತ್ರಕರ್ತರನ್ನು ಮುಚ್ಚಿಸಿದ್ದ,ರಾಬಿನ್ ಉತ್ತಪ್ಪ!

Sun Mar 20 , 2022
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದೊಡ್ಡದಾಗಿ ಮತ್ತು ಉತ್ತಮಗೊಳ್ಳಲು ಸಿದ್ಧವಾಗಿದೆ ಏಕೆಂದರೆ 2022 ರ ನಗದು-ಸಮೃದ್ಧ ಲೀಗ್‌ನಲ್ಲಿ 10 ತಂಡಗಳು ಕಾಣಿಸಿಕೊಳ್ಳುತ್ತವೆ. 2008 ರಲ್ಲಿ ಪ್ರಾರಂಭವಾದಾಗಿನಿಂದ, ಲೀಗ್ ಗುಣಮಟ್ಟ, ಮಧ್ಯಸ್ಥಗಾರರ ಸಂಖ್ಯೆ ಮತ್ತು ಹೀಗೆ ಪ್ರತಿ ತಂಡಕ್ಕೆ ಪರ್ಸ್, ಟೆಲಿಕಾಸ್ಟ್ ಹಕ್ಕುಗಳು, ಎಲ್ಲವೂ ಘಾತೀಯವಾಗಿ ಬೆಳೆದು ಅದನ್ನು ಅತಿ ಹೆಚ್ಚು ವೀಕ್ಷಿಸುವ ಮತ್ತು ಅನುಸರಿಸುವ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಒಂದಾಗಿದೆ. IPL ಪ್ರಾರಂಭವಾದಾಗಿನಿಂದ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು […]

Advertisement

Wordpress Social Share Plugin powered by Ultimatelysocial