MATRIX:ಪ್ರೇಮಕತೆ ಅವತಾರ ತಾಳಿದ ಆಕ್ಷನ್ ಸಿನಿಮಾ;

‘ಮೇಟ್ರಿಕ್ಸ್’ ಸಿನಿಮಾ ಹಾಲಿವುಡ್‌ನಲ್ಲಿ ಕಲ್ಟ್ ಕ್ಲಾಸಿಕ್ ಸೈನ್ಸ್ ಫಿಕ್ಷನ್ ಸಿನಿಮಾ ಎಂದೇ ಗುರುತಿಸಲಾಗುತ್ತದೆ. ಅದರ ನಾಲ್ಕನೇ ಭಾಗ ಇದೀಗ ‘ದಿ ಮೇಟ್ರಿಕ್ಸ್; ರಿಸರಕ್ಷನ್’ ಹೆಸರಲ್ಲಿ ಬಿಡುಗಡೆಗೊಂಡಿದೆ.

‘ದಿ ಮೇಟ್ರಿಕ್ಸ್; ರಿಸರಕ್ಷನ್’ ಸಿನಿಮಾವು ಈ ಸಿನಿಮಾ ಸರಣಿಯ ಪ್ರಮುಖ ಪಾತ್ರಗಳಾದ ನಿಯೋ ಹಾಗೂ ಟ್ರಿನಿಟಿ ಅವರನ್ನು ಕೇಂದ್ರವಾಗಿಸಿಕೊಂಡಿದೆ.

ಈ ಸಿನಿಮಾದಲ್ಲಿ ವಿಜ್ಞಾನ, ತಂತ್ರಜ್ಞಾನದ ಅಂಶಗಳ ಜೊತೆಗೆ ನಿಯೋ ಹಾಗೂ ಟ್ರಿನಿಟಿಯ ಪ್ರೇಮಕತೆಗೆ ಹೆಚ್ಚಿನ ಒತ್ತು ನೀಡಿರುವುದು ವಿಶೇಷ. ಈ ಹಿಂದಿನ ‘ಮೇಟ್ರಿಕ್ಸ್’ ಸಿನಿಮಾಕ್ಕಿಂತಲೂ ಹೆಚ್ಚಿಗೆ ಈ ಸಿನಿಮಾಕ್ಕೆ ಭಾವುಕ ಅಂಶಗಳಿಗೆ ಒತ್ತು ನೀಡಲಾಗಿದೆ. ಇದು ಕೆಲವು ಪ್ರೇಕ್ಷಕರಿಗೆ ಹಿಡಿಸದೇ ಹೋಗಬಹುದು.

ಸಿನಿಮಾದ ನಾಯಕ ನಿಯೋ ಮತ್ತು ನಾಯಕಿ ಟ್ರಿನಿಟಿ ಅರವತ್ತು ವರ್ಷಗಳ ಕಾಲ ಮೇಟ್ರಿಕ್ಸ್ ಒಳಗೆ ಬಂಧಿಯಾಗಿಬಿಟ್ಟಿರುತ್ತಾರೆ. ಅವರಿಬ್ಬರು ಹೊರಗೆ ಬಂದಾಗ ಒಬ್ಬರನ್ನೊಬ್ಬರು ಪರಸ್ಪರ ಗುರುತಿಸಲು ಸಹ ಆಗುವುದಿಲ್ಲ, ಹಳೆಯದನ್ನೆಲ್ಲ ಮರೆತು ಬಿಟ್ಟಿರುತ್ತಾರೆ. ಆಗ ಮತ್ತೆ ಅದೇ ನೀಲಿ ಮಾತ್ರೆ ಮತ್ತು ಕೆಂಪು ಮಾತ್ರೆಯ ಘಟನೆ ನಡೆಯುತ್ತದೆ. ‘ಮೇಟ್ರಿಕ್ಸ್’ ಸಿನಿಮಾ ಸರಣಿ ನೋಡಿದವರಿಗೆ ಸಿನಿಮಾದಲ್ಲಿ ‘ನೀಲಿ ಮಾತ್ರೆ-ಕೆಂಪು ಮಾತ್ರೆ’ಯ ಪ್ರಾಮುಖ್ಯತೆ ಚೆನ್ನಾಗಿ ಗೊತ್ತಿರುತ್ತದೆ.

