ನಾಡೋಜ ಚೆನ್ನವೀರ ಕಣವಿ ಇನ್ನಿಲ್ಲ

ವರದಿ: ಲೀಲಾವತಿ ವಸಂತ ಬಿ ಈಶ್ವರಗೆರೆ

ಧಾರವಾಡ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಂತ ನಾಡೋಜ ಚೆನ್ನವೀರ ಕಣವಿ (93), ಇಂದು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

ಈ ಮೂಲಕ ಕನ್ನಡ ಸಾಹಿತ್ಯ ಲೋಕದ ಹಿರಿಯ ಕೊಂಡಿಯೊಂದು ಕಳಚಿದಂತೆ ಆಗಿದೆ.

ಅನಾರೋಗ್ಯದಿಂದಾಗಿ ಜನವರಿ 14ರಿಂದ ಧಾರವಾಡದ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ನಾಡೋಜ ಚೆನ್ನವೀರ ಕಣವಿ ( Chennaveera Kanavi ) ದಾಖಲಾಗಿ, ಪಡೆಯುತ್ತಿದ್ದರು. ನಿನ್ನೆ ಅವರ ಸ್ಥಿತಿ ಗಂಭೀರಗೊಂಡಿರೋದಾಗಿ ತಿಳಿಸಲಾಗಿತ್ತು. ಈ ಬಳಿಕ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಇನ್ನಿಲ್ಲವಾಗಿದ್ದಾರೆ.

ಅಂದಹಾಗೇ, ಚೆನ್ನವೀರ ಕಣವಿ ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ್‌ಎಂದು ಪ್ರಸಿದ್ಧಿರಾದ ಕನ್ನಡದ ಖ್ಯಾತ ವಿದ್ವಾಂಸ ಮತ್ತು ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದರು.

ಚನ್ನವೀರ ಕಣವಿಯವರು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928 ರ ಜೂನ್ 28ರಂದು ಜನಿಸಿದರು. ತಂದೆ ಸಕ್ಕರೆಪ್ಪ ಮತ್ತು ತಾಯಿ ಪಾರ್ವತವ್ವ. ತಂದೆ ಸಕ್ಕರೆಪ್ಪ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಧಾರವಾಡದಲ್ಲಿಯೆ ಮಾಧ್ಯಮಿಕ ಹಾಗು ಕಾಲೇಜು ಶಿಕ್ಷಣ ಪೂರೈಸಿ ಕಣವಿಯವರು 1952ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು ಆಗ ತಾನೆ ಆರಂಭವಾಗಿದ್ದ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾಗಿದ್ದರು.

1956ರ ವೇಳೆಗೆ ಅದೇ ವಿಭಾಗದ ನಿರ್ದೇಶಕರಾಗಿ 1983 ರವರೆಗೆ ಸೇವೆ ಸಲ್ಲಿಸಿದರು. ಅವರ ಪತ್ನಿ ಶಾಂತಾದೇವಿ ಅವರು ಕೂಡ ಸಾಹಿತ್ಯ ಸಂಸ್ಕೃತಿಯ ಒಲವುಳ್ಳ ದೊಡ್ಡ ಮನೆತನದಿಂದ ಬಂದವರು.

ಚನ್ನವೀರ ಕಣವಿಯವರು ವಿಮರ್ಶೆಯನ್ನು ಬರೆದಿದ್ದರಾದರೂ ಪ್ರಧಾನವಾಗಿ ಅವರು ಕವಿಯಾಗಿದ್ದರು. ಚೆನ್ನವೀರ ಕಣವಿಯವರು ಕವಿಯಾಗಿ ಪ್ರಕಟವಾಗಿದ್ದು ನವೋದಯದ ‘ನಡುಹಗಲ’ ಕಾಲದಲ್ಲಿ. ಬೇಂದ್ರೆ, ಕುವೆಂಪು, ಪು.ತಿ.ನ, ಮಧುರಚೆನ್ನ ಮೊದಲಾದವರ ಕಾವ್ಯ ಹೊಸದಾಗಿ ಕಾವ್ಯ ರಚನೆಗೆ ತೊಡಗುವವರನ್ನು ಗಾಢವಾಗಿ ಪ್ರಭಾವಿಸುತ್ತಿದ್ದ ಕಾಲ ಅದು.