‘ಮೇಟ್ರಿಕ್ಸ್’ ಸಿನಿಮಾ ಸರಣಿ ಹಾಲಿವುಡ್‌ಗೆ ಹೊಸ ರೀತಿಯ ಸೈನ್ಸ್ ಫಿಕ್ಷನ್‌ನ ಜಾನರ್ ಅನ್ನೇ ಪರಿಚಯಿಸಿದ್ದು, ವಿಜ್ಞಾನ, ಕಲ್ಪನೆ, ಭಾವುಕತೆ, ಸಂಸ್ಕೃತಿ, ತತ್ವಜ್ಞಾನ, ತರ್ಕ ಅಂಶಗಳನ್ನು ಬೆರೆಸಿ ಒಂದು ಅದ್ಭುತ ಆಕ್ಷನ್ ಸಿನಿಮಾವನ್ನು ಮೇಟ್ರಿಕ್ಸ್ ಕಟ್ಟಿಕೊಟ್ಟಿತ್ತು. ಹೀಗಾಗಿಯೇ ಈ ಸಿನಿಮಾ ವಿಶ್ವದಾದ್ಯಂತ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡಿದೆ. ಆದರೆ ಇದೀಗ ಬಿಡುಗಡೆ ಆಗಿರುವ ಮೇಟ್ರಿಕ್ಸ್ 4 ಸಿನಿಮಾ ಸರಣಿಯ ಆರಂಭದಿಂದಲೂ ಇರುವ ನಾಯಕ ನಿಯೊ ಹಾಗೂ ನಾಯಕಿ ಟ್ರಿನಿಟಿಗೆ ಒಂದು ಫೇರ್‌ವೆಲ್ ಮಾದರಿಯಲ್ಲಿದೆ. ಅಥವಾ ಅವರಿಬ್ಬರಿಗೂ ಮತ್ತೆ ಪ್ರೀತಿಸಲು ಒಂದಾಗಲು ಮಾಡಿಕೊಟ್ಟ ಅವಕಾಶದಂತೆ ಇದೆ.

‘ಮೇಟ್ರಿಕ್ಸ್’ ಸಿನಿಮಾ ಸರಣಿಯ ಕತೆ ಬಹಳ ಸಂಕೀರ್ಣವಾದುದು. ‘ಮೇಟ್ರಿಕ್ಸ್; ರಿಸರೆಕ್ಷನ್’ ಸಿನಿಮಾ ಈ ಮೊದಲ ‘ಮೇಟ್ರಿಕ್ಸ್’ ಸಿನಿಮಾ ಸರಣಿಗಳ ಕೆಲವು ಲಿಂಕ್‌ಗಳನ್ನು ಒಳಗೊಂಡಿದೆ. ಸಿನಿಮಾದ ನಾಯಕ ನಿಯೊ ತಾನೇ ಸೃಷ್ಟಿಸಿದ ಮೇಟ್ರಿಕ್ಸ್ ಲೋಕದೊಳಗೆ ಬಂಧಿಯಾಗಿದ್ದಾನೆ. ಪ್ರತಿ ದಿನವೂ ಅವನದ್ದು ಒಂದೇ ರೀತಿಯ ಜೀವನ. ಇಲ್ಲಿ ಅವನ ಹೆಸರು ಥಾಮಸ್ ಆಂಡರ್ಸನ್ ಅವನೊಬ್ಬ ಗೇಮರ್. ಪ್ರತಿದಿನ ಒಂದು ಕಾಫಿ ಶಾಪ್‌ನಲ್ಲಿ ಕುಳಿತು ಸಮಯ ದೂಡುತ್ತಿರುತ್ತಾನೆ. ಪ್ರತಿದಿನವೂ ಅಲ್ಲಿಗೆ ಟಿಫನಿ ಹೆಸರಿನ ಹೆಂಗಸೊಬ್ಬಳು ತನ್ನ ಇಬ್ಬರು ಮಕ್ಕಳು ಹಾಗೂ ಪತಿಯೊಟ್ಟಿಗೆ ಬರುತ್ತಾಳೆ. ಆಕೆಯೇ ನಾಯಕಿ ಟ್ರಿನಿಟಿ, ಆಕೆಯನ್ನು ನೋಡಿದಾಗಲೆಲ್ಲ, ತಾನು ಸೃಷ್ಟಿಸಿದ ಗೇಮ್‌ನ ಪಾತ್ರ ನಿಯೋಗೆ ನೆನಪಾಗುತ್ತದೆ ಆದರೆ ಆಕೆಯೊಂದಿಗೆ ಮಾತನಾಡಲು ಅವನಿಗೆ ಧೈರ್ಯ ಸಾಲದು.