ಕಣವಿ ಅವರ ಪ್ರಾರಂಭದ ರಚನೆಗಳಲ್ಲಿ ಇಂಥ ಪ್ರಭಾವಗಳ ನೆಲೆಯನ್ನು ಗುರುತಿಸಬಹುದಾಗಿದ್ದು, ಅವರ ಕಾವ್ಯದಲ್ಲಿ ರಮ್ಯ ಮನೋಧರ್ಮ, ಆದರ್ಶಪ್ರಿಯತೆ, ವ್ಯಕ್ತಿತ್ವ ನಿರ್ಮಾಣದ ಹಂಬಲಗಳು ವಿಶೇಷವಾಗಿ ಕಂಡು ಬರುತ್ತವೆ. 1949ರಲ್ಲಿ ಪ್ರಕಟವಾದ ‘ಕಾವ್ಯಾಕ್ಷಿ’, 1950ರಲ್ಲಿ ಪ್ರಕಟವಾದ ‘ಭಾವಜೀವಿ’ ಸಂಗ್ರಹಗಳಲ್ಲಿ ಈ ಎಲ್ಲ ಅಂಶಗಳನ್ನೂ ಗುರುತಿಸಬಹುದು.

1953ರಲ್ಲಿ ಕಣವಿಯವರ ಮೂರನೆಯ ಸಂಗ್ರಹ ‘ಆಕಾಶಬುಟ್ಟಿ’ ಪ್ರಕಟವಾಯಿತು. ಈ ಸಂಗ್ರಹದಲ್ಲಿ ಕಣವಿ ಅವರ ಆಸಕ್ತಿಗಳು ವಿಸ್ತಾರಗೊಳ್ಳುತ್ತಿರುವ ಸೂಚನೆಗಳಿವೆ. ಸಾಮಾಜಿಕತೆ ಈ ಸಂಗ್ರಹದಲ್ಲಿ ಗುರುತಿಸಲೆಬೇಕಾದ ಬಹುಮುಖ್ಯ ಅಂಶವಾಗಿದೆ. ಸಮಾಜದ ದೋಷಗಳನ್ನು ಕವಿ ಇಲ್ಲಿ ವ್ಯಗ್ರರಾಗಿ ಟೀಕೆಗೆ ಗುರಿ ಮಾಡುತ್ತಾರೆ. ವ್ಯಂಗ್ಯದ ಧಾಟಿ ಇಂಥ ಸಂದರ್ಭಗಳಲ್ಲಿ ಮುಖ್ಯವಾಗುತ್ತಿತ್ತು.

ಬಸವರಾಜ ಕಟ್ಟೀಮನಿ, ನಿರಂಜನ, ಎಕ್ಕುಂಡಿ ಮೊದಲಾದವರ ಸ್ನೇಹ ಸಂಪರ್ಕ ಮತ್ತು ಆಗ ಪ್ರಚಲಿತವಿದ್ದ ಪ್ರಗತಿಶೀಲ ಸಾಹಿತ್ಯ ಚಳವಳಿ ಅವರನ್ನು ಪ್ರಭಾವಿಸಿರಬಹುದು. ಆಕಾಶಬುಟ್ಟಿ ಸಂಗ್ರಹದಲ್ಲಿರುವ ಪ್ರಜಾಪ್ರಭುತ್ವ ಎಂಬ ಕವಿತೆ ಯನ್ನು ನಾವಿಲ್ಲಿ ವಿಶೇಷವಾಗಿ ನೆನೆಯಬೇಕು. ಪ್ರತಿಮಾನಿಷ್ಠವಾದ ಈ ಕವಿತೆ ಕಣವಿ ಅವರ ಮುಂದಿನ ಕಾವ್ಯದ ಮುನ್ಸೂಚನೆಯಂತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸುಹಾನಾ ಖಾನ್ ಬಾಲಿವುಡ್ ಎಂಟ್ರಿಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ.

Wed Feb 16 , 2022
ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಪುತ್ರಿ ಸುಹಾನಾ ಸೋಶಿಯಲ್ ಮೀಡಿಯಾ ಟ್ರೆಂಡಿಂಗ್‌ನಲ್ಲಿದ್ದಾಳೆ. ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ ಶೇರ್ ಮಾಡಿದ ಫೋಟೊ ಕಂಡು ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಕೆಲವರಂತೂ ದೀಪಿಕಾ ಪಡುಕೋಣೆಯನ್ನು ನೋಡಿದಂತೆ ಆಗುತ್ತೆ ಎನ್ನುತ್ತಿದ್ದಾರೆ.ಮತ್ತೆ ಕೆಲವರು ಶಾರುಖ್ ಪುತ್ರಿ ಸುಹಾನಾ ಖಾನ್ ಬಾಲಿವುಡ್‌ಗೆ ಬಂದೇ ಬಿಟ್ಟಳು ಎನ್ನುವಷ್ಟು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.ಸುಹಾನಾ ಖಾನ್ ಬಾಲಿವುಡ್ ಎಂಟ್ರಿಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ವಿದೇಶದಲ್ಲಿ ಓದುತ್ತಿರುವಾಗಲೇ ಸುಹಾನಾ ಖಾನ್ ಸಿನಿಮಾ ಬಗ್ಗೆನೇ […]

Advertisement

Wordpress Social Share Plugin powered by Ultimatelysocial