ನಿಯೋನ ಅಥವಾ ಥಾಮಸ್ ಆಂಡರ್ಸನ್‌ನ ಮಾನಸಿಕ ತಜ್ಞ ಅವನಿಗೆ ದಿನವೂ ನೀಲಿ ಮಾತ್ರೆಗಳನ್ನು ನೀಡುತ್ತಿರುತ್ತಾನೆ ಹಾಗಾಗಿ ಮೇಟ್ರಿಕ್ಸ್ ಲೋಕದ ನೆನಪು ಆರುತ್ತಿರುತ್ತದೆ. ಅವನನ್ನು ಪ್ರತಿದಿನ ಕಾಡುವ ಕನಸಿನ ಅರ್ಥ ತಿಳಿಯಲು ನಿಯೋ ಮೇಟ್ರಿಕ್ಸ್‌ ಮಾಡೆಲ್ ಒಂದನ್ನು ರಚಿಸುತ್ತಾನೆ. ಆ ನಂತರ ನಿಯೊ ಮೇಟ್ರಿಕ್ಸ್‌ನಿಂದ ಹೊರಗೆ ಬರುತ್ತಾನೆಯೇ, ಟ್ರಿನಿಟಿ ಹಾಗೂ ನಿಯೋ ಒಂದಾಗುತ್ತಾರೆಯೇ? ಆದರೆ ಹೇಗೆ ಒಂದಾಗುತ್ತಾರೆ ಎಂಬುದು ಮುಂದಿನ ಕತೆ.

ಸಿನಿಮಾದ ಮೊದಲಾರ್ಧದಲ್ಲಿ ಹಲವು ತಮಾಷೆಯ ಸನ್ನಿವೇಶಗಳು ಸಂಭಾಷಣೆಗಳು ಇವೆ. ಇವು ‘ಮೇಟ್ರಿಕ್ಸ್’ ಸಿನಿಮಾ ಸರಣಿಗೆ ತುಸು ಹೊಸತು ಎನಿಸುತ್ತದೆ. ಈ ಹಿಂದಿನ ‘ಮೇಟ್ರಿಕ್ಸ್’ ಸಿನಿಮಾ ಸರಣಿಗಳ ರೀತಿಯಲ್ಲಿಯೇ ತತ್ವಜ್ಞಾನ, ವಿಜ್ಞಾನ, ತಂತ್ರಜ್ಞಾನ ಇನ್ನಿತರೆಗಳ ಸಮ್ಮಿಶ್ರಣದ ಸಂಭಾಷಣೆಗಳು, ದೃಶ್ಯಗಳ ಮೂಲಕ ಸಿನಿಮಾ ತೆರೆದುಕೊಳ್ಳುತ್ತದೆ. ಈ ಭಾಗವನ್ನು ನಿರ್ದೇಶಕಿ ಲಾನಾ ವಚಾವಸ್ಕಿ ಬಹಳ ಜಾಗೃತೆಯಾಗಿ ಕಟ್ಟಿಕೊಟ್ಟಿದ್ದಾರೆ. ಮೇಟ್ರಿಕ್ಸ್ ಜಗತ್ತಿನ ಒಳಕ್ಕೆ ಪ್ರೇಕ್ಷಕರನ್ನು ನಿರ್ದೇಶಕಿ ಕರೆದುಕೊಂಡು ಹೋಗಿರುವ ರೀತಿ ಚೆನ್ನಾಗಿದೆ.

ಆದರೆ ಸಿನಿಮಾದ ಎರಡನೇ ಭಾಗ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ವಿಫಲವಾಗುತ್ತದೆ. ಈ ಹಿಂದಿನ ‘ಮೇಟ್ರಿಕ್ಸ್’ ಸಿನಿಮಾ ಸರಣಿಗಳಿಗೆ ಹೋಲಿಸಿದರೆ ಈ ಸಿನಿಮಾದ ಎರಡನೇ ಭಾಗ ನಿರಾಸೆ ಮೂಡಿಸುತ್ತದೆ. ಪ್ರೇಮಕತೆಯನ್ನು ಸಿನಿಮಾದ ಉಪಕತೆಯಾಗಿ ಇಟ್ಟುಕೊಳ್ಳುವ ಬದಲಿಗೆ ಸಿನಿಮಾದಲ್ಲಿ ಅದಕ್ಕೆ ಪ್ರಧಾನ ಆದ್ಯತೆ ನೀಡಲಾಗಿದೆ. ಸಿನಿಮಾದ ನಾಯಕ ನಾಯಕಿಗೆ ನಿಜ ಜೀವನದಲ್ಲಿಯೂ ಹಾಗೂ ‘ಮೇಟ್ರಿಕ್ಸ್’ ಸಿನಿಮಾದ ಕತೆಯಲ್ಲಿಯೂ ವಯಸ್ಸಾಗಿರುವ ಕಾರಣ ಸಿನಿಮಾವನ್ನು ಆಕ್ಷನ್ ಬದಲಿಗೆ ಪ್ರೇಮಕತೆ ಅಥವಾ ಕೌಟುಂಬಿಕ ಕತೆ ಮಾಡುವ ಯತ್ನದಂತೆ ಭಾಸವಾಗುತ್ತದೆ ಸಿನಿಮಾ.

ಆದರೆ ಸಿನಿಮಾದ ಸಿಜಿಐ, ಗ್ರಾಫಿಕ್ಸ್ ಇನ್ನಿತರೆ ಅಂಶಗಳು ಅತ್ಯದ್ಭುತವಾಗಿ ಮೂಡಿಬಂದಿವೆ. ಈಗಿನ ಅತ್ಯಾಧುನಿಕ ತಂತ್ರಜ್ಞಾನವನ್ನು ನಿರ್ದೇಶಕಿ ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಈ ಹಿಂದಿನ ‘ಮೇಟ್ರಿಕ್ಸ್’ ಸರಣಿ ಸಿನಿಮಾಗಳಿಗೆ ಹೋಲಿಸಿದರೆ ಹೊಸ ‘ಮೇಟ್ರಿಕ್ಸ್’ ಪ್ರಪಂಚ ಇನ್ನೂ ಹೆಚ್ಚು ಅದ್ಭುತವಾಗಿದೆ. ತಂತ್ರಜ್ಞಾನ ಭರಿತವಾಗಿದೆ. ಸಿನಿಮಾದಲ್ಲಿ ಕೆಲವು ದೃಶ್ಯಗಳಲ್ಲಿ ಬರುವ ಪ್ರಿಯಾಂಕಾ ಚೋಪ್ರಾರ ಪಾತ್ರ ಪ್ರೇಕ್ಷಕರಿಗೆ ಒಳ್ಳೆಯ ಶಾಕ್ ನೀಡುತ್ತದೆ, ಜೊತೆಗೆ ಕತೆಗೆ ಬೇಕಾದ ಟ್ವಿಸ್ಟ್ ಅನ್ನು ನೀಡುತ್ತದೆ. ಸಿನಿಮಾ ಮುಗಿದ ಮೇಲೂ ಪ್ರಿಯಾಂಕಾ ಚೋಪ್ರಾರ ಪಾತ್ರ ನೆನಪಿರುತ್ತದೆ. ಜೊತೆಗೆ ಜೆಸ್ಸಿಕಾ ಹೆನ್‌ವಿಕ್ ಹಾಗೂ ಜಾನಥಾನ್ ಗ್ರೋಫ್ ಪಾತ್ರ ಸಹ ನೆನಪಿನಲ್ಲುಳಿಯುತ್ತದೆ. ಜೆಸ್ಸಿಕಾ ಹೆನ್‌ವಿಕ್ ಹಾಗೂ ಜಾನಥಾನ್ ಗ್ರೋಫ್ ಪಾತ್ರಗಳನ್ನೇ ಆಧರಿಸಿ ಮುಂದಿನ ‘ಮೇಟ್ರಿಕ್ಸ್’ ಸರಣಿಯ ಸಿನಿಮಾಗಳು ಬರುವ ಸಾಧ್ಯತೆ ಇದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

KSRTC:ಸ್ಟೇರಿಂಗ್ ಕಟ್ ಆಗಿ KSRTC ಬಸ್ ಪಲ್ಟಿ;

Wed Jan 26 , 2022
 ಕೆ.ಎಸ್.ಆರ್.ಟಿ.ಸಿ. ಬಸ್ ಪಲ್ಟಿಯಾಗಿ 20 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ಧಾರವಾಡದ ಬಳಿ ನಡೆದಿದೆ. ಧಾರವಾಡ ಜಿಲ್ಲೆ ನವಲಗುಂದದ ಬೆಣ್ಣೆಹಳ್ಳದ ಬ್ರಿಡ್ಜ್ ಬಳಿ ಬಸ್ ಪಲ್ಟಿಯಾಗಿದೆ. ಸ್ಟೇರಿಂಗ್ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಹುಬ್ಬಳ್ಳಿಯಿಂದ ಬಾಗಲಕೋಟೆಗೆ ಹೊರಟಿದ್ದ KSRTC ಬಸ್ ಅಪಘಾತಕ್ಕೀಡಾಗಿದೆ. ಗಾಯಗೊಂಡ ಪ್ರಯಾಣಿಕರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನವಲಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎನ್ನಲಾಗಿದ್ದು, ಹೆಚ್ಚಿನ […]

Advertisement

Wordpress Social Share Plugin powered by Ultimatelysocial